ಪಿ. ಭಾನುಮತಿ ಮಹಾನ್ ಕಲಾವಿದೆ

 

ಇಂದು ಮಹಾನ್ ಕಲಾವಿದೆ ಪಿ. ಭಾನುಮತಿ ಅವರ ಸಂಸ್ಮರಣಾ ದಿನ.
ಭಾನುಮತಿ ಜನಿಸಿದ್ದು 1925ರ ಸೆಪ್ಟೆಂಬರ್ 7ರಂದು. ನಾನು ಚಿಕ್ಕಂದಿನಿಂದ ಬಹುತೇಕ ಭಾರತೀಯ ಭಾಷೆಗಳ ಸಂಗೀತ, ಸಿನಿಮಾ ಮತ್ತು ಕನ್ನಡದಲ್ಲಿ ಬಂದ ಎಲ್ಲ ಸಾಹಿತ್ಯಗಳನ್ನೂ ಆಸ್ವಾದಿಸುತ್ತಾ ಬೆಳೆದವನು. ಹೀಗೆ ಬೆಳೆದ ನನಗೆ ಒಂದು ರೀತಿಯಲ್ಲಿ ಸೀಮಾತೀತವಾಗಿ ಎಲ್ಲ ಸಾಧಕರ ಕುರಿತೂ ಅಭಿಮಾನ. ನಾನು ಅಭಿಮಾನಿಸಿದ ಇಂತಹ ಹಲವು ಪ್ರಮುಖ ಕಲಾವಿದರಲ್ಲಿ ಭಾನುಮತಿ ಒಬ್ಬರು. ಅವರ ಪಾತ್ರ ನಿರ್ವಹಣೆಗಳನ್ನು ನೋಡಿದ್ದಕ್ಕಿಂತಲೂ ಅವರ ಧ್ವನಿಯಲ್ಲಿ ಮೂಡಿದ್ದ ಹಾಡುಗಳನ್ನು ನಾನು ಕೇಳಿ ತುಂಬಾ ಸಂತೋಷಿಸುತ್ತಿದ್ದೆ. ಅದೆಷ್ಟು ಸುಶ್ರಾವ್ಯ ಕಂಚು ಕಂಠದ ಮಧುರ ಸುಸ್ಪಷ್ಟ ಉಚ್ಛಾರ ಅವರದು!
ನನಗೆ ನಾನು ಹೀಗೆ ಅಭಿಮಾನಿಸಿದ ಸಾಧಕರನ್ನು ಓದಿ ಅವರ ಬಗ್ಗೆ ಬರೆಯುವುದು ತುಂಬಾ ಇಷ್ಟದ ಕೆಲಸ. ಆದರೆ ಕೆಲವು ಬರಹಗಳನ್ನು ಓದಿದಾಗ ಅದನ್ನು ಹೀಗೆ ಓದಿದರೇ ಚೆನ್ನ ಅನಿಸಿ ನಾನೇ ಬರೆಯಲಿಕ್ಕೆ ಒಂದಿನಿತೂ ಮನಸ್ಸು ಬರುವುದಿಲ್ಲ. ಅದು ರವಿ ಬೆಳಗೆರೆ ಅವರು ಭಾನುಮತಿ ಅವರು 2005ರ ಡಿಸೆಂಬರ್ 24ರಂದು ನಿಧನರಾದ ಸಂದರ್ಭದಲ್ಲಿ ಬರೆದದ್ದು. ಅದು ಇಲ್ಲಿದೆ:
“ಅಪ್ಪಾ, ನಂಗೂ ದೇವರಿಗೂ ಜಾತಕಕ್ಕೂ ಇಷ್ಟವಾದ ಹುಡುಗ, ನಿನಗಿಷ್ಟವಾಗಲಿಲ್ಲ. I am sorry. ನಿನ್ನ ಮಗಳು ನಾನು. ನಿನಗಿರೋ ಛಲ, ಹಟ, ಆತ್ಮವಿಶ್ವಾಸ ನನಗೂ ಇವೆ. ಹೀಗಾಗಿ, ನಿನ್ನ ಮಾತು ಮೀರಿ ಈ ಹುಡುಗನನ್ನು ಮದುವೆಯಾಗಿದ್ದೇನೆ, ನಮ್ಮಿಬ್ಬರನ್ನೂ ಆಶೀರ್ವದಿಸು” ಅಂತ ಮೆಟ್ಟಿಲ ಮೇಲೆ ನಿಂತು ಹೇಳಿದ ಹುಡುಗಿಗೆ, ಆಗಷ್ಟೆ ಹದಿನಾರು ವರ್ಷ. ಆಕೆಯ ಹೆಸರು ಬೊಮ್ಮರಾಜು ಭಾನುಮತಿ. ಮದುವೆಯಾದ ಮೇಲೆ ಪಾಲವಾಯಿ ಭಾನುಮತಿ ರಾಮಕೃಷ್ಣ ಆದಳು. ಪೂರ್ತಿ ಎಂಭತ್ತು ವರ್ಷ ಬದುಕಿದಳು. ಅದ್ಭುತವಾಗಿ ನಟಿಸಿದಳು, ಹಾಡಿದಳು, ನಿರ್ದೇಶಿಸಿದಳು, ನಿರ್ಮಾಪಕಳಾದಳು, ಸಂಭಾಷಣೆಕಾರಳಾದಳು, ಲೇಖಕಿಯಾದಳು, ಆತ್ಮಚರಿತ್ರೆ ಬರೆದಳು. ಮೊನ್ನೆ (2005 ಡಿಸೆಂಬರ್ 24ರಂದು ) ಇದೆಲ್ಲ ಸಾಕೆನ್ನಿಸಿತೇನೋ? ತೆಲುಗು ಚಿತ್ರರಂಗ ‘ಮರೆಯಲಾಗದ ಮಲ್ಲೇಶ್ವರಿ’ ಕೈಲಿದ್ದ ವೀಣೆ ಎತ್ತಿಟ್ಟು ನಡೆದು ಹೋದಳು.
ನಾನು ಬಾಲ್ಯದಲ್ಲಿ ಅಮ್ಮನೊಂದಿಗೆ ನೋಡಿದ ಅನೇಕ ಸಿನೆಮಾಗಳಲ್ಲಿ ಭಾನುಮತಿ ಇರುತ್ತಿದ್ದಳು. ನನ್ನ ಸೋದರ ಸಂಬಂಧಿಯೊಬ್ಬಾತ ಭಾನುಮತಿಯನ್ನು ಹತ್ತಿರದಿಂದ ನೋಡಿ ನೋಡಿ ಭಯಂಕರವಾಗಿ ಆಕೆಯನ್ನು ಪ್ರೀತಿಸಿ, ಮತಿ ವಿಕಲ್ಪಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದ. ಭಾನುಮತಿ ಹಾಡಿದ ‘ಶರಣಂ… ನೀ ದಿವ್ಯ ಶರಣಂ!’ ಹಾಡು ಇವತ್ತಿಗೂ ನನಗೆ ಇಷ್ಟ. ಅದಕ್ಕಿಂತ ಇಷ್ಟವಾಗುತ್ತಿದ್ದುದು ಆಕೆಯ ಸಹಜ ಸಾತ್ವಿಕ ಅಹಂಕಾರ.
