ಪಟ್ಟಾಭಿರಾಮರೆಡ್ಡಿ

ಪಟ್ಟಾಭಿರಾಮರೆಡ್ಡಿ ಅವರು ‘ಸಂಸ್ಕಾರ’ ಚಿತ್ರದಿಂದ ಚಲನಚಿತ್ರರಂಗದಲ್ಲಿ ಅಜರಾಮರರಾಗಿದ್ದಾರೆ. ಡಾ. ಯು. ಆರ್. ಅನಂತಮೂರ್ತಿ ಅವರ ಕ್ರಾಂತಿಹುಟ್ಟಿಸಿದ ಕನ್ನಡದ ‘ಸಂಸ್ಕಾರ’ ಕತೆಗೆ ತಮ್ಮ ಪ್ರೀತಿಯ ಮಡದಿಯ ಒತ್ತಾಸೆಯ ಮೇರೆಗೆ ಚಿತ್ರ ನಿರ್ದೇಶನ, ನಿರ್ಮಾಣಗಳಿಗೆ ಇಳಿದ ಪಟ್ಟಾಭಿರಾಮರೆಡ್ಡಿ ಆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯಾದ ಸ್ವರ್ಣಕಮಲವನ್ನು ಪಡೆಯುವಲ್ಲಿ ಸತ್ಯಜಿತ್ ರೇ ಅವರ ಚಿತ್ರವನ್ನು ಕೂಡ ಹಿಂದೆ ಹಾಕಿ ಹೊಸ ಚಿತ್ರಗಳ ಅಲೆಗೆ ನಾಂದಿ ಹಾಡಿಬಿಟ್ಟರು. ಆನಂತರದಲ್ಲಿ ಕನ್ನಡ ಚಿತ್ರರಂಗ ಹಲವಾರು ಮಹತ್ವದ ಚಿತ್ರಗಳನ್ನು ನಿರಂತರವಾಗಿ ನೀಡುತ್ತ ಬಂದಿದ್ದು ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಬಿ.ವಿ. ಕಾರಂತ್ ಅಂತಹ ಉತ್ಕೃಷ್ಟ ನಿರ್ದೇಶಕರನ್ನು ಭಾರತೀಯ ಕಲಾತ್ಮಕ ಚಿತ್ರಗಳಿಗೆ ಕೊಡುಗೆಯಾಗಿ ನೀಡಿದೆ.
1971ರಲ್ಲಿ ಸಂಸ್ಕಾರ ಒಂದು ರೀತಿಯಲ್ಲಿ ವಿಶಿಷ್ಟ ಶಕ್ತಿಗಳ ಸಂಗಮವಾಗಿತ್ತು. ಪಟ್ಟಾಭಿ ಅವರು ಕನ್ನಡದ ಪರಿಚಯ ಹೊಂದಿಲ್ಲದೆ ಕೊಲಂಬಿಯಾದಲ್ಲಿ ತರಬೇತಿ ಪಡೆದು ಬಂದವರು. ಗಿರೀಶ್ ಕಾರ್ನಾಡ್ ಅವರು ಆಕ್ಸ್ ಫರ್ಡ್ನಲ್ಲಿ ಓದಿ ಆಗತಾನೆ ತಾಯ್ನಾಡಿಗೆ ಹಿಂದಿರುಗಿ ಬಂದಿದ್ದರು. ಗಿರೀಶ್ ಕಾರ್ನಾಡರು ತಮ್ಮ ಆತ್ಮ ಚರಿತ್ರೆಯಾದ ‘ಆಡಾಡತ ಆಯುಷ್ಯ’ ಕೃತಿಯಲ್ಲಿ ‘ಸಂಸ್ಕಾರ’ದ ಕಥೆಯಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದು ಹೇಳುತ್ತಾ, ಇಂತಹ ಸೊಗಸಾದ ಕೃತಿಬರೆದ ಯು.