ದಾವಣಗೆರೆಯಲ್ಲಿ ಮೂರು ದಿನ ರಾಜ್ಯ ಮಟ್ಟದ ಕೃಷಿ ಮೇಳ.

 

 

ದಾವಣಗೆರೆ, ಫೆಬ್ರವರಿ 4: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತಪ್ಪು ಆರ್ಥಿಕ ನೀತಿಗಳಿಂದಾಗಿ ರೈತರು ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ತಲೆದೋರಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ಆತಂಕ ವ್ಯಕ್ತಪಡಿಸಿದರು.

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಮೂರು ದಿನಗಳ ಕಾಲ ಡಾ.ಸಾಯಿಲ್ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಮೈಕ್ರೋಬಿ ಫೌಂಡೇಷನ್ ಹಾಗೂ ಯು.ಎಸ್. ಕಮ್ಯುನಿಕೇಷನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಕೃಷಿ ಮೇಳದ ವೇದಿಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ರೈತರು ನಷ್ಟ ಅನುಭವಿಸುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರ ಎಂಬುದು ಕೇವಲ ಬಾಯಿಮಾತಿನಲ್ಲಿ ಇದೆಯೇ ವಿನಾಃ ಅಭ್ಯುದಯಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ರೈತರ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಆದಾಯ ಕಡಿಮೆಯಾಗುತ್ತಿದೆ. ನಷ್ಟ ಅನುಭವಿಸುತ್ತಿರುವ ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಉತ್ಪಾದನಾ ವೆಚ್ಚಕ್ಕೆ ಶೇ.50ರಷ್ಟು ಸೇರಿಸಿ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಬೇಕೆಂಬ ಡಾ.ಸ್ವಾಮಿನಾಥನ್ ವರದಿಯನ್ನು ಯಥಾವತ್ ಜಾರಿಗೊಳಿಸಿದರೆ ರೈತರ ಬದುಕು ಹಸನಾಗುತ್ತದೆ. ಇಲ್ಲದಿದ್ದರೆ ಯಾವುದೇ ಪ್ರಯೋಜನ ಆಗದು. ಸರ್ಕಾರ ಪ್ರೋತ್ಸಾಹ ಧನ ಹಾಗೂ ಸಹಾಯಧನದ ಅಗತ್ಯವೂ ಆಗ ರೈತರಿಗೆ ಬೇಕಾಗದು ಎಂದು ಅಭಿಪ್ರಾಯಪಟ್ಟರು.

ಹಸಿರು ಕ್ರಾಂತಿಗೂ ಮುನ್ನ ರೈತರು ಸ್ವಾವಲಂಬಿಗಳಾಗಿದ್ದರು

ದೇಶದಲ್ಲಿನ ಆಹಾರ ಕೊರತೆ ನೀಗಿಸಲು ಹಸಿರು ಕ್ರಾಂತಿ ಬಂತು. ಇದಕ್ಕೂ ಮುನ್ನ ರೈತರಲ್ಲಿ ಹಣ ಇಲ್ಲದಿದ್ದರೂ ನೆಮ್ಮದಿ ಇತ್ತು. ರೋಗ-ರುಜಿನ ಇಲ್ಲದೆ ಬೇರೆಯವರಿಗೂ ವಿಷಮುಕ್ತ ಆಹಾರ ತಿನ್ನಿಸದೆ ರೈತರು ಸ್ವಾವಲಂಬಿಗಳಾಗಿದ್ದರು. ಇಂತಹ ರೈತರನ್ನು ಹೈಬ್ರಿಡ್ ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕಗಳ ವಿಷವರ್ತುಲಕ್ಕೆ ಸಿಲುಕಿಸಲಾಯಿತು. ಹೀಗಾಗಿ ಬ್ಯಾಂಕ್, ಸೊಸೈಟಿಗಳಲ್ಲಿ ಸಾಲ ಮಾಡಿಕೊಂಡು ರೈತರ ಜಮೀನು, ಮನೆ ಹರಾಜಿಗೆ ಬರುವಂತಾಗಿದೆ ಎಂದರು.

