ಜಾನ್ ಕೀಟ್ಸ್

ಜಾನ್ ಕೀಟ್ಸ್ ಎರಡನೆಯ ಪೀಳಿಗೆಯ ಇಂಗ್ಲಿಷ್ ರೊಮಾಂಟಿಕ್ ಕವಿಗಳಲ್ಲಿ ಪ್ರಮುಖನಾದವ. ಈತ ಈ ಲೋಕವನ್ನಗಲಿದ್ದು 1821ರ ಫೆಬ್ರವರಿ 23ರಂದು.
ಜಾನ್ ಕೀಟ್ಸ್ 1795 ಅಕ್ಟೋಬರ್ 31ರಂದು ಲಂಡನ್ನಿನಲ್ಲಿ ಜನಿಸಿದ. ತಂದೆ ಥಾಮಸ್ ಕೀಟ್ಸ್ ಹೋಟೆಲೊಂದರ ಕುದುರೆ ಲಾಯದ ಮುಖ್ಯ ಕಾಸ್ತಾರನಾಗಿದ್ದು, ತನ್ನ ದಣಿಯ ಮಗಳನ್ನು ಮದುವೆಯಾಗಿ, ಪ್ರಯಾಣಿಕರ ಕುದುರೆಗಳನ್ನು ನೋಡಿಕೊಳ್ಳುವ ಮತ್ತು ಬೇಕೆಂದವರಿಗೆ ಕುದುರೆಗಳನ್ನು ಬಾಡಿಗೆಗೆ ಕೊಡುವ ವ್ಯವಹಾರ ಮಾಡುತ್ತಿದ್ದ. ಕಾಸ್ತಾರ ವೃತ್ತಿಯವನಾದರೂ ಥಾಮಸ್ ಕೀಟ್ಸ್, ವಿದ್ಯೆ ಸಭ್ಯತೆ ಸಂಸ್ಕೃತಿಗಳ ಅಭಿಮಾನಿ. ಜಾನ್ನನ್ನೂ ಅವನ ತಮ್ಮಂದಿರನ್ನೂ ಹತ್ತಿರದ ಊರಾದ ಎನ್ಫೀಲ್ಡಿನ ಪ್ರಖ್ಯಾತ ಪಾಠಶಾಲೆಗೆ ಕಳಿಸಿದ. ಅಲ್ಲಿ ಜಾನನಿಗೆ ಓದಿಗಿಂತಲೂ ಹೆಚ್ಚಾಗಿ ಕದನವೆಂದರೆ ಪ್ರೀತಿ; 1804ರಲ್ಲಿ ತಂದೆ ತೀರಿಕೊಂಡ. ಆದರೂ ಹುಡುಗರ ವಿದ್ಯಾಭ್ಯಾಸಕ್ಕೆ ಚ್ಯುತಿ ಉಂಟಾಗಲಿಲ್ಲ. ಸುಲಭವಾಗಿ ಕೆರಳುವ ಜಾಯಮಾನದವನಾದರೂ ಜಾನ್ ವಿಪರೀತ ಉದಾರಿ; ಆದ್ದರಿಂದ ಅವನನ್ನು ಕಂಡು ಎಲ್ಲರಿಗೂ ವಿಶ್ವಾಸ.
