BJPಯಿಂದ ಭಯದ ದೇಶದಲ್ಲಿ ವಾತಾವರಣ ಸೃಷ್ಟಿ.

ಶಿಮ್ಲಾ,ಜ.18- ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರ ಹಿಡಿರುವ ಹಿಮಾಚಲ ಪ್ರದೇಶಕ್ಕೆ ರಾಹುಲ್‍ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದೆ.

ನಿನ್ನೆಯವರೆಗೂ ಪಂಜಾಬ್‍ನಲ್ಲಿ ಸಂಚರಿಸಿದ್ದ ಯಾತ್ರೆ ನಾಳೆ ಕಾಶ್ಮೀರ ಪ್ರವೇಶಿಸುವ ಮಾರ್ಗಸೂಚಿ ನಿಗದಿಯಾಗಿತ್ತು.

ಹಿಮಾಚಲ ಪ್ರದೇಶ ಪಾದಯಾತ್ರೆಯ ನಕ್ಷೆಯಲ್ಲಿ ಇರಲಿಲ್ಲ. ಆದರೆ ಸ್ಥಳೀಯ ನಾಯಕರ ಒತ್ತಾಯದ ಮೇರೆಗೆ ರಾಹುಲ್‍ಗಾಂಧಿ ಮಾರ್ಗ ಬದಲಾವಣೆ ಮಾಡಿದ್ದಾರೆ.

ಇಂದು ಬೆಳಗ್ಗೆ ಹಿಮಾಚಲಪ್ರದೇಶದ ಇಂದೋರಾ ವಿಧಾನಸಭಾ ಕ್ಷೇತ್ರದಲ್ಲಿ 24 ಕಿಲೋಮೀಟರ್ ದೂರ ಪಾದಯಾತ್ರೆ ಕ್ರಮಿಸಲಿದೆ. ಮಾರ್ಗ ಮಧ್ಯೆ ರಾಹುಲ್‍ಗಾಂಧಿ ಮಾಲೋಟ್ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ-ಆರ್‍ಎಸ್‍ಎಸ್ ಸಂಯೋಜನೆಗೊಂಡು ದೇಶದಲ್ಲಿ ದ್ವೇಷ ಹರಡಲಾಗುತ್ತಿದ್ದು, ಹಿಂಸಾಚಾರದ ಮೂಲಕ ಭಯ ಹುಟ್ಟುಹಾಕಲಾಗುತ್ತಿದೆ. ಕೇಂದ್ರ ಸರ್ಕಾರದ ನೀತಿಗಳು, ನೋಟು ಅಮಾನ್ಯೀಕರಣ, ಜಿಎಸ್‍ಟಿ, ಕೃಷಿ ವಿರೋಧಿ ಕಾನೂನುಗಳು ಕೆಲವೇ ಕೆಲವು ಮಂದಿ ಶ್ರೀಮಂತರಿಗೆ ಲಾಭ ಮಾಡಿಕೊಡುತ್ತಿವೆ ಎಂದು ಆರೋಪಿಸಿದರು.

ರೈತರು, ಯುವಕರು ಮತ್ತು ಕಾರ್ಮಿಕರ ಕಲ್ಯಾಣ ಕೇಂದ್ರ ಸರ್ಕಾರದ ಕಾರ್ಯಸೂಚಿಯಲ್ಲಿಲ್ಲ. ನಿರುದ್ಯೋಗ, ಹಣದುಬ್ಬರದಂತಹ ಎರಡು ಪ್ರಮುಖ ಸಮಸ್ಯೆಗಳನ್ನು ಬಿಜೆಪಿ ಅಲ್ಲಗಳೆಯತ್ತಿದೆ. ಆದರೆ ಇವುಗಳಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನರ ಧ್ವನಿಯನ್ನು ಸಂಸತ್‍ನಲ್ಲಿ ಪ್ರತಿಧ್ವನಿಸಲು ನಮಗೆ ಅವಕಾಶ ಸಿಗಲಿಲ್ಲ.