ಉತ್ಪನ್ನಗಳ ಮೌಲ್ಯವರ್ಧನೆಗಾಗಿ ರೈತ ಉತ್ಪಾದಕ ಕಂಪನಿ ರಚನೆ

ಕೃಷಿ ಇಲಾಖೆ ಉಪನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಕೃಷಿಗೆ ಅವಶ್ಯಕವಾಗಿ ಅಗತ್ಯವಿರುವ ಸಾಮಗ್ರಿಗಳನ್ನು ಒಂದೇ ಸೂರಿನಡಿ ಕಲ್ಪಿಸುವಲ್ಲಿ ಕೃಷಿ ಮೇಳ ಸಹಕಾರಿಯಾಗಿದೆ. ಖರೀದಿದಾರರು ಹಾಗೂ ರೈತರನ್ನು ಜೋಡಿಸುವ ಮೂಲಕ

ಮಾರುಕಟ್ಟೆ ಕೂಡ ಒದಗಿಸಲಿದೆ. ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಣೆ ಆಗಿರುವುದರಿಂದ ಜಿಲ್ಲೆಯಲ್ಲಿ ಸಿರಿಧಾನ್ಯ ಉತ್ಪನ್ನಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಉತ್ಪನ್ನಗಳ ಮೌಲ್ಯವರ್ಧನೆಗಾಗಿ ರೈತ ಉತ್ಪಾದಕ ಕಂಪನಿಗಳನ್ನು ರಚಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ತಲಾ 1 ಸಾವಿರ ಷೇರುದಾರರನ್ನು ಹೊಂದಿರುವ 19 ರೈತ ಕಂಪನಿಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.

ಮೇಳದಲ್ಲಿ ಕೃಷಿ ಯಂತ್ರೋಪಕರಣ, ಸಿರಿಧಾನ್ಯ, ಸಾವಯವ ಹಾಗೂ ಗೃಹೋತ್ಪನ್ನ ವಸ್ತು ಸೇರಿದಂತೆ ಅಗತ್ಯ ಸಾಮಗ್ರಿಗಳು ಕಣ್ಮನ ತಣಿಸಿದವು. ವೇದಿಕೆಯಲ್ಲಿ ಯು.ಎಸ್. ಕಮ್ಯುನಿಕೇಷನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತ್ಯಾಗರಾಜ್, ಮೈಕ್ರೋಬಿ ಫೌಂಡೇಷನ್‌ನ ಮಹದೇವಪ್ಪ ದಿದ್ದಿಗಿ, ರವಿ ಯೋಗರಾಜ್, ಚರಣ್ ಶಂಕರನಾಯ್ಡು, ಕಿರುತೆರೆ ನಟ ಡಾ.ಹನಿಯೂರು ಚಂದ್ರೇಗೌಡ, ಜಾನಪದ ಕಲಾವಿದ ಯುಗಧರ್ಮ ರಾಮಣ್ಣ, ಬಿ.ಸಿ.ವಿಶ್ವನಾಥ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಫೆಬ್ರವರಿ 5ರಂದು ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕೃಷಿ ಮೇಳದ ಉದ್ಘಾಟನೆ ನೆರವೇರಿಸಿದ ಶಾಸಕ ಎಸ್. ಎ. ರವೀಂದ್ರನಾಥ್ ಅವರು, ಕೃಷಿ ಮೇಳ ಯಶಸ್ವಿಯಾಗಲಿ ಎಂದು ಹಾರೈಸಿದರು.

ರೈತರಿಗೆ ಅನುಕೂಲವಾಗಿರುವ ಈ ಕೃಷಿ ಮೇಳ ವಿಶೇಷತೆ ಹೊಂದಿದೆ. ಇದೊಂದು ಉತ್ತಮ ಕಾರ್ಯಕ್ರಮ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಉತ್ತಮ ಮೇಳ ಆಯೋಜಿಸಲಾಗಿದ್ದು, ರೈತರಿಗೆ ಒಂದೇ ಸೂರಿನಡಿ ಮಾಹಿತಿ ದೊರಕುತ್ತದೆ. ಇದೊಂದು ಉತ್ತಮ ಮೇಳ ಎಂದು ಹೇಳಿದರು.

