ಪಂಡಿತ್ ಮಾಧವಗುಡಿ ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತ ಹೆಸರಿದೆ.

‘ಗಾನ ಭಾಸ್ಕರ’ ಬಿರುದಾಂಕಿತರಾದ ‘ಮಾಧವಗುಡಿ’ ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತ ಹೆಸರು. ಹಿಂದೂಸ್ಥಾನಿ ಸಂಗೀತದ ಗುರುಶಿಷ್ಯ ಪರಂಪರೆಯಲ್ಲಿ ಪಂ. ಭೀಮಸೇನ ಜೋಶಿ ಅವರ ಬಳಿ ಬಹಳಷ್ಟು ವರ್ಷಕಾಲ ಅಭ್ಯಾಸ ನಡೆಸಿದ ಪಂ. ಮಾಧವ ಗುಡಿ ಅವರದು ಕಿರಣಾ ಘರಾಣೆಯಲ್ಲಿ ದೊಡ್ಡ ಹೆಸರು.
ಮಾಧವಗುಡಿಯವರು 1941ರ ವರ್ಷದಲ್ಲಿ ಜನಿಸಿದರು (ಕೆಲವು ಮೂಲಗಳ ಪ್ರಕಾರ ಅವರು ಜನಿಸಿದ ದಿನ 23.12.1942). ಪಂ. ಗುಡಿ ಅವರ ಮನೆಯಲ್ಲಿ ಸಂಗೀತದ ವಾತಾವರಣ. ತಂದೆ ಗುರುರಾಜಾಚಾರ್ಯ ಕೀರ್ತನಕಾರರು. ಸಂಸ್ಕೃತ, ಶ್ಲೋಕ, ಕೀರ್ತನೆ ಮನೆಯಲ್ಲಿ ದಿನನಿತ್ಯ ಕೇಳಿ ಕೇಳಿ ಪುಟ್ಟ ಮಗುವಿದ್ದಾಗಲೇ ಅವರಿಗೆ ಸಂಗೀತದತ್ತ ಒಲವು ಮೂಡಿತು. ಮೊದಲ ಗುರು ನಾಗೇಶರಾವ ದೇಶಪಾಂಡೆ ಅವರಲ್ಲಿ ಆರಂಭಿಕ ಶಿಕ್ಷಣ ಕಲಿತರು.
ಮಗನ ಸಂಗೀತ ಆಸಕ್ತಿಯನ್ನು ಗುರುತಿಸಿದ ತಂದೆ ಗುರುರಾಜಾಚಾರ್ಯರು ಇದನ್ನು ಪಂ. ಜೋಶಿ ಅವರ ಗಮನಕ್ಕೆ ತಂದರು. ಪುಟ್ಟ ಬಾಲಕ ಮಾಧವ ಗುಡಿ ಜೋಶಿ ಅವರ ಮುಂದೆ ಹಾಡಿದಾಗ ಆ ಮಹಾನ್ ಗಾಯಕನಿಗೆ ಅಚ್ಚರಿ ಜತೆಗೆ ಸಂತೋಷ ಉಂಟಾಯಿತು. ಅಂದಿನಿಂದಲೇ ಶಿಷ್ಯನನ್ನಾಗಿ ಮಾಡಿಕೊಂಡು ನಿರಂತರ ಸಂಗೀತಾಭ್ಯಾಸಕ್ಕೆ ಅನುಮತಿ ನೀಡಿದರು.
ಮಾಧವಗುಡಿ ಮೆಟ್ರಿಕ್ ಪರೀಕ್ಷೆ ನಂತರ ಪುಣೆಯಲ್ಲಿ ಭೀಮಸೇನ ಜೋಶಿ ಅವರ ಮನೆಯಲ್ಲೇ ವಾಸ್ತವ್ಯ ಹೂಡಿ ಗುರುಶಿಷ್ಯ ಪರಂಪರೆಯಲ್ಲಿ ಸಂಗೀತ ಮುಂದುವರೆಸಿದರು. ಗುರು ಸೇವೆ, ಸಂಗೀತ ಸೇವೆ ನಿರಂತರವಾಗಿ ನಡೆಯಿತು. ಮೊದ ಮೊದಲು ಪಂ. ಜೋಶಿ ಅವರ ಸಂಗೀತ ಕಚೇರಿಗಳಿಗೆ ತಂಬೂರಿ ಸಾಥಿ ನೀಡುತ್ತಿದ್ದ ಪಂ. ಗುಡಿ ನಂತರ ಅವರ ಜತೆಜತೆಯಲ್ಲಿಯೇ ಸಹಗಾಯನವನ್ನೂ ನಡೆಸಿದರು.
ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಗುರುಶಿಷ್ಯ ಪರಂಪರೆಗೆ ವಿಶೇಷ ಮಹತ್ವ. ಒಬ್ಬ ಗುರುವಿಗೂ ಶಿಷ್ಯನಿಗೂ ಭಾವನಾತ್ಮಕ ಮತ್ತು ವೃತ್ತಿಪರ ಸಂಗೀತ ಸಂಬಂಧ ಬೆಸೆಯುವುದು, ಗಟ್ಟಿಯಾಗುವುದು, ನೆಲೆಗೊಳ್ಳುವುದು ಈ ಪರಂಪರೆಯಲ್ಲಿ ಮಾತ್ರ. ಹಿಂದೂಸ್ತಾನಿ ಸಂಗೀತದಲ್ಲಿ ದಂತಕಥೆಯಾಗಿದ್ದ ಪಂ. ಭೀಮಸೇನ ಜೋಶಿ ಅವರ ಆಪ್ತ ಶಿಷ್ಯ ಪಂ. ಮಾಧವ ಗುಡಿ ಅವರದು ಅಪ್ಪಟ ‘ಗುರು-ಶಿಷ್ಯ’ ಪರಂಪರೆ. ಸುಮಾರು 28 ವರ್ಷಗಳ ಕಾಲ ಈ ಪರಂಪರೆಯಲ್ಲಿ ಅಭ್ಯಾಸ ಮಾಡಿ ಅವರ ಪರಮ ಶಿಷ್ಯರೆಂದೇ ಪ್ರಖ್ಯಾತರಾಗಿ, ತಾವೂ ಅಪ್ರತಿಮ ಸಂಗೀತಗಾರ ಎಂದು ಪಂ. ಮಾಧವ ಗುಡಿ ಹೆಸರುಗಳಿಸಿದವರು.
ಪಂ. ಗುಡಿ ಅವರು ಕಿರಾಣ ಘರಾಣೆ ‘ಗಾಯಕಿ’ ಜತೆಗೆ ದಾಸವಾಣಿ, ಸಂತವಾಣಿ, ಅಭಂಗಗಳನ್ನೂ ಸೊಗಸಾಗಿ ಹಾಡುತ್ತಿದ್ದರು. ಸಂಗೀತ – ಸಾಹಿತ್ಯಗಳ ತವರೂರು ಎಂದೇ ಖ್ಯಾತವಾದ ಧಾರವಾಡದಲ್ಲಿ ನೆಲೆಸಿದ್ದ ಪಂ. ಗುಡಿ ಅವರು ಜೀವನದುದ್ದಕ್ಕೂ ಸ್ವರಸರಸ್ವತಿಯ ಆರಾಧನೆ ನಡೆಸಿದರು. ಪಂ. ಭೀಮಸೇನ ಜೋಶಿ ಅವರೊಂದಿಗೆ ಸುದೀರ್ಘ ಅವಧಿಯಲ್ಲಿ ಸಹಗಾಯನವನ್ನೂ ನಡೆಸಿದ ಈ ವಿಶಿಷ್ಟ ಗಾಯಕರು ತಮ್ಮ ಗುರು ಧ್ವನಿಯ ‘ಪ್ರತಿಧ್ವನಿ’ ಎಂದೂ ಗುರುತಿಸಿಕೊಂಡು ಸಂಗೀತ ಲೋಕದಲ್ಲಿ ಮನೆಮಾತಾದರು.
ಪಂ. ಜೋಶಿ ಅವರ ಧ್ವನಿಯ ಮಾರ್ದವತೆ ಕಂಪು ಕೇಳಲು ಬಂದವರಿಗೆ ಸಹಗಾಯಕನೊಬ್ಬ ಅಷ್ಟೇ ಲೀಲಾಜಾಲವಾಗಿ ನಾದ ಸುಧೆ ಹರಿಸುವುದನ್ನು ಕೇಳುವ ಸುಯೋಗವೂ ಒದಗುತ್ತಿತ್ತು. ವಿದೇಶಗಳಲ್ಲೂ ನಡೆಸಿದ ಸಹಗಾಯನದಿಂದ ಮಾಧವ ಗುಡಿ ಅವರನ್ನು ಪಂ. ಜೋಶಿ ಅವರಂತೆಯೇ ಸಂಗೀತಪ್ರಿಯರು ಪ್ರೀತಿಸಲಾರಂಭಿಸಿದರು. ಇದು ಗುಡಿ ಅವರಿಗೆ ಸಂಗೀತದಲ್ಲಿ ಇನ್ನೂ ಎತ್ತರಕ್ಕೇರಲು ಸಹಕಾರಿಯಾಯಿತು. ‘ಗುರುವಿಗೆ ತಕ್ಕ ಶಿಷ್ಯ’ ಎಂಬ ಮಾತನ್ನು ಅಕ್ಷರಶಃ ಪಾಲಿಸಿದ ಮಾಧವ ಗುಡಿ ಅವರು ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಹೊಸ ಭಾಷ್ಯ ಬರೆದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಪ್ರಸಿದ್ದ ಮನೋಹರ ಗ್ರಂಥಮಾಲಾದ ಸಂಪಾದಕ

