ಉದಯ್ ಕುಮಾರ್

 
ಕಲಾಕೇಸರಿ ಉದಯ್ ಕುಮಾರ್ ಕನ್ನಡ ಚಲನಚಿತ್ರರಂಗದ ಅಪ್ರತಿಮ ಪ್ರತಿಭೆಗಳಲ್ಲಿ ಒಬ್ಬರು.
ಉದಯ್ ಕುಮಾರ್ 1935ರ ಮಾರ್ಚ್ 5ರಂದು ಜನಿಸಿದರು. ಅವರ ತಂದೆ ಶ್ರೀನಿವಾಸ ಶಾಸ್ತ್ರಿಗಳು ಆನೇಕಲ್ಲಿನಲ್ಲಿ ಶಾನುಭೋಗರಾಗಿದ್ದರು. ಉದಯ್ ಕುಮಾರ್ ಅವರ ಮೂಲ ಹೆಸರು ಸೂರ್ಯನಾರಾಯಣ ಶಾಸ್ತ್ರಿ. ವ್ಯಾಯಾಮ ಶಿಕ್ಷಣ ನೀಡುತ್ತಿದ್ದ ಉದಯ್ ಕುಮಾರ್ ಆಕಸ್ಮಿಕವಾಗಿ ಗುಬ್ಬಿ ಕಂಪನಿಯ ಮೂಲಕ ರಂಗಭೂಮಿ ಸೇರಿ, ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.
‘ರತ್ನಗಿರಿ ರಹಸ್ಯ’ ಚಿತ್ರದ ಟಾರ್ಜಾನ್ ಮಾದರಿಯ ಪಾತ್ರ ಉದಯ್ ಕುಮಾರ್ ಅವರಿಗೆ ಅಪಾರ ಜನಪ್ರಿಯತೆ ತಂದಿತು. ಅಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರರಂಗದಲ್ಲಿನ ಜನಪ್ರಿಯತೆಯ ಜೊತೆಗೆ ತಮಿಳು, ತೆಲುಗು ಮತ್ತು ಹಲವು ಹಿಂದಿ ಚಲನಚಿತ್ರಗಳಲ್ಲೂ ಅಭಿನಯಿಸಿ ಎಲ್ಲೆಡೆ ಜನಪ್ರಿಯರಾಗಿದ್ದರು. ಅವರು ನಟಿಸಿದ್ದ ಚಿತ್ರಗಳ ಸಂಖ್ಯೆ ಇನ್ನೂರಕ್ಕೂ ಹೆಚ್ಚಿನದು. ಭಾಗ್ಯೋದಯ, ರತ್ನಗಿರಿ ರಹಸ್ಯ, ಚಂದವಳ್ಳಿಯ ತೋಟ, ವೀರಕೇಸರಿ, ಬೆಟ್ಟದ ಹುಲಿ, ಚಂದ್ರಕುಮಾರ, ವಿಜಯನಗರದ ವೀರಪುತ್ರ, ಶ್ರೀ ರಾಮಾಂಜನೇಯ ಯುದ್ಧ, ಸರ್ವಜ್ಞ, ಸ್ಕೂಲ್ ಮಾಸ್ಟರ್, ಮಿಸ್ ಲೀಲಾವತಿ, ಮಧುಮಾಲತಿ, ಸತ್ಯ ಹರಿಶ್ಚಂದ್ರ, ತ್ರಿವೇಣಿ, ಕಲಾವತಿ, ಹೇಮಾವತಿ ಮುಂತಾದವು ಅವರ ಕುರಿತಾದ ನೆನಪಿನಲ್ಲಿ ಮೂಡುವ ಕೆಲವು ಚಿತ್ರಗಳು.
ಚಲನಚಿತ್ರರಂಗದ ಏಳು ಬೀಳುಗಳಲ್ಲಿ ಪ್ರಖ್ಯಾತ ನಾಯಕನಟ, ಪೋಷಕನಟ, ಖಳನಟ ಹೀಗೆ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ ಉದಯ್ ಕುಮಾರ್ ತಮ್ಮ ಅಭಿನಯದಲ್ಲಿದ್ದ ತನ್ಮಯತೆಯಿಂದ ಚಿತ್ರಪ್ರೇಮಿಗಳ ಕಣ್ಮಣಿಯಾಗಿದ್ದರು. ಅದರಲ್ಲೂ ಬಿರುಸು ಮಾತಿನ ನಿಷ್ಟುರವಾದಿ ಪಾತ್ರಗಳಿಗೆ ಅವರಂತಹ ಕಲಾವಿದ ಅಪರೂಪ ಎಂದರೂ ಸರಿಯೇ. ವಿಶ್ವಾಮಿತ್ರನ ಪಾತ್ರಧಾರಿಯಾಗಿ ಅವರು ನಟಿಸಿದ್ದ ‘ಸತ್ಯ ಹರಿಶ್ಚಂದ್ರ’ದ ಪಾತ್ರ ಅವಿಸ್ಮರಣೀಯವಾದದ್ದು. ಸಂಧ್ಯಾರಾಗದಲ್ಲಿ ರಾಜ್ ಕುಮಾರ್ ಅಣ್ಣನಾಗಿ ನಿಷ್ಠುರಗುಣದ ವ್ಯಕ್ತಿಯಾಗಿ ನಟಿಸಿದ ಅವರ ಪಾತ್ರ ಕೂಡ ಮನಸ್ಸಿನಲ್ಲಿ ಉಳಿಯುವಂತದ್ದು. ರಾಮಾಂಜನೇಯ ಯುದ್ಧ ಚಿತ್ರದಲ್ಲಿ ಹನುಮನ ಪ್ರಾಣ ಹಾಡಿನಲ್ಲಿ ಚಿತ್ರಣ ಮುಗಿದ ಎಷ್ಟೋ ಸಮಯವಾದರೂ ಅವರು ತಮ್ಮ ಪಾತ್ರದಲ್ಲಿ ಪೂರ್ಣ ತನ್ಮಯರಾಗಿಬಿಟ್ಟಿದ್ದರೆಂದು ಅಂದಿನ ದಿನಗಳಲ್ಲಿ ಡಾ. ರಾಜ್ ಕುಮಾರ್ ಅವರು ಸ್ಮರಿಸುತ್ತಿದ್ದರು.
