ವೈ. ಕೆ. ಶ್ರೀಕಂಠಯ್ಯನವರು ಕರ್ನಾಟಕ ಶಾಸ್ತ್ರೀಯ ಸಂಗೀತ ವಾಗ್ಗೇಯಕಾರ.

ವೈ. ಕೆ. ಶ್ರೀಕಂಠಯ್ಯನವರು ಕರ್ನಾಟಕ ಶಾಸ್ತ್ರೀಯ ಸಂಗೀತ ವಾಗ್ಗೇಯಕಾರರಾಗಿ ಮತ್ತು ಚಿತ್ರಕಲಾವಿದರಾಗಿ ಅಪಾರ ಸಾಧನೆ ಮಾಡಿದವರು. ಇಂದು ಅವರ ಸಂಸ್ಮರಣಾ ದಿನ.
ವೈ. ಕೆ. ಶ್ರೀಕಂಠಯ್ಯನವರು ಕಡೂರು ಬಳಿಯ ಗ್ರಾಮವೊಂದರಲ್ಲಿ 1921ರ ಆಗಸ್ಟ್ 2ರಂದು ಜನಿಸಿದರು. ತಂದೆ ಕೃಷ್ಣಸ್ವಾಮಯ್ಯ. ತಾಯಿ ಸೀತಮ್ಮ. ಇವರ ಬಹುತೇಕ ಬದುಕು ಶಿವಮೊಗ್ಗದಲ್ಲಿ ನಡೆಯಿತು.
ಶ್ರೀಕಂಠಯ್ಯನವರಿಗೆ ಚಿಕ್ಕಂದಿನಿಂದಲೇ ಸಂಗೀತ ಮತ್ತು ಲಲಿತಕಲೆಗಳಲ್ಲಿ ಅಭಿರುಚಿ ಮೂಡಿತು. ಈ ಆಸಕ್ತಿ ಅವರನ್ನು ವೃತ್ತಿಯಿಂದ ಚಿತ್ರಕಲಾಕಾರರನ್ನಾಗಿಯೂ, ಪ್ರವೃತ್ತಿಯಿಂದ ಸಂಗೀತಜ್ಞರನ್ನಾಗಿಯೂ ರೂಪಿಸಿತು. ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದಕ್ಕೆ ಅವರದು ಭಕ್ತಿಪರವಶತೆ ತುಂಬಿದ ಏಕಮಾತ್ರ ಉತ್ತರ “ದೈವಕೃಪೆ” ಎಂಬುದಾಗಿತ್ತು. ಅವರ ರಚನೆಗಳಲ್ಲಿ ಆ ಕೃಪೆ ಶೋಭಿಸಿದೆ ಎಂಬುದು ವಿದ್ವಜ್ಜನರ ಅಭಿಮತ.
ವೈ. ಕೆ. ಶ್ರೀಕಂಠಯ್ಯನವರು ಸುಮಾರು ನಾಲ್ಕೈದು ದಶಕಗಳ ಕಾಲದಲ್ಲಿ ತಾವು ಕೇಳಿದ ಅಸಂಖ್ಯಾತ ಕಚೇರಿಗಳಿಂದ ಪ್ರಭಾವಿತರಾದುದು ಮಾತ್ರವಲ್ಲದೆ, ಹಿರಿಯ ವಿದ್ವಾಂಸರ ಸ್ನೇಹ, ಒಡನಾಟ ಮತ್ತು ಮಾರ್ಗದರ್ಶನಗಳನ್ನೂ ಗಳಿಸಿ, ಶಾಸ್ತ್ರೀಯ ಚೌಕಟ್ಟಿನಲ್ಲಿ ನೂರಾರು ಕೃತಿಗಳನ್ನು ರಚಿಸಿದರು. ಅವರ ಚಿತ್ರಕಲೆ ಮತ್ತು ಸಂಗೀತಾಭಿರುಚಿಗಳೆರಡೂ ಒಂದಕ್ಕೊಂದು ಪೂರಕವೆನಿಸುವಷ್ಟು ಜೊತೆ ಜೊತೆಯಾಗಿತ್ತು. ಶ್ರೀಕಂಠಯ್ಯನವರು ತಾವು ಭಾಗವಹಿಸುತ್ತಿದ್ದ ಪ್ರಸಿದ್ಧ ಸಂಗೀತಗಾರರ ಕಚೇರಿಗಳಲ್ಲಿನ ಹಾಡುಗಾರರು ಮತ್ತು ವಾದ್ಯಗಾರರ ಹಾವಭಾವಗಳನ್ನು ಕಚೇರಿಯ ಸಮಯದಲ್ಲೇ ಬಿಡಿಸಿ ಆ ಕಲಾವಿದರ ಹಸ್ತಾಕ್ಷರಗಳನ್ನು, ಅದರ ಮೇಲೆ ಪಡೆಯುತ್ತಿದ್ದುದು ವಿಶಿಷ್ಟವಾಗಿತ್ತು. ಆಧ್ಯಾತ್ಮ ಮತ್ತು ವಿವಿಧ ಕಲೆಗಳಲ್ಲಿ ಅಪಾರ ಸಂವೇದನೆ ಹೊಂದಿದ್ದ ಶ್ರೀಕಂಠಯ್ಯನವರು ಅನೇಕ ಸಾಧು ಸಂತರು ಮತ್ತು ಕಲಾತಪಸ್ವಿಗಳ ಚಿತ್ರಗಳನ್ನು ಭಾವಪೂರ್ಣವಾಗಿ ತಮ್ಮ ವರ್ಣಕಲಾಕುಂಚದಿಂದ ಹೊರಹೊಮ್ಮಿಸಿದ್ದರು.
