ಜೆಮ್ಸೇಟ್ಜಿ ಟಾಟಾ

ಜೆಮ್ಸೇಟ್ಜಿ ಟಾಟಾ ಭಾರತೀಯ ಕೈಗಾರಿಕಾ ಪಿತಾಮಹರು.
ಜೆಮ್ಸೇಟ್ಜಿ ನಸರ್ವಾನ್ಜಿ ಟಾಟಾ 1839ರ ಮಾರ್ಚ್ 3ರಂದು ಜನಿಸಿದರು. ಇಂದು ಭಾರತದಲ್ಲೇ ಅಲ್ಲದೆ ವಿಶ್ವವ್ಯಾಪಾರಿ ಸಮುದಾಯದಲ್ಲಿ ವೈಶಿಷ್ಟ್ಯಪೂರ್ಣ ಹೆಸರಾದ ಟಾಟಾ ಸಮೂಹಕ್ಕೆ ಅಡಿಪಾಯವನ್ನು ಒದಗಿಸಿದ ಮಹಾಪುರುಷರೀತ. ಅಷ್ಟು ಮಾತ್ರವಲ್ಲದೆ ಜೆಮ್ಸೇಟ್ಜಿ ಟಾಟಾ ಅವರು ಭಾರತವನ್ನು ಕೈಗಾರಿಕರಂಗಕ್ಕೆ ಕೈಹಿಡಿದು ಕರೆತಂದ ಅವಿಸ್ಮರಣೀಯರೂ ಹೌದು.
ಜ್ಹೊರಾಷ್ಟ್ರಿಯನ್ ಪೂಜಾರಿಗಳ ವಂಶದಲ್ಲಿ ಜನಿಸಿದ ಜೆಮ್ಸೇಟ್ಜಿ ಟಾಟಾ ಅವರ ತಂದೆ ನುಸ್ಸೇರ್ವಾನ್ಜಿ ಅವರು ತಮ್ಮ ವಂಶದಲ್ಲಿ ವ್ಯಾಪಾರದ ಹಾದಿ ಹಿಡಿದ ಮೊಟ್ಟಮೊದಲಿಗರು. ಅವರು ಗುಜರಾತಿನ ನವಸಾರಿ ಎಂಬ ಸಣ್ಣ ಗ್ರಾಮದಲ್ಲಿದ್ದವರು. ಮುಂದೆ ಅವರು ಮುಂಬೈಗೆ ಬಂದು ವ್ಯಾಪಾರಸ್ಥರಾದರು. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಎಲ್ಫಿನ್ಸ್ಟನ್ ಕಾಲೇಜಿಗೆ ಸೇರಿದ ಜೆಮ್ಸೇಟ್ಜಿ ಟಾಟಾ ಅವರು ಆಗಿನ್ನೂ ಮೊದಲ ಸ್ವಾತಂತ್ರ್ಯಸಂಗ್ರಾಮದ ಹೊಸ್ತಿಲನ್ನು ದಾಟಿದ್ದ 1858ರ ಭಾರತದಲ್ಲಿ ತಮ್ಮ ತಂದೆಯವರೊಡನೆ ವ್ಯಾಪಾರೀರಂಗಕ್ಕೆ ಕಾಲಿರಿಸಿದರು.