ಮಾಧ್ಯಮಗಳನ್ನು ಬಿಜೆಪಿ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಹೀಗಾಗಿ ತಾವು ನೇರವಾಗಿ ಜನರ ಬಳಿಗೆ ಹೋಗಲು ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದಾಗಿ ಹೇಳಿದರು.

ಈ ಮೊದಲು ನಿರ್ಧರಿಸಿದ್ದ ಮಾರ್ಗಸೂಚಿಯಲ್ಲಿ ಹಿಮಾಚಲ ಪ್ರದೇಶ ನಮ್ಮ ಪ್ರವಾಸದ ಪಟ್ಟಿಯಲ್ಲಿ ಇರಲಿಲ್ಲ. ಕೊನೆ ಕ್ಷಣದಲ್ಲಿ ಸೇರ್ಪಡೆ ಮಾಡಲಾಗಿದೆ. ಈ ರಾಜ್ಯದಲ್ಲಿ ಒಂದು ದಿನ ಮಾತ್ರ ಯಾತ್ರೆ ನಡೆಯಲಿದೆ. ಜನವರಿ 30 ಮಹಾತ್ಮಗಾಂಧಿ ಅವರ ಪುಣ್ಯತಿಥಿಯಂದು ಜಮ್ಮುವಿನಲ್ಲಿ ಯಾತ್ರೆಯನ್ನು ಕೊನೆಗೊಳಿಸಬೇಕಿದೆ. ಅದಕ್ಕಾಗಿ ಹಿಮಾಚಲಪ್ರದೇಶಕ್ಕೆ ಹೆಚ್ಚಿನ ಸಮಯ ನೀಡಲಾಗುತ್ತಿಲ್ಲ ಎಂದು ರಾಹುಲ್‍ಗಾಂಧಿ ಹೇಳಿದರು.

ಯಾತ್ರೆಯ ಉದ್ದಕ್ಕೂ ತಮಗೆ ಅನೇಕ ಕಲಿಕೆಯ ಅನುಭವಗಳಾಗಿವೆ. ಜನರ ಹೃದಯದಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳಲು ಸಹಾಯ ಮಾಡಿದೆ. ಮುಂದಿನ ದಿನಗಳಲ್ಲಿ ಆ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸಲಾಗುವುದು ಎಂದು ರಾಹುಲ್ ಹೇಳಿದರು.

ಗಡಿಭಾಗದ ಇಂದೋರಾದಲ್ಲಿನ ಮಾನ್ಸರ್ ಟೋಲ್‍ಪ್ಲಾಜಾ ಬಳಿ ರಾಜ್ಯ ಕಾಂಗ್ರೆಸ್ ನಾಯಕರು ಯಾತ್ರೆಯನ್ನು ಬರ ಮಾಡಿಕೊಂಡರು. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮಾತನಾಡಿ ಹಿಮಾಚಲ ಪ್ರದೇಶವನ್ನು ಯಾತ್ರೆಯ ಮಾರ್ಗದಲ್ಲಿ ಸೇರ್ಪಡೆ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿಗೆ ಧನ್ಯವಾದ ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಸಿದ್ಧಾಂತ ಮತ್ತು ಬಿಜೆಪಿಯ ಸುಳ್ಳಿನ ಮೇಲೆ ಜಯ ಗಳಿಸಿದೆ ಎಂದರು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಮಾತನಾಡಿ, ಪಕ್ಷವು ಈಗಾಗಲೇ ಚುನಾವಣಾ ಭರವಸೆಗಳನ್ನು ಈಡೇರಿಸಲು ಪ್ರಾರಂಭಿಸಿದೆ ಮತ್ತು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದರು.

