ಎಂ. ಅಕಬರ ಅಲಿ

ಎಂ. ಅಕಬರ ಅಲಿ
ಡಾ. ಎಂ. ಅಕಬರ ಅಲಿ ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರು.
ಅಕಬರ ಅಲಿ 1925ರ ಮಾರ್ಚ್ 3ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಉಳ್ಳೇಗಡ್ಡಿ ಖಾನಾಪುರದಲ್ಲಿ ಜನಿಸಿದರು. ತಂದೆ ಅಪ್ಪಾ ಸಾಹೇಬರು. ತಾಯಿ ಅಮಿನಬಿ.
ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಊರಿನಲ್ಲೇ ಉರ್ದೂ ಭಾಷೆಯಲ್ಲಿ ಪಡೆದ ಅಕಬರ ಅಲಿ ಅವರು, ಐದನೆಯ ತರಗತಿಯಿಂದ ಕನ್ನಡ ಭಾಷೆಯನ್ನು ಕಲಿಯಲು ಮೊದಲು ಮಾಡಿದರು. ಮುಂದೆ ಅವರು ಬೆಳಗಾವಿಯ ಜಿ. ಎ. ಹೈಸ್ಕೂಲು ಸೇರಿದಾಗ, ಅವರಿಗೆ ಡಿ. ಎಸ್. ಕರ್ಕಿ ಹಾಗೂ ಡಿ. ಎಸ್. ಇಂಚಲರು ಗುರುಗಳಾಗಿದ್ದರು. ಈ ಮಹನೀಯರು, ಬಾಲಕ ಅಕಬರ ಅಲಿ ಅವರು ಬರೆದ ಕವಿತೆಯನ್ನು ಓದಿ ಪ್ರೋತ್ಸಾಹಿಸಿದರಲ್ಲದೆ, ಇವರ ಸಂಪಾದಕತ್ವದಲ್ಲೇ ಕೈ ಬರಹದ ಪತ್ರಿಕೆ ಹೊರತರುವ ವ್ಯವಸ್ಥೆ ಮಾಡಿದರು. ಬಸವರಾಜ ಕಟ್ಟೀಮನಿಯವರು ಇವರು ಬರೆದ ಕವಿತೆಗಳನ್ನು ತಾವು ಪ್ರಕಟಿಸುತ್ತಿದ್ದ ‘ಉಷಾ’ ಮಾಸಪತ್ರಿಕೆಯಲ್ಲಿ ಪ್ರಕಟಿಸಿ ಆತ್ಮವಿಶ್ವಾಸ ಹುಟ್ಟುವಂತೆ ಮಾಡಿದರು.
ಅಲಿ ಅವರು ಬೆಳಗಾವಿಯಲ್ಲಿದ್ದಾಗ, ಈಶ್ವರ ಸಣಕಲ್ಲರು, ಪಾಟೀಲಪುಟ್ಟಪ್ಪ, ಕೋ. ಚನ್ನಬಸಪ್ಪ, ಹಿರೇಮಲ್ಲೂರು ಈಶ್ವರನ್ ಇವರುಗಳು ಸೇರಿ ಪ್ರಾರಂಭಿಸಿದ್ದ ‘ಕಿರಿಯರ ಬಳಗ’ ಸಾಹಿತ್ಯ ಸಂಸ್ಥೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕನ್ನಡ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಓದಿನಲ್ಲಿ ನಿರಂತರವಾಗಿ ತಮ್ಮ ಆಸಕ್ತಿಯನ್ನು ಕಾಯ್ದುಕೊಂಡ ಅಕಬರ ಅಲಿ ಅವರು 1949ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಎ. ಆನರ್ಸ್ ಪದವಿಯನ್ನು ಪಡೆದು ತಾವು ಓದಿದ್ದ ಹೈಸ್ಕೂಲಿನಲ್ಲಿಯೇ ಶಿಕ್ಷಕರಾದರು. ಮುಂದೆ 1960ರಲ್ಲಿ ಪುಣೆಯ ವಿಲ್ಲಿಂಗ್ಡನ್ ಕಾಲೇಜಿನಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಅವರು ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ, ಕ್ರಮೇಣದಲ್ಲಿ ಅದರ ಮುಖ್ಯಸ್ಥರಾಗಿಯೂ ದುಡಿದರು. ಈ ಹುದ್ದೆಯಲ್ಲಿ ಹದಿನಾಲ್ಕು ವರ್ಷಗಳ ಸೇವೆಯ ನಂತರ 1975ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿ ಅಲ್ಲೇ ನಿವೃತ್ತರಾದರು. ಹೀಗೆ 35 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಪ್ರೌಢಶಾಲಾ ಮಟ್ಟದಿಂದ ಸ್ನಾತಕೋತ್ತರ ತರಗತಿಯವರೆಗೂ ಬೋಧನ ವೃತ್ತಿಯಲ್ಲಿ ಕಾರ್ಯನಿರತರಾಗಿದ್ದರು. ಬೋಧನೆಯ ಜೊತೆಗೆ ಅಧ್ಯಯನದ ಕೆಲಸವನ್ನೂ ನಡೆಸಿ 1983ರಲ್ಲಿ ‘ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ’ ಎಂಬ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಪಡೆದರು.
1951ರಲ್ಲಿ ಮುಂಬಯಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ವಿಮರ್ಶಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವಿ.ಕೃ. ಗೋಕಾಕರು ಬೆಳಗಾವಿಗೆ ಬಂದಿದ್ದ ಸಂದರ್ಭದಲ್ಲಿ, ಅವರ ಸನ್ಮಾನಾರ್ಥ ಟಿಳಕವಾಡಿಯಲ್ಲೊಂದು ಸಭೆ ಏರ್ಪಟ್ಟಿತ್ತು. ಆ ಸಭೆಯಲ್ಲಿ ಗೋಕಾಕರು ಮಾತನಾಡುತ್ತಾ ಅಮೆರಿಕದಲ್ಲಿರುವ ಇಂಗ್ಲಿಷ್‌ ಮಾದರಿಯ ಚುಟುಕು ಸಾಹಿತ್ಯ ಸೃಷ್ಟಿಗೆ ಕರೆಕೊಟ್ಟಿದ್ದರು. ಇದರಿಂದ ಪ್ರೇರಿತರಾದ ಅಕಬರ ಅಲಿ ಅವರು ಚುಟುಕು ಕವನಗಳನ್ನು ಮತ್ತು ಅಷ್ಟಪದಿಯನ್ನು ಬರೆಯಲು ಪ್ರಾರಂಭಿಸಿದರು.. ಹೀಗೆ ಬರೆದ ಅಷ್ಟಪದಿ ಕವಿತೆಗಳು ಪತ್ರಿಕೆಗಳಲ್ಲಿ ಬೆಳಕು ಕಂಡ ನಂತರ, 1951ರಲ್ಲಿ ‘ವಿಷಸಿಂಧು’ ಎಂಬ ಸಂಕಲನವನ್ನು ಹೊರತಂದರು. 1952ರಲ್ಲಿ ಮಿತ್ರರಾದ ಶ್ರೀನಿವಾಸ ತೋಫಖಾನೆ ಅವರೊಡನೆ ‘ಅನ್ನ’ ಎಂಬ ಚುಟುಕು ಕವನ ಸಂಕಲನವನ್ನು ಹೊರತಂದರು.
ಅಕಬರ ಅಲಿ ಅವರು ನವೋದಯ ಕಾವ್ಯ ಕಾಲದಲ್ಲಿ ಕವಿತೆಯನ್ನು ರಚಿಸಲು ಪ್ರಾರಂಭಿಸಿದರೂ, ಯಾವ ಪ್ರಭಾವಕ್ಕೂ ಒಳಗಾಗದೆ ತಮ್ಮದೇ ಆದ ಶೈಲಿಯಲ್ಲಿ ಕಾವ್ಯರಚಿಸುತ್ತಾ ಬಂದರು. ನಾಡಿನ ಪತ್ರಿಕೆಗಳಲ್ಲೆಲ್ಲಾ ಇವರ ಕವನ, ಚುಟುಕುಗಳು ಪ್ರಕಟಗೊಂಡಿವೆ. ಹೀಗೆ ಬರೆದ ಕವನಗಳು ನವಚೇತನ, ಸುಮನ ಸೌರಭ, ಗಂಧಕೇಶರ, ಆಯ್ದ ಕವನ ಸಂಕಲನ – ತಮಸಾನದಿ ಎಡಬಲದಿ, ಅಕಬರ ಅಲಿಯವರ ಚುಟುಕುಗಳು, ಕಸಿಗುಲಾಬಿಕಥನ, ಬೆಳಕಿನ ಆರಾಧನೆ ಮುಂತಾದ ಕವನ ಸಂಕಲನಗಳಾಗಿ ಹೊರಹೊಮ್ಮಿವೆ. ಅಲಿಯವರ ಸಮಗ್ರ ಕವಿತೆಗಳು 2006ರಲ್ಲಿ ಪ್ರಕಟಗೊಂಡಿದೆ.
ಕಾವ್ಯದಷ್ಟೆ ಗದ್ಯ ಪ್ರಕಾರವನ್ನೂ ಪ್ರೀತಿಸುತ್ತಿದ್ದ ಅಲಿಯವರು ‘ಪ್ರಬಂಧ ಪರಿಚಯ’, ‘ನಿರೀಕ್ಷೆಯಲ್ಲಿ’ ಎಂಬ ಕಾದಂಬರಿಗಳು ಹಾಗೂ ಎರಡು ವಿಮರ್ಶಾ ಕೃತಿಗಳಾದ ‘ಸಾಹಿತ್ಯ ವಿವೇಚನೆ’ ಮತ್ತು ‘ಕನ್ನಡ ಕಾವ್ಯಾಧ್ಯಯನ’ಗಳನ್ನು ಪ್ರಕಟಿಸಿದ್ದರು. ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಪ್ರವರ್ತಕ ಸಹಕಾರಿ ಸಂಘದ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿ ಜಿಲ್ಲಾ ಸಾಹಿತ್ಯ ಸಂಘಟನೆ ಮುಂತಾದವುಗಳಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದ ಅಲಿಯವರು ರಾಜ್ಯ ಪಠ್ಯ ಪುಸ್ತಕ ನಿರ್ದೇಶನಾಲಯದ ಕಿರಿಯರ ವಿಶ್ವಕೋಶವಾದ ಜ್ಞಾನಗಂಗೋತ್ರಿಯ ಎಂಟನೆಯ ಸಂಪುಟದ ಸಂಪಾದಕ ಮಂಡಲಿಯ ಸದಸ್ಯರಾಗಿ, 1975ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ರಾಷ್ಟ್ರೀಯ ಕವಿಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ, 1985ರಲ್ಲಿ ಬೀದರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ, ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ (1981-83), ರಾಜ್ಯ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿ (1986-92) ಮಂಡ್ಯದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಉದ್ಘಾಟಕರಾಗಿ (1994), ಮೈಸೂರಿನಲ್ಲಿ ನಡೆದ ದಸರಾ ಕವಿಗೋಷ್ಠಿಯ ಅಧ್ಯಕ್ಷರಾಗಿ (1998) ಮೈಸೂರು ಜಿಲ್ಲಾ 9ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ (2009), ಸಂಕೇಶ್ವರದಲ್ಲಿ ಜರುಗಿದ ತಾಲ್ಲೂಕು ಸಮ್ಮೇಳನದ ಅಧ್ಯಕ್ಷರಾಗಿ (2011) ಹೀಗೆ ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಗೌರವ ಪಡೆದಿದ್ದರು.
ಅಕಬರ ಅಲಿ ಅವರಿಗೆ ‘ಸುಮನ ಸೌರಭ’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ‘ಗಂಧಕೇಶರ’ ಕೃತಿಗೆ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಮಂತ್ರಾಲಯದ ಗೌರವ, ‘ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ’ ಎಂಬ ಅವರ ಸಂಶೋಧನಾ ಕೃತಿಗೆ ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರು ಸಾವಿರ ಮಠ ದಿಂದ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಪ್ರಕೃತಿ ಸಂಸ್ಥೆಯಿಂದ ಪ್ರಕೃತಿ ಪ್ರಶಸ್ತಿ, ಡಿ.ವಿ.ಜಿ. ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.
ಅಕಬರ್ ಅಲಿ ಅವರು 2016ರ ಪೆಬ್ರವರಿ 21ರಂದು ಈ ಲೋಕವನ್ನಗಲಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಡಿತ ಪುಟ್ಟರಾಜ ಗವಾಯಿಗಳು

Thu Mar 3 , 2022
ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿ, ಭಕ್ತರ ಪಾಲಿಗೆ ನಡೆದಾಡುವ ದೇವರು ಎಂದೆನಿಸಿದ್ದವರು. ಪುಟ್ಟರಾಜ ಗವಾಯಿಗಳು 1914ರ ಮಾರ್ಚ್ 3ರಂದು ಹಾವೇರಿ ಜಿಲ್ಲೆಯ ಹಾನಗಲ್‌ನ ದೇವರ ಹೊಸಕೋಟೆಯಲ್ಲಿ ಜನಿಸಿದರು. ತಂದೆ ರೇವಣ್ಣಯ್ಯ ಮತ್ತು ತಾಯಿ ಸಿದ್ಧಮ್ಮನವರು. ಇವರ ಮೂಲ ಹೆಸರು ಪುಟ್ಟಯ್ಯಜ್ಜ ಎಂಬುದಾಗಿತ್ತು. ಹುಟ್ಟಿದ ಆರು ತಿಂಗಳಲ್ಲಿಯೇ ಸಿಡುಬಿನ ತೊಂದರೆಯಿಂದಾಗಿ ಬಾಲಕ ಪುಟ್ಟಯ್ಯಜ್ಜ ಅಂಧನಾಗಿದ್ದ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಅಂಧ ಪುಟ್ಟಯ್ಯಜ್ಜನ ಜೀವನದ ಹೊಣೆಗಾರಿಕೆಯನ್ನು […]

Advertisement

Wordpress Social Share Plugin powered by Ultimatelysocial