ಇಪ್ಪತ್ತೊಂಬತ್ತು ವರ್ಷ ವಯಸ್ಸಿನವರೆಗೆ ತಮ್ಮ ತಂದೆಯವರೊಡಗೂಡಿ ಕೆಲಸ ಮಾಡುತ್ತಿದ್ದ ಜೆಮ್ಸೇಟ್ಜಿ ಅವರು 1868ರಲ್ಲಿ 21,000 ರೂಪಾಯಿಗಳ ಬಂಡವಾಳದೊಡನೆ ತಮ್ಮದೇ ಆದ ವಹಿವಾಟು ಸಂಸ್ಥೆಯೊಂದನ್ನು ಪ್ರಾರಂಭಿಸಿದರು. 1869ರ ವರ್ಷದಲ್ಲಿ ಚಿಂಚ್ಪೋಕ್ಲಿ ಎಂಬಲ್ಲಿ ದಿವಾಳಿಯೆದ್ದಿದ್ದ ಎಣ್ಣೆ ಗಿರಣಿಯನ್ನು ಕೊಂಡುಕೊಂಡ ಅವರು ಅದನ್ನು ಹತ್ತಿಯ ಗಿರಣಿಯನ್ನಾಗಿಸಿ ‘ಅಲೆಗ್ಸಾಂಡ್ರಾ ಮಿಲ್’ ಎಂದು ಹೆಸರಿಸಿದರು. ಎರಡು ವರ್ಷಗಳವರೆಗೆ ಅದನ್ನು ದಕ್ಷತೆಯಿಂದ ನಡೆಸಿ ಅವರು ಅದನ್ನು ಆರೋಗ್ಯಕರ ಲಾಭಕ್ಕೆ ಮಾರಿದರಲ್ಲದೆ 1874ರ ವರ್ಷದಲ್ಲಿ ನಾಗಪುರದಲ್ಲಿ ಹೊಸ ಹತ್ತಿ ಗಿರಣಿಯನ್ನು ಪ್ರಾರಂಭಿಸಿದರು. 1877ರ ಜನವರಿ 1ರಂದು ವಿಕ್ಟೋರಿಯಾ ರಾಣಿಯವರು ಭಾರತದ ಸಾಮ್ರಾಜ್ಞಿಯೆನಿಸಿದ ಸಂದರ್ಭದಲ್ಲಿ ರಾಣಿಗೆ ಗೌರವಸೂಚಕವಾಗಿ ತಮ್ಮ ಗಿರಣಿಗೆ ‘ಎಂಪ್ರೆಸ್ ಮಿಲ್’ ಎಂಬ ಹೆಸರನ್ನಿಟ್ಟರು.
ಜೆಮ್ಸೇಟ್ಜಿ ಟಾಟಾ ಅವರು ನಾಲ್ಕು ಮಹತ್ವಾಕಾಂಕ್ಷೆಗಳ ಗುರಿಯನ್ನು ಹಮ್ಮಿಕೊಂಡಿದ್ದರು. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕಾ ಸ್ಥಾಪನೆ, ಅಂತರರಾಷ್ಟ್ರೀಯ ಮಟ್ಟದ ವಿದ್ಯಾಸಂಸ್ಥೆ ಕಟ್ಟುವ ಕನಸು, ಅಪೂರ್ವವೆಂಬುವಂತಹ ಒಂದು ಹೋಟೆಲ್ ನಿರ್ಮಿಸುವುದು ಮತ್ತು ವಿದ್ಯುತ್ ಉತ್ಪಾದನಾ ಸ್ಥಾವರ ನಿರ್ಮಾಣ, ಇವು ಅವರ ಕನಸುಗಳು. 1903ರ ಡಿಸೆಂಬರ್ 3ರಂದು ಇಂದು ಪ್ರಸಿದ್ಧವಾಗಿರುವ ಮುಂಬೈನ ‘ತಾಜ್ ಮಹಲ್’ ಹೋಟೆಲ್ ಅಸ್ತಿತ್ವಕ್ಕೆ ಬಂತು.
