ಉಗ್ರಖಾತೆಗೆ ಹಣದ ಹೊಳೆ: 880 ಕೋಟಿ ರೂ. ಆಸ್ತಿ ಜಪ್ತಿ; ತಲೆಬೇನೆ ತಂದ ಟೆರರ್ ಫಂಡಿಂಗ್

ಉಗ್ರಖಾತೆಗೆ ಹಣದ ಹೊಳೆ: 880 ಕೋಟಿ ರೂ. ಆಸ್ತಿ ಜಪ್ತಿ; ತಲೆಬೇನೆ ತಂದ ಟೆರರ್ ಫಂಡಿಂಗ್

ಭಾರತಕ್ಕೀಗ ಭಯೋತ್ಪಾದಕರ ಜತೆಗೆ ಭಯೋತ್ಪಾದನಾ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವವರೂ ದೊಡ್ಡ ತಲೆಬೇನೆಯಾಗಿದ್ದಾರೆ. ಉಗ್ರವಾದ ಮಟ್ಟಹಾಕಲು ಹಲವು ಬಿಗಿ ಕಾನೂನು ಕ್ರಮ ಜಾರಿಯಾಗಿದ್ದರೂ ಕಳೆದ 3 ವರ್ಷದಲ್ಲಿ ಉಗ್ರರಿಗೆ ಹಣಕಾಸು ಸಹಾಯ (ಟೆರರ್ ಫಂಡಿಂಗ್)ಸಂಬಂಧ 64 ಪ್ರಕರಣಗಳು ದಾಖಲಾಗಿವೆ.

ಒಟ್ಟಾರೆ 880 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಜಪ್ತಿಯಾಗಿರುವುದು ಈ ಸಮಸ್ಯೆಯ ಗಂಭೀರತೆಯನ್ನು ಸಾರುತ್ತದೆ.

ಕೇಂದ್ರ ಗೃಹ ಇಲಾಖೆ ಮಾಹಿತಿ ಪ್ರಕಾರ 2018ರಿಂದ 2021ರ ನವೆಂಬರ್ ಅಂತ್ಯದವರೆಗೆ ಕರ್ನಾಟಕ ಸೇರಿ ದೇಶದ ವಿವಿಧೆಡೆ ಉಗ್ರರಿಗೆ ಹಣ ವರ್ಗಾವಣೆ ಹಾಗೂ ನಕಲಿ ನೋಟು ಚಲಾವಣೆಗೆ ಸಂಬಂಧಿಸಿದಂತೆ ಎನ್​ಐಎ (ರಾಷ್ಟ್ರೀಯ ತನಿಖಾ ದಳ)64 ಪ್ರಕರಣ ದಾಖಲಿಸಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆ 2022ರ ಅನ್ವಯ 24 ಪ್ರಕರಣಗಳಲ್ಲಿ ಚಾರ್ಜ್​ಶೀಟ್ ಸಲ್ಲಿಸಿದೆ. ಉಳಿದ ಪ್ರಕರಣಗಳಲ್ಲಿ ಸಾಕ್ಷ್ಯಸಂಗ್ರಹ ಪ್ರಕ್ರಿಯೆ ಮುಂದುವರಿದಿದೆ.

ಎನ್​ಐಎ ಸಂಗ್ರಹಿಸಿದ ಸಾಕ್ಷ್ಯಾಧಾರದ ಮೇಲೆ ತನಿಖೆ ಮುಂದುವರಿಸಿರುವ ಜಾರಿ ನಿರ್ದೇಶನಾಲಯ (ಇಡಿ), ಉಗ್ರರಿಗೆ ಹಣ ವರ್ಗಾವಣೆ ಸಂಬಂಧ ಭಾರತದಲ್ಲಿ ಅಂದಾಜು 677.73 ಕೋಟಿ ರೂ. ಮೌಲ್ಯದ ಹಾಗೂ ವಿದೇಶದಲ್ಲಿ 203.27 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇನ್ನೂ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಬಗ್ಗೆಯೂ ಮಾಹಿತಿ ಲಭಿಸಿದ್ದು, ಸಾಕ್ಷ್ಯಸಂಗ್ರಹಿಸಿ ಜಪ್ತಿ ಮಾಡುವ ಪ್ರಕ್ರಿಯೆಯನ್ನು ಇಡಿ ಮುಂದುವರಿಸಿದೆ.