ಆರ್. ಅನಂತಮೂರ್ತಿ ಅವರ ಬಗ್ಗೆ ಹೊಟ್ಟೆ ಕಿಚ್ಚು ಪಡುವಷ್ಟು ಅಂದಿನ ದಿನದಲ್ಲಿ ಆತನ ಬಗ್ಗೆ ಅಸೂಯೆ ಮೂಡಿತ್ತು ಎಂದು ‘ಸಂಸ್ಕಾರ’ ಕೃತಿಯನ್ನು ಆತ್ಮೀಯವಾಗಿ ಶ್ಲಾಘಿಸಿದ್ದಾರೆ. ಈ ಚಿತ್ರದ ಛಾಯಾಗ್ರಾಹಕನಾದರೋ ಟಾಮ್ ಕೋವನ್ ಎಂಬ ಆಸ್ಟ್ರೇಲಿಯಾದ ಪ್ರಸಿದ್ಧ ತಂತ್ರಜ್ಞ. ಇಲ್ಲಿನ ಕಲಾ ಪ್ರೀತಿಯಿಂದ ಕೆಲಸ ಮಾಡಲು ನಿಂತ. ಈ ಚಿತ್ರದ ಸಂಕಲನಕ್ಕೆ ಜೊತೆ ನಿಂತವ ಸ್ಟೀವನ್ ಕಾರ್ಟಾವ್ ಎಂಬವ ಆಂಗ್ಲ ವ್ಯಕ್ತಿ. ಸಂಗೀತ ನೀಡಿದವರು ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಪ್ರಸಿದ್ಧ ಸರೋದ್ ವಾದಕರಾದ ರಾಜೀವ್ ತಾರಾನಾಥ್. ವಾಸುದೇವ್ ಅವರು ಕಲಾನಿರ್ದೆಶನದ ಹೊಣೆ ಹೊತ್ತುಕೊಂಡರು. ಪಟ್ಟಾಭಿ ಅವರ ಪತ್ನಿ ಸ್ನೇಹಲತಾ ರೆಡ್ಡಿ ಮತ್ತು ಗಿರೀಶ್ ಕಾರ್ನಾಡ್ ಪ್ರಮುಖ ಪಾತ್ರ ನಿರ್ವಹಿಸಿದ ಈ ಚಿತ್ರಕ್ಕೆ ಗಿರೀಶ್ ಕಾರ್ನಾಡ್ ಚಿತ್ರಕಥೆ ರಚಿಸಿದ್ದರು.
ಈ ಚಿತ್ರ ಒಂದು ಜನಾಂಗದ ತೀವ್ರ ಪ್ರತಿರೋಧ, ಸೆನ್ಸಾರ್ ಮಂಡಳಿಯ ಕಿರುಕುಳ, ಭಾರತ ಸರ್ಕಾರದ ನಿಷೇಧ ಇತ್ಯಾದಿ ಪರೀಕ್ಷೆಗಳನ್ನು ದಾಟಿ ವಿಮರ್ಶಕರ ಹಾಗೂ ಪ್ರೇಕ್ಷಕವರ್ಗದ ಮೆಚ್ಚುಗೆ ಪಡೆದು ಅಪಾರ ಯಶಸ್ಸು ಕೂಡಾ ಗಳಿಸಿತು.
ಒಂದು ರೀತಿಯಲ್ಲಿ ಸಿನಿಮಾ ಮಾಡುವ ಧೈರ್ಯ, ಅದಕ್ಕೆ ಬೇಕಾದ ಹಣ ಹೊಂದಾಣಿಕೆ ಹಾಗೂ ಸಾಕಷ್ಟು ಶ್ರದ್ಧೆಗಳನ್ನು ವಹಿಸಿ ಈ ಚಿತ್ರದ ಕ್ಯಾಪ್ಟನ್ ಆಗಿದ್ದ ಪಟ್ಟಾಭಿರಾಮರೆಡ್ಡಿ ಅವರು ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ 1919ರ ಫೆಬ್ರವರಿ 2ರಂದು ಜನಿಸಿದರು. ಅವರಿಗೆ ಕಾವ್ಯ ಮತ್ತು ಗಣಿತಗಳ ಎರಡು ವಿಭಿನ್ನ ವಿಚಾರಗಳಲ್ಲಿ ಅಪಾರ ಆಸಕ್ತಿ ಇತ್ತು. ರೆಡ್ಡಿ ಅವರು ರವೀಂದ್ರನಾಥ ಠಾಕೂರರಿಂದ ಪ್ರಭಾವಿತರಾಗಿ ತಮ್ಮ ಎರಡು ವರ್ಷಗಳನ್ನು ಶಾಂತಿನಿಕೇತನದಲ್ಲಿ ಕಳೆದರು. ನಂತರದಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಂದಿನ ದಿನದಲ್ಲಿ ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಜನಾಂಗಗಳ ಶೋಷಣೆ ಹಾಗೂ ಮಹಾಯುದ್ಧದ ಪರಿಣಾಮಗಳಿಂದ ಉಂಟಾದ ವ್ಯಾಕುಲತೆಗಳಿಂದ ಅವರಿಗೆ ತಮ್ಮ ಕಾವ್ಯದ ಚಿಂತನೆ ಬದುಕಿನ ನೈಜತೆಗಳಿಂದ ತುಂಬಾ ದೂರವಿರುವುದನ್ನು ಕಂಡು ಬೇಸರಪಟ್ಟುಕೊಳ್ಳಲಾರಂಭಿಸಿದರು. ಹಾಗಾಗಿ ಓದಿನಲ್ಲಿ ಆಸಕ್ತಿ ಕಳೆದುಕೊಂಡು ಪುನಃ ನೆಲ್ಲೂರು ಸೇರಿ ಆಸಕ್ತಿ ಇಲ್ಲದಿದ್ದರೂ ತಮ್ಮ ಕುಟುಂಬದ ವ್ಯವಹಾರಕ್ಕೆ ತೊಡಗಿಕೊಳ್ಳಲು ಪ್ರಾರಂಭಿಸಿ ಮದ್ರಾಸು ಮತ್ತು ನೆಲ್ಲೂರುಗಳಿಗೆ ಆಗಾಗ ಸಂಚರಿಸತೊಡಗಿದರು.
ಇಂತಹ ಪಯಣಗಳಲ್ಲಿ ಅವರ ಮೇಲೆ ಕ್ರಾಂತಿಕಾರಿ ಕವಿ ಮಲ್ಲವರಾಪು ವಿಶ್ವೇಶ್ವರರಾವ್ ಅವರ ಪ್ರಭಾವ ಉಂಟಾಯಿತು. ಆ ಸಮಯದಲ್ಲಿ ‘ರಾಗಾಲ ಡಜನ್’ ಎಂಬ ಸಂಕಲನವನ್ನು ಹೊರತಂದರು. ಆ ನಂತರದಲ್ಲಿ ಅವರು ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗಕ್ಕೆ ತೆರಳಿದರು. ಮದ್ರಾಸಿನ ಅಮೆಚೂರ್ ನಾಟಕ ತಂಡಗಳೊಂದಿಗೆ ಸಂಪರ್ಕ ಹೊಂದಿದ್ದ ಅವರು ಅಲ್ಲಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದರು. ಅಲ್ಲಿನ ಗೆಳೆಯರ ಜೊತೆ ಕೂಡಿಕೊಂಡು ‘ಪೆಳ್ಳಿನಾಟಿ ಪ್ರಮಾಣಾಲು’ ಚಿತ್ರವನ್ನು ನಿರ್ಮಿಸಿ ರಾಷ್ಟ್ರಪ್ರಶಸ್ತಿ ಗಳಿಸಿದರು.
ಪಟ್ಟಾಭಿ ಅವರ ಪತ್ನಿ ಹಾಗೂ ಸಂಸ್ಕಾರ ಚಿತ್ರದ ನಾಯಕಿ ಸ್ನೇಹಲತಾ ರೆಡ್ಡಿ ಅವರು, ಅವರಿಗಿದ್ದ ವಿರೋಧಪಕ್ಷಗಳ ಗೆಳೆತನದಿಂದ ತುರ್ತುಪರಿಸ್ಥಿತಿ ಸಮಯದಲ್ಲಿ ಬಂಧನಕ್ಕೆ ಒಳಪಟ್ಟು ಅಲ್ಲಿ ಪಟ್ಟ ಹಿಂಸೆ ಮತ್ತು ದೊರಕದ ಸೂಕ್ತ ವೈಧ್ಯಕೀಯ ಶುಶ್ರೂಷೆಗಳ ಕಾರಣದಿಂದಾಗಿ ಸಾಯುವ ಸಮಯದಲ್ಲಿ ಜೈಲಿನಿಂದ ಬಿಡುಗಡೆಯಾದಂತೆ ಹೊರಬಂದು ನಾಲ್ಕೈದು ದಿನಗಳಲ್ಲೇ ನಿಧನರಾದರು.
‘ಸಂಸ್ಕಾರ’ ಚಿತ್ರ, ಕನ್ನಡ ಚಿತ್ರರಂಗವನ್ನು ನಿಚ್ಚಳವಾಗಿ ಭಾರತೀಯ ಚಿತ್ರರಂಗದಲ್ಲಿ ಪ್ರತಿಷ್ಠೆಗೆ ತಂದ ಪ್ರಮುಖ ಚಿತ್ರ. ಹಲವಾರು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕೂಡ ಈ ಚಿತ್ರ ಅಪಾರ ಮನ್ನಣೆ ಗಳಿಸಿತು.
