ಬಜೆಟ್‌ ಅಧಿವೇಶನಕ್ಕೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಕಿವಿ ಮೇಲೆ ಹೂವಿಟ್ಟುಕೊಂಡು ಬಂದಿದ್ದರು.

ಬಜೆಟ್‌ ಅಧಿವೇಶನಕ್ಕೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಆದಿಯಾಗಿ ಕಾಂಗ್ರೆಸ್‌ ನಾಯಕರೆಲ್ಲ ಕಿವಿ ಮೇಲೆ ಹೂವಿಟ್ಟುಕೊಂಡು  ಬಂದಿದ್ದರು. ಇದು ಬಜೆಟ್‌ನಷ್ಟೇ ಗಮನ ಸೆಳೆದಿತ್ತು. ಸರ್ವ ಕಾಂಗ್ರೆಸ್‌ ಶಾಸಕರು ಈ ರೀತಿ ಮಧ್ಯಾಹ್ನದವರೆಗೆ ಹೂವು ಇಟ್ಟುಕೊಂಡು ಕಾಲ ಕಳೆಯಲು ಕಾರಣವಾಗಿದ್ದು ಯಾರು ಎನ್ನುವ ಪ್ರಶ್ನೆ ಈಗ ಚರ್ಚೆಯಲ್ಲಿದೆ.

ಸಾಮಾನ್ಯವಾಗಿ ಸಿದ್ದರಾಮಯ್ಯ ಅವರಂಥ ನಾಯಕರು ಇಂಥ ವಿಡಂಬನಾತ್ಮಕ ಗಿಮಿಕ್‌ಗಳಿಗೆ ಒತ್ತು ಕೊಡುವುದಿಲ್ಲ. ಎಲ್ಲವನ್ನೂ ನಾನು ವಿಧಾನಸಭೆಯಲ್ಲಿ ಮಾತಿನ ಮೂಲಕವೇ ಎದುರಿಸುವ ಛಾತಿ ಅವರದು. ಡಿ.ಕೆ. ಶಿವಕುಮಾರ್‌ ಕೂಡಾ ಈಗೀಗ ಸ್ವಲ್ಪ ಉದ್ವಿಗ್ನ ಮನಸ್ಥಿತಿಯಲ್ಲೇ ಇರುತ್ತಾರೆ. ಇಂಥ ನಾಯಕರು ಕಿವಿ ಮೇಲೆ ಹೂವಿಟ್ಟುಕೊಂಡು ಮುಗ್ಧ ಮಕ್ಕಳಂತೆ ಕುಳಿತುಕೊಳ್ಳಲು ಏನು ಕಾರಣ?

ಒಂದು ವೇಳೆ ಸ್ವತಃ ಡಿ.ಕೆ. ಶಿವಕುಮಾರ್‌ ಅವರಿಗೇ ಇಂಥಹುದೊಂದು ಐಡಿಯಾ ಬಂದು ʻಹೀಗ್ಮಾಡೋಣವಾʼ ಎಂಬ ಸಲಹೆ ಮುಂದಿಟ್ಟಿದ್ದರೂ ಸಿದ್ದರಾಮಯ್ಯ ಅಥವಾ ಅವರ ಬೆಂಬಲಿಗರೆಂದು ಗುರುತಿಸಿಕೊಂಡಿರುವ ಕೆಲವು ಶಾಸಕರಾದರೂ ವಿರೋಧಿಸುತ್ತಿದ್ದರು. ಸಿದ್ದರಾಮಯ್ಯ ಅವರು ನೇರವಾಗಿ ಇಂಥ ಐಡಿಯಾ ಕೊಡುವವರಲ್ಲ.

