ಮಲಯಾಳಂ ಸಿನಿಮಾ ‘ಬ್ರೋ ಡ್ಯಾಡಿ’ ಸಮೀಕ್ಷೆ;

ಜಾನ್ ಕಟ್ಟಾಡಿ (ಮೋಹನ್‌ಲಾಲ್) ಹಾಗೂ ಅಣ್ಣಮ್ಮ (ಮೀನ) ಪ್ರೀತಿಯೇ ತುಂಬಿರುವ ದಂಪತಿ. ಅವರಿಗಿರುವ ಏಕೈಕ ಮಗ ಈಶೋ ಜಾನ್ ಕಟ್ಟಾಡಿ (ಪೃಥ್ವಿರಾಜ್ ಸುಕುಮಾರ್). ಈಶೋಗೆ ಅನ್ನಾ (ಕಲ್ಯಾಣಿ ಪ್ರಿಯದರ್ಶಿನಿ) ಮೇಲೆ ಪ್ರೀತಿ. ಅನ್ನಾ, ಜಾನ್ ಕಟ್ಟಾಡಿಯ ಮಿತ್ರ ಕುರಿಯನ್ ಹಾಗೂ ಎಲ್ಸಿಯ ಮಗಳು. ಈಶೋ ಹಾಗೂ ಅನ್ನಾ ಬೆಂಗಳೂರಿನಲ್ಲಿ ಲಿವಿನ್ ಸಂಬಂಧದಲ್ಲಿದ್ದಾರೆ. ಆದರೆ ತಮ್ಮ ಕುಟುಂಬದವರ ಮುಂದೆ ಮಾತ್ರ ಪರಸ್ಪರ ದ್ವೇಷಿಸುವವರಂತೆ ವರ್ತಿಸುತ್ತಾರೆ. ಆದರೆ ಇಡೀಯ ಕತೆ ತಿರುವು ಪಡೆದುಕೊಳ್ಳುವುದು ಅಪ್ಪ-ಮಗ ಜಾನ್ ಹಾಗೂ ಈಶೋಗೆ ಅನಿರೀಕ್ಷಿತ ಸುದ್ದಿಯೊಂದು ಗೊತ್ತಾದಾಗ. ಯಾವುದಾ ಸುದ್ದಿ? ಸುದ್ದಿಯಿಂದ ಅವರ ಜೀವನದಲ್ಲಿ ಆಗುವ ಬದಲಾವಣೆ ಏನು? ಸಿನಿಮಾ ನೋಡಿಯೇ ತಿಳಿಯಬೇಕು.

ಚಿತ್ರಕತೆ ಮತ್ತು ನಿರ್ದೇಶನ ಹೇಗಿದೆ?

ನಟ ಪೃಥ್ವಿರಾಜ್ ಸುಕುಮಾರನ್‌ಗೆ ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾ ಇದು. ಈ ಸಿನಿಮಾದಲ್ಲಿ ಹಾಸ್ಯದೊಟ್ಟಿಗೆ ಪೋಷಕತನ, ಮಕ್ಕಳು-ಪೋಷಕರ ನಡುವಿನ ಸಂಬಂಧದ ಹೊಸ ಮಜಲೊಂದನ್ನು ಕಟ್ಟಿಕೊಟ್ಟಿದ್ದಾರೆ. ‘ಬ್ರೋ ಡ್ಯಾಡಿ’ ಸಿನಿಮಾ ಒಂದು ಹಾಸ್ಯಮಯ ಸಿನಿಮಾ ಆದರೆ ಹಾಸ್ಯದ ಜೊತೆಗೆ ಪೋಷಕರ ಜವಾಬ್ದಾರಿ ಅದರಲ್ಲೂ ವಿಶೇಷವಾಗಿ ತಂದೆಯ ಜವಾಬ್ದಾರಿಗಳ ಮೇಲೆ ಗಂಭೀರವಾಗಿ ಬೆಳಕು ಚೆಲ್ಲುತ್ತದೆ. ಸಿನಿಮಾದ ಮೊದಲಾರ್ಧ ಈ ಸಿನಿಮಾದ ನಿಜವಾದ ಶಕ್ತಿ. ಮೊದಲಾರ್ಧದಲ್ಲಿ ಪ್ರೇಕ್ಷಕರನ್ನು ಸಿನಿಮಾ ಹಿಡಿದಿಟ್ಟುಕೊಳ್ಳುವ ರೀತಿ ಅದ್ಭುತವಾಗಿದೆ.