ಹಣದ ಮೂಲದ ಮೇಲೆ ನಿಗಾ: ಹಣದ ಮಾರ್ಗ ಬಂದ್ ಮಾಡಿ ಆರ್ಥಿಕ ಶಕ್ತಿ ಕುಂದಿಸುವ ಮೂಲಕ ಉಗ್ರರನ್ನು ಮಟ್ಟಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಕೇಂದ್ರ ಸರ್ಕಾರ ಗೃಹ ಇಲಾಖೆ ಅಧೀನದಲ್ಲಿ ಕೌಂಟರಿಂಗ್ ಆಫ್ ಫೈನಾನ್ಸಿಂಗ್ ಆಫ್ ಟೆರರಿಸಂ ಹಾಗೂ ಎನ್​ಐಎ ಸುಪರ್ದಿಯಲ್ಲಿ ಟೆರರ್ ಫಂಡಿಂಗ್ ಮತ್ತು ಫೇಕ್ ಕರೆನ್ಸಿ ಸೆಲ್ ಸ್ಥಾಪಿಸಿದೆ.

ಈ ಘಟಕಗಳು ಉಗ್ರ ಸಂಘಟನೆಗಳಿಗೆ ಹಣ ವರ್ಗಾವಣೆ, ನಕಲಿ ನೋಟು ಚಲಾವಣೆ ಜಾಲದ ಬಗ್ಗೆ ನಿಗಾ ವಹಿಸಲಿವೆ. ಉಗ್ರರಿಗೆ ಹಣಕಾಸಿನ ನೆರವು ಕೊಡುತ್ತಿದ್ದ ಮಂಗಳೂರಿನ ಜುಬೇರ ಹುಸೇನ್ (42) ಮತ್ತು ಈತನ ಪತ್ನಿ ಆಯೇಷಾ ಬಾನು (39)ಗೆ ಕಳೆದ ನವೆಂಬರ್​ನಲ್ಲಿ ಛತ್ತೀಸ್​ಗಡದ ರಾಯಪುರ ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. 50 ಬ್ಯಾಂಕ್ ಖಾತೆ ಹೊಂದಿದ್ದ ಆಯೇಷಾ, ಉಗ್ರರ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದಳು. ರಾಯಪುರದಲ್ಲಿ ದಂಪತಿ ಸಿಕ್ಕಿಬಿದ್ದಿದ್ದರು. ಇತ್ತೀಚೆಗೆ ಮಂಗಳೂರಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.

ಎನ್​ಜಿಒ ಹಣ ಬಳಕೆ: ಸಮಾಜ ಸೇವೆಯ ಹೆಸರಲ್ಲಿ ಎನ್​ಜಿಒ ಹಾಗೂ ಟ್ರಸ್ಟ್​ಗಳ ಮೂಲಕ ಹಣ ಸಂಗ್ರಹಿಸಿ, ಭಯೋತ್ಪಾದಕ ಕೃತ್ಯಗಳಿಗೆ ನೆರವು ನೀಡುತ್ತಿದ್ದ ವಿಚಾರ 2020ರ ಅಕ್ಟೋಬರ್​ನಲ್ಲಿ ಬೆಳಕಿಗೆ ಬಂದಿತ್ತು. ಬೆಂಗಳೂರು ಸೇರಿ ದೇಶಾದ್ಯಂತ 11 ಸ್ಥಳಗಳ ಮೇಲೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದಾಗ ಆರ್ಥಿಕ ನೆರವು ಕೊಟ್ಟಿರುವ ಸಂಬಂಧ ದಾಖಲೆ ಪತ್ರ ಪತ್ತೆಯಾಗಿದ್ದವು. ಪ್ರಕರಣದ ವಿಚಾರಣೆ ಮುಂದುವರಿದಿದೆ.

