ಬೆಳೆಗೆರೆ ಜಾನಕಮ್ಮ

ಕನ್ನಡ ಸಾಹಿತ್ಯಲೋಕದಲ್ಲಿ ಬೆಳಗೆರೆ ಜಾನಕಮ್ಮ ಆಪ್ತ ಹೆಸರು.
ಬೆಳೆಗೆರೆ ಜಾನಕಮ್ಮನವರು 1912ರಲ್ಲಿ ಚಳ್ಳಕೆರೆ ತಾಲ್ಲೂಕಿನ ಬೆಳೆಗೆರೆಯಲ್ಲಿ ಜನಿಸಿದರು. ತಂದೆ ಲಾವಣಿಶಾಸ್ತ್ರಿ, ಕಡಲೇಕಾಯಿಶಾಸ್ತ್ರಿ ಎಂದೇ ಪ್ರಸಿದ್ಧರಾಗಿದ್ದ ಚಂದ್ರಶೇಖರ ಶಾಸ್ತ್ರಿ. ತಾಯಿ ಅನ್ನಪೂರ್ಣಮ್ಮ. ಈ ದಂಪತಿಗಳ ಐವರು ಮಕ್ಕಳಲ್ಲಿ ಜಾನಕಮ್ಮನವರು ಎರಡನೆಯವರು.
ಜಾನಕಮ್ಮನವರ ಅಣ್ಣ ಸೀತಾರಾಮಶಾಸ್ತ್ರಿಗಳು ‘ಕ್ಷೀರಸಾಗರ’ ಎಂಬ ಹೆಸರಿನಲ್ಲಿ ನಾಟಕ ರಚನಕಾರರಾಗಿ ಪ್ರಸಿದ್ಧರಾಗಿದ್ದಷ್ಟೇ, ಗಣಿತಶಾಸ್ತ್ರಜ್ಞರಾಗಿ ‘ಕ್ಯಾಲ್ಕುಲಸ್ ಶಾಸ್ತ್ರಿ’ ಎಂದೂ ಪ್ರಸಿದ್ಧರಾಗಿದ್ದರು. ಜಾನಕಮ್ಮನವರ ತಂಗಿಯರು ರುಕ್ಕಮ್ಮ ಮತ್ತು ಪಾರ್ವತಮ್ಮ. ಬೆಳೆಗೆರೆ ಪಾರ್ವತಮ್ಮನವರೂ ಸೃಜನಶೀಲ ಲೇಖಕಿ. ತಮ್ಮ ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಹಳ್ಳಿಗಳಲ್ಲಿ ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಸಾಂಸ್ಕೃತಿಕ ಆವರಣ ಮೂಡಿಸುವುದರಲ್ಲಿ ದೊಡ್ಡ ಕೆಲಸ ಮಾಡಿದ್ದಲ್ಲದೆ ಹಾಗೂ `ಯೇಗ್ದಾಗೆಲ್ಲಾ ಐತೆ’, ‘ಮರೆಯಲಾದೀತೇ?’ , ‘ಸಾಹಿತಿಗಳ ಸ್ಮೃತಿ’ ಮುಂತಾದ ಅವಿಸ್ಮರಣೀಯ ಕೃತಿಗಳನ್ನು ನೀಡಿದವರು.
ಬೆಳೆಗೆರೆ ಜಾನಕಮ್ಮನವರಿಗೆ ತಮ್ಮ ಹತ್ತನೇ ವಯಸ್ಸಿನಲ್ಲೇ ಸೋದರತ್ತೆಯ ಮಗ ಮಲ್ಲೂರು ಕೃಷ್ಣಶಾಸ್ತ್ರಿಗಳೊಂದಿಗೆ ವಿವಾಹವಾಯಿತು. ಅವರು ಬಳ್ಳಾರಿಯ ವಾಲ್ಕಾಟ್ ಬ್ರದರ್ಸ್ ಸ್ವಿಸ್ ಕಂಪನಿಯ ಸಣ್ಣ ಸಂಬಳದ ಗುಮಾಸ್ತರಾಗಿದ್ದರು. ಕಮಲನಾಭ ಹಾಗೂ ಪ್ರಸನ್ನಕುಮಾರ ಇಬ್ಬರು ಮಕ್ಕಳು. ಜಾನಕಮ್ಮನವರು ತಮ್ಮ ಕವನಸಂಕಲನ ‘ಕಲ್ಯಾಣ’ವನ್ನು ಅವರಿಗೆ ಸಮರ್ಪಿಸಿದ್ದಾರೆ.
