ವೀಣಾ ಶಾಂತೇಶ್ವರ

ಕನ್ನಡದ ಪ್ರಸಿದ್ಧ ಬರಹಗಾರ್ತಿ ಡಾ. ವೀಣಾ ಶಾಂತೇಶ್ವರ 1945ರ ಫೆಬ್ರುವರಿ 22ರಂದು ಧಾರವಾಡದಲ್ಲಿ ಜನಿಸಿದರು. ಸ್ತ್ರೀ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ್ದ, ಸುಶಿಕ್ಷಿತ ಮನೆತನದಲ್ಲಿ ಹುಟ್ಟಿದ ವೀಣಾ ಶಾಂತೇಶ್ವರರಿಗೆ ಮೂರನೆಯ ವರ್ಷದಲ್ಲೇ ಅಕ್ಷರಾಭ್ಯಾಸಮಾಡಿಸಿದ ತಂದೆ ಪ್ರೊ. ಬಲರಾಮಾಚಾರ್ಯ ಎಲಬುರ್ಗಿಯವರು ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರೆ, ತಾಯಿ ಇಂದಿರಾ ಮಹಾರಾಷ್ಟ್ರದವರಾಗಿದ್ದು ಪ್ರಗತಿಪರ ಮನೋಭಾವದವರು.
ವೀಣಾ ಅವರ ಪ್ರಾರಂಭಿಕ ಶಿಕ್ಷಣ ಬಾಗಲಕೋಟೆಯಲ್ಲಿ ನೆರವೇರಿತು. ಶಾಲಾ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ಎಂ.ಎ. ಪದವಿ ಪಡೆಯುವವರೆಗೂ ಅವರದ್ದು ಉನ್ನತ ಶ್ರೇಣಿಯ ಸಾಧನೆ. ಧಾರವಾಡದಲ್ಲಿ ಪ್ರಪ್ರಥಮ ಶ್ರೇಣಿಯಲ್ಲಿ ಪದವಿ ಮತ್ತು, ಸ್ನಾತಕೋತ್ತರ ಪದವಿಗಳ ಜೊತೆಗೆ ಹೈದರಾಬಾದಿನ ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಗ್ಲಿಷ್‌ನಿಂದ ಸ್ನಾತಕೋತ್ತರ ಡಿಪ್ಲೊಮ, ಎಂ.ಲಿಟ್‌ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿಗಳು ಅವರ ಶೈಕ್ಷಣಿಕ ಸಾಧನೆಗಳಾಗಿವೆ.
ವೀಣಾ ಶಾಂತೇಶ್ವರ ಅವರು ಶಾಲೆಯಲ್ಲಿದ್ದಾಗಲೇ ಕಥೆಗಳನ್ನು ಬರೆಯುತ್ತಿದ್ದು, ಅವರ ಬರಹಗಳು ಅಂದಿನ ‘ಕತೆಗಾರ’ ಪತ್ರಿಕೆಯಲ್ಲಿ ಪ್ರಕಟಗೊಳ್ಳತೊಡಗಿದವು. ಮರಾಠಿ ಸಾಹಿತ್ಯದಲ್ಲಿ ಆಸಕ್ತರಾಗಿದ್ದ ತಾಯಿ ಇಂದಿರಾ ಅವರು ತಿಲಕ್‌, ಕರ್ವೆ, ರಾನಡೆ, ಗೋಖಲೆ ಮುಂತಾದವರ ಬರಹಗಳಿಂದ ಪ್ರಭಾವಿತರಾದವರು. ಮಹಿಳಾ ಶಿಕ್ಷಣ, ಮಹಿಳಾ ಸ್ವಾತಂತ್ರ್ಯ, ಮರಾಠಿ ಪ್ರಗತಿಪರ ಸಾಹಿತ್ಯ ಇವರ ಆಸಕ್ತ ವಿಷಯಗಳಾಗಿದ್ದು, ಮಗಳ ಮೇಲೂ ಪರಿಣಾಮ ಬೀರಿದವು. ವೀಣಾ ಅವರು ತಮ್ಮ ಬರವಣಿಗೆಯ ಪ್ರಾರಂಭದ ದಿನಗಳಿಂದಲೂ ಸ್ತ್ರೀ ಪರ ಕಾಳಜಿಗಳನ್ನು ರೂಢಿಸಿಕೊಂಡಿದ್ದು ತಮ್ಮೆಲ್ಲ ಬರಹಗಳಲ್ಲಿಯೂ ಅದನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಜಾತೀಯ ಸಮಸ್ಯೆ, ವರದಕ್ಷಿಣೆ ಪಿಡುಗು, ಅಂತರಜಾತಿಯ ವಿವಾಹ-ಹೀಗೆ ಬರೆದ ಅವರ ಪ್ರಾರಂಭಿಕ ಲೇಖನಗಳು ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪ್ರಕಟಗೊಂಡವು.