ದೇಶದಲ್ಲಿ ಡಿಜಿಟಲ್ ದಂಧೆ ಸಕ್ರಿಯ: ಈವರೆಗೆ ಹವಾಲಾ ದಂಧೆ, ಬೇರೆಯವರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಹಣ ವರ್ಗಾವಣೆ, ಡಕಾಯಿತಿ ಇನ್ನಿತರ ರೂಪದಲ್ಲಿ ಹಣ ಸಂಗ್ರಹಿಸುತ್ತಿದ್ದ ಉಗ್ರ ಸಂಘಟನೆಗಳೀಗ ಕ್ರಿಪ್ಟೋ ಕರೆನ್ಸಿಯಂತಹ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಬಿಟ್ ಕಾಯಿನ್, ಇಟಿಎಚ್ (ಈಥೇರಿಯಂ), ಇಆರ್​ಸಿ20 ಟೋಕನ್ಸ್, ಎಕ್ಸ್​ಆರ್​ಪಿ (ರಿಪ್ಪಲ್ಸ್) ರೂಪದ ಡಿಜಿಟಲ್ ಕರೆನ್ಸಿ ಮುಖಾಂತರ ಹಣ ಸಂಗ್ರಹಿಸುತ್ತಿವೆ. 2021 ನ.13ರಂದು ಗೃಹ ಇಲಾಖೆ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಕ್ರಿಪ್ಟೋ ಕರೆನ್ಸಿ ಮೂಲಕ ಅಕ್ರಮ ಹಣದ ವಹಿವಾಟು ಹಾಗೂ ಉಗ್ರರಿಗೆ ಹಣ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಿರುವುದು ಡಿಜಿಟಲ್ ಕರೆನ್ಸಿ ಅಕ್ರಮ ವಹಿವಾಟಿನ ಗಂಭೀರತೆಗೆ ಸಾಕ್ಷಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚೀನಾಗೆ ಭಾರತದಿಂದ ಮತ್ತೊಂದು ಶಾಕ್, 5 ಅಗ್ಗದ ಉತ್ಪನ್ನಗಳಿಗೆ ದುಬಾರಿ ತೆರಿಗೆ

Mon Dec 27 , 2021
ನವದೆಹಲಿ: ಕಡಿಮೆ ಬೆಲೆಗೆ ಉತ್ಪನ್ನಗಳನ್ನು ರಫ್ತು ಮಾಡಿ ದೇಶಿಯ ಉತ್ಪಾದಕರ ಮೇಲೆ ಪ್ರಹಾರ ನಡೆಸುತ್ತಿದ್ದ ಚೀನಾ ಸರಕುಗಳಿಗೆ ಕೇಂದ್ರ ಸರ್ಕಾರ ಆಂಟಿ ಡಂಪಿಂಗ್ ತೆರಿಗೆ ಹೇರಿದೆ. ವಾಣಿಜ್ಯ ಮಹಾ ನಿರ್ದೇಶನಾಲಯದ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಐದು ವರ್ಷಗಳ ಅವಧಿಗೆ ಚೀನಾದ ಉತ್ಪನ್ನಗಳ ಮೇಲೆ ದುಬಾರಿ ಮೊತ್ತದ ಆಂಟಿ ಡಂಪಿಂಗ್ ತೆರಿಗೆಯನ್ನು ವಿಧಿಸಿ ಆದೇಶ ಹೊರಡಿಸಿದೆ. ಡೈ ಉದ್ಯಮದಲ್ಲಿ ಬಳಸುವ ಸೋಡಿಯಂ ಹೈಡ್ರೋಸಲ್ಫೈಟ್, ಸೌರವಿದ್ಯುತ್ ಫೋಟೋವೋಲ್ಟಾನಿಕ್ ಮಾಡ್ಯೂಲ್ ಗಳ ತಯಾರಿಕೆಯಲ್ಲಿ ಬಳಸುವ […]

Advertisement

Wordpress Social Share Plugin powered by Ultimatelysocial