ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ವೀರೇಂದ್ರ ಪಾಟೀಲ್ ಪ್ರಮುಖ ಹೆಸರು.

ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ವೀರೇಂದ್ರ ಪಾಟೀಲ್ ಪ್ರಮುಖ ಹೆಸರು. ನ್ಯಾಯವಾದಿಗಳಾಗಿ, ರಾಜಕಾರಣಿಗಳಾಗಿ ಮತ್ತು ಕೇಂದ್ರ ಸಂಪುಟದಲ್ಲಿನ ಮಂತ್ರಿಗಳಾಗಿ ಸಹಾ ಅವರು ಕೆಲಸ ಮಾಡಿದ್ದವರು.
ವೀರೇಂದ್ರ ಪಾಟೀಲರು ಗುಲ್ಬರ್ಗ ಜಿಲ್ಲೆಯ ಚಿಂಚೋಳಿಯಲ್ಲಿ 1924ರ ಫೆಬ್ರವರಿ 6ರಂದು ಜನಿಸಿದರು (ಕೆಲವು ಕಡೆ ಫೆಬ್ರವರಿ 22 ಎಂದಿದೆ). ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರ ಪದವೀಧರರಾಗಿ, 1947ರಲ್ಲಿ ಅವರು ವಕೀಲ ವೃತ್ತಿಯನ್ನು ಆರಂಭಿಸಿದರು.
ವೀರೇಂದ್ರ ಪಾಟೀಲರು ಸ್ವಲ್ಪಕಾಲದಲ್ಲೇ ವಕೀಲ ವೃತ್ತಿ ತ್ಯಜಿಸಿ ರಜಾಕಾರ್ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದರು. ಹೈದರಾಬಾದಿನ ವಿಮೋಚನೆಗಾಗಿ ಕೇಂದ್ರಸರ್ಕಾರ ನಡೆಸಿದ ಪೋಲೀಸ್ ಕಾರ್ಯಾಚರಣೆಯ ಅನಂತರ ಪೂರ್ಣಾವಧಿಯ ಕಾಂಗ್ರೆಸ್ ಕಾರ್ಯಕರ್ತರಾದರು. ಭಾಷಾವಾರು ರಾಜ್ಯ ಪುನರ್ರಚನೆಯ ಕಾಲದವರೆಗೂ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1950ರಲ್ಲಿ ಮತ್ತೆ ವಕೀಲವೃತ್ತಿಯಲ್ಲಿ ತೊಡಗಿ, 1955ರಲ್ಲಿ ಕಾಂಗ್ರೆಸ್ ಸಂಸ್ಥೆಯನ್ನು ಭದ್ರಗೊಳಿಸುವುದಕ್ಕಾಗಿ ಮತ್ತೆ ಅದನ್ನು ಬಿಟ್ಟರು. ಹೈದರಾಬಾದ್ ರಾಜ್ಯದ ಪ್ರಥಮ ಸಾರ್ವಜನಿಕ ಚುನಾವಣೆಯಲ್ಲಿ ಅಲಂದ್ ಚುನಾವಣಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಹೊಂದಿದರು.ವೀರೇಂದ್ರ ಪಾಟೀಲರು ಹೈದರಾಬಾದ್ ಗೇಣಿದಾರಿ ಕೃಷಿ ಕಾನೂನು ಸಮಿತಿಯೇ ಮುಂತಾದ ಅನೇಕ ಸಮಿತಿಗಳ ಸದಸ್ಯರಾಗಿದ್ದರು. ವಿಶಾಲ ಮೈಸೂರು ರಾಜ್ಯ ನಿರ್ಮಾಣವಾದ ಮೇಲೆ, 1957ರಲ್ಲಿ ಚಿಂಚೋಳಿ ಕ್ಷೇತ್ರದಿಂದ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಚುನಾಯಿತರಾದರು. 1960ರವರೆಗೆ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ವ್ಯವಸ್ಥಾಪಕ ಕಾರ್ಯದರ್ಶಿಗಳಾಗಿಯೂ, 1960-61ರಲ್ಲಿ ಗುಲ್ಬರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆಗಿದ್ದರು. 1957ರ ಏಪ್ರಿಲ್ನಿಂದ 1958ರ ಮೇ 16ರ ವರೆಗೆ ಮೈಸೂರು (ಈಗ ಕರ್ನಾಟಕ) ರಾಜ್ಯದ ಗೃಹ ಮತ್ತು ಕೈಗಾರಿಕಾ ಖಾತೆಗಳ ಉಪ ಮಂತ್ರಿಯಾಗಿದ್ದರು. 