‘ನೀವು ಎನ್‌.ಟಿ.ರಾಮಾರಾವ್‌ ಮತ್ತು ಅಕ್ಕಿನೇನಿ ನಾಗೇಶ್ವರರಾವ್‌ರಂಥವರೊಂದಿಗೆ ನಟಿಸಿದ್ಧೀರಿ. ನಿಮಗೇನನ್ನಿಸುತ್ತದೆ?’ ಅಂತ ಕೇಳಿದುದಕ್ಕೆ, “ಅವರನ್ನ ಕೇಳಬೇಕು ನೀವು. ಅವರ ಜೊತೆಗೆ ನಾನು ನಟಿಸಲಿಲ್ಲ. ನನ್ನೊಂದಿಗೆ ಅವರು ನಟಿಸಿದರು. ಅದಕ್ಕೋಸ್ಕರ ಕಾಯುತ್ತಿದ್ದರು!’ ಅಂತ ಉತ್ತರಿಸಿದ್ದಳು ಭಾನುಮತಿ. ‘ನನಗೆ ಅಹಂಕಾರ ಅಂತ ಅಂದುಕೊಳ್ಳುತ್ತಾರೆ. ಪರವಾಗಿಲ್ಲ. ಅದು ಆತ್ಮಾಭಿಮಾನ ಅಂತ ನನಗೆ ಗೊತ್ತು. ವಿಕಾರವಾದ ಅನವಶ್ಯಕ ವಿನಯ ನನಗೆ ರೂಢಿಯಾಗಲಿಲ್ಲ. ನನ್ನ ಮೇಲೆ ನನಗಿದ್ದ ನಂಬಿಕೆ, ಗೌರವಗಳನ್ನು ಅಹಂಕಾರ ಅಂದುಕೊಳ್ಳುವವರಿಗೆ ನಾನು ಉತ್ತರಕೊಡಬೇಕಾಗಿಲ್ಲ. ಯಾವತ್ತಿಗೂ ನಾನು ಚಿತ್ರನಟಿಯಾಗಬೇಕು ಅಂತ ಕನಸು ಕಂಡವಳಲ್ಲ. ಅದಕ್ಕೋಸ್ಕರ ದೇವರಿಗೆ ಕೈ ಮುಗಿದವಳೂ ಅಲ್ಲ. ಹೀಗಾಗಿ ಯಶಸ್ವೀ ನಟಿ ಅನ್ನಿಸಿಕೊಂಡಾಗ ತುಂಬ ಸಂತೋಷವನ್ನು ಅನುಭವಿಸಲಿಲ್ಲ. ಒಂದೇ ಒಂದು ಸಲ, ನನ್ನ ಆರಾಧ್ಯ ದೈವನಾಗಿದ್ದ ಎಂ.ಎಸ್‌. ಸುಬ್ಬಲಕ್ಷ್ಮಿ ಅವರನ್ನು ಭೇಟಿಮಾಡಿದೆ. ಅವರೊಂದಿಗೆ ತ್ಯಾಗರಾಜ ಕೀರ್ತನೆಯಾದ ಎಂದರೋ ಮಹಾನುಭಾವುಲು…ಹಾಡಿದೆ. ಅವತ್ತು ಮಾತ್ರ ನನ್ನ ಜನ್ಮ ಸಾರ್ಥಕ ಅನಿಸಿತ್ತು” ಅಂದಿದ್ದಳು ಭಾನುಮತಿ. ಆಕೆಯದು ಹುಸಿ ಅಹಂಕಾರವಾಗಿರಲಿಲ್ಲ. ಮೊನ್ನೆ ತನ್ನ ಎಂಬತ್ತನೆಯ ವಯಸ್ಸಿನಲ್ಲಿ ಭಾನುಮತಿ ತೀರಿಕೊಂಡಾಗ ತೆಲುಗಿನ ಹಿರಿಯ ನಟ ಅಕ್ಕಿನೇನಿ ನಾಗೇಶ್ವರರಾವು ಆಡಿದ ಮಾತುಗಳೇ ಅದಕ್ಕೆ ಸಾಕ್ಷಿ. “ನನ್ನ ಸಿನೆಮಾ ಬದುಕಿನ ಮೈಲಿಗಲ್ಲು ಅಂದರೆ ‘ಬಾಟಸಾರಿ’ ಚಿತ್ರ. ಅದರಲ್ಲಿ ಭಾನುಮತಿಯೊಂದಿಗೆ ನಟಿಸಿದೆ. ಉಳಿದಂತೆ ‘ಲೈಲಾ ಮಜ್ನು’, ‘ಬಲಿಪೀಠಂ’, ‘ವಿಪ್ರನಾರಾಯಣ’, ‘ಚಕ್ರಪಾಣಿ’ ಮುಂತಾದ ಸಿನೆಮಾಗಳು ಆಕೆಯ ಸ್ವಂತ ಬ್ಯಾನರ್‌ನ ಅಡಿಯಲ್ಲಿ ಸೃಷ್ಟಿಯಾದವು. ಆಕೆಯೊಂದಿಗೆ ನಟಿಸುವ ಭಾಗ್ಯ ಸಿಕ್ಕರೆ ಅದೇ ದೊಡ್ಡದು ಅಂದುಕೊಳ್ಳುತ್ತಿದ್ದೆ. ಆಕೆ ನನಗೆ ನಟನೆ ಕಲಿಸಿದರು. ಆಕೆಯ ಸಂಸ್ಥೆಯಿಂದಾಗಿಯೇ ನಾನು ಪ್ರವರ್ಧಮಾಕ್ಕೆ ಬಂದೆ. ತುಂಬ ವಿಷಯಗಳು ಆಕೆಗೆ ಗೊತ್ತಿದ್ದವು. ಆದರೂ ಆಕೆ ನಿಗರ್ವಿ!” ಅಂದಿದ್ದಾನೆ ನಾಗೇಶ್ವರರಾವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಹಮ್ಮದ್ ರಫಿ ಈ ಸಿನಿಮಾ ಸಂಗೀತದ ಪ್ರಮುಖ ಮಕುಟ ಪ್ರಾಯರಲ್ಲಿಒಬ್ಬರು.