ಬೇಂದ್ರೆ, ಬಿ.ಎಂ.ಶ್ರೀ, ಮಾಸ್ತಿ ಅವರನ್ನೊಳಗೊಂಡಂತೆ ಜಾನಕಮ್ಮನವರು ಅಂದಿನ ಯುಗದ ಮಹನೀಯರೆಲ್ಲರ ಗಮನ ಸೆಳೆದವರು. ಅಂದಿನ ಯುಗದ ಶ್ರೇಷ್ಠ ಮಹನೀಯರೊಡನೆ ಜಾನಕಮ್ಮನವರು ಅಪಾರ ಗೌರವಗಳುಳ್ಳ ಸಂವಹನ ಸಾಧಿಸಿದ್ದರು.
ಜಾನಕಮ್ಮನವರ ಬದುಕಿನಲ್ಲಿ ಪ್ರೇರಣೆ ನೀಡಿದ ಮತ್ತೊಬ್ಬ ಹಿರಿಯರು ಪ್ರಣವಾನಂದ ಸ್ವಾಮೀಜಿಯವರು.
ಜಾನಕಮ್ಮನವರ ಪತಿ ತೀರಿಕೊಂಡಾಗ ಬೇಂದ್ರೆಯವರು ತಮ್ಮ ಶೋಕವನ್ನು ಗೀತೆಯ ಮೂಲಕ ಹರಿಸಿದರು.
‘ತಂಗಿ ಜಾನಕಿ ನಿನ್ನ ವೈದೇಹದೊಲವಿನಲಿ ಓಲೆ ಬಂದಿತು ಒಂದು ಇತ್ತ ತೇಲಿ’ ಎಂಬುದು ಬೇಂದ್ರೆಯವರು ತಮ್ಮ ಆತ್ಮೀಯರ ನೋವು-ನಲಿವುಗಳಿಗೆ
ಸ್ಪಂದಿಸಿ ಬರೆದ ಕವನಗಳಲ್ಲಿ ಮುಖ್ಯವಾದುದು.
ಬೆಳೆಗೆರೆ ಜಾನಕಮ್ಮನವರು ಜನಕಜೆ ಕಾವ್ಯನಾಮದಿಂದ, ‘ಸುಕವಯಿತ್ರಿ’ ಎಂಬ ಬಿರುದಿನ ಮೂಲಕ ಮಹಿಳೆಯರು ಮಾತನಾಡಲು, ಅಭಿವ್ಯಕ್ತಿಸಲು ಹಿಂಜರಿಯುತ್ತ, ಅವಕಾಶಗಳಿಗಾಗಿ ಕಾಯುತ್ತಿದ್ದಾಗ ತಮ್ಮ ಸೀಮಿತ ಬದುಕಿನ ವಲಯದೊಳಗೇ, ದಟ್ಟ ಜೀವನಾನುಭವದಿಂದ ತುಂಬು ಸಂಪನ್ನರಾಗಿ, ಕನ್ನಡದ ಆರಂಭಿಕ ಮಹಿಳಾ ಕಾವ್ಯದ ಪ್ರಮುಖ ಪ್ರತಿನಿಧಿಯಾಗಿದ್ದಾರೆ.
ಜಾನಕಮ್ಮನವರ ಮೊದಲ ಪ್ರಕಟಿತ ಕವನ ‘ಮೊರೆ’. ಇದನ್ನು ಮಾಸ್ತಿಯವರು ತಮ್ಮ ‘ಜೀವನ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಮುಂದೆ ಅನೇಕ ಕವನಗಳು ‘ಜಯಕರ್ನಾಟಕ’, ‘ಪ್ರಬುದ್ಧ ಕರ್ನಾಟಕ’ ಮುಂತಾದವುಗಳಲ್ಲಿ ಬೆಳಕು ಕಂಡವು.