ಇದನ್ನೇ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಹೇಳಿದ್ದರು. ʻʻಸಿದ್ದರಾಮಯ್ಯ ಅಂಥ ರಾಜಕಾರಣಿ ಆ ರೀತಿ ನಡೆದುಕೊಳ್ಳಬಾರದಿತ್ತು. ಸಿದ್ದರಾಮಯ್ಯ ಅವರು ಬೇರೆ ಪಕ್ಷದಲ್ಲಿ ಇದ್ದರೂ ನನಗೆ ಅಭಿಮಾನ ಗೌರವವಿದೆ, ಆದ್ರೆ ಸಿದ್ದರಾಮಯ್ಯ ಅವರನ್ನು ಈ ಮಟ್ಟಕ್ಕೆ ಅವರ ನಾಯಕರು ಇಳಿಸಿದ್ದಾರೆ. ಸಿದ್ದರಾಮಯ್ಯ ಅಂತ ನಾಯಕ ಆ ರೀತಿ ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿದ್ದು ನಗು ಜತೆಗೆ ಅವರ ಮೇಲೆ ಕನಿಕರ ಬಂತು. ಅದಕ್ಕೆ ನಾನು ಹೇಳಿದೆ ನಿಮ್ಮ ಮಾತು ಕೇಳಿ ಜನ ನಿಮಗೆ ಹೂವು ಕೊಟ್ಟು ಕಳಿಸಿದ್ದಾರೆಂದು ಹೇಳಿದೆʼʼ ಎಂದಿದ್ದರು ಬೊಮ್ಮಾಯಿ. ಅಂದರೆ ಸಿದ್ದರಾಮಯ್ಯ ಅವರಿಗೂ ಯಾರೋ ಕಿವಿ ಮೇಲೆ ಹೂವಿಟ್ಟು ಕಳುಹಿಸಿದ್ದಾರೆ ಎಂದು ಗೇಲಿ ಮಾಡಿದ್ದರು.

ಹಾಗಿದ್ದರೆ ಈ ಐಡಿಯಾ ಯಾರದ್ದು? ಕೇವಲ ೫೦-೧೦೦ ರೂ.ಯ ಚೆಂಡು ಹೂವಿನ ಮೂಲಕ ಸರ್ಕಾರವನ್ನು ಇಷ್ಟೊಂದು ಗೇಲಿ ಮಾಡಬಹುದು, ಇಡೀ ರಾಜ್ಯದ ಗಮನ ಸೆಳೆಯಬಹುದು ಎನ್ನುವ ಗಿಮಿಕ್‌ಗೆ ಇವರನ್ನೆಲ್ಲ ಒಪ್ಪಿಸಿದ್ದು ಯಾರು ಎನ್ನುವ ಪ್ರಶ್ನೆಗೆ ಡಾಲರ್‌ ಮೌಲ್ಯವೇ ಇದೆ.

ಒಂದು ಮೂಲದ ಪ್ರಕಾರ, ಈ ಐಡಿಯಾ ಹುಟ್ಟಿದ್ದು ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರ ತಲೆಯಲ್ಲಿ. ಕಾಂಗ್ರೆಸ್‌ ರಾಜ್ಯ ಉಸ್ತುವಾರಿಯಾಗಿರುವ ಅವರು ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲೇ ಇದ್ದಾರೆ. ಬಜೆಟ್‌ ಆರಂಭವಾದ ದಿನದಿಂದಲೇ ದಿನಕ್ಕೊಂದು ರಣತಂತ್ರ, ವಿಚಾರ ಎತ್ತುತ್ತಾ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುತ್ತಿದ್ದಾರೆ.

ಕಿವಿ ಮೇಲೆ ಹೂವು ಪೋಸ್ಟರ್‌

ಬೆಳಗ್ಗೆ ಒಂಬತ್ತು ಗಂಟೆಗೇ ಒಂದು ಪತ್ರಿಕಾಗೋಷ್ಠಿ ನಡೆಸಿ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಇಂದು ಹೊಸ ವಿವಾದದ ಬೀಜ ಬಿತ್ತಿ, ಇಡೀ ದಿನ ಅದರ ಬಗ್ಗೆಯೇ ಚರ್ಚೆಯಾಗುವಂತೆ ನೋಡಿಕೊಳ್ಳುವುದು ಅವರ ಈಗಿನ ಸ್ಟ್ರಾಟಜಿ. ಹೀಗೆ ಮಾಡುವುದರಿಂದ ಬಿಜೆಪಿ ನಾಯಕರು ಇದಕ್ಕೆ ಸ್ಪಷ್ಟನೆ ಕೊಡುವಲ್ಲೇ ಸುಸ್ತು ಹೊಡೆಯುತ್ತಾರೆ, ಕಾಂಗ್ರೆಸ್‌ ನಾಯಕರು ಕೂಡಾ ಯಾವುದೇ ಭೇದವಿಲ್ಲದೆ ಒಂದೇ ವಿಚಾರದ ಬಗ್ಗೆ ಮಾತನಾಡುತ್ತಾರೆ. ಹೀಗೆ ದಿನಕ್ಕೊಂದು ವಿಷಯವನ್ನು ಎತ್ತಿಕೊಳ್ಳುವುದು ಅವರ ಪ್ಲ್ಯಾನಿಂಗ್.‌ ಇದುವರೆಗೆ ಅದು ಸಕ್ಸಸ್‌ ಆಗಿದೆ.