Sat Dec 24 , 2022
    ಭಾರತೀಯರಾದ ನಮ್ಮ ಬದುಕಿನ ಅವಿಭಾಜ್ಯ ಅಂಗ ‘ಸಿನಿಮಾ ಸಂಗೀತ’. ಅಂದಿನ ರೇಡಿಯೋ ನಮಗೆ ನಮ್ಮ ದೇಶದ ಪ್ರಮುಖ ಭಾಷೆಗಳು ಗೊತ್ತಿದ್ದವೋ ಇಲ್ಲವೋ, ಅವುಗಳ ನಾದ ಮಾಧುರ್ಯದಲ್ಲಿ ನಾವು ಜೀವಿಸುವುದನ್ನು ಸಹಜವಾಗಿ ಕಲಿಸಿಬಿಟ್ಟಿದ್ದವು. ಅಂದು ಆ ನಾದಲೀಲೆಯಲ್ಲಿ ಮೀಯದೆ, ಬೆಳಗು ರಾತ್ರಿಗಳು ಈ ನಾಡಿನಲ್ಲಿ ಹರಿಯುತಿರಲಿಲ್ಲ. ಒಮ್ಮೊಮ್ಮೆ ಅನಿಸುತ್ತದೆ. ನಮ್ಮ ದೇಶವನ್ನು ಒಂದು ರೀತಿಯಲ್ಲಿ ಅದ್ಭುತವಾಗಿ ಹಿಡಿದಿಟ್ಟಿರುವ ಅನನ್ಯ ಶಕ್ತಿಯಲ್ಲಿ ಸಂಗೀತದ ಪಾತ್ರ ಪ್ರಮುಖವಾದದ್ದು ಎಂದು. ಈ ಸಿನಿಮಾ […]

Advertisement

Wordpress Social Share Plugin powered by Ultimatelysocial