ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆಅಪಾರವಾಗಿ ಇಂಬು ನೀಡಿದವರು.

ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕೆಂಬ ಕನಸನ್ನು 19ನೇ ಶತಮಾನದ ಪ್ರಾರಂಭದಲ್ಲೇ ಕಂಡು ಈ ಧ್ಯೇಯೋದ್ಧೇಶಕ್ಕಾಗಿ ತಮ್ಮ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ನಿರಂತರ ಶ್ರಮಿಸಿದ ಮಹಾನ್ ತಾಯಿ ಈಕೆ.
“ನಿಜವಾಗಿ ನೋಡಿದರೆ ಈ ಅಭಿನಂದನೆ ನಿನಗೆ ಸಲ್ಲತಕ್ಕದ್ದು. ನಾನು ಕೇವಲ ಬೇರೆ ಬೇರೆ ಕಡೆ ಶಾಲೆಗಳನ್ನು ಪ್ರಾರಂಭಿಸಲು ಕಾರಣಕರ್ತ. ಆದರೆ ನೀನು ಮಾತ್ರ ಶಾಲೆಗಳ ಬೆಳವಣಿಗೆಯ ಹಾದಿಯಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿರುವೆ. ಅದರಿಂದಾಗಿ ಬಂದಂತಹ ಬಹುಪರಿಯ ದುಃಖಗಳನ್ನು ನುಂಗಿಕೊಳ್ಳುತ್ತಾ ಪ್ರತಿಯೊಂದು ಶಾಲೆಗೂ ಹೊಸ ರೂಪ ಮತ್ತು ಚೈತನ್ಯವನ್ನು ತುಂಬಿರುವೆ. ಅದಕ್ಕಾಗಿ ಇದೋ ನನ್ನ ಮನಃಪೂರ್ವಕ ಅಭಿನಂದನೆಗಳು” ಎನ್ನುತ್ತಾ ಸ್ವಇಚ್ಛೆಯಿಂದ ಶಿಕ್ಷಣ ಕೇಂದ್ರಗಳನ್ನು ತೆರೆದು ವಿದ್ಯಾ ದಾನ ಮಾಡಿದ ತಮಗೆ, ಬ್ರಿಟಿಷ್ ಸರ್ಕಾರ ಹೊದಿಸಿ ಗೌರವಿಸಿದ ಶಾಲನ್ನು ಮಹಾತ್ಮ ಜ್ಯೋತಿಬಾ ಫುಲೆ ಅವರು ತಮ್ಮ ಮಡದಿಗೆ ನೀಡಿದಾಗ, ಇಡೀ ಸಭೆಗೆ ಸಭೆಯೇ ಎದ್ದು ನಿಂತು ಕರತಾಡನದೊಂದಿಗೆ ಅವರಿಗೆ ಗೌರವ ಸೂಚಿಸಿತು. ಹೀಗೆ ಪತಿಯಿಂದ ಸಾಮಾಜಿಕವಾಗಿ ಪ್ರಶಂಸೆ ಮತ್ತು ಗೌರವವನ್ನು ಪಡೆದವರು ಸಾವಿತ್ರಿಬಾಯಿ ಫುಲೆ.
ಸಾವಿತ್ರಿಬಾಯಿ ಅವರು ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿಯಲ್ಲಿ 1831ರ ಜನವರಿ 3ರಂದು ತಳಸಮುದಾಯದ ಕುಟುಂಬವೊಂದರಲ್ಲಿ ಜನಿಸಿದರು. ಸಾವಿತ್ರಿಬಾಯಿಗೆ 9 ವರ್ಷವಾಗಿದ್ದಾಗಲೇ ಜ್ಯೋತಿಬಾ ಅವರೊಂದಿಗೆ ವಿವಾಹವಾಯಿತು. ಮದುವೆಯ ನಂತರ ಅವರು ಪುಣೆಗೆ ಬಂದರು. ಹಸುಗೂಸಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ಜ್ಯೋತಿಬಾ ಫುಲೆ ಅವರ ವಿದ್ಯಾಭ್ಯಾಸ ಕುಂಟುತ್ತಾ ಸಾಗಿತ್ತು. ತಾಯಿಯ ದೂರದ ಸಂಬಂಧಿಯಾಗಿದ್ದ ಬಾಲವಿಧವೆ ಸಗುಣಾಬಾಯಿ ಇವರ ಸಾಕುತಾಯಿ.
