ಮಕ್ಕಳ ನಗು ಉಳಿಸಲು 67 ಲಕ್ಷ ದಾನ ಮಾಡಿದ ನಟಿ ಊರ್ವಶಿ

ದರ್ಶನ್ ನಟನೆಯ ‘ಐರಾವತ’ ಸಿನಿಮಾದ ಮೂಲಕ ಕನ್ನಡ ಸಿನಿಪ್ರೇಮಿಗಳಿಗೆ ಪರಿಚಯವಾದ ನಟಿ ಊರ್ವಶಿ ರೌಟೆಲಾ ನಟಿಯಾಗಿರುವ ಜೊತೆಗೆ ಟಾಪ್ ರ್ಯಾಂಕ್‌ನ ಮಾಡೆಲ್‌ ಸಹ ಹೌದು.

ಕೋಟ್ಯಂತರ ಮೌಲ್ಯದ ಉಡುಗೆಗಳ ಜಾಹೀರಾತು ನೀಡುವ ಊರ್ವಶಿ ರೌಟೆಲಾ ಸಿನಿಮಾಗಳಿಗಿಂತಲೂ ಮಾಡೆಲಿಂಗ್‌ನಿಂದಲೇ ಕೋಟ್ಯಂತರ ಹಣ ಗಳಿಸುತ್ತಿದ್ದಾರೆ.

ದುಬೈನಲ್ಲಿಯಂತೂ ಊರ್ವಶಿ ಮೆಚ್ಚಿನ ಮಾಡೆಲ್ ಆಗಿಬಿಟ್ಟಿದ್ದಾರೆ.

ಸಿನಿಮಾ, ಮಾಡೆಲಿಂಗ್ ಹೊರತಾಗಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ಸಹ ಊರ್ವಶಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿಯೂ ಸಕ್ರಿಯವಾಗಿ ಜನರಿಗೆ ಸಹಾಯ ಮಾಡಿದ್ದ ಊರ್ವಶಿ ಈಗ ಮಕ್ಕಳ ಆರೋಗ್ಯ ಕಾಪಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಊರ್ವಶಿ ರೌಟೆಲಾ ಸ್ಮೈಲ್ ಟ್ರೈನ್ ಎನ್‌ಜಿಓನ ವಿಶ್ವಮಟ್ಟದ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ. ಸ್ಮೈಲ್ ಟ್ರೈನ್ ಎನ್‌ಜಿಓ, ವಿಶ್ವದಾದ್ಯಂದ ಸೀಳು ತುಟಿ ಹೊಂದಿರುವ ಕೋಟ್ಯಂತರ ಮಂದಿ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿಸುವ ಉತ್ತಮ ಕಾರ್ಯ ಮಾಡುತ್ತಿದೆ. ಈ ಎನ್‌ಜಿಓ ಕಳೆದ ಎರಡು ದಶಕದಿಂದ ಕೆಲಸ ಮಾಡುತ್ತಿರುವ ವಿಶ್ವಾಸಾರ್ಹ ಎನ್‌ಜಿಓ ಆಗಿದ್ದು ಇದರ ರಾಯಭಾರಿ ಆಗುವ ಗೌರವಕ್ಕೆ ಊರ್ವಶಿ ರೌಟೆಲಾ ಪಾತ್ರವಾಗಿದ್ದಾರೆ.