ತಮ್ಮ ಮೇಲ್ಕಂಡ ಗುರಿಸಾಧನೆಗೆ ಅಹರ್ನಿಶಿ ದುಡಿದ ಜೆಮ್ಸೇಟ್ಜಿ ಟಾಟಾ ತಮ್ಮ ಮೇಲ್ಕಂಡ ಎಲ್ಲ ಕನಸುಗಳಿಗೂ ಭದ್ರ ಬುನಾದಿಯನ್ನು ಹಾಕಿದರು. ಜೆಮ್ಸೇಟ್ಜಿ ಮತ್ತು ಅವರ ನಂತರದ ತಲೆಮಾರುಗಳ ನಿರಂತರ ಶ್ರದ್ಧಾಪೂರ್ಣ ಪರಿಶ್ರಮದಿಂದಾಗಿ ಇಂದು ಆ ಎಲ್ಲಾ ಕನಸುಗಳೂ ಜೀವಂತ ಭವ್ಯತೆಗಳಾಗಿ ಮೂಡಿನಿಂತಿವೆ. ಅವುಗಳೆಂದರೆ,
• ಟಾಟಾ ಸ್ಟೀಲ್ ಎಂಬ ಏಷ್ಯಾದಲ್ಲೇ ಪ್ರಥಮ ಹಾಗೂ ಅತ್ಯಂತ ದೊಡ್ಡ ಹಾಗೂ ವಿಶ್ವದ ಐದನೇ ದೊಡ್ಡ ಉಕ್ಕಿನ ಕೈಗಾರಿಕೆ. ಈ ಸಂಸ್ಥೆ ವಾರ್ಷಿಕವಾಗಿ ಇಪ್ಪತ್ತೆಂಟು ಮಿಲಿಯನ್ ಟನ್ ಉಕ್ಕನ್ನು ಉತ್ಪಾದಿಸುತ್ತಿದ್ದೆ.
• ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಂಬ ಉತ್ಕೃಷ್ಟ ವಿದ್ಯಾಸಂಸ್ಥೆ. ಮೊದಲಿಗೆ ಟಾಟಾ ಸಂಸ್ಥೆ ಇದಕ್ಕೆ ಚಾಲನೆ ನೀಡಿದಾಗ ಈ ಸಂಸ್ಥೆ ಟಾಟಾ ಇನ್ಸ್ಟಿಟ್ಯೂಟ್ ಎಂದು ಪ್ರಸಿದ್ಧವಾಗಿತ್ತು. ಇದಲ್ಲದೆ 1945ರಲ್ಲಿ ಡಾ. ಹೋಮಿ ಬಾಬಾ ಅವರಿಂದ ಸ್ಥಾಪಿತಗೊಂಡ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಡಾ ಹೋಮಿ ಬಾಬಾ ಅವರ ಆಶಯ ಮತ್ತು ಜೆ ಆರ್ ಡಿ ಟಾಟಾ ಅವರ ಬೆಂಬಲ ಸಂಯೋಜನೆಗಳ ಅಪೂರ್ವ ಪ್ರತಿಫಲ.
• ದಿ ಟಾಟಾ ಪವರ್ ಕಂಪೆನಿ ಎಂಬ ಟಾಟಾ ಸಮೂಹದ ಸಂಸ್ಥೆ ಭಾರತದ ಅತೀ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರವಾಗಿದ್ದು 2300 ಮೆಘಾವಾಟುಗಳ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.
ಜೆಮ್ಸೇಟ್ಜಿ ಟಾಟಾ ಅವರು ಮುಂಬೈನ ತಾಜ್ ಮಹಲ್ ಹೋಟೆಲ್ ನಿರ್ಮಾಣಕ್ಕೆ ಅಂದು ವ್ಯಯಿಸಿದ್ದು ಸುಮಾರು ನಾಲ್ಕು ಕೋಟಿ ಇಪ್ಪತ್ತೊಂದು ಲಕ್ಷ ರೂಪಾಯಿಗಳು. ಅಂದಿನ ದಿನದಲ್ಲಿ ಅದು ವಿದ್ಯುತ್ ಸರಬಾರಜು ಹೊಂದಿದ್ದ ಏಕೈಕ ಹೋಟೆಲ್ ಆಗಿತ್ತು. ಅಮೆರಿಕದ ವಿದ್ಯುತ್ ಫ್ಯಾನುಗಳು, ಜರ್ಮನಿಯ ಎಲಿವೇಟರುಗಳು, ಟರ್ಕಿಯ ಸ್ನಾನದ ತೊಟ್ಟಿಗಳು ಇವೆಲ್ಲ ಇದ್ದವು. ಇವೆಲ್ಲಕ್ಕೂ ಮಿಗಿಲಾದದ್ದೂ ಇದೆ!
