ಸುರೇಂದ್ರ ದಾನಿ

 
ಸುರೇಂದ್ರ ದಾನಿ ಪತ್ರಿಕಾಲೋಕದಲ್ಲಿ ಪ್ರಸಿದ್ಧ ಹೆಸರಾಗಿದ್ದವರು. ಇಂದಿನ ಕನ್ನಡ ಪತ್ರಿಕೋದ್ಯಮದ ಹಲವಾರು ಪತ್ರಿಕಾಸಂಪಾದಕರು ಮತ್ತು ಅಗ್ರ ಲೇಖಕರು ದಾನಿಯವರ ಶಿಷ್ಯತ್ವ ಪಡೆದವರು. ಇಂದು ಅವರ ಸಂಸ್ಮರಣೆ ದಿನ.
ಸುರೇಂದ್ರ ದಾನಿ 1925ರ ಆಗಸ್ಟ್ 17ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಭೀಮರಾವ್. ತಾಯಿ ಗಂಗಾಬಾಯಿ. ಸುರೇಂದ್ರ ದಾನಿ ಅವರ ಪ್ರಾರಂಭಿಕ ಶಿಕ್ಷಣ ಧಾರವಾಡ, ಬಾಗಲಕೋಟೆ, ಬಿಜಾಪುರಗಳಲ್ಲಿ ನೆರವೇರಿತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಅರ್ಥಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದರು.
ಸುರೇಂದ್ರ ದಾನಿ ಅವರಿಗೆ ಬ್ರಿಟಿಷರ ಗುಲಾಮಗಿರಿಯೊಳಗೆ ನೌಕರಿ ಮಾಡಬಾರದೆಂಬ ಛಲವಿತ್ತು. ಮೊಹರೆ ಹನುಮಂತ ರಾಯರು ಕರೆದುಕೊಟ್ಟ ಉದ್ಯೋಗದಿಂದ ಪತ್ರಿಕೋದ್ಯಮ ಸೇರಿದರು. ಇದಕ್ಕೆ ಸೇರಲು ಗಾಂಧೀಜಿಯವರ ‘ಹರಿಜನ’ ಪತ್ರಿಕೆಯ ಪ್ರೇರಣೆಯೂ ಇತ್ತು.
ಸುರೇಂದ್ರ ದಾನಿ ಅವರು 1947ರಲ್ಲಿ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಗಾರರಾಗಿ ನೇಮಕಗೊಂಡರು. ನಂತರ ಉಪಸಂಪಾದಕರ ಹುದ್ದೆಗೆ ಏರಿದರು. ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಆವೃತ್ತಿ ಪ್ರಾರಂಭವಾದಾಗ ವರ್ಗವಾಯ್ತು. ಅಲ್ಲಿ ಸಂಪಾದಕೀಯ ಲೇಖಕರೂ, ಸಾಪ್ತಾಹಿಕ ವಿಭಾಗದ ಸಂಪಾದಕರೂ ಆದರು. ಮತ್ತೆ ಹುಬ್ಬಳ್ಳಿಯಲ್ಲಿ ಸ್ಥಾನಿಕ ಸಂಪಾದಕರ ಹುದ್ದೆಗೆ ಹಿಂದಿರುಗಿದರು. ಹುಬ್ಬಳ್ಳಿ-ಬೆಂಗಳೂರು ಎರಡೂ ಮುದ್ರಣಗಳ ಸಂಪಾದಕರಾಗಿ ಹೊಣೆ ಹೊತ್ತರು. 1983ರಲ್ಲಿ ನಿವೃತ್ತರಾದರು.
ಸುರೇಂದ್ರ ದಾನಿ ನಿವೃತ್ತಿಯ ನಂತರವೂ ಒಂದೆಡೆ ಸುಮ್ಮನೆ ಕೂಡದ ಜೀವ. ಗುಲ್ಬರ್ಗಾದಿಂದ ಪ್ರಕಟವಾಗುತ್ತಿದ್ದ ‘ಕೇಸರಿಗರ್ಜನೆ’ ದಿನಪತ್ರಿಕೆಯ ಸಂಪಾದಕರಾಗಿ, ಹುಬ್ಬಳ್ಳಿಯ ಖಾದಿಜಗತ್ತು ಪತ್ರಿಕೆಯ ಸಂಪಾದಕರಾಗಿ, ‘ಪರಿವಾರ’ ದ್ವೈಮಾಸಿಕ ಪತ್ರಿಕೆಯ ಸಂಪಾದಕರಾಗಿ, ‘ಸುರಾಜ್ಯಪಥ’ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿ ಹೀಗೆ ನಿರಂತರವಾಗಿ ಒಂದಿಲ್ಲೊಂದು ಕೆಲಸಗಳ ಜವಾಬ್ದಾರಿ ಹೊತ್ತು ನಡೆಯುತ್ತಿದ್ದರು. ಪತ್ರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕತ್ವವನ್ನೂ ಅವರು ನಿರ್ವಹಿಸಿದ್ದರು.
ಸುರೇಂದ್ರ ದಾನಿ ಅವರು ಪತ್ರಕರ್ತ ಜವಾಬ್ದಾರಿಗಳ ನಡುವೆಯೂ ಸಾಹಿತ್ಯ ಕೃತಿಗಳ ರಚನೆಗಳಲ್ಲಿ ತೊಡಗಿದ್ದರು. ಕೌಜಲಗಿ ಹನುಮಂತ ರಾಯರು, ಮೊಹರೆ ಹನುಮಂತರಾಯರು, ಅಮೆರಿಕದ ಪುಲಿಟ್ಜರ್ ಪಾರಿತೋಷಕ ಸ್ಥಾಪಕ ಜೋಸೆಫ್ ಪುಲಿಟ್ಜರ್ (ಕನ್ನಡಾನುವಾದ) ಮುಂತಾದವು ಜೀವನ ಚರಿತ್ರೆಗಳು. ಪತ್ರಿಕಾ ಪ್ರಬಂಧಗಳು ಎಂಬುದು ಪ್ರಬಂಧ ಸಂಗ್ರಹ. ಸ್ವಯಂ ಸೇವಕರ ನೆನಪುಗಳು, ಸ್ವಾತಂತ್ರ್ಯಸೇನಾನಿ, ಸಾಧನೆ-ಸವಾಲು, ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಸಂಗ್ರಾಮ, ವ್ಯಾಸಸೃಷ್ಟಿ – ಕುಮಾರವ್ಯಾಸ ದೃಷ್ಟಿ ಮುಂತಾದವು ಅವರ ಇನ್ನಿತರ ವೈವಿಧ್ಯಮಯ ಸೃಷ್ಟಿಗಳಲ್ಲಿ ಕೆಲವು.
ಸುರೇಂದ್ರ ದಾನಿ ಅವರು ಮೊಹರೆ ಹನುಮಂತರಾವ್ ಸ್ಮಾರಕ ಪ್ರತಿಷ್ಠಾನದ ಕಾರ್ಯದರ್ಶಿ, ಹುಬ್ಬಳ್ಳಿಯ ಕುಮಾರವ್ಯಾಸ ಸೇವಾ ಸಂಘದ ಗೌರವ ಕಾರ‍್ಯದರ್ಶಿ, ಗಾಂಧೀ ವಿಚಾರವೇದಿಕೆ ಸ್ಥಾಪಕ ಅಧ್ಯಕ್ಷ, ಗಮಕ ಸಂಗೀತೋತ್ಸವಗಳ ರೂವಾರಿ ಹೀಗೆ ಹಲವು ರೀತಿಯಲ್ಲಿ ಕ್ರಿಯಾಶೀಲರಾಗಿದ್ದರು. ಕುಮಾರವ್ಯಾಸ ಕೃತಿಯ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇದ್ದು, ಭಾರತ ವಾಚನ ವ್ಯಾಖ್ಯಾನ ನಿಪುಣರಾಗಿದ್ದರು.
ಸುರೇಂದ್ರ ದಾನಿ ಅವರಿಗೆ ಕರ್ನಾಟಕ ಪತ್ರಿಕಾ ಅಕಾಡಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಎಚ್.ಆರ್. ಕುಲಕರ್ಣಿ ಸ್ಮಾರಕ ಪತ್ರಿಕಾ ಪ್ರಶಸ್ತಿ, ಜಗನ್ನಾಥರಾವ್ ಟಂಕಸಾಲಿ ಸ್ಮಾರಕ ಪತ್ರಿಕಾ ಪ್ರಶಸ್ತಿ, ಕರ್ನಾಟಕ ಗಮಕ ಕಲಾಪರಿಷತ್ತಿನ ಗಮಕ ವ್ಯಾಖ್ಯಾನ ಪ್ರಶಸ್ತಿ, ಟಿಎಸ್ಸಾರ್ ಪತ್ರಿಕಾ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಸುರೇಂದ್ರ ದಾನಿ ಅವರು 2010ರ ಮಾರ್ಚ್ 28ರಂದು ಈ ಲೋಕವನ್ನಗಲಿದರು.
ಚಿತ್ರಕೃಪೆ: ಹುಣಸವಾಡಿ ರಾಜನ್, ಸಂಪಾದಕರು
ಸಂಯುಕ್ತ ಕರ್ನಾಟಕ.
ಆತ್ಮೀಯ ಕೃತಜ್ಞತೆಗಳು: Sesha Chandrika
ಸಾರ್ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಳಪ್ಪ ಪತ್ತಾರ | On the birth anniversary artiste, musician and theatre personality Kalappa Pattar |

