ಸ್ಟೀವ್ ಜಾಬ್ಸ್

ಸ್ಟೀವ್ ಜಾಬ್ಸ್ ನೆನೆದಾಗಲೆಲ್ಲಾ ಎಂತದ್ದೋ ಹೃದ್ಭಾವ ಮೂಡುತ್ತದೆ. ಅವ ಮಾಡಿದ್ದೆಲ್ಲಾ ಹೊಸ ಹೊಸದು. ಆತ ಎಲ್ಲೋ ಮಾಡಿದ್ದ ಭಾಷಣ ನೆನೆದಾಗ ಮತ್ತಷ್ಟು ಹೃದಯ ತುಂಬುತ್ತದೆ. ಆ ಭಾಷಣದಲ್ಲಿ ಆತ ಹೇಳಿದ್ದು ಚೆನ್ನಾಗಿ ನೆನಪಿರೋದು ಇಷ್ಟು. ಆತ ಕಾಲೇಜು ಅರ್ಧಕ್ಕೆ ಬಿಟ್ಟ. ಆದ್ರೂ ಏನನ್ನಾದರೂ ಮಾಡ್ಬೇಕು ಅಂತ ತಲೇಲಿ ಕೊರೀತಾನೇ ಇರ್ತಿತ್ತು. ಕೈಯಲ್ಲಿ ದುಡ್ಡಿಲ್ಲ, ಊಟಕ್ಕೆ ಏನು ಮಾಡೋದು? ಅವನಿಗೆ ಗೊತ್ತಾಯ್ತು. ಅವನಿರೋ ಜಾಗದಿಂದ ಒಂದೈದು ಮೈಲಿ ನಡೆದರೆ ಅಲ್ಲಿದ್ದ ಇಸ್ಕಾನ್ ದೇವಸ್ಥಾನದಲ್ಲಿ ಊಟ ಹಾಕ್ತಾರೆ ಅಂತ. ಒಂದಷ್ಟು ದಿವಸ ದಿನಾಲೂ ನಡೆದುಕೊಂಡು ಹೋಗ್ತಾ ಇದ್ದ. ಅದಕ್ಕೇ ಇರ್ಬೇಕು ಅವನಿಗೆ ಭಾರತದ ಆಧ್ಯಾತ್ಮ ಕಂಡ್ರೆ ಇಷ್ಟ!
ಒಮ್ಮೆ ಅವನ ಸ್ನೇಹಿತ ಒಬ್ಬನ್ನ ಕರ್ಕೊಂಡು ಭಾರತದಲ್ಲಿದ್ದ ನೀಮ್ ಕರೋಲಿ ಬಾಬಾ ಎಂಬ ಸಂತರನ್ನು ಹುಡುಕಿಕೊಂಡು ಬಂದ. ಇಲ್ಲಿ ಬಂದಾಗ ಗೊತ್ತಾಯ್ತು ಅವರು ಹೋಗಿಬಿಟ್ರು ಅಂತ. ಪುಣ್ಯ, ಒಬ್ಬ ಅಥವಾ ಇಬ್ಬರು ವಿದೇಶಿ ಸ್ವಾಮಿಗಳು ನಮ್ಮ ದೇಶಕ್ಕೆ ಕಡಿಮೆ ಆದ್ರು! ವಿಶ್ವಕ್ಕೆ ಹೊಸ ಹೊಸ ನಮೂನೆಯ ಮ್ಯಾಕು, ಐ-ಮ್ಯಾಕು, ಐಪಾಡು, ಐ-ಫೋನು, ಐಪ್ಯಾಡು ಹೀಗೆ ವಿವಿಧ ಹಾಡುಗಳು, ಪಾಡುಗಳು, ಪ್ಯಾಡುಗಳು, ಫೋನುಗಳು ಜನರ ಹಣೆಯಲ್ಲಿ ಬರೆದಿರೋದನ್ನ ತಪ್ಸೋದು ಹ್ಯಾಗೆ!