ಬಾಲಿ, ಇಂಡೋನೇಶಿಯಾಗಳಿಗೆ ಭೇಟಿ
ಸ್ಮೈಲ್ ಟ್ರೈನ್‌ ಎನ್‌ಜಿಓನ ರಾಯಭಾರಿ ಆಗಿರುವ ಊರ್ವಶಿ ರೌಟೆಲ್ಲಾ ರಾಯಭಾರಿಯಾಗಿ ತಮ್ಮ ಮೊದಲ ಬಾರಿಗೆ ಇಂಡೊನೇಷ್ಯಾ, ಬಾಲಿಗೆ ಪ್ರವಾಸ ತೆರಳಲಿದ್ದು, ಅಲ್ಲಿ ಸ್ಮೈಲ್ ಟ್ರೈನ್‌ ಎನ್‌ಜಿಓನ ಸಿಬ್ಬಂದಿ, ಸೀಳು ತುಟಿ ರೋಗಿಗಳು, ವೈದ್ಯ ತಂಡ, ಸ್ವಯಂ ಸೇವಕರು, ಸ್ಮೈಲ್ ಟ್ರೈನ್‌ ಎನ್‌ಜಿಓನ ಸಹಯೋಗದ ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದಾರೆ. ಸ್ಮೈಲ್ ಟ್ರೈನ್‌ ಎನ್‌ಜಿಓ ಇದೀಗ 10 ಲಕ್ಷ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದು, 10 ಲಕ್ಷ ಮಕ್ಕಳ ಸೀಳು ತುಟಿಗಳನ್ನು ಸರಿಮಾಡಿ ಅವರಿಗೆ ನಗು ನೀಡಿದೆ. ಇಂಥಹಾ ಮಹತ್ತರ ಸಾಧನೆ ಮಾಡಿದ ಸಂದರ್ಭದಲ್ಲಿಯೇ ಊರ್ವಶಿ ಈ ಎನ್‌ಜಿಓನ ಭಾಗವಾಗಿದ್ದಾರೆ.

67 ಲಕ್ಷ ದೇಣಿಗೆ ನೀಡಿದ ಊರ್ವಶಿ ರೌಟೆಲಾ

ಎನ್‌ಜಿಓನ ರಾಯಭಾರಿ ಆಗಿರುವ ಊರ್ವಶಿ ರೌಟೆಲಾ ಎನ್‌ಜಿಓಗಾಗಿ ಹಣ ಸೇರಿಸುವ ಉದ್ದೇಶದಿಂದ ಕೆಲವು ಕಾರ್ಯಕ್ರಮಗಳನ್ನು ಸಹ ನೀಡಿದ್ದಾರೆ. ಚಾರಿಟಿ ಗಾಲಾ ಕಾರ್ಯಕ್ರಮ ಮಾಡಿದ್ದಾರೆ. ಜೊತೆಗೆ ಖಾಸಗಿಯಾಗಿ ಸ್ವತಃ ತಮ್ಮ ಸಂಪಾದನೆಯ 67 ಲಕ್ಷ ರುಪಾಯಿಗಳನ್ನು ಎನ್‌ಜಿಓಗೆ ನೀಡಿದ್ದಾರೆ ನಟಿ. ಈ ಹಣವನ್ನು ಸೀಳು ತುಟಿ ಹೊಂದಿದ 200 ಮಕ್ಕಳ ಶಸ್ತ್ರಚಿಕಿತ್ಸೆ ಹಾಗೂ ಅವರ ಇತರೆ ವೈದ್ಯಕೀಯ ಖರ್ಚುಗಳಿಗೆ ಬಳಸಲಾಗುವುದು ಎಂದು ಎನ್‌ಜಿಓ ಹೇಳಿದೆ.

15 ಲಕ್ಷ ಮಕ್ಕಳಿಗೆ ಶಸ್ತ್ರಚಿಕಿತ್ಸೆ

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಹಲವು ಚಿತ್ರಗಳು, ವಿಡಿಯೋಗಳನ್ನು ಹಂಚಿಕೊಂಡಿರುವ ನಟಿ ಊರ್ವಶಿ ರೌಟೆಲಾ, ”ಸ್ಮೈಲ್ ಟ್ರೈನ್‌’ನ ಗ್ಲೋಬರ್ ರಾಯಭಾರಿ ಆಗಿರುವುದಕ್ಕೆ ಬಹಳ ಹೆಮ್ಮೆಯಿದೆ. ಈ ಚಾರಿಟಿಯು ಕಳೆದ 22 ವರ್ಷಗಳಿಂದಲೂ ವಿಶ್ವದಾದ್ಯಂತ ಸುಮಾರು 15 ಲಕ್ಷ ಮಕ್ಕಳಿಗೆ ಸಹಾಯ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ಈ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅದಕ್ಕಾಗಿ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡೋಣ” ಎಂದಿದ್ದಾರೆ.

