ಸತ್ಯಕಾಮ |On the birth anniversary of great writer Sathyakama |

ಬಹಳಷ್ಟು ವೇಳೆ ನಮ್ಮ ಕ್ರಿಯೆಗಳು ಮತ್ತು ಓದುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡಲ್ಲಿ, ಅವು ಬಹುತೇಕವಾಗಿ ಅಭ್ಯಾಸಬಲದಿಂದ ಹುಟ್ಟುವಂತಾಗಿದ್ದು, ನಾವು ಆ ಅಭ್ಯಾಸಬಲದ ಹಾದಿಯಲ್ಲಿ ಕ್ರಮೇಣವಾಗಿ ನಮ್ಮ ಅಭಿರುಚಿಗಳನ್ನು ಸೃಷ್ಟಿಸಿಕೊಂಡಿರುತ್ತೇವೆ. ಶೈಕ್ಷಣಿಕ ಪರಿಧಿಯಾಚೆಗಿನ ನಮ್ಮ ಓದಿನ ಅಭ್ಯಾಸಗಳು ಪ್ರಾರಂಭಗೊಂಡಾಗ ನಮಗೆ ಅದನ್ನು ಬರೆದವರಲ್ಲಾಗಲೀ ಕಥಾವಸ್ತುವಿನ ಬಗೆಗಾಗಲೀ ಯಾವುದೇ ಪೂರ್ವಾಗ್ರಹವಿರುವುದಿಲ್ಲ. ಹೀಗೆ ನಾನು ಓದಲು ಪ್ರಾರಂಭಿಸಿದ ದಿನಗಳಲ್ಲಿ ನನ್ನನ್ನು ಅತೀವ ಆಕರ್ಷಣೆಗೆ ಸಿಲುಕಿಸಿದ ಬರಹಗಳಲ್ಲಿ ಸತ್ಯಕಾಮ ಅವರ ಕಥೆಗಳು ಪ್ರಮುಖವಾಗಿವೆ.
ಅಂದಿನ ದಿನಗಳಲ್ಲಿ ಕೆಲವೊಂದು ಪತ್ರಿಕೆಗಳು, ವಿಶೇಷಾಂಕಗಳಲ್ಲಿ ಕಾಣುತ್ತಿದ್ದ ಸತ್ಯಕಾಮರ ಬರಹಗಳು ನನ್ನ ಮನದಂತರಾಳಕ್ಕೆ ಅತೀವ ಸಂತಸ ಕೊಟ್ಟ ಕಥೆಗಳು. ಮುಂದೆ ಅವರ ಹಲವು ಪುಸ್ತಕಗಳಾದ ರಾಜಕ್ರೀಡೆ, ನಾಯಿಮೂಗು, ರಾಜಬಲಿ, ತಂತ್ರಯೋನಿ, ಪಂಚ’ಮ’ಗಳ ನಡುವೆ ಅಂತಹವನ್ನು ಓದಿ ಸಂತಸಪಟ್ಟಿದ್ದೇನೆ. ‘ರಾಜಕ್ರೀಡೆ’ಯಲ್ಲಿನ ಕೃಷ್ಣನ ಬದುಕೆಂಬ ಕ್ರೀಡೆ ನೆನೆದಾಗಲೆಲ್ಲಾ ಅತೀವ ಖುಷಿ ಕೊಡುತ್ತದೆ. ಬಹುಶಃ ಶ್ರೀಕೃಷ್ಣನನ್ನು ಕುರಿತ ಭಗವದ್ಗೀತೆಯನ್ನೊಳಗೊಂಡಂತೆ ನನ್ನ ಬಹುತೇಕ ಅಧ್ಯಯನಗಳಿಗೆ ಈ ಪುಸ್ತಕ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ತಂತ್ರಯೋನಿ, ಪಂಚ’ಮ’ಗಳ ನಡುವೆ ಕೃತಿಗಳು ತಂತ್ರಸಾಧನೆ, ಆಧ್ಯಾತ್ಮ ಸಾಧನೆಗಳತ್ತ ಸತ್ಯಕಾಮರು ನೀಡಿರುವ ಅದ್ಭುತ ನೇರ ಅನುಭಗಳು ನೀಡುವ ನೋಟ ಮನಮುಟ್ಟುವಂತದ್ದು.