ನವೋದಯ ಪೂರ್ವದಲ್ಲಿ ಮಹಿಳೆಯರು ಅಕ್ಷರವಂತರಾಗುವುದೇ ಕಷ್ಟ ಎನ್ನುವಾಗ ಜಾನಕಮ್ಮನವರು ತುಂಬ ಪ್ರಾಮಾಣಿಕವಾಗಿ ತಮ್ಮ ನೋವು ನಲಿವುಗಳನ್ನು ತೋಡಿಕೊಂಡರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ಹೆಣ್ಣಿನ ಅಸಹಾಯಕತೆ, ಸಮಾಜದಲ್ಲಿ ಅವಳಿಗಿರುವ ಅನಾದರಗಳ ಕುರಿತು ಅವರ ಅಭಿವ್ಯಕ್ತಿಗಳು ವಿಶಿಷ್ಟತೆಯಲ್ಲಿ ಹೊರಹೊಮ್ಮಿವೆ. ಜಾನಕಮ್ಮನವರು ‘ಹೆಣ್ಣಾಟ’ ಎಂಬ ಕವನದಲ್ಲಿ…
“ಹೆಣ್ಣು ಗಂಡೆಂಬ ಗೊಂಬೆಗಳ ಆಟದಲಿ ಎನ್ನೊಡಲು ಕುದಿಯುತಿದೆ ಹೆಣ್ಣಾಟ ಕಂಡು, ಮನಸ್ಸಿದ್ದು ಜನಕಜೆಗೆ ಏನೂ ಚೆನ್ನಿಲ್ಲ” ಎಂದು ತಮ್ಮ ಅಸಮಾಧಾನವನ್ನು ತೋಡಿಕೊಳ್ಳುತ್ತಾರೆ.
‘ಚಂಡಶಾಸನ’ ಎಂಬ ಮತ್ತೊಂದು ಪದ್ಯದಲ್ಲಿ,
“ಲಂಚಕೋರನು ನೀನು ವಂಚನೆಯ ಮಾಡಿರುವೆ ಮೃದುತನ ಸ್ತ್ರೀವರ್ಗಕ್ಕೆ ಕಸಕ್ಕಿಂತ ಕಡೆಯಾಯಿತೆ ಹೆಣ್ಣು ಜನ್ಮವು ನಿನಗೆ ಈ ಭಾರ ಹೊರಿಸುವುದಕೆ ಗಿಡವೆಂದು ಬಗೆದೆಯಾ ಹೆಣ್ಣು ಜನ್ಮದ ಒಡಲ ಫಲಗಳನು ಸೃಜಿಸುವುದಕೆ”
ಎಂದು ಪ್ರಶ್ನಿಸುತ್ತಾರೆ.
ಜಾನಕಮ್ಮನವರು ತಮ್ಮ ಸುತ್ತಮುತ್ತಲಿನ ಬದುಕಿನ ದೈನಂದಿನ ಸಮಸ್ಯೆಗಳಿಗೂ ತೀವ್ರವಾಗಿ ಸ್ಪಂದಿಸಿದ್ದಾರೆ. ಬಳ್ಳಾರಿಯಂತಹ ಬಿಸಿಲು ಪ್ರದೇಶದಲ್ಲಿನ ನೀರಿನ ಸಮಸ್ಯೆ ಬಗ್ಗೆ ಅವರ ಕವಿತೆ ಹೀಗೆ ಚಿಂತಿಸುತ್ತದೆ
“ಬಾಯಾರಿ ಬಾ ಬಂದೆ
ಬತ್ತಿದೆ ಈ ಕೊಳವು ಬಾರವ್ವ ಗಂಗೆ ಉರಗನು ನಿನ್ನ ಬಿಡನೆ
ಶಂಕರ ತಡೆದಿಹನೆ ಪೇಳವ್ವೆ ಗಂಗೆ. . .”
ಎನ್ನುವಾಗ ಜನತೆಯ ಬದುಕನ್ನು, ಅದರಲ್ಲೂ ಹೆಣ್ಣನ್ನು ಕಾಡುವ ನೀರಿನ ಸಮಸ್ಯೆಯನ್ನು ಕುರಿತು ದುಃಖಿಸುತ್ತದೆ. ಗಂಗೆ ತಮ್ಮ ನಾಡಿನಲ್ಲಿ ಯಥೇಚ್ಛವಾಗಿ ಹರಿಯಲಿ, ಜನತೆಯ ಕಂಗೆಟ್ಟ ಬದುಕನ್ನು ತೇವವಾಗಿಸಲಿ, ಸಮೃದ್ಧವಾಗಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.