1961ರ ಫೆಬ್ರವರಿಯಿಂದ 1962ರ ಮಾರ್ಚ್ ವರೆಗೆ ಅಬಕಾರಿ, ಪಾನನಿರೋಧ ಮತ್ತು ಗ್ರಾಮೀಣ ಕೈಗಾರಿಕಾ ಖಾತೆಗಳ ಮಂತ್ರಿಯಾಗಿದ್ದರು. 1962ರಿಂದ 1967ರವರೆಗಿನ ಅವಧಿಗೆ ಮತ್ತೆ ವಿಧಾನಸಭೆಗೆ ಚುನಾಯಿತರಾಗಿ ಲೋಕೋಪಯೋಗಿ ಮತ್ತು ವಿದ್ಯುತ್ ಇಲಾಖೆಗಳ ಮಂತ್ರಿಯಾದರು. 1967ರ ಚುನಾವಣೆಗಳಲ್ಲಿ ಮತ್ತೆ ಆಯ್ಕೆಹೊಂದಿದ ಪಾಟೀಲರು ಲೋಕೋಪಯೋಗಿ ಇಲಾಖೆಯ ಮಂತ್ರಿಯಾದರು. ಮುಖ್ಯ ಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪನವರು ಕಾಂಗ್ರೆಸ್ ಅಧ್ಯಕ್ಷರಾದಾಗ ಅವರ ಸ್ಥಾನದಲ್ಲಿ 1968ರ ಮೇ 23ರಂದು ಪಾಟೀಲರು ಕಾಂಗ್ರೆಸ್ ವಿಧಾಯಕ ಪಕ್ಷದ ನಾಯಕರಾಗಿ ಆಯ್ಕೆಗೊಂಡು ಮುಖ್ಯಮಂತ್ರಿಯ ಪದವಿಯನ್ನು ವಹಿಸಿಕೊಂಡರು. ಕಾವೇರಿ ಜಲಾನಯನ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತಮಿಳುನಾಡು ಅಡ್ಡಿಪಡಿಸಿದಾಗ, ಕೇಂದ್ರ ಜಲ ಆಯೋಗ ಉಂಟು ಮಾಡಿದ ಯಾವುದೇ ನಿರ್ಬಂಧಗಳನ್ನೂ ಲೆಕ್ಕಿಸದೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರೆಸಿದರು.1969ರಲ್ಲಿ ಕಾಂಗ್ರೆಸ್ ಸಂಸ್ಥೆ ಒಡೆದಾಗ ವೀರೇಂದ್ರ ಪಾಟೀಲರು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಮುಂದುವರಿದ ಸಂಸ್ಥಾ ಕಾಂಗ್ರೆಸ್ನಲ್ಲಿ ಮುಂದುವರಿದರು. ವಿಧಾನಸಭೆಯಲ್ಲಿ ಇವರ ಪಕ್ಷಕ್ಕೆ ಇದ್ದ ಬಹುಮತ ಕಳೆದುಹೋದಾಗ ಇವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಅನಂತರ ಇವರು ರಾಜ್ಯಸಭೆಯ ಸದಸ್ಯರಾಗಿದ್ದರು.1977ರಲ್ಲಿ ಸಂಸ್ಥಾ ಕಾಂಗ್ರೆಸ್ ಮತ್ತು ಇತರ ಕೆಲವು ವಿರೋಧ ಪಕ್ಷಗಳು ಸೇರಿ ಜನತಾ ಪಕ್ಷವನ್ನು ಪ್ರಾರಂಭಿಸಿದಾಗ ಇವರು ಆ ಪಕ್ಷದಲ್ಲಿ ಸೇರಿದರು. ಸ್ವಲ್ಪಕಾಲ ಅದರ ಪ್ರಾದೇಶಿಕ ಘಟಕದ ಅಧ್ಯಕ್ಷರಾಗಿದ್ದರು. 1978ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ವಿರುದ್ಧ ಜನತಾಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. 1979ರಲ್ಲಿ ಇವರು ಜನತಾಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇಂದಿರಾ ನೇತೃತ್ವದ ಕಾಂಗ್ರೆಸ್ (ಐ)ಪಕ್ಷವನ್ನು ಸೇರಿದರು. 1980ರಲ್ಲಿ ಲೋಕಸಭೆಗೆ ನಡೆದ ಚುನಾವಣೆಗಳಲ್ಲಿ ಈ ಪಕ್ಷದ ಸದಸ್ಯರಾಗಿ ಸ್ಪರ್ಧಿಸಿ ಗೆದ್ದರು. ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ಸಂಪುಟದ ಸಚಿವರಾದರು.ಮುಂದೆ ಕರ್ನಾಟಕ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿ 1989ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ 224ಸ್ಥಾನಗಳಲ್ಲಿ 179 ಸ್ಥಾನಗಳ ಬಲಾಢ್ಯ ಬಹುಮತಗಳಿಸುವಂತೆ ಮಾಡುವುದರಲ್ಲಿ ಯಶಸ್ವಿಯಾಗಿ ಮತ್ತೊಮ್ಮೆಮುಖ್ಯಮಂತ್ರಿಗಳಾದರು. ರಾಜ್ಯದಲ್ಲಿ ಹಣಕಾಸು ವ್ಯವಸ್ಥೆ ಕುಸಿದಿದ್ದ ಆ ಸಂದರ್ಭದಲ್ಲಿ ಎಂ. ರಾಜಶೇಖರ ಮೂರ್ತಿ ಅವರನ್ನು ಹಣಕಾಸು ಸಚಿವ ಸ್ಥಾನಕ್ಕೆ ತಂದರು. ಲಿಕ್ಕರ್ ಲಾಬಿಯನ್ನು ಎದುರಿಸಿ ಆಡಳಿತಕ್ಕೆ ಚುರುಕುತನ ತಂದು ಮತ್ತು ರಾಜ್ಯದ ತೆರಿಗೆ ವಸೂಲಾತಿ ಕ್ರಮದಲ್ಲಿನ ಪರಿಷ್ಕರಣೆಗಳ ಮೂಲಕ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ನಡೆಸಿದರು. 1990ರಲ್ಲಿ ಹಲವು ಅತೃಪ್ತರ ದೆಸೆಯಿಂದ ಜಾತಿವೈಷಮ್ಯದ ಹೋರಾಟಗಳು ಮೂಡಿ ಅತೃಪ್ತ ಲಾಬಿಗಳು ಅವರನ್ನು ಎತ್ತಂಗಡಿ ಮಾಡಲು ಕಾರ್ಯಾಚರಣೆ ನಡೆಸಲಾರಂಭಿಸಿದವು. ಅದೇ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸುಧಾರಿಸಿಕೊಳ್ಳುತ್ತಿದ್ದ ಅವರನ್ನು ರಾಜೀವ್ ಗಾಂಧಿ ಕ್ಷುದ್ರ ರೀತಿಯಲ್ಲಿ ಮುಖ್ಯಮಂತ್ರಿ ಪದವಿಯಿಂದ ಉಚ್ಛಾಟಿಸಿದ.ವೀರೇಂದ್ರ ಪಾಟೀಲರು 1997 ಮಾರ್ಚ್ 14ರಂದು ನಿಧನರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಲಜನ್ ಎಂದರೇನು ಮತ್ತು ಇದು ಚರ್ಮಕ್ಕೆ ಏಕೆ ಅತ್ಯಗತ್ಯ?

Wed Feb 16 , 2022
ಕಾಲಜನ್ ಆರೋಗ್ಯದ ಇತ್ತೀಚಿನ ಬಜ್‌ವರ್ಡ್‌ಗಳಲ್ಲಿ ಒಂದಾಗಿದೆ. ಪುಡಿಮಾಡಿದ ಕಾಲಜನ್‌ನ ಟಬ್‌ಗಳನ್ನು ನೋಡದೆ ಅಥವಾ ಡ್ರಗ್‌ಸ್ಟೋರ್‌ನಲ್ಲಿ ಬ್ರೌಸ್ ಮಾಡದೆಯೇ ಕಿರಾಣಿ ಅಂಗಡಿಯಿಂದ ತಪ್ಪಿಸಿಕೊಳ್ಳುವುದು ಕಷ್ಟ, ಅವುಗಳು ಮುಂಬರುವ ದಶಕಗಳವರೆಗೆ ನಿಮ್ಮನ್ನು ಯೌವನವಾಗಿ ಕಾಣುವಂತೆ ಮಾಡಲು ಕಾಲಜನ್ ಅನ್ನು ಹೆಚ್ಚಿಸುತ್ತವೆ ಎಂದು ಹೇಳುವ ಕ್ರೀಮ್‌ಗಳನ್ನು ಗಮನಿಸದೆ. ಆದರೆ ನಿಮ್ಮ ಚರ್ಮಕ್ಕೆ ಕಾಲಜನ್ ಎಷ್ಟು ಮುಖ್ಯ, ನಿಜವಾಗಿಯೂ? ಕಾಲಜನ್ ಎಂದರೇನು? ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಪ್ರೊಟೀನ್ ಕಾಲಜನ್ ಸಹ ಜನಪ್ರಿಯ ಪೂರಕ ಮತ್ತು ಸೌಂದರ್ಯ […]

Advertisement

Wordpress Social Share Plugin powered by Ultimatelysocial