ಯಾರೋ ಮಹನೀಯರು ಬರೆದ ವಿಷಯ ಓದುತ್ತಿದ್ದೆ. ಒಮ್ಮೆ ಜೆಮ್ಸೇಟ್ಜಿ ಟಾಟಾ ಅವರು ಅಂದಿನ ಪ್ರಸಿದ್ಧ ಹೋಟೆಲ್ ಒಂದಕ್ಕೆ ಹೋಗ ಬಯಸಿದ್ದರು. ಆದರೆ ಅವರಿಗೆ ಸಿಕ್ಕ ಉತ್ತರ ಹೀಗಿತ್ತು, “ಇಲ್ಲಿ ಭಿಕ್ಷುಕರಿಗೆ, ಭಾರತೀಯರಿಗೆಲ್ಲಾ ಪ್ರವೇಶವಿಲ್ಲ”. ಇದು ಟಾಟಾ ಅವರಿಗೆ ಶ್ರೇಷ್ಠ ಮಟ್ಟದ ಹೋಟೆಲ್ ನಿರ್ಮಿಸುವ ಪ್ರೇರಣೆ ನೀಡಿತು ಎಂದು ಆ ಮಹನೀಯರು ಬರೆದಿದ್ದಾರೆ. ಈಗ ಜೆಮ್ಸೇಟ್ಜಿ ಟಾಟಾ ಅವರು ಸ್ಥಾಪಿಸಿದ ತಾಜ್ಮಹಲ್ ಹೋಟೆಲಿನಲ್ಲಿರುವ ಸೌಖರ್ಯಗಳಿಗೆ ಮಿಗಿಲಾದ ಮತ್ತೊಂದು ವಿಷಯ ಇದೆ ಎಂದು ಹೇಳಿದ್ದ ವಿಷಯಕ್ಕೆ ಬರೋಣ. “ಇಲ್ಲಿ ಬ್ರಿಟಿಷರು ಬಟ್ಲರ್ ಮತ್ತು ವೈಟರ್ ಹುದ್ದೆಯನ್ನು ನಿರ್ವಹಿಸಲು ನಿಯೋಜಿತರಾಗಿದ್ದರು!.” ಇದು ಜೆಮ್ಸೇಟ್ಜಿ ಟಾಟಾ ಅವರ ಛಲವನ್ನೂ ಹಾಗೂ ಆ ಛಲ ಕೇವಲ ಮಾತಿನ ಅಹಂಭಾವ ಸೃಷ್ಟಿಸದೆ ಕ್ರಿಯಾತ್ಮಕತೆ ಮತ್ತು ಸಾಧನೆಯಾದ ಮಹಾಶಿಖೆಯ ಪರಿಪೂರ್ಣತೆಯನ್ನು ನಿರೂಪಿಸುತ್ತದೆ.
ಜೆಮ್ಸೇಟ್ಜಿ ಟಾಟಾ ಅವರ ಪುತ್ರರಾದ ದೊರಾಬ್ಜಿ ಮತ್ತು ರತನ್ಜೀ ಅವರು ಮುಂದೆ ಟಾಟಾ ಸಮೂಹದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಇಂದು ಟಾಟಾ ಸಮೂಹ ವಿಶ್ವದ ಬೃಹತ್ ಉದ್ಯಮಗಳ ಸಾಲಿನಲ್ಲಿ ಪ್ರಧಾನವಾಗಿ ಕಂಗೊಳಿಸುತ್ತಿದೆ.
