ಬಸವಲಿಂಗಯ್ಯ ಹಿರೇಮಠ ನಮನ | Respects to departed soul great folk artiste Basavalingaiah Hirematg |

ಹಿರಿಯ ಜನಪದ ಕಲಾವಿದರಾದ ಬಸವಲಿಂಗಯ್ಯ ಹಿರೇಮಠ ಅವರು ನಿಧನರಾಗಿದ್ದಾರೆ.
ಬಸವಲಿಂಗಯ್ಯ ಹಿರೇಮಠ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರು ಗ್ರಾಮದಲ್ಲಿ 1959ರಲ್ಲಿ ಜನಿಸಿದರು. ತಮ್ಮ ಐದನೇ ವಯಸ್ಸಿನಲ್ಲಿಯೇ ಹಾರ್ಮೋನಿಯಮ್‌ ನುಡಿಸುತ್ತ ಭಜನೆ ಸಂಗೀತದಲ್ಲಿ ಪಾಲ್ಗೊಳ್ಳುತ್ತಿದ್ದರು. ಶಾಲಾ, ಕಾಲೇಜು ದಿನಗಳಲ್ಲಿ ಗ್ರಾಮೀಣ ರಂಗಭೂಮಿ ನಾಟಕಗಳಲ್ಲಿ ನಟನಾಗಿ, ಹಾಡುಗಾರನಾಗಿ ರಾಜ್ಯಾದ್ಯಂತ ಸಂಚರಿಸಿ ಪ್ರದರ್ಶನ ನೀಡಿದ್ದರು. ಜಾನಪದ ವಿಷಯವನ್ನು ಆಯ್ದುಕೊಂಡು ಎಂ. ಎ. ಪದವಿ ಗಳಿಸಿದ್ದರು.
ಬಸವಲಿಂಗಯ್ಯ ಹಿರೇಮಠ ನಟ, ಗಾಯಕ, ಸಂಗೀತ ನಿರ್ದೇಶಕ ಹೀಗೆ ಹತ್ತು ಹಲವು ಪ್ರತಿಭಾನ್ವಿತ ರೂಪ ತಳೆದಿದ್ದವರು. ಇವರು ದಾಸ, ಶರಣ, ತತ್ವಪದಗಳು, ಬಯಲಾಟ ಈ ಎಲ್ಲ ಪ್ರಕಾರದ ಸಾಹಿತ್ಯವನ್ನು ದೇಶ ವಿದೇಶಗಳಲ್ಲಿ ಪಸರಸಿದ್ದರು.
ಬಸವಲಿಂಗಯ್ಯ ಹಿರೇಮಠ 1983ರಲ್ಲಿ ನೀನಾಸಂ, ಜನಸ್ಪಂದನ ಶಿಬಿರಗಳ ಮೂಲಕ ರಂಗಭೂಮಿಗೆ ಪ್ರವೇಶ ಪಡೆದರು. ಬಿ.ವಿ.ಕಾರಂತರೊಂದಿಗೆ ರಂಗಸಂಗೀತ ಕುರಿತು ಅಭ್ಯಾಸ ಮಾಡಿ, ಧಾರವಾಡದಲ್ಲಿ ಜಾನಪದ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ಕುಲಗೋಡು ತಮ್ಮಣ್ಣ ವಿರಚಿತ 12 ಗಂಟೆಗಳ ಅವಧಿಯ ‘ಶ್ರೀ ಕೃಷ್ಣ ಪಾರಿಜಾತ’ವನ್ನು ಮೂರು ಗಂಟೆ ಕಾಲಕ್ಕೆ ಅಳವಡಿಸಿ ಪ್ರೇಕ್ಷಕರಿಗೆ ಮನ ಮುಟ್ಟುವಂತೆ ಮಾಡಿ ಸಾವಿರಾರು ಪ್ರದರ್ಶನಗಳು ಕಾಣುವಂತೆ ಮಾಡಿದರು. ಪತ್ತಾರ ಮಾಸ್ತರರ ‘ಸಂಗ್ಯಾ ಬಾಳ್ಯಾ’ ಪದ್ಯಕ್ಕೆ ರಂಗರೂಪ ನೀಡಿದ್ದರು.
ಬಸವಲಿಂಗಯ್ಯ ಹಿರೇಮಠ ತಾವು ಸ್ಥಾಪಿಸಿದ ಜಾನಪದ ಸಂಶೋಧನಾ ಸಂಸ್ಥೆ ಮೂಲಕ ನೂರಾರು ಯುವ ಕಲಾವಿದರಿಗೆ ಜಾನಪದ ಕಲಾ ತರಬೇತಿ ನೀಡಿದರು.
ಅಮೇರಿಕಾ, ಇಂಗ್ಲೆಂಡ್, ಮಧ್ಯಪ್ರಾಚ್ಯ ದೇಶಗಳೂ ಸೇರಿದಂತೆ ವಿಶ್ವದ ಅನೇಕ ಕಡೆಗಳಲ್ಲಿ ಬಸವಲಿಂಗಯ್ಯ ಹಿರೇಮಠರು ಪ್ರದರ್ಶನ ನೀಡಿದ್ದರು.
ಬಸವಲಿಂಗಯ್ಯ ಹಿರೇಮಠ ಅವರು ಮೂಡಲಮನೆ ಧಾರವಾಹಿಯಲ್ಲಿ ನಟಿಸಿದ್ದರು. ಎದೆತುಂಬಿ ಹಾಡುವೆನು ಸಂಗೀತ ಕಾರ್ಯಕ್ರಮದಲ್ಲಿ ಎಸ್‌.ಪಿ.ಬಾಲಸುಬ್ರಮಣ್ಯಂ ಅವರೊಂದಿಗೆ ಭಾಗವಹಿಸಿದ್ದರು. ಕರ್ನಾಟಕ ವಾರ್ತಾ ಇಲಾಖೆಯಿಂದ ಧಾರವಾಡ ಹಾಗೂ ಕಲಬುರಗಿ ವಿಭಾಗ ಮಟ್ಟದ ಬೀದಿ ನಾಟಕ ತರಬೇತಿ ಕಾರ್ಯಾಗಾರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಬಸವಲಿಂಗಯ್ಯ ಹಿರೇಮಠ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಭಿನವ ಶರೀಫ್ ಪ್ರಶಸ್ತಿ, ಕೆ.ಅರ್‌. ಲಿಂಗಪ್ಪ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಅಗಲಿದ ಕಲಾಚೇತನಕ್ಕೆ ನಮನ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನಂತ ಸಂಸ್ಮರಣೆ