1810ರಲ್ಲಿ ತಾಯಿ ಗತಿಸಿದಳು. ನಾಲ್ಕು ಕಿರಿಯರ ಪಾಲನೆ ಅಬ್ಬೆ ಎಂಬೊಬ್ಬ ವರ್ತಕನ ಜವಾಬ್ದಾರಿಯಾಯಿತು. ಸುಮಾರು 8,000 ಪೌಂಡು ಅವರ ಪಿತ್ರಾರ್ಜಿತ ಆಸ್ತಿ. ಜಾನ್ ಕೀಟ್ಸನ ಶಾಲಾ ವ್ಯಾಸಂಗ 1810ರಲ್ಲಿ ಮುಗಿಯಿತು. ಅಬ್ಬೆ ಅವನನ್ನು ಕೂಡಲೆ ಹತ್ತಿರದ ಎಡ್ಮಂಟನ್ ಎಂಬ ಊರಿನಲ್ಲಿ ಪ್ರಸಿದ್ಧನಾಗಿದ್ದ ಹ್ಯಾಮಂಡ್ ಎಂಬ ಶಸ್ತ್ರವೈದ್ಯನ ಕೈಕೆಳಗೆ ಐದು ವರ್ಷ ಕಲಿಕೆಯವನನ್ನಾಗಿ ಗೊತ್ತುಮಾಡಿದ. ವೈದ್ಯಕೀಯದಲ್ಲಿ ಜಾನನಿಗೆ ಪೂರಾ ಶ್ರದ್ಧೆ ಬಾರದಿದ್ದರೂ ಅದನ್ನು ಅಸಡ್ಡೆಗೆ ಈಡುಮಾಡಲಿಲ್ಲ. ಶಾಲೆಯಲ್ಲಿದ್ದಾಗ ಮೊದಮೊದಲು ಅಲಕ್ಷಿಸುತ್ತಿದ್ದ ಜ್ಞಾನಾರ್ಜನೆ ಕಡೆಯ ಎರಡು ವರ್ಷಗಳಲ್ಲಿ ಅವನ ಚಿತ್ತವನ್ನು ಬಲವಾಗಿ ಸೆಳೆದಿತ್ತು.
ಕೀಟ್ಸ್ ವರ್ಜಿಲ್ ಕವಿಯನ್ನು ಪಠಿಸಿದ್ದ. ಕೈಪಿಡಿ ನಿಘಂಟುಗಳ ಮೂಲಕ ಪ್ರಾಚೀನ ಗ್ರೀಕರ ಪುರಾಣ ಕಥಾವಳಿಯನ್ನು ಪರಿಚಯ ಮಾಡಿಕೊಂಡಿದ್ದ ; ಅದಕ್ಕೆ ಮನಸೋತಿದ್ದ.
1812ರಲ್ಲಿ ಒಂದು ವಿಶೇಷ ಘಟನೆ ನಡೆಯಿತು. ಗೆಳೆಯ ಕೌಡನ್ ಕ್ಲಾರ್ಕ್ ಅವನಿಗೆ ಸ್ವೆನ್ಸರ್ ಕವಿಯ ಫೇರಿ ಕ್ವೀನ್ ಎಂಬ ಮಹಾಕಾವ್ಯವನ್ನು ಓದಲು ಎರವಿತ್ತ. ಕೀಟ್ಸಿಗೆ ಯಾವುದೋ ಅಮೂಲ್ಯ ನಿಧಿ ದೊರಕಿದಂತಾಯಿತು. ಎಳೆಯ ಕುದುರೆ ವಸಂತದ ಹಸಿರು ಬಯಲಲ್ಲಿ ನೆಗೆನೆಗೆದು ಓಡಾಡುವಂತೆ ಆ ಅದ್ಭುತ ಕಾವ್ಯದಲ್ಲಿ ಆಸಕ್ತನಾದನಂತೆ. ತಾನೂ ಒಬ್ಬ ಕವಿ. ಪದ್ಯರಚನೆಯೇ ತನ್ನ ನೇಮಿತ ಕೃಷಿ ಎಂಬುದು ಆಗ ಅವನಿಗೆ ಮನದಟ್ಟಾಯಿತು. ಸ್ವೆನ್ಸರನ್ನು ಅನುಕರಿಸಿ ಪದ್ಯ ಬರೆದ. 1814ರಲ್ಲಿ ಅವನಿಗೂ ಹ್ಯಾಮಂಡನಿಗೂ ನಡುವೆ ವೈಮನಸ್ಯ ಬೆಳೆಯಿತಾಗಿ, ಕಲಿಕೆಯನ್ನು ಕೊನೆಗೊಳಿಸಿ, ಲಂಡನ್ನಿಗೆ ನಡೆದು, ಆಸ್ವತ್ರೆಯಲ್ಲಿ ವೈದ್ಯ ಅಭ್ಯಾಸ ಮಾಡತೊಡಗಿದ. ಸಾಹಿತ್ಯದ ಪ್ರಭಾವ ಅವನ ಮೇಲೆ ಪ್ರಬಲವಾಗಿದ್ದರೂ ಸಹಾಧ್ಯಾಯಿಗಳಿಗೆ ಅಚ್ಚರಿ ಹುಟ್ಟುವಂತೆ ವೈದ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ.