ಸತ್ಯಕಾಮ ಅವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಅವರ ಆತ್ಮೀಯರಾಗಿದ್ದ ಆಚಾರ್ಯ ಬನ್ನಂಜೆ ಗೋವಿಂದಾಚಾರ್ಯರು ಹೇಳುತ್ತಿದ್ದರು. “ಸತ್ಯಕಾಮರಂತಹ ಮಹಾನ್ ವ್ಯಕ್ತಿಯನ್ನು ದುರದೃಷ್ಟವಶಾತ್ ನಮ್ಮ ನಾಡು ಮರೆತಿದೆ. ಸತ್ಯಕಾಮ ಬದುಕಿದ್ದಾಗಲೂ ಯಾರಿಗೂ ಅರ್ಥವಾಗಲಿಲ್ಲ, ಹೊರಟು ಹೋದಾಗಲೂ ಅರ್ಥವಾಗಲಿಲ್ಲ. ಏನನ್ನಾದರೂ ಸಾಧಿಸಿ ತೋರಿಸುವ ಛಲ, ನಿರ್ಭಯತೆ ಹಾಗೂ ನಿಗೂಢತೆಯನ್ನು ಬೇಧಿಸುವ ಗುಣ ಅವರಲ್ಲಿ ಇತ್ತು” ಎಂದು. ಸತ್ಯಕಾಮ ಅವರ ಬರಹಗಳ ಮೋಡಿ ಮತ್ತು ಅವರ ನಿಗೂಢತೆಯ ಬಗೆಗೆ ಕುತೂಹಲವಿದ್ದವರಿಗೆ ಈ ಮಾತು ಹತ್ತಿರವಾಗಿರುತ್ತದೆ ಎಂದು ನನ್ನ ಅನಿಸಿಕೆ.
1920ರ ಮಾರ್ಚ್ 2ರಂದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ಜನಿಸಿದ ಅನಂತ ಕೃಷ್ಣಾಚಾರ್ಯ ಶಹಾಪುರ ಅವರು ತಮ್ಮ ಕಾವ್ಯನಾಮವನ್ನು ‘ಸತ್ಯಕಾಮ’ ಎಂದಿರಿಸಿಕೊಂಡರು. 1934ರವರೆಗೆ ಇವರ ಶಿಕ್ಷಣ ಗಲಗಲಿಯಲ್ಲಿಯೇ ನಡೆಯಿತು. ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಒಂದು ವರ್ಷ ಗಲಗಲಿಯಲ್ಲಿ ಸುಮ್ಮನೆ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿನಲ್ಲಿ ಮುಂದಿನ ಶಿಕ್ಷಣಕ್ಕೆ ಸೇರಿಕೊಂಡರಾದರೂ ಓದು ಮುಂದುವರಿಸದೆ ಅಲ್ಲಿಗೇ ನಿಲ್ಲಿಸಿಬಿಟ್ಟರು.
1930-31ರಲ್ಲಿ ಭಾರತದಲ್ಲೆಲ್ಲಾ ಉಪ್ಪಿನ ಸತ್ಯಾಗ್ರಹ ಪ್ರಖರವಾಗಿ ನಡೆದಿತ್ತು. ಬಾಲಕ ಅನಂತ ಐದನೆಯ ತರಗತಿಯಲ್ಲಿ ಕಲಿಯುತ್ತಿದ್ದ. ತನ್ನ ಶಾಲೆಯ 20-25 ವಿದ್ಯಾರ್ಥಿಗಳನ್ನು ಕೂಡಿಸಿ ಮೆರವಣಿಗೆ ನಡೆಸಿದ. ಪೊಲೀಸರು ಬಂಧಿಸಿದರು. ಕ್ಷಮೆ ಕೇಳಲು ಸಿದ್ಧನಿಲ್ಲದ ಹುಡುಗನಿಗೆ 5 ಘಟಕಿಯ ಶಿಕ್ಷೆ ಆಯಿತು.