Wed Mar 9 , 2022
  ಕನ್ನಡದ ಮೋಹಕ ಗಾಯಕರಾದ ಮೈಸೂರು ಅನಂತಸ್ವಾಮಿ ಕನ್ನಡ ಸುಗಮ ಸಂಗೀತಲೋಕದ ಪ್ರಧಾನ ಅಚಾರ್ಯರು. ಇಂದು ಈ ಆಚಾರ್ಯರ ಸಂಸ್ಮರಣಾ ದಿನ. ಮೈಸೂರು ಅನಂತಸ್ವಾಮಿ ಅವರು 1936ರ ಅಕ್ಟೋಬರ್ 25ರಂದು ಜನಿಸಿದರು. ಅದು ವಿಜಯದಶಮಿಯ ದಿನ. ಹಾಗಾಗಿ ಅವರನ್ನು ಅವರ ತಾಯಿ ದೊರೆ ಎಂದು ಕರೆಯುತ್ತಿದ್ದರಂತೆ. ಸುಗಮ ಸಂಗೀತಲೋಕದಲ್ಲಿ ಅವರು ದೊರೆಯೇ ಹೌದು. ಅವರ ಹೆಸರಿನ ಜೊತೆಯೇ ಅವರ ಹುಟ್ಟೂರು ಮೈಸೂರು ಕೂಡಾ ಚಿರಸ್ಮರಣೀಯವಾಗಿದೆ. ಮೈಸೂರಿನ ಕೃಷ್ಣಮೂರ್ತಿಪುರದ ಬಡಾವಣೆಯಲ್ಲಿ ಅವರ […]

Advertisement

Wordpress Social Share Plugin powered by Ultimatelysocial