ಲೀ ಹಂಟ್ ಎಂಬಾತ ಸಾಧಾರಣ ಕವಿ, ಒಳ್ಳೆಯ ಪ್ರಬಂಧಕಾರ. ಆತ ಪರೀಕ್ಷಕ ಎಂಬ ಪತ್ರಿಕೆಯನ್ನು ನಡೆಸುತ್ತ ಸಾಹಿತ್ಯ ಸಮಾಜಗಳ ಟೀಕಾಕಾರನಾಗಿದ್ದ. ಅವನದ್ದು ತೀವ್ರಗಾಮಿಗಳ ಪಕ್ಷ; ರಾಜಕುಮಾರನ ವಿಚಾರವಾಗಿ ಕಟುವಿಮರ್ಶೆ ಪ್ರಕಟಿಸಿ ಸೆರೆಮನೆಗೆ ಹೋಗಿ ಬಂದ. ಆ ಶಿಕ್ಷೆ ಅವನಿಗೆ ಬಹಳ ಯಶಸ್ಸನ್ನು ತಂದುಕೊಟ್ಟಿತು. ಯುವಕ ಕವಿಗಳು ಅವನ ಹಿಂಬಾಲಕರಾದರು: ಅವರಲ್ಲಿ ಕೀಟ್ಸನೂ ಒಬ್ಬ. ವಿರೋಧ ಪಕ್ಷದವರು ಲೀ ಹಂಟನ ಗುಂಪನ್ನು ಕಾಕಿ ಮಠ ಎಂದು ಅಪಹಾಸ್ಯ ಗೈದರು.
ಕೀಟ್ಸ್ 1817ರಲ್ಲಿ ತನ್ನ ಕೃತಿಗಳನ್ನು ಪ್ರಕಟಿಸಿದ; ಅದು ಜನಚಿತ್ತವನ್ನು ಆಕರ್ಷಿಸಲಿಲ್ಲ. ಮೂರನೆಯ ವರ್ಷ ಎಂಡಿಮಿಯಾನ್ ಎಂಬ ಕಥನಕಾವ್ಯವನ್ನು ಹೊರತಂದ. ತತ್ಕ್ಷಣವೇ ಸ್ಕಾಟ್ಲೆಂಡಿನ ಬ್ಲಾಕ್ವುಡ್ಸ್ ಮತ್ತು ಕ್ವಾರ್ಟರ್ಲಿ ಎಂಬ ಅವನ ಕವಿತ್ವವನ್ನು ಕಠೋರ ಖಂಡನೆಗೆ ಗುರಿ ಮಾಡುತ್ತ, ಹೊಟ್ಟೆಗೆ ಹಿಟ್ಟಿಲ್ಲದ ಕವಿಯಾಗಿ ಸಾಯುವುದಕ್ಕಿಂತ ಹೊಟ್ಟೆಗೆ ಹಿಟ್ಟಿಲ್ಲದ ವೈದ್ಯನಾಗಿ ಸಾಯುವುದು ಲೇಸು; ಗುಳಿಗೆ ಸೀಸೆಗಳ ಕಡೆಗೇ ಹಿಂದಿರುಗು” ಎಂದು ಮೂದಲಿಸಿದುವು. ಕೀಟ್ಸ್ ಮನನೊಂದರೂ ಪೂರ್ತಿ ಧೈರ್ಯಗೆಡಲಿಲ್ಲ. ಉತ್ಸಾಹ ಕಳೆದುಕೊಳ್ಳಲಿಲ್ಲ. ಎಂಡಿಮಿಯಾನ್ ಹೇಗೆ ತನಗೇ ಅತೃಪ್ತಿಕರವಾಗಿತ್ತು ಎಂಬುದನ್ನು ಅವನ ಚೆನ್ನಾಗಿ ಬಲ್ಲ. ಅದೇ ವರ್ಷ ಫ್ಯಾನಿ ಬ್ರೌನ್ ಎಂಬ ತರುಣಿಯನ್ನು ಕಂಡಾಗ ಗಾಢಪ್ರೇಮ ಅವನಲ್ಲಿ ಉದಯಿಸಿತು. ಅವನು ನಿರುದ್ಯೋಗಿ; ಇದ್ದ ಹಣ ಖರ್ಚಾಗಿ ಹೋಗಿತ್ತು. ಸಾಹಿತ್ಯದಿಂದಲೇ ಬದುಕುವ ಅವನ ಹಂಬಲಕ್ಕೆ ನಿರ್ದಯ ವಿಮರ್ಶಕರು ಕೊಡಲಿ ಹಾಕಿದ್ದರು. ಸ್ಥಿತಿ ಹೀಗೆ ವಿಷಮವಾಗಿದ್ದರೂ ಕಂಗೆಡದೆ, ಆಪ್ತಮಿತ್ರರ ಸಹಾಯದಿಂದ ದಿನ ನೂಕುತ್ತ ಕೀಟ್ಸ್ ಕಾವ್ಯ ಕಟ್ಟುತ್ತಲೇ ಹೋದ.