ಅದೆಲ್ಲಾ ಇರ್ಲಿ. ಅವನು ಭಾಷಣದಲ್ಲಿ ಹೇಳಿದ ಒಂದು ಮಾತು ನನಗೆ ತುಂಬಾ ತುಂಬಾ ಇಷ್ಟ ಆಯ್ತು. “ಮೊದಲು ನಿನ್ನ ಪ್ರೀತಿ ಏನು, ನಿನಗೆ ಏನು ಇಷ್ಟ, ಅದನ್ನು ಮೊದಲು ಕಂಡುಕೋ”. ನನಗೊತ್ತು. ನಮ್ಮ ಇಂದಿನ ಕಾಲದಲ್ಲಿ ನಮ್ಮ ಹುಡುಗರು ಹುಡುಗೀರೆಲ್ಲಾ ಯಾರು ಯಾರನ್ನೋ ಇಷ್ಟ ಪಡ್ತಾರೆ, ಸಿಕ್ಕಿದ ವಸ್ತೂನೆಲ್ಲಾ ಇಷ್ಟ ಪಡ್ತಾರೆ. ನಮ್ಮ ಕಾಲದವರೇನ್ ಕಮ್ಮಿ ಇಲ್ಲ ಅನ್ನಿ. ಆದ್ರೆ ಸ್ಟೀವ್ ಜಾಬ್ಸ್ ಹೇಳಿದ್ದು ಅದನ್ನಲ್ಲ. “ನಿಮಗೆ ಏನು ಕೆಲಸ ಮಾಡಲಿಕ್ಕೆ ಇಷ್ಟಾನೋ ಅದನ್ನು ಕಂಡ್ಕೊಂಡು, ಮೊದಲು ಅದನ್ನು ಮಾಡಿ” ಅಂತ. ಇದನ್ನೇ ಐನ್ ಸ್ಟೀನ್ ಸಾಹೇಬ್ರು ಕೂಡಾ ಹೇಳಿದ್ರು. “Don’t tie yourself to a person or a thing, tie yourself to a purpose” ಅಂತ. ಸ್ಟೀವ್ ಜಾಬ್ಸ್ ಹೇಳಿದ ಹಾಗೆ ನಾವೆಲ್ಲಾ ಕೇಳಿದ್ದಿದ್ರೆ ಅವನು ಮಾಡಿದ ಆ ಪಾಡು, ಫೋನು, ಪ್ಯಾಡು, ಮ್ಯಾಕುಗಳನ್ನೆಲ್ಲಾ ಕೊಂಡುಕೋಬೇಕು ಅಂತ ಆಸೆ ಪಡೋವ್ರು ತಾನೇ ಯಾರಿರ್ತಾ ಇದ್ರು. ಸ್ಟೀವ್ ಜಾಬ್ಸ್, ಬಿಲ್ ಗೇಟ್ಸ್ ಅಂತಹವರು ಸಕ್ಸಸ್ ಆಗೋಕೆ ಹೇಗಾಗ್ತಾ ಇತ್ತು! ನಮ್ಮಂತಹ ಹಿಂದಿನ ಸಾಲಿನ ಹುಡುಗರಿಂದಲೇ ಅಂತಹ ಮೇಧಾವಿಗಳು ಅಲ್ವ?.
ಇಷ್ಟು ಮಾತ್ರ ಸತ್ಯ. ಸ್ಟೀವ್ ಜಾಬ್ಸ್ ಮಾತ್ರ ಅವನ ಕೈಯಲ್ಲಿರೋ ‘job’ನ್ನ ನಮ್ಮ ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ ಹೇಳಿದ ಹಾಗೆ ಪ್ರೀತಿಯಿಂದ ಶ್ರದ್ಧೆಯಿಂದ ಮಾಡ್ತಾ ಬಂದ. ಹೆಚ್ಚಿಗೆ ಕೃಷ್ಣ ಲೀಲೆ ಆಡ್ಲಿಲ್ಲ. ಆದ್ರೂ ಈ ಬುದ್ಧಿವಂತರಿದ್ದಾರಲ್ಲ ಅವರದ್ದು ಸ್ವಲ್ಪ ಕಷ್ಟದ ಸಹವಾಸ. ಅವರು ಚೆನ್ನಾಗಿದ್ರೆ ಅವರ ಜೊತೆಯವರು ಚೆನ್ನಾಗಿರೋಲ್ಲ, ಜೊತೆಯವರು ಚೆನ್ನಾಗಿದ್ರೆ ಇವರು ಚೆನ್ನಾಗಿರೋಲ್ಲ. ಆಪಲ್ ಸಂಸ್ಥೆಯಲ್ಲಿ ಸ್ಟೀವ್ ಜಾಬ್ಸ್ ಯಾರನ್ನು ಕರೆತಂದಿದ್ನೋ ಅವನೇ ಇವನನ್ನು ಒಂದು ದಿನ ಮನೆಗೆ ಕಳಿಸಿಬಿಟ್ಟ. ಸ್ಟೀವ್ ‘ನೆಕ್ಸ್ಟ್’ ಅಂತ ಮತ್ತೊಂದು ಸಂಸ್ಥೆ ಪ್ರಾರಂಭ ಮಾಡ್ದ, ಅದು ಬುದ್ಧಿವಂತಿಕೆಯಿಂದ ತುಂಬಿ ತುಳುಕುತ್ತಿದ್ರೂ ವ್ಯವಹಾರದಲ್ಲಿ ಮಾತ್ರ ಕುಂಟು. ಆತ ಕಷ್ಟದಲ್ಲಿದ್ದಾಗ ಆತನ ಸಾಮರ್ಥ್ಯವನ್ನರಿತು ಆತನಿಗೆ ಎಲ್ಲ ರೀತಿಯಲ್ಲೂ ಬೆಂಗಾವಲಾದವನು ಮತ್ತೊಬ್ಬ ಪ್ರತಿಭಾವಂತ ಬಿಲ್ ಗೇಟ್ಸ್. ಮುಂದೆ ಸ್ಟೀವ್ ಜಾಬ್ಸ್ ‘ಪಿಕ್ಸರ್’ ಅಂತ ಆನಿಮೇಶನ್ ಸಂಸ್ಥೆ ಪ್ರಾರಂಭ ಮಾಡ್ದ. ಅದರಿಂದ ವಾಲ್ಟ್ ಡಿಸ್ನಿಗೆ ಅದೃಷ್ಟ ಖುಲಾಯಿಸ್ತು. ಸ್ಟೀವ್ ಜಾಬ್ಸ್ ಗೆ ಕೂಡಾ. ಅಷ್ಟರಲ್ಲೇ ಆಪಲ್ ಸಂಸ್ಥೆ ಪುನಃ ಸ್ಟೀವ್ ಜಾಬ್ಸ್ ಕಾಲಿಗೆ ಬಿತ್ತು. ನಾನು ನೀನು ಅಕ್ಕಪಕ್ಕದ ‘ನೆಕ್ಸ್ಟ್’ ಆಗಿರೋದು ಬೇಡ. ಒಂದೇ ಆಗೋಣ ಬಾ ಅಂತ, ಅವನನ್ನೇ ಮುಖ್ಯಸ್ಥ ಅಂತ ಮಾಡ್ತು. ಒಂದಾದ ಮೇಲೆ ಒಂದು ಯಶಸ್ಸೋ ಯಶಸ್ಸು. ನಮ್ಮ ಸ್ಟೀವ್ ಜಾಬ್ಸನಿಗೆ ಡಿಮಾಂಡಪ್ಪೋ ಡಿಮಾಂಡು.