ಸಗುಣಾ ಅವರಿಗೆ ಶಿಕ್ಷಣದ ಬಗ್ಗೆ ಅಪರಿಮಿತ ಆಸಕ್ತಿ ಇತ್ತು. ಇವರು ಸಂಪ್ರದಾಯ, ಕಟ್ಟುಕಟ್ಟಲೆಗಳ ಕುರಿತು ಆಳದಲ್ಲಿ ಪ್ರತಿಭಟನಾತ್ಮಕ ಮನೋಭಾವ ಹೊಂದಿದ್ದರು. ಹೀಗೆಂದೇ ಸುಗುಣಾ ಅವರು ಸಾವಿತ್ರಿಬಾಯಿ ಮತ್ತು ತಮಗೆ ಪಾಠವನ್ನು ಹೇಳಿಕೊಡಲು ಜ್ಯೋತಿಬಾ ಅವರನ್ನೇ ಒಪ್ಪಿಸಿದರು! ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯೆಯನ್ನು ದಕ್ಕಿಸಿಕೊಂಡ ಈ ಇಬ್ಬರು ಹೆಣ್ಣುಮಕ್ಕಳು ಜ್ಯೋತಿಬಾ ಅವರೊಡಗೂಡಿ, ಬಹುಜನರಿಗೆ ಅಕ್ಷರವನ್ನು ನಿರಾಕರಿಸಿದ್ದ ರೋಗಗ್ರಸ್ತ ಸಮಾಜವನ್ನು ಎದುರು ಹಾಕಿಕೊಂಡು ಹೆಣ್ಣುಮಕ್ಕಳಿಗೆ ಶಿಕ್ಷಣದ ಬಾಗಿಲನ್ನು ತೆರೆದರು!
1847ರಲ್ಲಿ ನಾರ್ಮನ್ ಶಾಲೆಯಲ್ಲಿ ಕೇವಲ 17 ವರ್ಷದೊಳಗೆ ಶಿಕ್ಷಕಿ ತರಬೇತಿಯನ್ನು ಪಡೆದ ಸಾವಿತ್ರಿಬಾಯಿ ಅವರು ಮಹಾರಾಷ್ಟ್ರದಲ್ಲಿ ತರಬೇತಾದ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1848ರಲ್ಲಿ ಜ್ಯೋತಿಬಾ ಅವರು ಪುಣೆಯಲ್ಲಿ ತೆರೆದ ಮೊಟ್ಟಮೊದಲ ಹೆಣ್ಣುಮಕ್ಕಳ ಶಾಲೆಯಲ್ಲಿ (ಭಾರತದಲ್ಲಿ ಎರಡನೆಯದು) ಉಪಾಧ್ಯಾಯಿನಿಯಾಗಿ ಈಕೆ ಕೆಲಸ ಪ್ರಾರಂಭಿಸಿದರು. 9 ಜನ ಹೆಣ್ಣುಮಕ್ಕಳಿಂದ ಪ್ರಾರಂಭವಾದ ಶಾಲೆ, ಮುಂದೆ ಅನೇಕ ಬಾಲೆಯರಿಗೆ ವಿದ್ಯಾದಾನದ ಕೇಂದ್ರವಾಯ್ತು. ಇದಕ್ಕಾಗಿ ಸಾವಿತ್ರಿಬಾಯಿ ಅವರು ಸಮಾಜದಲ್ಲಿ ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಸಾವಿತ್ರಿಬಾಯಿಯವರು ಶಾಲೆಗೆ ಹೋಗಿ ಬರುವ ದಾರಿಯಲ್ಲಿ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸಲಾಯಿತು. ಕಲ್ಲು, ಕೆಸರು, ತೊಪ್ಪೆಗಳನ್ನೆಸೆದು ಹೆದರಿಸಿ, ಕೊಲೆ ಬೆದರಿಕೆ ಹಾಕಿದರು. ಯಾವುದಕ್ಕೂ ಬಗ್ಗದಿದ್ದಾಗ, ಇವರ ಶಾಲೆಗೆ ಸೇರಿದ್ದ ಹೆಣ್ಣುಮಕ್ಕಳಿಗೆ ಜಾತಿ ಹಾಗೂ ಸಮಾಜ ಬಹಿಷ್ಕಾರದ ಬೆದರಿಕೆಯನ್ನು ಹಾಕತೊಡಗಿದರು. ಸಾವಿತ್ರಿಬಾಯಿ ಅವರು ಮನೆ ಮನೆಗಳಿಗೆ ಹೋಗಿ ಪೋಷಕರ ಮನವೊಲಿಸಿ, ಶಿಕ್ಷಣದ ಔನ್ನತ್ಯವನ್ನು ತಿಳಿ ಹೇಳಿ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ನೀಡಿದರು.