ಮುಂಜಾನೆ ಭಾರೀ ಶೀಥಲೀಕರಣ ವಾತಾವರಣವನ್ನು ಲೆಕ್ಕಿಸದೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಸಚಿವರು, ಪಕ್ಷದ ಶಾಸಕರು ರಾಹುಲ್‍ರೊಂದಿಗೆ ಹೆಜ್ಜೆ ಹಾಕಿದರು.
ಮಂಜು ಮುಸುಕಿದ ವಾತಾವರಣದಲ್ಲೂ ರಾಹುಲ್‍ಗಾಂಧಿ ಎಂದಿನಂತೆ ಟಿ-ಶರ್ಟ್ ಸಾದಾ ಉಡುಪಿನಲ್ಲಿ ಹೆಜ್ಜೆ ಹಾಕಿದರು. ಕಾರ್ಯಕರ್ತರ ಘೋಷಣೆಗಳು ಅವರ ಹೆಜ್ಜೆಗಳಿಗೆ ಹೆಚ್ಚಿನ ಶಕ್ತಿ ನೀಡಿದ್ದವು.

ಮುಂಜಾಗೃತೆಯಾಗಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು. ಆಯ್ದ ಜನರಿಗೆ ಮಾತ್ರ ಭದ್ರತಾ ರಿಂಗ್ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಆದಾಗ್ಯೂ, ಗಾಂಧಿ ಪಕ್ಷದ ನಾಯಕರಲ್ಲದೆ ಮೆರವಣಿಗೆಯ ಉದ್ದಕ್ಕೂ ಜನರೊಂದಿಗೆ, ವಿಶೇಷವಾಗಿ ಯುವಕರೊಂದಿಗೆ ಸಂವಹನ ನಡೆಸುತ್ತಾ ಸಾಗಿದರು.

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಯಾತ್ರೆ ಜನವರಿ 30 ರೊಳಗೆ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ. ಕಾಶ್ಮೀರದಲ್ಲಿ ರಾಹುಲ್‍ಗಾಂ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ.

ಇಲ್ಲಿಯವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ರಾಜ್ಯಗಳಲ್ಲಿ ಪಾದಯಾತ್ರೆನಡೆದು ಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಂಬೂಲ ತಿಂದ ಬಳಿಕ ಒಂದು ಗಂಟೆ ಯಾವೆಲ್ಲಾ ಆಹಾರ ಸೇವಿಸಬಾರದು.

Wed Jan 18 , 2023
ತಾಂಬೂಲದಲ್ಲಿ ಬಳಸುವ ವೀಳ್ಯದೆಲೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಎಲೆಯಲ್ಲಿ ಸುಣ್ಣದ ಜೊತೆಗೆ ಜಾಯಿಕಾಯಿ, ಹಸಿರು ಕರ್ಪೂರ, ಕುಂಕುಮ ಹೂವು, ಏಲಕ್ಕಿ ಪುಡಿ, ಕಸ್ತೂರಿ ಇತ್ಯಾದಿಗಳನ್ನು ಬಳಸುತ್ತಾರೆ.ಇವೆಲ್ಲವೂ ಆಯುರ್ವೇದದ ಪ್ರಕಾರ ಆರೋಗ್ಯಕ್ಕೆ ಪ್ರಯೋಜನಕಾರಿ. ಭಾರತೀಯರು ಊಟದ ನಂತರ ತಾಂಬೂಲವನ್ನು ಅಗಿಯುತ್ತಾರೆ. ಜೀರ್ಣಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ ಪೂರ್ಣಾಹಾರದ ನಂತರ ತಾಂಬೂಲವನ್ನು ಸೇವಿಸಲಾಗುತ್ತದೆ.ಹೊಟ್ಟೆ ಮತ್ತು ಕರುಳಿನಲ್ಲಿ ಪಿಹೆಚ್ ಅಸಮತೋಲನವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ತಾಂಬೂಲ ಸೇವಿಸಿ ತಿನ್ನಬಾರದ […]

Advertisement

Wordpress Social Share Plugin powered by Ultimatelysocial