ಮುಂದೆ ಹೇಮಾವತಿ ಚಿತ್ರದಲ್ಲಿನ ಪ್ರಧಾನ ಪಾತ್ರ ಮತ್ತು ಬಿಳಿ ಹೆಂಡ್ತಿ ಚಿತ್ರದ ಸಣ್ಣ ಪೋಷಕ ಪಾತ್ರಗಳಲ್ಲಿ ಅವರು ನೀಡಿದ ಅಮೋಘ ಅಭಿನಯ ಅಮರವಾದದ್ದು.
1965ರಲ್ಲಿ ಇದೇ ಮಹಾಸುದಿನ ಎಂಬ ಚಿತ್ರ ನಿರ್ಮಿಸಿದ್ದರು. ಸ್ವತಃ ಬರಹಗಾರರಾದ ಉದಯಕುಮಾರ್‌ರವರು ದ್ವಿಪದಿಗಳು, ನಾಟಕಗಳು ಹಾಗೂ ಚಿತ್ರಗೀತೆಗಳನ್ನು ಸಹಾ ರಚಿಸಿದ್ದರು. ಸಿನಿಮಾ ಮತ್ತು ರಂಗತರಬೇತಿಗಾಗಿ ಕಲಾ ಶಾಲೆಯನ್ನು ಕೂಡಾ ತೆರೆದಿದ್ದರು. ರಂಗತಂಡವನ್ನು ಕಟ್ಟಿ ಬೆಳೆಸಿದ್ದರು
ಒಂದು ಕಾಲದಲ್ಲಿ ಅಪಾರ ವೈಭವದಿಂದ ಬದುಕಿ ಚಿತ್ರರಂಗದ ಬೇಡಿಕೆಯ ಶೃಂಗದಲ್ಲಿದ್ಧ ಉದಯ್ ಕುಮಾರ್ ಇಳಿಮುಖದ ರೇಖೆಯಲ್ಲಿ ಸಣ್ಣಪುಟ್ಟ ಪಾತ್ರಗಳ ಮೊರೆಹೊಗುವಂತಹ ಸ್ಥಿತಿಯಲ್ಲಿ ತಮ್ಮ ಕೊನೆಯ ವರ್ಷಗಳನ್ನು ಕಳೆದರು.
ಉದಯಕುಮಾರ್ ತಮ್ಮ ಸಾವಿನ ಹಿಂದಿನ ದಿನ ಒಂದು ಕಾಗದದ ಚೂರಿನ ಮೇಲೆ ಬರೆದಿದ್ದರಂತೆ – “ಭಗವಂತ ಎತ್ತಿಕೊಂಡಿರುವ ಕೂಸು ನಾನು; ನನ್ನ ಭವಿಷ್ಯ ಏನು ಎಂಬುದು ಅವನಿಗೊಬ್ಬನಿಗೇ ಗೊತ್ತಿದೆ.” ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದಾಗ ಉದಯಕುಮಾರ್ ವ್ಯಕ್ತಮಾಡಿದ ಪ್ರತಿಕ್ರಿಯೆ: “ಕಲಾವಿದನ ಬಾಳ ಬವಣೆ ಏನು ಎಂಬುದು ವೈದ್ಯರಿಗೇನು ಗೊತ್ತು? ನನ್ನ ಬದುಕು ನಿತ್ಯ ಸಂಗ್ರಾಮವಾಗಿರುವಾಗ ಒಂದು ಕ್ಷಣವಾದರೂ ಪುರುಸೊತ್ತು ಹೇಗೆ ತಾನೇ ಸಾಧ್ಯ?”. ಉದಯಕುಮಾರ್ ಅವರಿಗೆ ಶ್ರದ್ಧಾಂಜಲಿ ಹೇಳುತ್ತಾ ಡಾ. ಹಾ. ಮಾ. ನಾಯಕ್ ಬರೆದಿದ್ದಾರೆ “ಇದು ನಾವು ನಮ್ಮ ಕಲಾವಿದರನ್ನು ನೋಡಿಕೊಳ್ಳುವ ಬಗೆಗೊಂದು ವ್ಯಾಖ್ಯಾನ. ಕೆಲವು ಅತಿರೇಕಗಳನ್ನುಳಿದರೆ ಉದಯಕುಮಾರ್ ಒಬ್ಬ ಶ್ರೇಷ್ಠ ನಟ. ಅವರಿಗೆ ಬದುಕು ಸಂಗ್ರಾಮ! ರಾಜಕೀಯವಿಲ್ಲದೆ ಜನರು ಕಲಾವಿದರನ್ನು ಕಾಣಬೇಕು; ಕಲಾವಿದರೂ ತಮ್ಮ ಬದುಕನ್ನು ಒಂದು ಶಿಸ್ತಿಗೆ ಒಳಪಡಿಸಬೇಕು. ಇದು ಉದಯಕುಮಾರರ ಜೀವನ ಕಲಿಸುವ ಒಂದು ಪಾಠ.”
ಉದಯಕುಮಾರ್ ಕನ್ನಡದ ಕಟ್ಟಾಭಿಮಾನಿ. ಜನರನ್ನು ಉದ್ರೇಕಿಸುವಂತೆ, ನಿರಭಿಮಾನಕ್ಕಾಗಿ ನಾಚುವಂತೆ ಮಾಡಬಲ್ಲ ಮಾತುಗಾರಿಕೆ ಅವರಲ್ಲಿತ್ತು.

ತಮ್ಮ ಐವತ್ತು ವರ್ಷಗಳ ಬದುಕಿನ ಆಸುಪಾಸಿನಲ್ಲಿ ನಿಧನರಾದ ಉದಯ್ ಕುಮಾರ್ ಕನ್ನಡ ಚಿತ್ರರಂಗದ ಸ್ಮರಣೀಯ ಗಣ್ಯರಲ್ಲಿ ಪ್ರಮುಖರಾಗಿ ನಿಲ್ಲುವವರು ಎಂಬುದು ಮಾತ್ರ ನಿರ್ವಿವಾದ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಿ. ವಿ. ಶಿವಾನಂದ್ | On the birth anniversary of great theatre personality G. V. Shivanand |

Wed Mar 16 , 2022
  ಜಿ. ವಿ. ಶಿವಾನಂದ್ ಪ್ರಖ್ಯಾತ ರಂಗಕರ್ಮಿ ಮತ್ತು ಚಲನಚಿತ್ರ ಕಲಾವಿದರು. ಶಿವಾನಂದ್ 1935ರ ಮಾರ್ಚ್ 16ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ವೃತ್ತಿ ರಂಗಭೂಮಿಯ ಮೇರು ಶಿಖರರಾದ ನಾಟಕ ರತ್ನ ಡಾ. ಗುಬ್ಬಿವೀರಣ್ಣನವರು. ತಾಯಿ ಜಿ. ಸುಂದರಮ್ಮನವರು. ವಿಜ್ಞಾನ ಪಧವೀದರರಾದರೂ ನಾಟಕದ ವಾತಾವರಣದಲ್ಲೆ ಬೆಳೆದ ಪರಿಣಾಮವಾಗಿ ನಾಟಕದ ಕಡೆಯೇ ಆಕರ್ಷಿತರಾದರು. ಬಾಲ್ಯದಲ್ಲಿ ಕೃಷ್ಣ, ಪ್ರಹ್ಲಾದ ಮುಂತಾದ ಬಾಲ ಪಾತ್ರಗಳನ್ನು ನಿರ್ವಹಿಸಿದ ಶಿವಾನಂದರು ಬೇಸಿಗೆ ರಜೆಯಲ್ಲಿ ಕಂಪನಿ ನಾಟಕಗಳು ನಡೆಯುತ್ತಿದ್ದೆಡೆಗೆ ಹೋಗಿ […]

Advertisement

Wordpress Social Share Plugin powered by Ultimatelysocial