ವೀಣಾ ಶಾಂತೇಶ್ವರ ಅವರ ‘ಮುಳ್ಳುಗಳು’ ಪ್ರಥಮ ಕಥಾ ಸಂಕಲನ 1967ರಲ್ಲಿ ಪ್ರಕಟಗೊಂಡಿತು . ನಂತರ ಬಂದ ಪ್ರಮುಖ ಕಥಾ ಸಂಕಲನಗಳಲ್ಲಿ ಕೊನೆಯ ದಾರಿ, ಕವಲು, ಹಸಿವು, ಬಿಡುಗಡೆ ಮುಂತಾದವುಗಳು ಸೇರಿವೆ. ಅವರು ‘ಗಂಡಸರು’ ಮತ್ತು ‘ಶೋಷಣೆ, ಬಂಡಾಯ ಇತ್ಯಾದಿ’ ಎಂಬ ಎರಡು ಕಾದಂಬರಿಗಳನ್ನು ರಚಿಸಿದ್ದಾರೆ. ವೀಣಾ ಶಾಂತೇಶ್ವರ ಅವರು ಸಣ್ಣಕತೆ, ಕಾದಂಬರಿಗಳ ಜೊತೆಗೆ ಹಲವಾರು ವಿಮರ್ಶಾತ್ಮಕ ಪ್ರಬಂಧ ಸಂಗ್ರಹಗಳನ್ನೂ ಪ್ರಕಟಿಸಿದ್ದಾರೆ.
ವೀಣಾ ಅವರು ಕನ್ನಡದಲ್ಲಲ್ಲದೆ, ಇಂಗ್ಲಿಷಿನಲ್ಲಿಯೂ ಸಾಹಿತ್ಯ ರಚಿಸಿದ್ದು, ರೆಪ್ಯೂಟೇಶನ್ , ಕ್ರಾಸ್ ರೋಡ್ಸ್, ಹರ್ ಫ್ರೀಡಮ್, ದಿ ಶಾಡೊ ಎಂಬ ಸಣ್ಣ ಕಥೆಗಳನ್ನು ಮತ್ತು ‘ಮೆನ್’ ಎಂಬ ಕಾದಂಬರಿಯನ್ನೂ ಬರೆದಿದ್ದಾರೆ. ‘ಮಹಿಳೆಯರ ಸಣ್ಣಕಥೆಗಳು’, ‘ಹೊಸ ಹೆಜ್ಜೆ’ ಎಂಬ ಮಹಿಳೆಯರ ಪ್ರಾತಿನಿಧಿಕ ಕವನ ಸಂಕಲನಗಳನ್ನೊಳಗೊಂಡಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ‘ನಡೆದದ್ದೇ ದಾರಿ’ ಎಂಬ ಹೆಸರಿನಲ್ಲಿ ವೀಣಾ ಅವರ ಸಮಗ್ರ ಕಥನ ಸಾಹಿತ್ಯ ಪ್ರಕಟಗೊಂಡಿದೆ. ಇವರ ಅನೇಕ ರೇಡಿಯೊ ನಾಟಕಗಳು ಧಾರವಾಡ ಹಾಗೂ ಬೆಂಗಳೂರು ಆಕಾಶವಾಣಿಯಿಂದ ಬಿತ್ತರಗೊಂಡಿವೆ. ವೀಣಾ ಅವರ ‘ಅತಿಥಿ’ ಕಥೆ ಪುಟ್ಟಣ್ಣ ಕಣಗಾಲರ ಕಥಾಸಂಗಮ ಚಿತ್ರದಲ್ಲಿ ಬಳಕೆಯಾಗಿದೆ.