ಪಟ್ಟಾಭಿರಾಮರೆಡ್ಡಿ ಅವರು ‘ಸಂಸ್ಕಾರ’ದ ನಂತರದಲ್ಲಿ ಕೂಡ ತುರ್ತುಪರಿಸ್ಥಿತಿಯ ಕರಾಳತೆ ಕುರಿತಾದ ‘ಚಂಡಮಾರುತ’ ಹಾಗೂ ‘ಶೃಂಗಾರ ಮಾಸ’, ಮತ್ತು ‘ದೇವರ ಕಾಡು’ ಎಂಬ ಕಲಾತ್ಮಕ ಚಿತ್ರಗಳನ್ನು ನಿರ್ಮಿಸಿದ್ದರು.
ಕರ್ನಾಟಕ ಸರ್ಕಾರ 2005ನೆ ವರ್ಷದ ಸಾಲಿನಲ್ಲಿ ಪಟ್ಟಾಭಿರಾಮ ರೆಡ್ಡಿ ಅವರಿಗೆ ಪುಟ್ಟಣ್ಣ ಕಣಗಾಲರ ಹೆಸರಲ್ಲಿ ಶ್ರೇಷ್ಠ ನಿರ್ದೇಶಕರಿಗೆ ನೀಡುವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಈ ಸಾಹಸಿ ವ್ಯಕ್ತಿ 2006ರ ವರ್ಷದ ಮೇ ತಿಂಗಳಿನಲ್ಲಿ ಈ ಲೋಕವನ್ನಗಲಿದರು.
‘ಸಂಸ್ಕಾರ’ ಚಿತ್ರ ಕನ್ನಡ ಚಿತ್ರರಂಗಕ್ಕೆ ತಂದ ಹೊಸ ಅಲೆಯ ಪ್ರಭಾವ ಹಾಗೂ ಆ ಚಿತ್ರಕ್ಕೆ ದೊರೆತ ಜನಮನ್ನಣೆಗಳಿಂದಾಗಿ ಪಟ್ಟಾಭಿರಾಮ ರೆಡ್ಡಿ ಅವರ ಹೆಸರು ಕನ್ನಡ ಚಿತ್ರರಂಗದಲ್ಲಿ ಅಜರಾಮರವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೂಗುಚ್ಛ

Tue Mar 8 , 2022
ಹೂಗುಚ್ಛ ಅವನೊಬ್ಬ ಬಡ ಹುಡುಗ. ಆ ವರ್ಷದ ಕ್ರಿಸ್ಮಸ್ ದಿನದಂದು ತನ್ನ ತಾಯಿಗೆ ಒಂದಾದರೂ ಹೂಗುಚ್ಛವನ್ನು ಶುಭಾಶಯಗಳೊಂದಿಗೆ ಕೊಡಬೇಕು ಎಂದು ಅವನ ಆಸೆ. ಆದರೆ, ಅವನಲ್ಲಿ ಇದ್ದದ್ದೋ ಅತಿ ಕಡಿಮೆ ಮೌಲ್ಯದ ನಾಣ್ಯ. ಒಂದೊಂದು ಅಂಗಡಿಯನ್ನೂ ಹತ್ತಿ ಇಳಿದ. ಅವನಲ್ಲಿದ್ದ ನಾಣ್ಯಕ್ಕೆ ಹೂಗುಚ್ಛವೊಂದನ್ನು ಕೊಡಲು ಯಾರೂ ಒಪ್ಪಲಿಲ್ಲ. ಕೊನೆಯದಾಗಿ ಒಂದು ಅಂಗಡಿಗೆ ಹೋದ. ಆದರೆ, ಆ ಸಮಯದಲ್ಲಿ ಆ ಅಂಗಡಿಯಲ್ಲಿ ಹೂಗುಚ್ಛಗಳೇ ಇರಲಿಲ್ಲ. ಎಲ್ಲವೂ ಮಾರಾಟವಾಗಿ ಹೋಗಿದ್ದವು. ಅಂಗಡಿಯವ ಆ […]

Advertisement

Wordpress Social Share Plugin powered by Ultimatelysocial