ಸತ್ಯಕಾಮ ಅವರು 1940ರಲ್ಲಿ ‘ಜೀವನ ನಾಟ್ಯ ವಿಲಾಸಿ ಸಂಘ’ವನ್ನು ಸ್ಥಾಪಿಸಿ ಎನ್ಕೆ, ಬೇಂದ್ರೆ, ಶ್ರೀರಂಗ ಮೊದಲಾದವರ ನಾಟಕಗಳನ್ನು ಆಡಿದರು. 1943ರಲ್ಲಿ ಧಾರವಾಡದ ಸ್ವಾತಂತ್ರ್ಯ ಹೋರಾಟಗಾರ ಬುರ್ಲಿ ಬಿಂದು ಮಾಧವರ ಜೊತೆಗೆ 6 ತಿಂಗಳು ಕಳೆದು ಬಂದ ಸತ್ಯಕಾಮ ಅವರು ಬೀಳಗಿ, ಗಲಗಲಿ, ಬೇವೂರು, ಕಡ್ಲಿಮಟ್ಟಿ, ಬಬಲೇಶ್ವರ, ವಿಜಾಪುರ ಇಲ್ಲೆಲ್ಲಾ ಬ್ರಿಟಿಷರ ವಿರುದ್ಧ ಭೂಗತ ಚಟುವಟಿಕೆಗಳನ್ನು ನಡೆಸಿದರು. ಇವರ ನಾಟ್ಯ ವಿಲಾಸಿ ಸಂಘದ ಹಲವಾರು ಗೆಳೆಯರು ಕೂಡಾ ಸ್ವಾತಂತ್ರ್ಯ ಹೋರಾಟದಲ್ಲಿ ಇವರಿಗೆ ಜೊತೆಯಾಗಿದ್ದರು. ಬ್ರಿಟಿಷ್ ಸರ್ಕಾರ ಇವರನ್ನು ಹಿಡಿದುಕೊಟ್ಟವರಿಗೆ ಹತ್ತುಸಾವಿರ ರೂಪಾಯಿಗಳ ಬಹುಮಾನ ಪ್ರಕಟಿಸಿತ್ತು. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಅಲೆಯುತ್ತಿದ್ದ ಇವರು ಆದಮಾರು ಮಠದ ಸ್ವಾಮಿಯವರಲ್ಲಿ ಸುಳ್ಳು ಹೆಸರಿನಲ್ಲಿ ಆಶ್ರಯ ಪಡೆದು 6 ತಿಂಗಳುಗಳ ಕಾಲ ಸಂಸ್ಕೃತಾಧ್ಯಯನ ಮಾಡಿದರು. ಮುಂದೆ ತಮ್ಮಲ್ಲಿನ ಆತ್ಮಶಕ್ತಿ ಬೆಳೆಸಿಕೊಳ್ಳಬೇಕೆಂಬ ಆಸಕ್ತಿ ಹುಟ್ಟಿ ಅದಕ್ಕಾಗಿ ಎಲ್ಲೆಡೆ ಅಲೆದಾಡಿದರು. ನಾಡಲ್ಲಿ ಸಿಗದಿದ್ದಾಗ ಕಾಡಿಗೆ ಹೋದರು. ಹಿಮಾಲಯಕ್ಕೆ ಹೋದರು. 1944ರಿಂದ 1956ರವರೆಗೆ ಕೇರಳದಿಂದ ಟಿಬೇಟ್ವರೆಗೆ ಎಲ್ಲೆಲ್ಲೂ ಅಲೆದಾಡಿದರು. ಈ ಸಮಯದಲ್ಲಿ ಅಧ್ಯಾತ್ಮ ಲಾಭದ ಜೊತೆಗೆ ಅವರಿಗೆ ತಾಂತ್ರಿಕರ ಪರಿಚಯವೂ ಅಯಿತು. ಪರಿಣಾಮವಾಗಿ ಸತ್ಯಕಾಮರು ತಾಂತ್ರಿಕ ವಿದ್ಯೆಯನ್ನು ಸಿದ್ಧಿಸಿಕೊಂಡರು. ಇದರ ವಿವರಗಳು “ಪಂಚ’ಮ’ಗಳ ನಡುವೆ” ಮತ್ತು ‘ತಂತ್ರಯೋನಿ’ ಮುಂತಾದ ಅವರ ಕೃತಿಗಳಲ್ಲಿ ದೊರೆಯುತ್ತವೆ.