Mon Mar 28 , 2022
  ಕಾಳಪ್ಪ ಪತ್ತಾರ ಸಂಗೀತ, ಚಿತ್ರಕಲೆ, ರಂಗಭೂಮಿ ಮುಂತಾದ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದವರು. ಕಾಳಪ್ಪ ಪತ್ತಾರ ಅವರು 1916ರ ಮಾರ್ಚ್ 28ರಂದು ರಾಯಚೂರು ಜಿಲ್ಲೆಯ ತಳಕಲ್ಲಿನ ಬಡ ವಿಶ್ವಕರ್ಮ ಕುಟುಂಬವೊಂದರಲ್ಲಿ ಜನಿಸಿದರು. ಪತ್ತಾರರು ಶಾಲಾ ಕಾಲೇಜಿನ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿತದ್ದಕ್ಕಿಂತ ವಿಶಾಲ ಪ್ರಪಂಚದಲ್ಲಿ ತಿರುಗಾಟದ ಅನುಭವದಿಂದ ಕಲಿತದ್ದೇ ಅಪಾರ. 1934ರಲ್ಲಿ ಗಾಂಧೀಜಿಯವರು ಕರ್ನಾಟಕ ಪ್ರವಾಸ ಕೈಗೊಂಡು ಬಳ್ಳಾರಿಯಿಂದ ರೈಲಿನಲ್ಲಿ ಗದಗಿಗೆ ಪ್ರಯಾಣಿಸುವಾಗ ಭಾನಾಪುರ ರೈಲು ನಿಲ್ದಾಣದಲ್ಲಿ […]

Advertisement

Wordpress Social Share Plugin powered by Ultimatelysocial