ಸೀಳುತುಟಿ ಎಂಬುದು ಗಂಭೀರ ಸ್ಥಿತಿ: ಊರ್ವಶಿ ರೌಟೆಲಾ

ಕ್ಲೆಫ್ಟ್‌ ಅಥವಾ ಸೀಳುತುಟಿ ಎಂಬುದು ಒಂದು ಗಂಭೀರ ಸ್ಥಿತಿ. ಎಲ್ಲ ಮಕ್ಕಳಿಗೂ ನಗಲು ಸಮಾನವಾದ ಹಕ್ಕಿದೆ, ಅದನ್ನು ಸೀಳುತುಟಿ ಕಿತ್ತುಕೊಳ್ಳಬಾರದು. ಸೀಳು ತುಟಿಯವರಿಗೆ ನಗಲು, ಉಸಿರಾಡಲು, ಮಾತನಾಡಲು, ಊಟ ಮಾಡಲು ಸಮಸ್ಯೆ ಆಗುತ್ತದೆ. ಇದು ಒಟ್ಟಾರೆಯಾಗಿ ಅವರ ವ್ಯಕ್ತಿತ್ವ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸ್ಲೈಲ್ ಟ್ರೈನ್‌ ಜೊತೆ ಕೈಜೋಡಿಸಿ ಸೀಳು ತುಟಿಯ ಸಮಸ್ಯೆಯ ವಿರುದ್ಧ ಹೋರಾಡುವ ನಿರ್ಣಯ ನಾನು ಮಾಡಿದ್ದೇನೆ. ನನ್ನ ಸಾಮಾಜಿಕ ಜಾಲತಾಣ ಮಾಧ್ಯಮಗಳನ್ನು ಬಳಸಿಕೊಂಡು ಈ ಹೋರಾಟಕ್ಕೆ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚು ಮಾಡುವುದು, ಈ ಉತ್ತಮ ಕಾರ್ಯಕ್ಕೆ ದೇಣಿಗೆ ಸಂಗ್ರಹವನ್ನು ನಾನು ಮಾಡಲಿದ್ದೇನೆ” ಎಂದಿದ್ದಾರೆ ಊರ್ವಶಿ ರೌಟೆಲಾ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಹಾಲಕ್ಷ್ಮಿ ಲೇ ಔಟ್ 55ನೇ ವಾರ್ಡ್‌ಗೆ ಅಪ್ಪು ಹೆಸರು ನಾಮಕರಣ:

Fri Jul 15 , 2022
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ 9 ತಿಂಗಳುಗಳಾಗಿವೆ. ಕಳೆದ ಎಂಟು-ಒಂಬತ್ತು ತಿಂಗಳಿನಿಂದ ಪುನೀತ್ ಅಭಿಮಾನಿಗಳು ಅವರ ನೆನಪಿನಲ್ಲಿ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಪ್ಪು ಹೆಸರನ್ನು ಅಜರಾಮರಾ ಮಾಡಲು ಮುಂದಾಗಿದ್ದಾರೆ. ಕೆಲವು ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್‌ನ ವಾರ್ಡ್‌ಗೆ ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರನ್ನು ಇಡುವಂತೆ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದರು. ವಿಧಾನ ಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆಗೆ ಜುಲೈ 05ರಂದು ಸರ್ಕಾರದ ಮುಖ್ಯ […]

Advertisement

Wordpress Social Share Plugin powered by Ultimatelysocial