‘ಶ್ರೀ’, ’ಕಲ್ಯಾಣ’ ಸತ್ಯಕಾಮರ ಸ್ವಂತ ಪತ್ರಿಕೆಗಳು. ಕಲ್ಕಿ, ಸಾಧನಾ, ಸಂಕ್ರಾಂತಿ, ಪಂಚಾಮೃತ, ಸಂಯುಕ್ತ ಕರ್ನಾಟಕದಲ್ಲೂ ಅವರು ಕೆಲ ಕಾಲ ದುಡಿದಿದ್ದರು. ಸತ್ಯಕಾಮರು 50ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದಾರೆ. ಒಂದೆರಡು ಕೃತಿಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲವುಗಳಿಗೂ ಅವರು ಪುರಾಣವಸ್ತುಗಳನ್ನೇ ಆಯ್ದುಕೊಂಡಿರುವುದು ವಿಶೇಷ.
ವೀಣೆ, ಮಾತೃಮಂದಿರ, ಮಾತೃಲಹರಿ, ಗಂಗಾಲಹರಿ ನಾಲ್ಕು ಸತ್ಯಕಾಮರ ಕವನ ಸಂಕಲನಗಳು. ಬಾಳಸೊಡರು, ಕರ್ಮವೇದನೆ, ಅನಂತ ಜೀವನ, ಉತ್ತರಾಯಣ, ಬತ್ತಿದ ಕಡಲು, ಆಹುತಿ, ಅಭಿನವ, ಅಶ್ವಘೋಷ, ಋಷಿಪಂಚಮಿ, ರಾಜಬಲಿ, ತಣ್ಣಗಿನ ಬೆಂಕಿ, ಶೃಂಗಾರತೀರ್ಥ, ಸೀತಾಪರಿತ್ಯಾಗ, ಬೆಂಕಿಯ ಮಗಳು, ನಾಗರನಂಜು, ಲಾವಣ್ಯ, ನಿ-ಪ್ರಯೋಗ, ತಂದೆ-ಮಗಳು, ದೇವನ ಇನ್ನೊಂದು ಬಾಗಿಲು, ಪುರುಷಸೂಕ್ತ, ನಾಯಿಮೂಗು, ರಾಜಕ್ರೀಡೆ, ಚಂಡ ಪ್ರಚಂಡ, ಒಡೆದ ಕನ್ನಡಿ, ಮನ್ವಂತರ, ಹಳೆಯ ರಾಜಕೀಯ, ಕೃಷ್ಣಾರ್ಪಣ, ಮನ್ವಂತರ, ವಿಚಿತ್ರವೀರ್ಯ, ತಂತ್ರಯೋನಿ, ಪಂಚ‘ಮ’ಗಳ ನಡುವೆ, ‘ಮಾತೃ ಲಹರಿ ಮತ್ತು ಇತರ ಕವಿತೆಗಳ ನಡುವೆ’, ಅರ್ಧನಾರಿ, ಲಾವಣ್ಯ ಇವು ಇವರ ಕೆಲವು ಕೃತಿಗಳು. ಸಾಹಿತ್ಯ ಅಕಾಡೆಮಿ ಗೌರವವೂ ಒಳಗೊಂಡಂತೆ ಹಲವಾರು ಗೌರವಗಳು ಅವರಿಗೆ ಸಂದವು.