ಅದರಂತೆಯೇ ಬಜೆಟ್‌ ಎನ್ನುವುದು ಜನರ ಕಿವಿಗೆ ಹೂವಿಡುವ ಕಾರ್ಯಕ್ರಮ ಎಂದು ಯಾವುದೇ ಸದ್ದುಗದ್ದಲವಿಲ್ಲದೆ ಬಿಂಬಿಸುವ ಪ್ಲ್ಯಾನ್‌ ಅವರದಾಗಿತ್ತು. ಆದರೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರಂಥ ನಾಯಕರನ್ನು ಇದಕ್ಕೆ ಒಪ್ಪಿಸಿದ್ದೇ ದೊಡ್ಡ ಸಂಗತಿ!

ಇನ್ನು ಕಾಂಗ್ರೆಸ್‌ನ ಐಟಿ ಸೆಲ್‌ ಈಗ ತುಂಬ ಸಕ್ರಿಯವಾಗಿದೆ. ಶುಕ್ರವಾರ ಬಜೆಟ್‌ ಅಧಿವೇಶನಕ್ಕೆ ಮೊದಲೇ ಅದು ಕಿವಿಗೆ ಹೂವಿಡುವ ಹಲವು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿತ್ತು. ಅದನ್ನು ಸ್ವತಃ ರಣದೀಪ್‌ ಸುರ್ಜೇವಾಲ ಹಂಚಿಕೊಂಡಿದ್ದರು. ಆ ಬಳಿಕ ಇದನ್ನು ಸದನದಲ್ಲೂ ರೆಪ್ಲಿಕೇಟ್‌ ಮಾಡಬಹುದು ಎಂಬ ಉಪಾಯ ಹೊಳೆದಿರುವ ಸಾಧ್ಯತೆಯೂ ಇದೆ.

ನಿಜವೆಂದರೆ, ಈ ರೀತಿ ಕಿವಿಗೆ ಹೂವಿಟ್ಟುಕೊಂಡ ಚಿತ್ರಗಳನ್ನು ಸಿದ್ದರಾಮಯ್ಯ ಅವರೇನೂ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿಲ್ಲ. ಡಿ.ಕೆ. ಶಿವಕುಮಾರ್‌ ಅವರ ಪತ್ರಿಕಾಗೋಷ್ಠಿಯ ಒಂದು ವಿಡಿಯೊದಲ್ಲಿ ಮಾತ್ರ ಹೂವು ಕಾಣಿಸುತ್ತದೆ.

ಏನೇ ಇದ್ದರು ಕಾಂಗ್ರೆಸ್‌ ನಾಯಕರಿಗೆ ಸಾಮೂಹಿಕವಾಗಿ ಕಿವಿಗೆ ಹೂವಿಡುವಂತೆ ಮಾಡಿದ, ಆ ಮೂಲಕ ದೊಡ್ಡ ಪ್ರಚಾರ ಪಡೆದುಕೊಂಡವರ ಜಾಣ್ಮೆಯನ್ನು ಮೆಚ್ಚಲೇಬೇಕು! ಇದೀಗ ಅದು ಬೀದಿ ಅಭಿಯಾನವೂ ಆಗಿದ್ದು ಮುಂದೇನಾಗುತ್ತದೆ ನೋಡಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಮಹೇಶ್ ಜೋಶಿ ಅವರು ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ!

Sat Feb 18 , 2023
ರಾಜಸ್ಥಾನ ವಿಧಾನಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಮಹೇಶ್ ಜೋಶಿ ಅವರು ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ರಾಜೀನಾಮೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇಂದು ಅಂಗೀಕರಿಸಿದ್ದಾರೆ.ಜೈಪುರ: ರಾಜಸ್ಥಾನ  ವಿಧಾನಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಮಹೇಶ್ ಜೋಶಿ ಅವರು ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ರಾಜೀನಾಮೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇಂದು ಅಂಗೀಕರಿಸಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಮತ್ತು […]

Advertisement

Wordpress Social Share Plugin powered by Ultimatelysocial