ಟಿ. ಕೇಶವ ಭಟ್ಟ

ಟಿ. ಕೇಶವ ಭಟ್ಟ
ಪ್ರೊ. ಕೇಶವ ಭಟ್ಟರು ಕನ್ನಡದ ಮಹಾನ್ ವಿದ್ವಾಂಸರು. ಅವರು ಛಂದಸ್ಸು, ವ್ಯಾಕರಣ, ಅಲಂಕಾರ, ಹೀಗೆ ಕನ್ನಡ ಸಾಹಿತ್ಯದ ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಲ್ಲಿ ಒಬ್ಬರೆನಿಸಿದ್ದರು.
ಕೇಶವ ಭಟ್ಟರು ಕಾಸರಗೋಡಿನ ಬಾಯಾರು ಸಮೀಪದ ತಾಳ್ತಜೆ ಎಂಬಲ್ಲಿ 1920ರ ಫೆಬ್ರುವರಿ 2ರಂದು ಜನಿಸಿದರು. ತಂದೆ ಗೋವಿಂದ ಭಟ್ಟರು ಕೃಷಿಕರಾಗಿದಷ್ಟೇ ಅಲ್ಲದೆ ಜ್ಯೋತಿಷ್ಯ ಮತ್ತು ಯಕ್ಷಗಾನದಲ್ಲೂ ಪ್ರವೀಣರಾಗಿದ್ದರು. ತಾಯಿ ಸಾವಿತ್ರಮ್ಮ. ಪ್ರಾರಂಭಿಕ ಶಿಕ್ಷಣ ಪೆರೋಡಿಯಲ್ಲಿ, 3ನೇ ಫಾರಂವರೆಗೆ ಅಂದರೆ 7ನೆಯ ತರಗತಿಯವರೆಗೆ ನಡೆಯಿತು. ಕಾಸರಗೋಡು ಬೋರ್ಡ್‌ ಹೈಸ್ಕೂಲು ಸೇರಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಪ್ರಾಥಮಿಕ ಶಾಲಾ ಉಪಾಧ್ಯಾಯ ವೃತ್ತಿಯನ್ನು ಆರಂಭಿಸಿದರು.
ಕೇಶವ ಭಟ್ಟರಿಗೆ ಅಧ್ಯಾಪನದ ಜೊತೆಗೆ ಕನ್ನಡ-ಸಂಸ್ಕೃತ ಅಧ್ಯಯನ ಮೈಗೂಡಿತ್ತು. ಯಕ್ಷಗಾನ ಕಲಾಭ್ಯಾಸ ಅವರ ಆಸಕ್ತಿಯಾಯಿತು. ಸ್ವತಂತ್ರವಾಗಿ ಓದಿ ಮದರಾಸು ವಿಶ್ವವಿದ್ಯಾಲಯದಿಂದ ಕನ್ನಡ-ಸಂಸ್ಕೃತ ಪರೀಕ್ಷೆಯಲ್ಲಿ ವಿದ್ವಾನ್‌ ಪದವಿ ಪಡೆದರು. ಹಿಂದಿ ವಿಶಾರದ ಪರೀಕ್ಷೆಯಲ್ಲೂ ತೇರ್ಗಡೆಯಾದರು.