1820ರಲ್ಲಿ ಕೀಟ್ಸ್ ಪ್ರಕಟಿಸಿದ ಲೇಮಿಯಾ, ಇಸಾಬೆಲಾ ಮತ್ತು ಇತರ ಕವನಗಳು ಎಂಬ ಹೊತ್ತಗೆ ಅವನ ಋಜು ಆತ್ಮಪ್ರತ್ಯಯಕ್ಕೆ ಸಾಕ್ಷ್ಯವಾಯಿತು. ಅಷ್ಟು ಹೊತ್ತಿಗೆ ಕ್ಷಯರೋಗ ಅವನ್ನು ಬಲವಾಗಿ ಹಿಡಿದಿರುವ ಸಂಗತಿ ಸ್ವಷ್ಟವಾಗಿ ತಿಳಿಯಿತು. ಆ ರೋಗಕ್ಕೇ ಅವನ ತಾಯಿಯೂ ತಮ್ಮನೂ ತುತ್ತಾಗಿದ್ದರು; ತಮ್ಮನ ಆರೋಗ್ಯಕ್ಕೋಸ್ಕರ ಅವನೊಂದಿಗೆ ಅಲ್ಲಿ ಇಲ್ಲಿ ಪ್ರವಾಸ ಕೈಗೊಂಡರೂ ಏನೂ ಫಲ ದೊರೆಯಲಿಲ್ಲ. 1820ರ ಹಿಮಗಾಲದಲ್ಲಿ ಇಂಗ್ಲೆಂಡಿನಲ್ಲಿ ಉಳಿಯಲಾರನೆಂದು ತಿಳಿದ ಸ್ನೇಹಿತರು ಇಟಲಿಗೆ ಹೋಗುವಂತೆ ಅವನನ್ನು ಬಲಾತ್ಕರಿಸಿದರು. ಜೋಸೆಫ್ ಸೆವರ್ನ್ ಎಂಬ ಜೊತೆಗಾರನೊಡನೆ ಸೆಪ್ಟೆಂಬರಿನಲ್ಲಿ ಜಾನ್ ನೇಪಲ್ಸಿಗೆ ಹೊರಟ. ತನ್ನ ಬಾಳು ಸಮಾಧಿಯಾಚೆಯ ಬಾಳು ಎಂದು ಅವನೇ ಗಂಭೀರವಾಗಿ ಹೇಳಿಕೊಂಡ. ರೋಮ್ ನಗರ ತಲಪುವ ಹೊತ್ತಿಗೆ ಪ್ರಾಣಪಕ್ಷಿ ಹೊರಹಾರಲು ಸಿದ್ಧವಾಗಿತ್ತು. ಸೆವರ್ನ್ ಮತ್ತು ದೇವರಿಗೆ ಧನ್ಯವಾದ, ಅದು ಬಂದಿದೆ ಎಂದು ನುಡಿಯುತ್ತ, 1821ರ ಫೆಬ್ರವರಿ 23ರಂದು ಕೀಟ್ಸ್ ಮೃತ್ಯುವಶನಾದ.