ಹಾಗೆ ನೋಡಿದ್ರೆ ನಾವು ಉಪಯೋಗಿಸ್ತಾ ಇರೋ ಸಾನ್ಸ್ ಸರೀಸ್ ಅಂತಹ ಫಾಂಟ್ಸು, ಐಕಾನ್ಸು, ಮೌಸು ಇತ್ಯಾದಿಗಳನ್ನೆಲ್ಲಾ ಮೊದಲು ಮಾಡಿದ್ದೇ ಸ್ಟೀವ್ ಜಾಬ್ಸ್. ಆತ ಕಂಡು ಹಿಡಿದ ವಸ್ತುಗಳನ್ನೆಲ್ಲಾ ಹೆಮ್ಮೆಯಿಂದ ಕೊಂಡುಕೊಳ್ಳುವವರಿದ್ದಾರೆ. ಇನ್ನೊಂದು ಕಡೆ ಕೆಲವರು ಇದೇನಪ್ಪ ರಾಮಾಯಣ ಅಂತ ಹೇಳುವವರೂ ಇದ್ದಾರೆ. ಅದೇನೇ ಇರಲಿ ಅವುಗಳೆಲ್ಲಾ ತಂತ್ರಜ್ಞಾನದ ವಿಸ್ಮಯಕಾರಕ ದೃಷ್ಟಿಯಿಂದ ವಿಶಿಷ್ಟ ಚಿಂತನೆಗಳು ಅನ್ನೋದ್ರಲ್ಲಿ ಯಾವುದೇ ಎರಡನೆಯ ಮಾತಿಲ್ಲ. ಉಳಿದವರು ಅದಕ್ಕಿಂತ ಹೆಚ್ಚು ಕಡಿಮೆ ವಿವಿಧ ಶಕ್ತಿ ಸಾಮರ್ಥ್ಯಗಳಿಂದ ಕೂಡಿದ ವಸ್ತು ವಿನ್ಯಾಸಗಳನ್ನು ಮಾಡಿದ್ದರೂ ಅವೆಲ್ಲಾ ಸ್ಟೀವ್ ಜಾಬ್ಸ್ ಮಾಡಿದಂತಹ ಪ್ರಾಥಮಿಕ ಸೃಜನೆಗಳಲ್ಲ. ಆತನ ಸೋಲಿನ ಬಗ್ಗೆ ಹಲವರು ಖುಷಿ ಪಟ್ಟಿದ್ರು, ಅವನು ಲೋಕ ತ್ಯಜಿಸಿದ್ದು ಇತ್ತೀಚಿನ ವರ್ಷದಲ್ಲಿ. ಆದರೆ ಅವನು ಬದುಕಿರುವಾಗಲೇ ಹೋಗಿಬಿಟ್ಟ ಅಂತ ಚರಮ ಗೀತೆ ಕೂಡಾ ಬರೆದವರು ಇದ್ರು, ಆದರೆ ಆತನ ನಗುಮುಖವನ್ನ ಸೃಜನಶೀಲ ಹೃದಯವನ್ನ ಯಾರೂ ಸ್ಖಲಿಸಲಿಕ್ಕೆ ಸಾಧ್ಯವಾಗಲಿಲ್ಲ. ಕಂಪ್ಯೂಟರ್ರು, ಮ್ಯೂಸಿಕ್ಕು, ಸಿನಿಮಾ ಮತ್ತು ಮೊಬೈಲು ಈ ನಾಲ್ಕೂ ಕ್ಷೇತ್ರದಲ್ಲಿ ಈತ ಮಾಡಿದ ಸೃಜನೆ ಅನನ್ಯವಾದದ್ದು.
ವ್ಯಾಪಾರೀ ಯಶಸ್ಸಿನ ಆಧಾರದ ಮೇಲೆ ಈತನ ಸೃಜನೆಗೆ ಹತ್ತಿರ ಹತ್ತಿರದಲ್ಲಿ ಗೋಚರಿಸುವ ಬಿಲ್ ಗೇಟ್ಸ್ ಹೇಳುತ್ತಾನೆ, “ನಾನು ಕಂಡವರಲ್ಲಿ ಸ್ಟೀವ್ ಜಾಬ್ಸ್ ಸರ್ವ ಶ್ರೇಷ್ಠ” ಅಂತ. ಅದನ್ನೇ ವಿಶ್ವದ ವ್ಯಾಪಾರೀ ವಲಯದಲ್ಲಿ ಶ್ರೇಷ್ಠ ವ್ಯಾಖ್ಯಾನಕ ಪತ್ರಿಕೆ ಎನಿಸಿರುವ ‘ಫಾರ್ಚೂನ್’ ಕೂಡಾ ಹೇಳಿತು, ಕಳೆದ ದಶಕದ ಅತ್ಯಂತ ಶ್ರೇಷ್ಠ ಸೃಜನಕಾರ ಸ್ಟೀವ್ ಜಾಬ್ಸ್ ಅಂತ.