ಕೇಶವ ಭಟ್ಟರು ಯಕ್ಷಗಾನದ ಮೇಲಿನ ಆಸಕ್ತಿಯಿಂದ ಹಾಡುಗಾರಿಕೆ ಹಾಗೂ ಮದ್ದಲೆ ನುಡಿಸುವುದನ್ನು ಕಲಿತರು. ಅಧ್ಯಾಪಕ ವೃತ್ತಿಯಲ್ಲಿದ್ದುಕೊಂಡೇ ಎಂ.ಎ. ಪದವಿಗಳಿಸಿ, ಪೆರ್ಲದ ಸತ್ಯನಾರಾಯಣ ಹೈಸ್ಕೂಲು, ದಕ್ಷಿಣ ಕೊಡಗಿನ ಹಾತೂರು ಹೈಯರ್ ಸೆಕೆಂಡರಿ ಶಾಲೆ, ನಂತರ ಕೊಡಗಿನ ಬೇಸಿಕ್‌ ಟ್ರೈನಿಂಗ್‌ ಕಾಲೇಜು, ಸೆಂಟ್ರಲ್‌ ಹೈಸ್ಕೂಲ್‌, ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಮೈಸೂರಿನ ಮಹಾರಾಣಿ ವುಮೆನ್ಸ್‌ ಟ್ರೈನಿಂಗ್‌ ಕಾಲೇಜ್‌, ಮಹಾರಾಜ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ದುಡಿದು ನಂತರ ಬೆಂಗಳೂರಿಗೆ ಬಂದರು. ಬೆಂಗಳೂರಿನ ಎಂ. ಇ .ಎಸ್‌. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಕಾಲ ಸೇವೆ ಸಲ್ಲಿಸಿ, ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯು.ಜಿ.ಸಿ ನೆರವಿನಿಂದ ಸಂಶೋಧನ ಪ್ರಾಧ್ಯಾಪಕರಾಗಿಯೂ ಕೆಲಕಾಲ ಸೇವೆ ಸಲ್ಲಿಸಿದರು.
ಕೇಶವ ಭಟ್ಟರು ಹಲವಾರು ಸಂಘ-ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದರು. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಮತ್ತು ಬಿ.ಎಂ.ಶ್ರೀ ಪ್ರತಿಷ್ಠಾನದ ಷಾಣ್ಮಾಸಿಕ ವಿದ್ವತ್‌ ಪತ್ರಿಕೆಯಾದ ‘ಕರ್ನಾಟಕ ಲೋಚನ’ದ ಪ್ರಧಾನ ಸಂಪಾದಕರಾಗಿದ್ದರು. ಕಿರಿಯರ ವಿಶ್ವಕೋಶ ‘ಜ್ಞಾನ ಗಂಗೋತ್ರಿ’ಯ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು. ಎಚ್‌.ಎಲ್‌. ನಾಗೇಗೌಡರ ಸಂಪಾದಕತ್ವದಲ್ಲಿ ಪ್ರಕಟವಾದ ‘ಜಾನಪದ ಕೋಶ’ ರಚನಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ಕೇಶವ ಭಟ್ಟರು ಕಾವ್ಯಕ್ಕೆ ಸಂಬಂಧಿಸಿದಂತೆ ಸತ್ತ್ವಾಲೋಕನಂ (ಚಂಪೂಕಾವ್ಯ), ಶ್ರೀ ಚನ್ನವೀರಶರಣ ಕಥಾಮೃತ (ವಾರ್ಧಕ ಷಟ್ಪದಿ); ಕನ್ನಡ ಪ್ರಾಚೀನ ಸಾಹಿತ್ಯ ಲಕ್ಷಣಗಳು-ಮರುನೋಟ, ದ.ಕ. ಜಿಲ್ಲಾ ಜಾನಪದಗೀತೆಗಳು ಮುಂತಾದ ಸಂಶೋಧನಾ ಗ್ರಂಥಗಳು; ಲಂಕಾದಹನ, ಪಂಚವಟಿ ವಾಲಿ ಸುಗ್ರೀವ ಕಾಳಗ ಮುಂತಾದ ಯಕ್ಷಗಾನ ಪ್ರಸಂಗಗಳು; ಭಾಷಾ ದೀಪಿಕೆ, ಭಾಷಾಭಾಸ್ಕರ, ಭಾವಾರ್ಥ ವಿಸ್ತರಣ, ಕಾವ್ಯ ಪದಮಂಜರಿ ಮುಂತಾದ ಶಬ್ದಕೋಶ-ಶೈಕ್ಷಣಿಕ ಕೃತಿಗಳು; ದಿಲೀಪ, ಕಾರ್ತಿಕೇಯ, ವಿಶ್ವಕರ್ಮ, ಪಾರ್ವತಿ , ಗಾಂಧಾರಿ, ಗೋವಿನ ಹಾಡು ಮೊದಲಾದ ಬಾಲ ಸಾಹಿತ್ಯ ಕೃತಿಗಳು ಸೇರಿ ಒಟ್ಟು 60 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದರು.
