ಸುಬ್ಬಣ್ಣ ರಂಗನಾಥ ಎಕ್ಕುಂಡಿ ಕನ್ನಡದ ಮಹಾನ್ ಕವಿ.

 

ಸುಬ್ಬಣ್ಣ ರಂಗನಾಥ ಎಕ್ಕುಂಡಿ ಕನ್ನಡದ ಮಹಾನ್ ಕವಿಗಳಲ್ಲಿ ಒಬ್ಬರು. ‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಅನುಭವವನ್ನು ಬಣ್ಣಿಸಲು ಸಾಧ್ಯ’ ಎಂಬುದು ಎಕ್ಕುಂಡಿಯವರ ನಿಲುವು. ಎಕ್ಕುಂಡಿಯವರು ತಾವು ಶಿಕ್ಷಕರಾಗುವವರೆಗೆ ನಡೆದು ಬಂದ ಕೆಂಡದ ಮೇಲಿನ ನಡಿಗೆಯೇ ಇವರ ಕಾವ್ಯವನ್ನು ನಿರ್ದೇಶಿಸಿದೆ.
ಸು. ರಂ. ಎಕ್ಕುಂಡಿ ರಾಣೆಬೆನ್ನೂರಿನಲ್ಲಿ 1923ರ ಜನವರಿ 20ರಂದು ಜನಿಸಿದರು. ಮನೆ ಸಾಗಿಸಲು ಪುಟ್ಟ ಎಕ್ಕುಂಡಿ ಬದುಕಿನ ಭಾರವನ್ನು ಹೊರಬೇಕಾಯಿತು. ಈ ಭಾರವಾದ ಬದುಕಿನ ಮಧ್ಯೆಯೂ ಎಕ್ಕುಂಡಿ ಓದಿನತ್ತ ಆಕರ್ಷಿತರಾದರು. ಸವಣೂರಿನಲ್ಲಿ ಶ್ರೀ ಸತ್ಯಭೋಧ ಸೇವಾಸಂಘ ನಡೆಸುತ್ತಿದ್ದ ವಾಚನಾಲಯದ ಪುಸ್ತಕವನ್ನು ಸದಸ್ಯರ ಮನೆಗೆ ಮುಟ್ಟಿಸುವ ಕೆಲಸ ಹೊತ್ತರು. ಪ್ರತಿಫಲವಾಗಿ ವಾಚನಾಲಯದ ಪುಸ್ತಕಗಳನ್ನು ಪುಕ್ಕಟೆ ಓದುವ ಅವಕಾಶ ಸಿಕ್ಕಿತು. ಎಕ್ಕುಂಡಿ ಸಾಹಿತ್ಯಲೋಕಕ್ಕೆ ಕಾಲಿರಿಸಿದ್ದು ಹೀಗೆ.
‘ಐದನೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಗಾಳಿ ಬೆಳಕು ಯಾವುದೂ ಸುಳಿಯದಿದ್ದ ಗುಹೆಯಂಥ ಮನೆಯಲ್ಲಿ ಊಟ, ಉಡುಗೆ, ಬಟ್ಟೆಬರೆ ಎಲ್ಲವೂ ಅಷ್ಟಕ್ಕಷ್ಟೇ ಇದ್ದವು. ಹಬ್ಬದ ದಿನಗಳಿಗೂ ಉಳಿದ ದಿನಗಳಿಗೂ ವೆತ್ಯಾಸವಿರದಿದ್ದ, ಶಾಲೆಯ ಫೀ ಕೊಡಲು ಅಸಾಧ್ಯವಾಗಿದ್ದ, ಯಾವ ವರ್ಷವೂ ಕಣ್ಣೀರು ಹಾಕದೆ ಪರೀಕ್ಷೆಗೆ ಕೂಡುವ ಅವಕಾಶ ಸಿಗದಿದ್ದ’ ರೀತಿಯಲ್ಲಿ ಬೆಳೆದರು ಎಕ್ಕುಂಡಿ.
ಹೈಸ್ಕೂಲಿನಲ್ಲಿ ಸಾಹಿತ್ಯದ ಗೀಳಿಗೆ ತಕ್ಕ ವಾತಾವರಣ ದೊರಕಿತು. ‘ಉನ್ನತಿ’ ಕೈಬರಹ ಪತ್ರಿಕೆ ಸಂಪಾದಿಸಿದ್ದೇ ಅಲ್ಲದೆ ಸಾಹಿತ್ಯಕ ಹರಟೆಗೆ ಜೊತೆಗಾರರು ಸಿಕ್ಕರು. ಪಾಠ ಮಾಡುತ್ತಿದ್ದ ಮಾಸ್ತರುಗಳು ಬಿಎಂಶ್ರೀ, ಟೆನಿಸನ್, ವರ್ಡ್ಸ್ ವರ್ತರನ್ನೂ ಪರಿಚಯಿಸಿದರು. ಎಕ್ಕುಂಡಿ ತಮ್ಮ ಹದಿನೈದನೇ ವಯಸ್ಸಿನಲ್ಲಿ ತಮ್ಮ ಶಾಲಾ ದಿನಗಳಲ್ಲಿಯೇ ಬರಹ ಆರಂಭಿಸಿದರು. ಜಗದೀಶಚಂದ್ರ ಬೋಸರ ಸಾವು ಎಕ್ಕುಂಡಿಯವರಲ್ಲಿ ಕವಿತೆಯಾಗಿ ಅರಳಿತ್ತು. ‘ಒಬ್ಬ ವಿಜ್ಞಾನಿಯ ಸಾವು ಒಬ್ಬ ಕವಿಯ ಹುಟ್ಟಿಗೆ ಕಾರಣವಾದದ್ದು ವಿಚಿತ್ರ ಸಂಗತಿ’ ಎನ್ನುತ್ತಿದ್ದರು ಎಕ್ಕುಂಡಿ. ‘ನಾಡಹಬ್ಬ’ ಎಕ್ಕುಂಡಿಯವರೊಳಗಿದ್ದ ಕವಿಯನ್ನು ಹೊರಗೆ ತರಲು ಮತ್ತಷ್ಟು ನೆರವಾಯಿತು. ನಾಡಹಬ್ಬಕ್ಕಾಗಿ ಹುಬ್ಬಳ್ಳಿಗೆ ಬಂದ ವಿ.ಕೃ. ಗೋಕಾಕ, ಬೇಂದ್ರೆ, ಬೆಟಗೇರಿಕೃಷ್ಣಶರ್ಮ, ಶಂ. ಬಾ. ಜೋಶಿ, ಶ್ರೀರಂಗರು ಸಾಹಿತ್ಯದ ಆಸಕ್ತಿ ಬೆಳಯಲು ಕಾರಣರಾದರು.
ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಪೇಜಾವರ ಸದಾಶಿವರಾಯರು ನಿಧನರಾದರು. ಅವರ ‘ವರುಣನಿಗೆ ಆಹ್ವಾನ’ದಿಂದ ಪ್ರಭಾವಿತಗೊಂಡಿದ್ದ ಎಕ್ಕುಂಡಿ, ಗಂಗಾಧರ ಚಿತ್ತಾಲ, ವರದರಾಜ ಹುಯಿಲಗೋಳ, ರಾಯ ಧಾರವಾಡಕರ, ವಿ.ಜಿ. ಭಟ್ ಇವರೊಂದಿಗೆ ‘ವರುಣ ಕುಂಜ’ ಬರಹಗಾರರ ಬಳಗವನ್ನು ಆರಂಭಿಸಿದರು. ಕಾಲೇಜಿನ ಈ ಬಳಗ ಪ್ರತಿವಾರ ಕಾವ್ಯ, ಕಥೆ, ಪ್ರಬಂಧ, ವಿಮರ್ಶೆ ಬರೆದು ಚರ್ಚೆ ನಡೆಸುತ್ತಿತ್ತು. ವಿ.ಕೃ. ಗೋಕಾಕ್, ರಂ.ಶ್ರೀ. ಮುಗಳಿಯವರ ಮಾರ್ಗದರ್ಶನ ಈ ಕುಂಜಕ್ಕೆ ಲಭಿಸಿ ಎಕ್ಕುಂಡಿಯವರ ‘ಮಾತು ಮಥಿಸಿ’ ಕವನ ಸಂಗ್ರಹಕ್ಕೆ ದಾರಿಮಾಡಿಕೊಟ್ಟಿತು. ವಿಲಿಂಗ್ಡನ್ ನಲ್ಲಿ ಓದುವಾಗಲೇ ಎಕ್ಕುಂಡಿಯವರ ಮೊದಲ ಕವನ ಸಂಕಲನ ‘ಸಂತಾನ’ವನ್ನು ರಂ.ಶ್ರೀ. ಮುಗಳಿ ಪ್ರಕಟಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸವಾಯಿ ಗಂಧರ್ವ ಸಂಗೀತಲೋಕದ ಮಹಾನ್ ತಾರೆ.

