ಬೇಸಿಗೆಯಲ್ಲೂ ಪ್ರವಾಹ ಭೀತಿ!; ಮುಂದುವರಿದ ಮುಂಗಾರು ಪೂರ್ವ ಮಳೆ ಆರ್ಭಟ, ತತ್ತರಿಸಿದ ರಾಜ್ಯ

 

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟ ಮುಂದುವರಿದಿದ್ದು, ರಾಜಧಾನಿ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ವಣವಾಗಿದೆ. ಕೆಲ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಗಾಲವನ್ನು ಮೀರಿಸುವ ರೀತಿಯ ವಾತಾವರಣ ಸೃಷ್ಟಿಯಾಗಿದೆ.

ಕೆಲವೆಡೆ ಬೇಸಿಗೆ ಬೆಳೆಗಳು ಸಂಪೂರ್ಣ ನೆಲ ಕಚ್ಚಿದ್ದರೆ, ಮಳೆ ಆಶ್ರೀತ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಗಂಧನಹಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು ಮಳೆ: ಕಳೆದ 24 ಗಂಟೆಗಳ ಅವಧಿಯಲ್ಲಿ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಹೋಬಳಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ ಸುರಿದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಗಂಧನಹಳ್ಳಿ ಹೋಬಳಿಯಲ್ಲಿ 231 ಮಿ.ಮೀ. ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಜರಹೊಸಹಳ್ಳಿ ಹೋಬಳಿಯಲ್ಲಿ 187.5 ಮಿ.ಮೀ., ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಿ. ಕಾಳೇನಹಳ್ಳಿ ಹೋಬಳಿಯಲ್ಲಿ 177.5 ಮಿ.ಮೀ. ಮಳೆಯಾಗಿದೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.

ಶಾಲೆಗಳಿಗೆ ರಜೆ ಘೋಷಣೆ: ಹಾಸನ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಳೆದ 48 ಗಂಟೆಗಳಿಂದೀಚೆಗೆ ಮಳೆರಾಯ ರುದ್ರನರ್ತನ ಮೆರೆಯುತ್ತಿದ್ದು ಗುರುವಾರ ಬೆಳಗ್ಗೆವರೆಗೆ ರೆಡ್ ಅಲರ್ಟ್ ಘೊಷಿಸಲಾಗಿದೆ. ಹೊಳೆನರಸೀಪುರ ತಾಲೂಕಿನ ರಂಗೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹಳೇ ಕಟ್ಟಡ ಭಾರಿ ಮಳೆಯಿಂದ ಬುಧವಾರ ಕುಸಿದುಬಿದ್ದು ರಸ್ತೆಯಲ್ಲಿ ಸಾಗುತ್ತಿದ್ದ ಪಾದಚಾರಿ ಶಿವಕುಮಾರ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಶಾಲೆಯನ್ನು ಈಚೆಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಹೊಳೆನರಸೀಪುರದಲ್ಲಿ 170.6 ಮಿಮೀ ಅತಿ ಹೆಚ್ಚು ಮಳೆ ದಾಖಲಾಗಿದೆ. ಧಾರಾಕಾರ ಮಳೆ ಹಾಗೂ ಅಲ್ಲಲ್ಲಿ ವಿಪರೀತ ಗಾಳಿ ಮುಂದುವರಿದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲೆ(1-10ನೇ ತರಗತಿ)ಗಳಿಗೆ ಜಿಲ್ಲಾಧಿಕಾರಿ ಆರ್.ಗಿರೀಶ್ ಬುಧವಾರ ರಜೆ ಘೊಷಿಸಿದರು. ಶಾಲೆಗಳು ಆರಂಭವಾಗಿ ಎರಡು ದಿನಗಳಲ್ಲಿಯೇ ಮಳೆ ಆರ್ಭಟಿಸಿದ್ದರಿಂದ ಮಕ್ಕಳು ಮನೆಯಲ್ಲೇ ಉಳಿಯುವಂತಾಯಿತು.

366 ಎಕರೆ ಬೆಳೆ ನೀರುಪಾಲು:ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ 366 ಎಕರೆ ಪ್ರದೇಶದಲ್ಲಿ ಬೆಳೆ ನೀರುಪಾಲಾಗಿದ್ದು 30 ಮನೆಗಳಿಗೆ ಹಾನಿಯಾಗಿದೆ. ದಾವಣಗೆರೆ ತಾಲೂಕಿನಲ್ಲಿ 30 ಗುಂಟೆ ಅಡಕೆ ಮತ್ತು 10 ಗುಂಟೆ ತೆಂಗು ಬೆಳೆ ಹಾನಿಯಾಗಿದೆ. ಹರಿಹರ ತಾಲೂಕಿನಲ್ಲಿ 6 ಮನೆಗಳಿಗೆ ಹಾನಿಯಾಗಿದ್ದು, 16 ವಾಸದ ಮನೆಗಳ ಮೇಲ್ಚಾವಣಿ ಸಿಮೆಂಟ್ ಶೀಟ್, ಹೆಂಚುಗಳು ಜಖಂಗೊಂಡಿವೆ. 329 ಎಕರೆ ಭತ್ತ, 5 ಎಕರೆ ಬಾಳೆ, 8 ಎಕರೆ ಅಡಕೆ ಮತ್ತು ತೆಂಗು ಬೆಳೆ ಹಾನಿಯಾಗಿದ್ದು ಒಟ್ಟು 32.73 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲೂಕಿನಲ್ಲಿ 3 ಎಕರೆ ಬಾಳೆ ಬೆಳೆ ನೀರುಪಾಲಾಗಿದ್ದು 2 ಮನೆಗಳಿಗೆ ಹಾನಿಯಾಗಿದೆ. ಒಟ್ಟು 1.80 ಲಕ್ಷ ಅಂದಾಜು ನಷ್ಟವಾಗಿದೆ.