ಸಿನಿಮಾಕ್ಕೆ ಕತೆ, ಚಿತ್ರಕತೆ ಬರೆದಿರುವ ಸ್ರಿಜಿತ್ ಹಾಗೂ ಬಿಬಿನ್ ಮಾಲಿಕೆಲ್ ಕೆಲಸ ಚೆನ್ನಾಗಿದೆ. ಮೊದಲಾರ್ಧದಲ್ಲಿ ಸಾಕಷ್ಟು ಹಾಸ್ಯ ದೃಶ್ಯಗಳನ್ನು ನೀಡಿ ಎರಡನೇ ಅರ್ಧದಲ್ಲಿ ಪ್ರೇಕ್ಷಕರನ್ನು ಕುತೂಹಲಕ್ಕೆ ನೀಡಿ ಅವರನ್ನು ಹಿಡಿದಿಟ್ಟುಕೊಳ್ಳಲು ಅವರ ಕತೆ ಸಫಲವಾಗಿದೆ. ಫನ್ನಿಯಾಗಿರುವ ಟ್ವಿಸ್ಟ್‌ಗಳು, ಕುಟುಂಬದಲ್ಲಿ ನಡೆವ ಹಾಸ್ಯ ಎಲ್ಲವೂ ರಂಜನೀಯವಾಗಿದೆ.

ಆದರೆ ಸಿನಿಮಾ ತನ್ನ ಹಿಡಿತ ಕಳೆದುಕೊಳ್ಳುವುದು ಎರಡನೇ ಅರ್ಧದಲ್ಲಿ. ಸಿನಿಮಾದ ದ್ವಿತೀಯಾರ್ಧದಲ್ಲಿ ಕಾಮಿಡಿ ಪಂಚ್‌ಗಳು ಅಷ್ಟಾಗಿ ವರ್ಕ್ ಆಗಿಲ್ಲ. ಜೊತೆಗೆ ಸಿನಿಮಾವನ್ನು ಸಹ ತುಸು ಎಳೆದಂತೆ ಭಾಸವಾಗುತ್ತದೆ. ಆದರೆ ಯಾರಿಗೆ ಸರಳ, ಹಾಸ್ಯಮಯ ಕೌಟುಂಬಿಕ ಸಿನಿಮಾ ಹಿಡಿಸುತ್ತದೆಯೋ ಅವರಿಗೆ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ. ಕುಟುಂಬ ಹಾಗೂ ಸ್ನೇಹಿತರೊಟ್ಟಿಗೆ ಒಟ್ಟಿಗೆ ಕುಳಿತು ನೋಡುವಂಥಹಾ ಸಿನಿಮಾ ‘ಬ್ರೋ ಡ್ಯಾಡಿ’.

ನಟನೆ ಹೇಗಿದೆ?

ಮೋಹನ್‌ಲಾಲ್ ಅನುಭವಕ್ಕೆ ಯಾವ ಪಾತ್ರವೂ ಸವಾಲಲ್ಲ. ಹಾಸ್ಯ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಬಲ್ಲೆ ಎಂಬುದನ್ನು ಈ ಸಿನಿಮಾ ಮೂಲಕ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸಾಮಾನ್ಯವಾಗಿ ಗಂಭೀರ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುವ ನಟ ಪೃಥ್ವಿರಾಜ್ ಸುಕುಮಾರನ್ ಈ ಸಿನಿಮಾದಲ್ಲಿ ಹಾಸ್ಯಕ್ಕೆ ಒಗ್ಗಿಕೊಂಡಿದ್ದಾರೆ. ಅವರ ನಟನೆ ಸಹ ಚೇತೋಹಾರಿಯಾಗಿದೆ. ಮೋಹನ್‌ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್‌ರ ಕೆಮಿಸ್ಟ್ರಿಯೇ ಸಿನಿಮಾದ ಜೀವಾಳ.

ನಟಿ ಮೀನಾ ಮತ್ತೊಮ್ಮೆ ಮೋಹನ್‌ಲಾಲ್ ಜೊತೆಗೆ ಒಳ್ಳೆಯ ಕೆಮಿಸ್ಟ್ರಿ ಪ್ರದರ್ಶಿಸಿದ್ದಾರೆ. ಜೊತೆಗೆ ತಮ್ಮ ಸೌಂದರ್ಯ ಹಾಗೂ ಮುಗ್ಧ ನಟನೆಯಿಂದ ಗಮನ ಸೆಳೆಯುತ್ತಾರೆ. ಪೃಥ್ವಿರಾಜ್‌ಗೆ ಜೋಡಿಯಾಗಿ ನಟಿಸಿರುವ ಪ್ರಿಯದರ್ಶಿಸಿ ಕಲ್ಯಾಣಿ ನಟನೆ ಸಹ ಚೆನ್ನಾಗಿದೆ. ಈ ಸಿನಿಮಾ ಮೂಲಕ ತಾವು ಮಲಯಾಳಂ ಉದ್ಯಮದ ಪ್ರತಿಭಾವಂತ ನಟಿಯರಲ್ಲೊಬ್ಬರು ಎಂದು ಸಾಬೀತು ಪಡಿಸಿದ್ದಾರೆ.