ತಮ್ಮ ಬರವಣಿಗೆಯ ಪರಿಧಿಯಾಚೆಗೆ 1956ರಲ್ಲಿ ಜಮಖಂಡಿಯ ಹತ್ತಿರದ ಕಲ್ಲಹಳ್ಳಿ ಎಂಬ ಹಳ್ಳಿಯಲ್ಲಿ ರಾಜ್ಯಸರಕಾರದಿಂದ ಸ್ವಲ್ಪ ಭೂಮಿಯನ್ನು ಪಡೆದು ಸತ್ಯಕಾಮರು ಬೇಸಾಯ ಮಾಡುವುದನ್ನು ಇತರರಿಗೆ ಮಾದರಿಯಾಗುವಂತೆ ಮಾಡಿ ತೋರಿಸಿದರು. ಕಲ್ಲಹಳ್ಳಿಯ ಗುಡ್ಡಗಾಡನ್ನು ನಂದನ ವನವನ್ನಾಗಿ ಪರಿವರ್ತಿಸಿದ ಕೃಷಿ ಅನುಭವಿಯಾತ.
ಆ ಮಹಾನ್ ಸಾಧಕ ಅಪ್ರತಿಮ ಶೈಲಿಯ ಬರಹಗಾರ ಸತ್ಯಕಾಮ ಅವರು 1998ರ ಅಕ್ಟೋಬರ್ 20ರಂದು ನಿಧನರಾದರು. ತಮ್ಮ ಬರಹಗಳ ಮೋಡಿಯಿಂದ ಜನಮನ ಸೆಳೆದ, ತಾಂತ್ರಿಕ, ಆಧ್ಯಾತ್ಮಿಕ ತಪಸ್ವಿ, ಕಾರ್ಯನಿಷ್ಠ, ದೇಶಭಕ್ತ ಸತ್ಯಕಾಮರಿಗೆ ನಮೋನ್ನಮಃ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುನ್ನುಕ್ಕುಡಿ ವೈದ್ಯನಾಥನ್ | On the birth anniversary of great musician Kunnukkudi Vaidyanathan |

Thu Mar 3 , 2022
ಕುನ್ನುಕ್ಕುಡಿ ವೈದ್ಯನಾಥನ್ On the birth anniversary of great musician Kunnukkudi Vaidyanathan ಪಿಟೀಲು ವಾದನದಲ್ಲಿ ದೇಶದಲ್ಲಿ ಕಂಡುಬರುವ ಪ್ರಧಾನ ಹೆಸರುಗಳಲ್ಲಿ ಕುನ್ನುಕ್ಕುಡಿ ವೈದ್ಯನಾಥನ್ ಒಬ್ಬರು. ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರ ಬಳಿ ತಲುಪಿಸುವಲ್ಲಿ ಕುನ್ನುಕ್ಕುಡಿ ವೈದ್ಯನಾಥನ್ ಅವರ ಕೊಡುಗೆ ಅಸದೃಶವಾದದ್ದು. ಈ ಮಹಾನ್ ಸಂಗೀತ ವಿದ್ವಾಂಸ ವೈದ್ಯನಾಥನ್ 1935ರ ಮಾರ್ಚ್ 2ರಂದು ಮುರುಗನ್ ದೇವಾಲಯದ ಊರಾದ ಕುನ್ನುಕ್ಕುಡಿಯಲ್ಲಿ ಜನಿಸಿದರು. ತಂದೆ ವಿದ್ವಾನ್ ರಾಮಸ್ವಾಮಿ ಶಾಸ್ತ್ರಿ. ತಾಯಿ ಮೀನಾಕ್ಷಿ. ತಂದೆ […]

Advertisement

Wordpress Social Share Plugin powered by Ultimatelysocial