ಸಿಎಂ ಕಾರ್ಯಕ್ರಮಗಳಿಗೆ ಅಡ್ಡಿಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರ ನಿಗದಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮಗಳು ಮಳೆಯ ಕಾರಣ ರದ್ದಾಗಿದ್ದು, ಮಧ್ಯಾಹ್ನ 2.45ಕ್ಕೆ ಇಲ್ಲಿಗೆ ಆಗಮಿಸಿದ ಅವರು ನೇರವಾಗಿ ಎಐಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಾಜರಾದರು. ಪೂರ್ವನಿಗದಿತ ಪ್ರವಾಸದ ವೇಳಾಪಟ್ಟಿಯಂತೆ ಅವರು ಬೆಳಗ್ಗೆ 11.30ಕ್ಕೆ ಹೆಲಿಕಾಪ್ಟರ್​ನಲ್ಲಿ ಆಗಮಿಸಬೇಕಿತ್ತು. ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟ ಮಳೆಯ ಕಾರಣ ಹೆಲಿಕಾಪ್ಟರ್ ಬದಲಿಗೆ ರಸ್ತೆ ಮಾರ್ಗವಾಗಿ ಮಧ್ಯಾಹ್ನ 2.45ಕ್ಕೆ ಆಗಮಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ದಾಖಲೆ ವರ್ಷಧಾರೆ:ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಮಳೆ ಅಬ್ಬರಿಸಿದ್ದು ವಿವಿಧೆಡೆ 30 ಕ್ಕೂ ಹೆಚ್ಚು ಮರಗಳು, ವಿದ್ಯುತ್ ಕಂಬ ಉರುಳಿ ಬಿದ್ದಿವೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ 24 ಗಂಟೆಯಲ್ಲಿ 16.6 ಮಿ.ಮೀ. ಮಳೆ ಸುರಿದಿದೆ. ಬೆಳಗಾವಿ ಮಹಾನಗರ, ಬೈಲಹೊಂಗಲ, ಕಿತ್ತೂರು, ಸವದತ್ತಿ, ಗೋಕಾಕ, ಮೂಡಲಗಿ ಸೇರಿ ವಿವಿಧೆಡೆ ಮಂಗಳವಾರ ರಾತ್ರಿಯಿಡಿ ಧಾರಾಕಾರ ಮಳೆ ಸುರಿದಿದೆ. ಜೋರಾಗಿ ಬಿಸಿದ ಗಾಳಿಯಿಂದ ಹಲವು ಮನೆಗಳ ಪತ್ರಾಸ್ ಹಾರಿಹೋಗಿದ್ದು, ಕೆಲವು ಕಡೆ ಬಾಳೆ, ತರಕಾರಿ ಬೆಳೆಗಳಿಗೆ ಹಾನಿಯಾಗಿದೆ.

ಮಲೆನಾಡಿನಲ್ಲಿ ಮಳೆ: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ ಆರಂಭವಾಗಿರುವ ಜಿಟಿ ಜಿಟಿ ಮಳೆ ಬುಧವಾರವೂ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲಿಯೂ ಅನಾಹುತ ಸಂಭವಿಸುವ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆದರೆ ನಿರಂತರವಾಗಿ ಸಣ್ಣಗೆ ಹನಿಯುತ್ತಿದ್ದು, ಅಂತರ್ಜಲವೃದ್ಧಿಗೆ ಸಹಾಯಕವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ;

Thu May 19 , 2022
  ಮುಂಬೈ: ಮುಂಬೈಯಲ್ಲಿ ನೆಲೆಯನ್ನು ಹೊಂದಿರುವ ಎಲೆಕ್ಟ್ರಿಕ್ ವಾಹನಗಳ ತಯಾರಕ ಸಂಸ್ಥೆ ಒಡಿಸ್ಸಿ ಭಾರತದಲ್ಲಿ Odysse V2 ಹಾಗೂ V2+ ಎಂಬ ಎರಡು ಮಾದರಿಗಳ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಪರಿಚಯಿಸಿದೆ. ಇವುಗಳ ಎಕ್ಸ್-ಶೋರೂಮ್ ಬೆಲೆ ಕ್ರಮವಾಗಿ ₹ 75,000 ಹಾಗೂ ₹ 97,500 ಇದ್ದು, ಈ ಮೂಲಕ ಕಂಪನಿಯು ಆರು ಎಲೆಕ್ಟ್ರಿಕ್ ವಾಹನ ಮಾಡೆಲ್ಗಳಿರುವ ಶ್ರೇಣಿಯನ್ನು ಹೊಂದಿದಂತಾಗಿದೆ. ಈ ವರ್ಷಾಂತ್ಯದ ಒಳಗೆ ಇನ್ನೂ ಎರಡು ವಾಹನಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿದೆ. ಇದರೊಂದಿಗೆ, […]

Advertisement

Wordpress Social Share Plugin powered by Ultimatelysocial