ಹೆಣ್ಣಿನ ಬಂಧನದ ಬಗ್ಗೆ, ದೇಶಕ್ಕೆ ಒದಗಿದ ಬಂಧನದ ಬಗ್ಗೆ ಅವರ ಮನಸ್ಸು ಕುದಿಯುತ್ತದೆ.
“ಕುದಿಯುವುದು ಒಳಗೊಳಗೆ ಸ್ವಾತಂತ್ರ್ಯವಿಲ್ಲೆನುತ ದುಡಿಯುವುದು ಹಗಲಿರುಳು ಉಸಿರಿರುವ ತನಕ”
ಎಂದು ಜಾನಕಮ್ಮನವರ ಮನ ಹೆಣ್ಣಿನ ಸ್ವಾತಂತ್ರ್ಯರಹಿತ, ಅತಂತ್ರ ಬದುಕಿನ ಬಗ್ಗೆ ಕಳವಳಿಸುತ್ತದೆ.
ಜಾನಕಮ್ಮನವರು ಜೀವಿಸಿದ್ದ ಕಾಲದಲ್ಲಿ ಅವರ ಕಾವ್ಯ ಪ್ರಕಟಣೆಯಾಗದಿದ್ದರೂ ಅವರ ಮರಣಾನಂತರ ಚಿತ್ರದುರ್ಗದ ಮರುಘಾಮಠದ ನೆರವಿನಿಂದ ‘ಕಲ್ಯಾಣ’ ಕೃತಿ ಬೇಂದ್ರೆಯವರ ಮುನ್ನುಡಿ ಹೊತ್ತು ಪ್ರಕಟಗೊಂಡಿತು.

ಬೆಳಗೆರೆ ಜಾನಕಮ್ಮನವರು 1948ರಲ್ಲಿ ತಮ್ಮ ಮೂರನೆಯ ಮಗುವಿನ ಪ್ರಸವದ ಸಮಯದಲ್ಲಿ ಮಗುವಿನೊಂದಿಗೇ ನಿಧನರಾದರು. ಬೇಂದ್ರೆಯವರು ಇವರನ್ನು “ಕ್ಷೀರಸಾಗರದೆಲೆಯ ತಲೆಯೆ ಪೆರೆಯೆ… “ ಎಂದು ಬಣ್ಣಿಸಿದ್ದಾರೆ. ಈ ಮಹಾನ್ ತಾಯಿಗೆ ನಮನ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂ. ವಿ. ರಾಜಮ್ಮ

Thu Mar 10 , 2022
ಎಂ.ವಿ. ರಾಜಮ್ಮನವರು ಚಿತ್ರರಂಗದ ಪ್ರಸಿದ್ಧ ಅಭಿನೇತ್ರಿ, ಚಿತ್ರರಂಗದ ಪ್ರಥಮ ನಿರ್ಮಾಪಕಿ ಹಾಗೂ ಕನ್ನಡ ವೃತ್ತಿ ರಂಗಭೂಮಿಯ ಅಭಿನಯ ಶಾರದೆ ಎಂದು ಖ್ಯಾತರಾಗಿದ್ದವರು. ಎಂ.ವಿ. ರಾಜಮ್ಮನವರು 1921ರ ಮಾರ್ಚ್ 10ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ ಜನಿಸಿದರು. ತಂದೆ ಜಮೀನ್ದಾರರಾಗಿದ್ದ ನಂಜಪ್ಪ. ತಾಯಿ ಸುಬ್ಬಮ್ಮ. ಬಾಲ್ಯದಿಂದಲೇ ಅಭಿನಯದ ಗೀಳು ಹತ್ತಿಸಿಕೊಂಡಿದ್ದ ರಾಜಮ್ಮನವರು ಶಾಲಾ ರಂಗಭೂಮಿಯಿಂದಲೇ ರಂಗ ಪ್ರವೇಶ ಪಡೆದರು. ಶಾಲೆಯ ವಾರ್ಷಿಕೋತ್ಸವದಲ್ಲಿ ‘ಕೃಷ್ಣಲೀಲಾ’ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡಿ ಜನಮೆಚ್ಚುಗೆ ಪಡೆದ […]

Advertisement

Wordpress Social Share Plugin powered by Ultimatelysocial