Fri Dec 23 , 2022
  ರಮಾಕಾಂತ್ ಜೋಶಿ ಪ್ರಸಿದ್ದ ಮನೋಹರ ಗ್ರಂಥಮಾಲಾದ ಸಂಪಾದಕ, ಪ್ರಕಾಶಕ ಮತ್ತು ಉಪಾಧ್ಯಕ್ಷರಾಗಿ, ಪ್ರಾಧ್ಯಾಪಕರಾಗಿ, ರಂಗಕರ್ಮಿಯಾಗಿ ಮತ್ತು ಬರಹಗಾರರಾಗಿ ಹೆಸರಾದವರು. ತಂದೆ ಜಿ.ಬಿ. ಜೋಶಿಯವರು ಆರಂಭಿಸಿದ ಮನೋಹರ ಗ್ರಂಥಮಾಲೆ ಪ್ರಕಾಶನವನ್ನು ನಡೆಸಿಕೊಂಡು ಬಂದಿದ್ದಾರೆ. ರಮಾಕಾಂತ್ ಜೋಶಿ 1936ರ ಡಿಸೆಂಬರ್ 23ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಮಹಾನ್ ಸಾಹಿತಿ ಮತ್ತು ರಂಗಕರ್ಮಿ ಜಿ.ಬಿ. ಜೋಶಿ (ಜಡಭರತ) ಅವರು. ತಾಯಿ ಪದ್ಮಾವತಿ. ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ರಮಾಕಾಂತರು, […]

Advertisement

Wordpress Social Share Plugin powered by Ultimatelysocial