ನಾವು ಎಲ್ಲಾ ಧರ್ಮದ ತಿರುಳಿನ ಬಗ್ಗೆ ಹೇಳ್ತೇವೆ. ಅದನ್ನೆಲ್ಲಾ ಆಚರಣೆ, ಅನುಭಾವದಲ್ಲಿ ಅಳವಡಿಸಿಕೊಳ್ಳೋದು ಮಾತ್ರ ಅತ್ಯಲ್ಪ. ತನ್ನನ್ನು ಬೌದ್ಧ ಅನುಯಾಯಿ ಎಂದು ಭಾವಿಸಿಕೊಂಡಿದ್ದ ಸ್ಟೀವ್ ಜಾಬ್ಸ್ ಕೊನೆಯವರೆಗೆ ತನ್ನ ಅಂತರಾಳದ ಸೃಜನಶೀಲತೆಯನ್ನು ಹಸುರಾಗಿಯೇ ಉಳಿಸಿಕೊಂಡಿದ್ದ. ಆತ ತನ್ನ ಕ್ರಿಯೆಯಲ್ಲಿ ಸಂತೋಷ ಕಂಡ. ತನ್ನ ಕರ್ತೃತ್ವದಲ್ಲಿ ಲೋಕಕ್ಕೇ ವಿಸ್ಮಯ ಹುಟ್ಟಿಸಿದ. ಆತನ ಸಂಸ್ಥೆ ನಿರ್ಮಿಸಿದ ಉತ್ಪನ್ನಗಳು ಜನರಿಗೆ ಎಷ್ಟು ತಪ್ತತೆ ನೀಡಿದೆಯೋ ಗೊತ್ತಿಲ್ಲ. ಆದರೆ ಸ್ಟೀವ್ ಜಾಬ್ಸ್ ತನ್ನ ಸೃಜನೆಯ ಬದುಕಿನಿಂದ ಖಂಡಿತ ತೃಪ್ತ ವ್ಯಕ್ತಿಯಾಗಿದ್ದ ಎಂದು ನನಗನ್ನಿಸುತ್ತದೆ. ಏಕೆಂದರೆ ತೃಪ್ತ ಹೃದಯ ಮಾತ್ರ ಸೃಜಿಸಬಲ್ಲದು. ಅದು ಎಲ್ಲ ಗೆಲುವು ಸೋಲುಗಳನ್ನೂ ಮೀರಿದ್ದು. ಆತ ಹೆಚ್ಚು ಬದುಕಲಿಲ್ಲ. ಆದರೆ ಬದುಕಿದ್ದ ದಿನಗಳಲ್ಲಿ ತಾನು ಹೇಗೆ ಸ್ಪರ್ಧೆಗಿಂತಲೂ ಮಿಗಿಲಾದವ ಎಂದು ಜಗತ್ತಿಗೇ ತೋರಿಸಿಕೊಟ್ಟ. ಒಮ್ಮೆ ಜನ ಹೇಳ್ತಾ ಇದ್ರು. ಅದ್ಯಾವುದೋ ಸಂಸ್ಥೆಯ ಮೊಬೈಲ್ ಇದಕ್ಕಿಂತ ಉತ್ತಮ. ಇನ್ನೊಂದು ಸಂಸ್ಥೆಯ ಮ್ಯೂಸಿಕ್ ತಂತ್ರಜ್ಞಾನ ಮಿಗಿಲಾದದ್ದು. ಮಗದೊಂದು ಸಂಸ್ಥೆಯ ಆಪರೇಟಿಂಗ್ ಸಿಸ್ಟಂ ಬಿಟ್ರೆ ಇಲ್ಲ. ಆ ಲ್ಯಾಪ್ ಟಾಪ್ ಬಿಟ್ರೆ ಇಲ್ಲ. ಅದರಲ್ಲಿರೋ ಕ್ಯಾಮರಾ ಉತ್ತಮವಾದದ್ದು. ಇನ್ನೊಂದರಲ್ಲಿ ‘ತ್ರೀ’ಜಿ ಚೆನ್ನಾಗಿದೆ. ಹೀಗೆ… ಹೀಗೆ. ಇಂದೂ ಆ ವ್ಯಾಪಾರೀ ಸಂಸ್ಥೆಗಳ ಜನ ವ್ಯಾಪಾರ ಮಾಡ್ತಾ ಇದ್ದಾರೆ. ಜನ ಅಲ್ಲಲ್ಲಿ ಕೊಂಡುಕೊಳ್ತಾನೂ ಇದ್ದಾರೆ. ಆದರೆ ‘ಆಪಲ್’ ಎಂಬ ಸೃಷ್ಟಿ ಇವೆಲ್ಲಾ ಹೋಲಿಕೆಗಳಿಗೂ ಮಿಗಿಲಾದದ್ದು. ಅದು ಯಾಕೆ ಅಂತ ಒಬ್ಬ ವಿಖ್ಯಾತ ವಿದ್ವಾಂಸ ಒಂದು ಸೆಮಿನಾರಿನಲ್ಲಿ ಹೇಳ್ತಾ ಇದ್ರು, “ಯಾಕೆಂದರೆ, ಅವರು ನಾವೇಕೆ ನಮ್ಮ ಕೆಲಸವನ್ನು ಮಾಡ್ತಾ ಇದ್ದೇವೆ ಎಂಬ ಪ್ರಶ್ನೆಯನ್ನು ಹೃದಯಪೂರ್ವಕವಾಗಿ ಉತ್ತರಿಸಿಕೊಂಡರು” ಅಂತ.