ಅನುವಾದ ಕ್ಷೇತ್ರಕ್ಕೂ ವೀಣಾ ಅವರ ಕೊಡುಗೆ ಸಂದಾಯವಾಗಿದೆ. ಇವರ ಕಥೆಗಳು ಇಂಗ್ಲಿಷ್, ಫ್ರೆಂಚ್, ಹಿಂದಿ, ಕೊಂಕಣಿ, ಮರಾಠಿ, ಉರ್ದು, ತಮಿಳು, ತೆಲುಗು, ಮಲೆಯಾಳಂ, ಗುಜರಾತಿ ಮತ್ತು ಸಿಂಧಿ ಭಾಷೆಗಳಲ್ಲಿ ಅನುವಾದಗೊಂಡಿರುವುದಲ್ಲದೆ, ವೀಣಾ ಅವರು ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ‘ಕುರಿಗಾಹಿ ಬಿಲ್ಲೇಸುರ’(ಹಿಂದಿ ಅನುವಾದ), ‘ಯಕೃತ್ತು’(ಶಾಮ ಮನೋಹರ್ ಅವರ ನಾಟಕ ಅನುವಾದ), ‘ಫತಝಡಕೆ ಫೂಲ್’, ‘ಸ್ತನದಾಯಿನಿ’ ಕೃತಿಗಳನ್ನೂ, ಸುಮಾರು ಹದಿನೈದು ಮರಾಠಿ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅಮೆರಿಕನ್/ಮೆಕ್ಸಿಕನ್ ಇಂಗ್ಲಿಷ್ ಕಥೆಗಳ ಅನುವಾದಗಳು ‘ಅದೃಷ್ಟ’ ಸಂಕಲನದಲ್ಲಿದೆ.
ವೀಣಾ ಅವರು ನಾಡಿನ ಹಲವಾರು ಸಾಹಿತ್ಯ ಸಂಘಟನೆಗಳಲ್ಲಿ ಸದಸ್ಯರಾಗಿದ್ದಾರಲ್ಲದೆ, ಸಾಹಿತ್ಯಿಕ, ವೈಚಾರಿಕ ಸಂಕಿರಣ, ಸಾಂಸ್ಕೃತಿಕ ಉತ್ಸವಗಳ ನಿರ್ದೇಶಕರಾಗಿ / ಆಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. 1994-96ರಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. 1995ರಲ್ಲಿ ಅವರು ಅಖಿಲ ಭಾರತ ಲೇಖಕಿಯರ ಸಮ್ಮೇಳನದ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದ ಸಮಯದಲ್ಲಿ ಹಲವಾರು ಶೈಕ್ಷಣಿಕ ಸುಧಾರಣೆಗಳನ್ನ್ನು ಜಾರಿಗೆ ತಂದಿದ್ದಾರೆ. ಇವರ ಆಡಳಿತಾವಧಿಯಲ್ಲಿಯೇ, 2002ರಲ್ಲಿ ನಂದನ್ ನಿಲೇಕಣಿಯವರ ಆರ್ಥಿಕ ಸಹಕಾರದಿಂದ ಅತ್ಯಂತ ವಿನೂತನವಾದ ‘ಸೃಜನ – ಡಾ. ಅಣ್ಣಾಜಿರಾವ್ ಸಿರೂರ’ ರಂಗಮಂದಿರ ನಿರ್ಮಾಣಗೊಂಡಿತು.