ಸಿನಿಮಾದಲ್ಲಿ ಎಲ್ಲರಿಗಿಂತಲೂ ಚೆನ್ನಾಗಿ ಶೈನ್ ಆಗಿರುವುದು ಕುರಿಯನ್ ಪಾತ್ರದಲ್ಲಿ ನಟಿಸಿರುವ ಲಾಲು ಅಲೆಕ್ಸ್. ಹಾಸ್ಯ ಸನ್ನಿವೇಶ ಅಥವಾ ಭಾವುಕ ಸನ್ನಿವೇಶ ಎರಡರಲ್ಲೂ ಅವರ ನಟನೆಯ ಅದ್ಭುತ. ಅವರಿಗೆ ಸಾಕಷ್ಟು ಪಂಚ್‌ ಲೈನ್‌ಗಳು ಸಿನಿಮಾದಲ್ಲಿ ಸಿಕ್ಕಿವೆ. ಶೋಬಿನ್ ಶಾಹಿರ್ ನಟನೆ ಇನ್ನಷ್ಟು ಚೆನ್ನಾಗಿರಬಹುದಿತ್ತು ಎನಿಸುತ್ತದೆ. ಇನ್ನುಳಿದ ನಟರೆಲ್ಲರೂ ತಮಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ತಾಂತ್ರಿಕ ವಿಷಯಗಳು

ಅಭಿನಂದನ್ ರಾಮಾನುಜನ್‌ರ ಸಿನಿಮಾಟೊಗ್ರಫಿ ಸಿನಿಮಾಕ್ಕೆ ಹೊಸ ಅಂದವನ್ನು ನೀಡಿದೆ. ಅವರ ಕ್ಯಾಮೆರಾ ಕೈಚೆಳಕ ಸಿನಿಮಾಕ್ಕೆ ಹೊಸ ಮೆರುಗು ನೀಡಿದ್ದು ಹೊಸದೇನೋ ನೋಡುತ್ತಿರುವ ಭಾವ ಮೂಡಿಸುತ್ತದೆ. ಅಖಿಲೇಶ್ ಮೋಹನ್ ಸಂಕಲನ ಸಹ ಚೆನ್ನಾಗಿದೆ. ದೀಪಕ್ ದೇವ್ ನೀಡಿರುವ ಹಾಡುಗಳು ಸಹ ಚೆನ್ನಾಗಿವೆ. ಹಿನ್ನೆಲೆ ಸಂಗೀತ ಸಹ ಪೂರಕವಾಗಿದೆ. ಸಿನಿಮಾದ ಹೆಸರು ತೋರಿಸುವಾಗ ಮಾಡಲಾಗಿರುವ ಅನಿಮೇಶನ್ಸ್‌ಗೆ ವಿಶೇಷ ಅಂಕ ಸಲ್ಲಲೇ ಬೇಕು.

ಕೊನೆ ಮಾತು

‘ಬ್ರೋ ಡ್ಯಾಡಿ’ ಸಿನಿಮಾದ ಬಹುಪಾಲು ಮನೊರಂಜನಾತ್ಮಕವಾಗಿದೆ. ಜೊತೆಗೆ ಈ ಸಿನಿಮಾವು ತಂದೆಯ ಜವಾಬ್ದಾರಿ, ಮಕ್ಕಳನ್ನು ಬೆಳೆಸುವ ವಿಧಾನದ ಬಗ್ಗೆ ಬೆಳಕು ಚೆಲ್ಲುತ್ತದೆ. ಸಿನಿಮಾದಲ್ಲಿ ಕೆಲವು ಸಮಸ್ಯೆಗಳಿವೆ ಆದರೆ ಅವು ಸಿನಿಮಾದ ಒಟ್ಟಾರೆ ಮನೊರಂಜನೆಗೆ ಕುತ್ತು ತಂದಿಲ್ಲ. ಕುಟುಂಬದೊಂದಿಗೆ ನೋಡಲು ಅಡ್ಡಿಯಿಲ್ಲದ ಸಿನಿಮಾ ಇದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ಬಾದಾಮಿ ಪ್ರಯೋಜನಗಳು;

Thu Jan 27 , 2022
ಬಾದಾಮಿ ದೇಹ ಹಾಗೂ ಮನಸಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರೋ ಪ್ರೋಟೀನ್, ಫೈಬರ್, ವಿಟಾಮಿನ್ ಇ, ಒಮೇಗಾ3, ಹಾಗೂ ಒಮೇಗಾ 6 ಫ್ಯಾಟಿ ಆಸಿಡ್, ಕ್ಯಾಲ್ಸಿಯಂ, ಜಿಂಕ್ ಇವೆಲ್ಲಾ ದೇಹಕ್ಕೆ ಅಗತ್ಯವಾಗಿ ಬೇಕಾದವು. ಆದರೆ ಕಚ್ಚಾ ಬಾದಾಮಿ ಈ ಬೇಸಿಗೆಯಲ್ಲಿ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಬಿರುಬೇಸಿಗೆಯಲ್ಲಿ ಕಚ್ಚಾ ಬಾದಾಮಿಯನ್ನು ಅಂದರೆ ನೆನೆಸಿರದ ಬಾದಾಮಿಯನ್ನು ತಿಂದರೆ ಏನಾಗುತ್ತೆ ಅನ್ನೋದನ್ನು ನೋಡೋಣ. ಕಚ್ಚಾ ಬಾದಾಮಿ ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಅಡೆತಡೆ ಉಂಟು […]

Advertisement

Wordpress Social Share Plugin powered by Ultimatelysocial