ಬೈರನ್ ಷೆಲ್ಲಿ ಕವಿಗಳು `ಪಾಪ, ಕೀಟ್ಸ್ ಕ್ರೂರ ಟೀಕಾಕಾರರ ಖಡ್ಗಕ್ಕೆ ಬಲಿಬಿದ್ದ` ಎಂಬ ಐತಿಹ್ಯ ಹರಡಿ, ಅವನ ವ್ಯಕ್ತಿ ತೇಜಸ್ಸಿಗೆ ಅನುದ್ದೇಶಿತವಾಗಿ ಅನ್ಯಾಯ ಎಸಗಿದರು. ಮುಂದೆ ಜನರಿಗೆ ಸತ್ಯ ಅರಿವಾಯಿತು. ದೃಢಸಂಕಲ್ಪದ ಗಂಭೀರಭಾವನೆಗಳ ಸೌಂದರ್ಯೋಪಾಸಕನಾಗಿದ್ದ ಕೀಟ್ಸನ ಶಕ್ತಿ ಭಕ್ತಿಯೆಲ್ಲವೂ ಅವನ ಕಾವ್ಯಕ್ಕೆ ಮೀಸಲಾಗಿತ್ತು. ದೊಡ್ಡ ಕವಿಗಳ ಸಾಲಿನಲ್ಲೇ ತನ್ನ ಜಾಗ ಕಾದಿರಿಸಲ್ಪಟ್ಟಿದೆಯೆಂದು ನಿರಹಂಕಾರದಿಂದ ಅವನೇ ಹೇಳಿಕೊಳ್ಳುತ್ತಿದ್ದ.
ಕೀಟ್ಸನ ಜೀವಿತಕಾಲದಲ್ಲಿ ಪ್ರಕಟಗೊಂಡ ಅವನ ಕೃತಿಗಳು 45. ಅವನ ಮರಣಾನಂತರದ ಪ್ರಕಟಗೊಂಡವು ಸುಮಾರು 63. ಈ 108 ಕೃತಿಗಳಲ್ಲಿ ಒಂದು ಪದ್ಯ ಟ್ರ್ಯಾಜಡಿ, 6 ಕಥನಕಾವ್ಯ, 9 ಪ್ರಗಾಥ, 46 ಸಾನೆಟ್ ಇವೆ. ಕೀಟ್ಸ್ ದಿಟವಾಗಿ ನಾಟಕಕಾರನಲ್ಲ, ಕಥನ ಕವಿಯೂ ಅಲ್ಲ. ನಿಜವಾಗಿ ಆತ ಭಾವಗೀತೆಯ ಕವಿ. ಕೀಟ್ಸನ ಕೃತಿಗಳಲ್ಲಿ ಎಂಡಿಮಿಯಾನ್, ಹೈಪೀರಿಯನ್, ಇಸಾಬೆಲಾ, ಸೇಂಟ್ ಅನಿಸ್ ಹಬ್ಬದ ಹಿಂದಿನ ರಾತ್ರಿ, ಲೇಮಿಯಾ, ಕರುಣೆಯಿಲ್ಲದ ನಾರಿ, ಪ್ರಗಾಥಗಳು, ಸಾನೆಟ್ಟುಗಳು, ಎದ್ದುಕಾಣುತ್ತವೆ.
ನಿಸರ್ಗವನ್ನು ಅದರ ಶಾಂತಸ್ಥಿತಿಯಲ್ಲಿ ಚಿತ್ರಿಸುವುದರಲ್ಲೂ ಆಂತರ್ಯದ ಭಾವ ಭಾವನೆಗಳಿಗೆ ಮಧುರವೂ ಗಂಭೀರವೂ ಅದ ಅಭಿವ್ಯಕ್ತಿಯನ್ನು ಹೊಂದಿಸುವುದರಲ್ಲೂ ಕೀಟ್ಸನಿಗೆ ಸಹಜ ಕೌಶಲ್ಯವಿತ್ತು. ಗ್ರೀಕರ ಭಸ್ಮಕರಂಡ, ಶರದೃತು. ಓಡ್ ಆನ್ ಎಗ್ರೀಷನ್ ಆನ್, ಓಡ್ ಟು ಆಟಮ್, ಓಡ್ ಟು ಮೆಲಾಂಕಲಿ, ಓಡ್ ಟು ಎ ನೈಟಿಂಗೇಲ್, ಓಡ್ ಟು ಪೈಕಿ, ದುಗುಡ, ಬುಲ್ ಬುಲ್ ಹಕ್ಕಿ, ಅತ್ಮ ಮೊದಲಾದವಕ್ಕೆ ಇಂಗ್ಲಿಷ್ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಕೀಟ್ಸನ ಪ್ರಗಾಥಗಳಿಂದಾಗಿ ಸಲ್ಲುವಂತಾಗಿದೆ.