Sun Jan 22 , 2023
  ಧಾರವಾಡ ಜಿಲ್ಲೆಯ ಪುಟ್ಟ ತಾಲ್ಲೂಕಾದ ಕುಂದಗೋಳ ತನ್ನೊಡಲಿನ ಸಂಗೀತದಿಂದಾಗಿ ದೇಶ ವಿದೇಶಗಳಲ್ಲಿಯೂ ಇಂದು ಪರಿಚಿತವಾಗಿದೆ. ಅಲ್ಲಿ ಬಂದು ಹಾಡುವುದು ಸಂಗೀತಗಾರರಿಗೆ ಖುಷಿ, ಭಕ್ತಿ, ಅಭಿಮಾನದ ಸಂಗತಿ. ಅಲ್ಲಿಗೆ ಹೋಗುವುದೆಂದರೆ ಸಂಗೀತಪ್ರಿಯರಿಗೆ ತೀರ್ಥಯಾತ್ರೆಗೆ ಹೋದ ಹಾಗೆ. ಏಕೆಂದರೆ ಅದು ಹಿಂದೂಸ್ತಾನಿ ಸಂಗೀತ ಕ್ಷೇತ್ರದ ‘’ಗಂಧರ್ವ’ ಸವಾಯಿ ಗಂಧರ್ವರು ಜನಿಸಿದ ಊರು. ಮೇರು ಕಲಾವಿದರೆನಿಸಿದ ಪಂಡಿತ್ ಭೀಮಸೇನ ಜೋಷಿ ಹಾಗೂ ವಿದುಷಿ ಗಂಗೂಬಾಯಿ ಹಾನಗಲ್ ಅವರಿಗೆ ಸಂಗೀತದ ತಾಲೀಮು ಕೊಟ್ಟ ಊರು. […]

Advertisement

Wordpress Social Share Plugin powered by Ultimatelysocial