ಇದೇ ಕಾರಣಕ್ಕೆ ಜ್ಯೋತಿಬಾ ತಮ್ಮ ಸ್ವಂತ ಮನೆ ತೊರೆದು ಹೊರಬೀಳಬೇಕಾದ ಮತ್ತು ಸಾವಿತ್ರಿಬಾಯಿಯವರು ತವರಿನಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾದ ಪ್ರಸಂಗಗಳು ಎದುರಾದವು. ಇದನ್ನೆಲ್ಲಾ ಕೆಲವು ಪ್ರಗತಿಪರ ಸ್ನೇಹಿತರೊಡಗೂಡಿ ದಿಟ್ಟವಾಗಿ ಎದುರಿಸಿದ ದಂಪತಿಗಳು 1848-1852ರವರೆಗೆ ಹದಿನೆಂಟಕ್ಕೂ ಹೆಚ್ಚು ಉಚಿತ ಶಾಲೆಗಳನ್ನು ತೆರೆದು ನೂರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ದಾಖಲೆಗಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಚಾರ್ಯ ಬಿ. ಎಂ.ಶ್ರೀ ಸಾಹಿತ್ಯ ಲೋಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿ ಪೋಷಿಸಿದವರಲ್ಲಿಒಬ್ಬರು

Tue Jan 3 , 2023
ಕಳೆದ ಶತಮಾನದಲ್ಲಿ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿ ಪೋಷಿಸಿದವರಲ್ಲಿ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಪ್ರಮುಖರಾಗಿದ್ದಾರೆ. ಕನ್ನಡ ನವೋದಯ ಕಾರ್ಯಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಅಚಾರ್ಯಪುರುಷ ಎಂದು ಖ್ಯಾತ ನಾಮರಾದ ಪ್ರೊಫೆಸರ್ ಬಿ.ಎಂ. ಶ್ರೀಕಂಠಯ್ಯನವರು 1884ರ ಜನವರಿ 3ರಂದು ಜನಿಸಿದರು. ಬಿ.ಎಂ.ಶ್ರೀ ಅವರು ಇಂಗ್ಲಿಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡ ಸಂಸ್ಕೃತ ಭಾಷೆಗಳಲ್ಲಿ ಗಾಢ ಪಾಂಡಿತ್ಯ ಪಡೆದಿದ್ದರು. ಅಂದಿನ ದಿನದಲ್ಲಿ ಕನ್ನಡದಲ್ಲಿ ಪ್ರತಿಭಾರಾಹಿತ್ಯದಿಂದ, ಸಂಸ್ಕೃತ ಕಾವ್ಯದ ಬಡ […]

Advertisement

Wordpress Social Share Plugin powered by Ultimatelysocial