ಕೇಶವ ಭಟ್ಟರಿಗೆ ಸತ್ತ್ವಾಲೋಕನಂ ಚಂಪೂಕಾವ್ಯಕ್ಕೆ ರಾಜ್ಯಸರ್ಕಾರದ ಪ್ರಶಸ್ತಿ (1969), ‘ಹವ್ಯಕರ ಶೋಭಾನೆಗಳು’ ಸಂಕಲನಕ್ಕೆ ಯಕ್ಷಗಾನ ಹಾಗೂ ಜಾನಪದ ಅಕಾಡಮಿ ಪ್ರಶಸ್ತಿ 1986ರಲ್ಲಿ, 1998ರಲ್ಲಿ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, 2001ರಲ್ಲಿ ಜಾನಪದ ತಜ್ಞ ಪ್ರಶಸ್ತಿ, 2003ರಲ್ಲಿ ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿಗಳು ಸಂದವು.
ಕೇಶವಭಟ್ಟರು 2005ರ ಆಗಸ್ಟ್‌ 20ರಂದು ಈ ಲೋಕವನ್ನಗಲಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ ಬಿಡಿ, ಅವರು ನಮ್ಮನ್ನು ಮೋಸಗೊಳಿಸಿದರು: ರಷ್ಯಾದ ಸೈನಿಕನ ಸಂದೇಶವನ್ನು ತನ್ನ ಪಡೆಗಳಿಗೆ ವಶಪಡಿಸಿಕೊಂಡರು

Fri Mar 4 , 2022
  ಕಣ್ಣುಮುಚ್ಚಿ, ಉಕ್ರೇನಿಯನ್ನರು ಸೆರೆಹಿಡಿದ ರಷ್ಯಾದ ಸೈನಿಕನು ಇಟ್ಟಿಗೆ ಕಟ್ಟಡದಲ್ಲಿ ಕುಳಿತಿದ್ದಾಗ ಭಯಭೀತನಾಗಿದ್ದನು. ಮಾಸ್ಕೋದಲ್ಲಿರುವ ತನ್ನ ಪಡೆಗಳು ಮತ್ತು ರಷ್ಯಾದ ಕಮಾಂಡರ್‌ಗಳಿಗೆ ಯಾವ ಸಂದೇಶವನ್ನು ಕಳುಹಿಸಲು ಬಯಸುತ್ತೀರಿ ಎಂದು ಕೇಳಿದಾಗ, ಉಕ್ರೇನಿಯನ್ನರು ವಶಪಡಿಸಿಕೊಂಡ ಸೈನಿಕರು ಹೇಳಿದರು, “ನಾನೂ ಹೇಳುವುದಾದರೆ, ಅವರು ನಮ್ಮನ್ನು ಮೋಸಗೊಳಿಸಿದ್ದಾರೆ … ನಮ್ಮಲ್ಲಿ 90 ಪ್ರತಿಶತದಷ್ಟು ಜನರು ಮನೆಗೆ ಹೋಗಲು ಒಪ್ಪುತ್ತಾರೆ.” ಮಾಸ್ಕೋದಲ್ಲಿ ಮನೆಗೆ ಹಿಂದಿರುಗಿದ ತನ್ನ ಮಿಲಿಟರಿ ಮೇಲಧಿಕಾರಿಗಳನ್ನು ಉಲ್ಲೇಖಿಸಿ, ಸೈನಿಕನು ವರದಿಯೊಂದರಿಂದ ಉಲ್ಲೇಖಿಸಲ್ಪಟ್ಟಿದ್ದಾನೆ, “ನಮಗೆ […]

Advertisement

Wordpress Social Share Plugin powered by Ultimatelysocial