ನಿಜ ಸ್ಟೀವ್ ಜಾಬ್ಸ್ ಅವರಿಗೆ ತಾನು ಏನು ಮಾಡ್ತೀದ್ದೇನೆ, ಯಾಕೆ ಮಾಡ್ತಿದ್ದೇನೆ, ನಾನು ಮಾಡಿದ್ದನ್ನ ಯಾಕೆ ಆದಷ್ಟು ಬೇಗ ಮುಗಿಸಬೇಕು, ಇವೆಲ್ಲದರ ಬಗ್ಗೆ ಅರಿವಿತ್ತು. ಎಲ್ಲಾ ಮಾಡಿದ ಮೇಲೆ ‘ನನ್ನ ಜಾಬ್ ಮುಗೀತು ನನ್ನ ಬದುಕು ಸಂಪೂರ್ಣ’ ಎಂಬ ನಗುಮುಖದಿಂದ ಈ ಲೋಕವನ್ನು ಬಿಟ್ಟು ಹೋದರು. ನಮ್ಮ ಜೊತೆ ಇರೋದು ಆತನ ಸಾಧನೆಯನ್ನು ಸ್ಮರಿಸುವಂತ ಹುಟ್ಟಿದ ಹಬ್ಬ ಮಾತ್ರ. ಆತ ಮೂಡಿಸಿದ ಕೆಲವೊಂದು ವಸ್ತುಗಳು ಇನ್ನು ಶೋಕೇಸಿನಲ್ಲಿ ಕಾದಿರಲಾರೆ ಎಂದು ಒಂದಾದ ಮೇಲೆ ಒಂದು ನಿಧಾನವಾಗಿ ನಮ್ಮಗಳ ಮನೆ ಸೇರುತ್ತಿವೆ. ಆ ವಸ್ತುಗಳನ್ನು ಉಪಯೋಗಿಸುವಾಗಲೆಲ್ಲಾ ಅವುಗಳ ಅಂತರಾತ್ಮದಲ್ಲೆಲ್ಲೋ ಸ್ಟೀವ್ ಜಾಬ್ಸನ ಪ್ರೀತಿ, ಶ್ರಮ ಅವೆಲ್ಲಾ ಸ್ಪರ್ಶಿಸಿದ ಮುದ ನಮ್ಮ ಹೃದಯವನ್ನು ತುಂಬುತ್ತಿರುತ್ತದೆ. ಆ ಸೃಜಿಸುವ ಶಕ್ತಿ ಮಾತ್ರ ಕೈಗೆಟುಕದಂತಿದೆ. ಆ ಸೃಜನ ಶಕ್ತಿಗೊಂದು ಪ್ರೀತಿಯ ನೆನಪಿನ ಆಹ್ವಾನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಟೀವ್ ಜಾಬ್ಸ್

Thu Feb 24 , 2022
ವಿ. ಟಿ. ಎಸ್. ರಾವ್ ಕಲಾಸಾಧಕರಾಗಿ ಹೆಸರು. ವಿ. ಟಿ. ಎಸ್. ರಾವ್ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ 1935ರ ಫೆಬ್ರವರಿ 24ರಂದು ಜನಿಸಿದರು. ತಂದೆ ತಿಮ್ಮರಸು. ತಾಯಿ ಗೌರಮ್ಮ. ರಾವ್ ಮೈಸೂರಲ್ಲಿ ಓದಿದರು. ಶಾಲಾ ದಿನಾಚರಣೆಯ ಸಂದರ್ಭದಲ್ಲಿ ರಚಿಸಿದ ವೀಣಾಪಾಣಿ ಚಿತ್ರಕ್ಕೆ ಅಮೆರಿಕದ ರೆಡ್‌ಕ್ರಾಸ್ ಸೊಸೈಟಿಯ ರಾಲ್ಫ್‌ಬುಂಜೆ ಯವರಿಂದ ಬಹುಮಾನ ಸ್ವೀಕರಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವಿ. ಟಿ. ಎಸ್. […]

Advertisement

Wordpress Social Share Plugin powered by Ultimatelysocial