ಜೆಮ್ಸೇಟ್ಜಿ ಅವರ ಅಪಾರ ಸಾಧನೆಯಿಂದಾಗಿ ಜಾರ್ಖಂಡ್ ರಾಜ್ಯದ ಜಮ್ಷೆಡ್ಪುರವು ಇಂದು ಟಾಟಾ ನಗರವೆಂದೇ ಜನಪ್ರಿಯಗೊಂಡಿದೆ. ಇಂದು ಟಾಟಾ ಸಮೂಹವು ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟೆಲ್ಕಾನ್, ಟಾಟಾ ಪವರ್, ಜಸ್ಕೋ, ಟಾಟಾ ಕನ್ಸಲ್ಟೆನ್ಸಿ, ಟಾಟಾ ಸಾಫ್ಟ್ವೇರ್, ಟಾಟಾ ಕಮಿನ್ಸ್, ಟಾಟಾ ರಾಬಿನ್ಸ್ ಫ್ರೇಸರ್, ಟಾಟಾ ಬೇರಿಂಗ್, ಟೆಯೋ, ಟಾಟಾ ಟ್ಯೂಬ್ಸ್, ಟಿನ್ಪ್ಲೇಟ್, ಟಾಟಾ ಅಗ್ರಿಕೋ, ಐಸ್ ಅಂಡ್ ಡಬ್ಲೂ ಪಿ, ಟಾಟಾ ಪಿಗ್ ಮೆಂಟ್ಸ್, ಟೈಟನ್, ವೆಸ್ಟ್ ಸೈಡ್ ಅಂತಹ ಅಸಂಖ್ಯಾತ ರೆಂಬೆಕೊಂಬೆಗಳಾಗಿ ವ್ಯಾಪಿಸಿ ನಿಂತಿವೆ.
ಜೆಮ್ಸೇಟ್ಜಿ ಟಾಟಾ ಅವರು 1904ನೆ ಮೇ 19ರಂದು ತಮ್ಮ 65ನೆಯ ವಯಸ್ಸಿನಲ್ಲಿ ನಿಧನರಾದರು. ಒಬ್ಬ ಮಹಾನ್ ವ್ಯಕ್ತಿ ತನ್ನ ಚಿಂತನ, ಧ್ಯೇಯ, ಪರಿಶ್ರಮ, ಆದರ್ಶ ಮತ್ತು ಬದುಕಿನ ನಡವಳಿಕೆಗಳಿಂದ ವಿಶ್ವದಲ್ಲಿ ತನ್ನನ್ನು ಶಾಶ್ವತವಾಗಿ ಉಳಿಸಿಹೋಗಬಹುದಾದ ರೀತಿಗೆ ಜೆಮ್ಸೇಟ್ಜಿ ಟಾಟಾ ಎಂದೆಂದೂ ಮಾದರಿಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರೋಜಿನಿ ಮಹಿಷಿ |On the birth anniversary of writer, teacher, legal expert and politician Dr. Sarojini Mahishi |

Thu Mar 3 , 2022
ಕನ್ನಡಿಗರಿಗೆ ಸರೋಜಿನಿ ಮಹಿಷಿ ಎಂಬ ಹೆಸರು ಚಿರಪರಿಚಿತ. ಕನ್ನಡಿಗರಿಗೆ ಉದ್ಯೋಗದ ಹಕ್ಕಿನ ಕುರಿತಾದ ಸರೋಜಿನಿ ಮಹಿಷಿ ಅವರ ವರದಿಯ ಬಗ್ಗೆ ಹಲವು ದಶಕಗಳಿಂದ ಕನ್ನಡಿಗರ ಹೋರಾಟ ನಡೆಯುತ್ತಲೇ ಇದೆ. ಡಾ. ಸರೋಜಿನಿ ಮಹಿಷಿ ಅವರು ಪ್ರಸಿದ್ಧ ಕಾನೂನು ತಜ್ಞೆ, ರಾಜಕಾರಿಣಿ, ಸಾಹಿತಿ, ಚಿತ್ರಕಲಾವಿದೆ, ಬಹುಭಾಷಾ ಜ್ಞಾನಿ. ಸರೋಜಿನಿ ಮಹಿಷಿ 1927ರ ಮಾರ್ಚ್ 3 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ವಕೀಲರು ಹಾಗೂ ಸಂಸ್ಕೃತ ಪಂಡಿತರಾಗಿದ್ದ ಬಿಂದೂರಾವ್ ಅಚ್ಯುತಾಚಾರ್ಯ ಮಹಿಷಿ. ತಾಯಿ […]

Advertisement

Wordpress Social Share Plugin powered by Ultimatelysocial