ಪ್ರತಿಭಾವಂತ ಲೇಖಕಿ ವೀಣಾ ಶಾಂತೇಶ್ವರ ಅವರಿಗೆ ಹಲವಾರು ಸಾಹಿತ್ಯಿಕ ಗೌರವಗಳು ಸಂದಿವೆ. ‘ಕವಲು’ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಹಸಿವು’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಮಲ್ಲಿಕಾ’ ಪ್ರಶಸ್ತಿ, ‘ಗಂಡಸರು’ ಕಾದಂಬರಿಗೆ ಪ್ರಜಾವಾಣಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಶಿಕ್ಷಣ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಶಾಶ್ವತ ಪ್ರತಿಷ್ಠಾನದ ‘ಸದ್ಯೋದಿತಾ’ ಪ್ರಶಸ್ತಿ, ಅಜ್ಞೇಯರ ‘ನದೀ ಕೇ ದ್ವೀಪ್’ ಕೃತಿಯ ಕನ್ನಡ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕಾತ್ಯಾಯಿನಿ ಸಮ್ಮಾನ್ ಮುಂತಾದವು ಇವರಿಗೆ ಸಂದಿರುವ ಕೆಲವು ಪ್ರಮುಖ ಪ್ರಶಸ್ತಿಗಳು. ವೀಣಾ ಅವರಿಗೆ ಅವರ ಅಭಿಮಾನಿಗಳು, ಹಿತೈಷಿಗಳು ‘ನಿರ್ದಿಗಂತ’ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಜೆ ಮಂಗೇಶರಾವ್

Tue Feb 22 , 2022
ಪಂಜೆ ಮಂಗೇಶರಾಯರು ತಮ್ಮ ‘ಕಿರುಗತೆ-ಕಿರುಗವನಗಳು’ ಮೂಲಕ ಹೊಸಸಾಹಿತ್ಯದ ಹರಿಕಾರರಲ್ಲಿ ಒಬ್ಬರೆಂದು ಚಿರಸ್ಮರಣೀಯರು. ರಾಮಪ್ಪಯ್ಯ ಮತ್ತು ಶಾಂತಾದುರ್ಗಾ ದಂಪತಿಗಳ ಮಗನಾಗಿ ಮಂಗೇಶರಾಯರು 1874ರ ಫೆಬ್ರವರಿ 22ರಂದು ಬಂಟವಾಳದಲ್ಲಿ ಜನಿಸಿದರು. ಅವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ ‘ಪಂಜ’ದವರಾಗಿದ್ದರು. ಅವರು ವಿವಾಹವಾಗಿದ್ದು ನಾಡಿನಲ್ಲಿ ಪ್ರಸಿದ್ಧರಾದ ಬೆನಗಲ್ ರಾಮರಾಯರ ತಂಗಿ ಗಿರಿಜಾಬಾಯಿ ಅವರನ್ನು. ಬಿ.ಎ ವಿದ್ಯಾಭ್ಯಾಸ ಮುಗಿಸಿ ಎಲ್.ಟಿ ತರಬೇತಿ ಪಡೆದ ಪಂಜೆಯವರು ಪ್ರಾರಂಭದಲ್ಲಿ ಶಿಕ್ಷಕರಾಗಿ, ಮಂಗಳೂರಿನ ಶಾಲಾ ಸಬ್ ಇನ್ಸ್ಪೆಕ್ಟರ್ ಆಗಿ, ಇನ್ಸ್ಪೆಕ್ಟರ್ […]

Advertisement

Wordpress Social Share Plugin powered by Ultimatelysocial