ಡಾ. ಸಾಯಿಲ್ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಮೈಕ್ರೋಬಿ ಫೌಂಡೇಷನ್ ಹಾಗೂ ಯು.ಎಸ್. ಕಮ್ಯುನಿಕೇಷನ್ ಆಶ್ರಯದಲ್ಲಿ ರಾಜ್ಯಮಟ್ಟದ ಕೃಷಿಮೇಳ ನಡೆಯುತ್ತಿದೆ. ಫೆಬ್ರವರಿ 5ರಂದು ಬೆಳಗ್ಗೆ 11ಕ್ಕೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಈ ಬಾರಿಯ ಕೃಷಿಮೇಳಕ್ಕೆ ಕೃಷಿ ಮಂತ್ರಿ ಬಿ. ಸಿ. ಪಾಟೀಲ್‌ ಆಗಮಿಸಿ ರೈತರಿಗೆ ಹಾಗೂ ಅಧಿಕಾರಿಗಳಿಗೆ ಉಪಯುಕ್ತ ಸಲಹೆ ಸೂಚನೆ ನೀಡಲಿದ್ದಾರೆ.

ಯುವ ಕೃಷಿಕರಿಗೆ ಉತ್ತೇಜನ ನೀಡಲು ಕೃಷಿ ಮೇಳ

ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 7.30ರವರೆಗೆ ಮಾತ್ರ ಪ್ರದರ್ಶನ ಇರಲಿದೆ. ಕೃಷಿ ಮೇಳದಲ್ಲಿ ಇನ್ನೂ ಒಂದು ವರ್ಷದ ಅವಧಿಯೊಳಗೆ ಮೈಕ್ರೋಬಿ ಫೌಂಡೇಷನ್ ವತಿಯಿಂದ 2000 ನವ್ಯೋದ್ಯಮಗಳಿಗೆ ಅವಕಾಶ ಕಲ್ಪಿಸುವ ತರಬೇತಿಯನ್ನು ರಾಜ್ಯದ ನಾಲ್ಕು ಭಾಗಗಳಲ್ಲಿ ನೀಡಲಾಗುತ್ತಿದೆ‌. ಜಿಲ್ಲೆಯ ಹಾಗೂ ರಾಜ್ಯದ ಯುವಕರು, ಕೃಷಿ ಉದ್ದಿಮೆದಾರರು ಇದರ ಸದುಪಯೋಗ ಪಡೆಯಬೇಕು. ಈ ಮೇಳದಲ್ಲಿ ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಸಂಪೂರ್ಣ ಚಿತ್ರಣ ಬಿಂಬಿಸುವ 170ಕ್ಕೂ ಹೆಚ್ಚು ಸ್ಟಾಲ್‌ಗಳಿವೆ ಎಂದು ಮೈಕ್ರೋಬಿ ಫೌಂಡೇಶನ್‌ನ ಜಿಲ್ಲಾ ಸಂಯೋಜಕ ಮಹದೇವಪ್ಪ ದಿದ್ದಿಗೆ ತಿಳಿಸಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೇಯಸಿಗಾಗಿ ಚಿನ್ನಾಭರಣ ಕಳ್ಳತನ:

Sat Feb 4 , 2023
ಚಾಮರಾಜನಗರ, ಫೆಬ್ರವರಿ 4: ಅಡುಗೆ ಮನೆಯ ಕಿಟಕಿ ಸರಳು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರೇಮಿಗಳು ಸೇರಿ ಮೂವರನ್ನು ಚಾಮರಾಜನಗರ ಜಿಲ್ಲೆ ಪೊಲೀಸರು ಜೈಲಿಗಟ್ಟಿದ್ದಾರೆ. ಭರತ್ ಹಾಗೂ ಕಾವ್ಯ, ಲೋಹಿತ್ ಕುಮಾರ್ ಬಂಧಿತ ಆರೋಪಿಗಳು. ಭರತ್ ಹಾಗೂ ಕಾವ್ಯ ಪ್ರೇಮಿಗಳಾದ್ದು, ಹಣದ‌ ಮೋಹಕ್ಕೆ ಬಿದ್ದು ಭರತ್ ಚಿನ್ನವನ್ನು ಕದ್ದು ಕಾವ್ಯಳಿಗೆ ತಂದು ಕೊಟ್ಟಿದ್ದ. ಈ ಪ್ರೇಮಿಗಳಿಗೆ ಲೋಹಿತ್ ಎನ್ನುವಾತ ಸಹಾಯ ಮಾಡಿದ್ದು, ಸದ್ಯ ಆತನೂ ಜೈಲುಪಾಲಾಗಿದ್ದಾನೆ. […]

Advertisement

Wordpress Social Share Plugin powered by Ultimatelysocial