ಎಲ್ಲೆಲ್ಲೂ ಮಾನವನ ಕ್ಷಣಿಕವೂ ಅನಿಶ್ಚಿತವೂ ಆತಂಕಮಯವೂ ಆದ ಬಾಳಿಗೂ ಪೂರ್ಣ ಸೌಂದರ್ಯ ಮತ್ತು ಶುದ್ದ ಆನಂದಗಳ ನಿರಂತರತ್ವಕ್ಕೂ ಇರುವ ವ್ಯತ್ಯಾಸ ಕವಿಯನ್ನು ಪದೇ ಪದೇ ಚೋದಿಸುತ್ತಿರುವುದು ಈ ಬರಹಗಳಲ್ಲಿ ಕಾಣಬರುತ್ತವೆ.
ಕವಿಯಾದವನು ಕಾವ್ಯಕ್ಕೋಸ್ಕರವೇ ಹೇಗೆ ಜೀವಿಸಬಹುದೆಂಬುದಕ್ಕೆ ಉತ್ಕೃಷ್ಟ ನಿದರ್ಶನ ಜಾನ್ ಕೀಟ್ಸ್. ತನ್ನ ಕಾಲದಲ್ಲಿ ಯೋಚನಾಪರರೆಲ್ಲರನ್ನೂ ಆಕರ್ಷಿಸಿ ಅವರ ಮನಸ್ಸು ಹೃದಯಗಳ ಮೇಲೆ ಒತ್ತಡ ಹೇರುತ್ತಿದ್ದ ರಾಜಕೀಯ ಸಾಮಾಜಿಕ ವೈಜ್ಞಾನಿಕ ಚಳವಳಿಗಳಿಂದ ಕೀಟ್ಸ್ ಸದಾ ನಿರ್ಲಿಪ್ತನಾಗಿ ದೂರವಿರುತ್ತಿದ್ದ. ಕವಿಗೆ ಅವೆಲ್ಲ ಅಪ್ರಾಸಂಗಿಕ ಅಮುಖ್ಯ ಹೊರಗು-ಎಂದೇ ಆತನ ದೃಢನಿರ್ಧಾರ. ಹಾಗಾದರೆ ಕವಿ ಯಾವುದನ್ನು ಬಗೆಯಬೇಕು. ಯಾವುದರ ಧ್ಯಾನದಲ್ಲಿ ಮಗ್ನನಾಗಿರಬೇಕು? ಇದಕ್ಕೆ ಅವನ ಉತ್ತರ ‘ಸೌಂದರ್ಯ’. ಅವನ ಪ್ರಧಾನ ತತ್ತ್ವ ಎರಡು: ಸುಂದರ ವಸ್ತುವಿನಿಂದ ಸದಾ ಸಂತಸ; ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ. ಸೌಂದರ್ಯವನ್ನು ಕಂಡುಕೊಂಡು ಅದರ ಚಿಂತನೆಯಿಂದ ಸೌಖ್ಯ ಪಡೆಯಬೇಕಾದರೆ ಮನಸ್ಸಿಗಿಂತಲೂ ಹೆಚ್ಚಾಗಿ ಜ್ಞಾನೇಂದ್ರಿಯಗಳು ಕೆಲಸ ಮಾಡಬೇಕೆಂದು ಎಂಬುದು ಅವನ ಅಭಿಮತ. ಕೀಟ್ಸ್ ಸಂವೇದನಾಪೂರಿತ ಜೀವನ ಬೇಕು, ಆಲೋಚನಾಮಯ ಜೀವನ ಬೇಡ ಎನ್ನುತ್ತಿದ್ದ. ಬರಬರುತ್ತ ಕೀಟ್ಸನ ಮನಸ್ಸು ಪ್ರಬುದ್ಧವಾಯಿತು. ತನ್ನ ಕಾವ್ಯಗಳ ದೊಡ್ಡ ಕೊರತೆ ಯಾವುದೆಂಬುದೂ ಅವನಿಗೆ ತೋಚುತ್ತ ಬಂತು. ಜೀವನದ ಇತರ ನಾನಾ ಮುಖಗಳ ಪರಿಚಯವಾದರೇ ಅದರ ಸತ್ಯಾಂಶದ ಇಣುಕುನೋಟ ದೊರೆತೀತು ಎಂದು ಅವನು ಮನಗಂಡ. ಗ್ರಂಥಜ್ಞಾನ, ಪ್ರಪಂಚಜ್ಞಾನ ಎಷ್ಟು ಲಭ್ಯವಾದರೆ ಅಷ್ಟು ಒಳ್ಳೆಯದು ; ಆದ್ದರಿಂದ ಅವನ್ನು ಸಂಪಾದಿಸಲು ಹೆಣಗತಕ್ಕದ್ದು ಎಂದು ಸಂಕಲ್ಪ ಮಾಡಿಕೊಂಡ. ಆತ ಮಿತ್ರರಿಗೂ ಸಹೋದರರಿಗೂ ಬರೆದ ಕಾಗದಗಳು ಉಳಿದುಬಂದಿದ್ದು ಉತ್ತಮ ಗದ್ಯಸಾಹಿತ್ಯವೆನಿಸಿವೆ. ಅವುಗಳಲ್ಲಿ ಮನೋದಾರ್ಢ್ಯ, ವಿವೇಕ, ವಚಕ್ಷಣೆ ಸಹಿಷ್ಣುತೆ, ಸಹಾನುಭೂತಿ, ಗಾಂಭೀರ್ಯ ಮುಂತಾದ ಗಂಡು ಗುಣಗಳು ಎದ್ದುಕಾಣುತ್ತವೆ; ಕಾವ್ಯಗಳಲ್ಲಿ ನಿಬಿಡವಾಗಿರುವ ರಾಗಾತಿರೇಕವಾಗಲಿ ಲಘುಕಲ್ಪನೆಯಾಗಲಿ ಅಲ್ಲಿ ತಲೆದೋರುವುದಿಲ್ಲ. ಕೀಟ್ಸನ ಕೆಲವು ಹೇಳಿಕೆಗಳಿಗೆ ಸಾಹಿತ್ಯ ವಿಮರ್ಶೆಯಲ್ಲಿ ಸೂತ್ರ ಸ್ಥಾನ ದೊರಕಿದೆ.
ಪ್ರಗಾಥಗಳು ಬಹು ಸ್ಪಷ್ಟವಾಗಿ ಕೀಟ್ಸನ ಪ್ರತಿಭೆಯನ್ನು ಸಾರುತ್ತವೆ. ಮಾತಿನಲ್ಲಿ ಮರೆಯಲಾಗದ ಚಿತ್ರಗಳನ್ನು ಕೆತ್ತಬಲ್ಲವನು ಕೀಟ್ಸ್. ಛಂದಸ್ಸಿನ ಮೇಲೆ, ಭಾಷೆಯ ಮೇಲೆ, ಪದಗಳ ನಾದದ ಮೇಲೆ ಆತನಿಗಿರುವ ಪ್ರಭುತ್ವವನ್ನು ಇವು ಸಾರುತ್ತವೆ. ಯೌವನ, ಚೆಲುವು, ಪ್ರೇಮ ಎಲ್ಲ ಕ್ಷಣಿಕ ಎಂಬ ಕೊರಗು ಕವಿಯ ಮನಸ್ಸನ್ನು ಕಾಡುತ್ತಿದೆ. ಬದುಕಿನ ಎಲ್ಲ ಅನುಭವಗಳಲ್ಲಿ ಅನಿವಾರ್ಯವಾದ ದ್ವಿಮುಖತೆ (ಡ್ಯುಯಾಲಿಟಿ)ಯನ್ನು ಅವನು ಗುರುತಿಸುತ್ತಾನೆ. ಉದಾಹರಣೆ, `ಓಡ್ ಆನ್ ಎ ಗ್ರೀಷನ್ ಲಿಕ್ನ್’ ನಲ್ಲಿ ಕಾಲ ಓಡುತ್ತಿದೆ, ಎಲ್ಲ ಕ್ಷಣಿಕ ಎಂಬ ನೋವಿದೆ. ಆದರೆ ಕಾಲದ ಅಸ್ತಿತ್ವದಲ್ಲಿ ಅನುಭವ ಸಾಧ್ಯ; ಅನುಭವ ಬೇಕೆಂದರೆ ಕಾಲದ ಓಟವನ್ನು ಸ್ವೀಕರಿಸಬೇಕು. ಒಂದು ವಿಶಿಷ್ಟವಾದ ಪ್ರಗಾಥ ‘ಟು ಆಟಮ್’ನಲ್ಲಿ ವಿಷಣ್ಣತೆ ಮತ್ತು ಸಂತೋಷ ಒಟ್ಟಿಗಿವೆ. ಬದುಕಿನ ಕ್ಷಣಭಂಗುರತೆ ಮತ್ತು ಅಮರತ್ವದ ನಮ್ಮ ಅಂತರ್ಬೋಧ ಇವುಗಳ ಕರ್ಷಣ ಕೀಟ್ಸನ ಕಾವ್ಯದ ವಸ್ತು. ಕೀಟ್ಸನ ಪತ್ರಗಳು ಉಳಿದು ಬಂದಿವೆ. ಕಾವ್ಯವನ್ನು ಕುರಿತು, ಷೇಕ್ಸ್ಪಿಯರ್, ಮಿಲ್ಟನ್ ಮೊದಲಾದ ಕವಿಗಳನ್ನು ಕುರಿತು ಇಲ್ಲಿ ಅಪೂರ್ವ ಹೊಳಹುಗಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿ. ಶಿವಮೂರ್ತಿ ಶಾಸ್ತ್ರೀ

Thu Feb 24 , 2022
ಬಿ. ಶಿವಮೂರ್ತಿ ಶಾಸ್ತ್ರಿಗಳು ಮಹಾನ್ ವಿದ್ವಾಂಸರಾಗಿ, ಕರ್ನಾಟಕ ಏಕೀಕರಣಕ್ಕೆ ದುಡಿದವರಾಗಿ, ಕೀರ್ತನಕೇಸರಿ ಬಿರುದಾಂಕಿತರಾಗಿ ನಾಡಿನಲ್ಲೆಲ್ಲಾ ಸಂಚರಿಸಿದವರಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪರಿಷತ್ತಿನ ಚಟುವಟಿಕೆಗಳಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದವರಾಗಿ ಸ್ಮರಣೀಯರಾಗಿದ್ದಾರೆ. ಶಿವಮೂರ್ತಿ ಶಾಸ್ತ್ರಿಗಳು 1903ರ ಫೆಬ್ರವರಿ 23ರಂದು ತುಮಕೂರಿನಲ್ಲಿ ಜನಿಸಿದರು. ತಂದೆ ಬಸವಯ್ಯಸ್ವಾಮಿ. ತಾಯಿ ನೀಲಮ್ಮ. ಶಾಸ್ತ್ರಿಗಳ ವಿದ್ಯಾಭ್ಯಾಸ ಅಪ್ಪರ್ ಸೆಕೆಂಡರಿಯವರೆಗೆ ತುಮಕೂರಿನಲ್ಲಿ ನಡೆಯಿತು. ಮುಂದೆ ಕರಿಬಸವ ಶಾಸ್ತ್ರಿಗಳಲ್ಲಿ ಸಂಸ್ಕೃತ ಮತ್ತು ಕನ್ನಡ ಅಭ್ಯಾಸ ಮಾಡಿದರು. ಜೊತೆಗೆ […]

Advertisement

Wordpress Social Share Plugin powered by Ultimatelysocial