ಶೃಂಗೇರಿ ಜಗದ್ಗುರುಗಳ ಹಾಗೂ ಹಲವಾರು ಹಿರಿಯ ವಿದ್ವಾಂಸರ ಆಶೀರ್ವಾದ ಮತ್ತು ಸೌಹಾರ್ದಗಳಿಂದ ಇವರ ರಚನೆಗಳು ಜನಪ್ರಿಯಗೊಂಡವು. ಮಂಗಳಂಪಲ್ಲಿ ಬಾಲಮುರಳಿಕೃಷ್ಣ ಅವರು ವೈ. ಕೆ. ಶ್ರೀಕಂಠಯ್ಯನವರ ಏಳು ರಚನೆಗಳನ್ನು ‘ಶೃಂಗೇರಿ ಶಾರದೆ’ ಎಂಬ ಶೀರ್ಷಿಕೆಯ ಧ್ವನಿ ಸುರುಳಿಯಲ್ಲಿ ಹಾಡಿ ಪ್ರಸಿದ್ಧ ಪಡಿಸಿದ್ದಾರೆ. ಇವರ ರಚನೆಗಳು ಲಾಲ್ಗುಡಿ ಜಯರಾಮನ್ ಅವರ ಪ್ರಸ್ತುತಿಗಳಲ್ಲೂ ಶೋಭಿಸಿವೆ. ಇದಲ್ಲದೆ ಇವರ ಭಕ್ತಿ ವರ್ಣನೆಗಳು ತುಂಬಿದ ಸಕಲ ದೇವಾದಿದೇವತೆಗಳ ಕುರಿತಾದ ನೂರಕ್ಕೂ ಹೆಚ್ಚು ಕೃತಿಗಳು ನಾಡಿನ ಅನೇಕ ಪ್ರಸಿದ್ಧ ಸಂಗೀತ ವಿದ್ವಾಂಸರುಗಳ ಪ್ರಸ್ತುತಿಗಳಲ್ಲಿ ಶೋಭಿಸುತ್ತಾ ಬಂದಿವೆ.
ವೈ. ಕೆ. ಶ್ರೀಕಂಠಯ್ಯನವರು ಮಹಾನ್ ವಿದ್ವಾಂಸರುಗಳಿಂದ ಸಂಗೀತ ಮತ್ತು ಸಾಹಿತ್ಯದ ಪರಿಶೋಧನೆ ಮಾಡಿಸಿ ತಾವೇ ರಾಗ ತಾಳಗಳನ್ನೂ ಅಳವಡಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಲುಡ್ವಿಗ್ ವಾನ್ ಬೇತೋವನ್ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸಂಗೀತ ಕಲಾವಿದ

Thu Dec 22 , 2022
      ಲುಡ್ವಿಗ್ ವಾನ್ ಬೇತೋವನ್ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸಂಗೀತ ಕಲಾವಿದರಲ್ಲೊಬ್ಬನೆಂದು ಹೆಸರಾಗಿದ್ದಾನೆ. ಆತನೊಬ್ಬ ಮಹಾನ್ ಪ್ರತಿಭಾನ್ವಿತ ವಾದ್ಯಗಾರ, ಕೃತಿ ರಚನಕಾರ ಮತ್ತಿ ಸಂಗೀತ ಸಂಯೋಜಕ. ಬೇತೋವನ್ನನ ಶ್ರೇಷ್ಠ ಕೃತಿಗಳ ರಚನೆ ಆದದ್ದು ಆತ ಪೂರ್ತಿ ಕಿವುಡನಾದ ಮೇಲೆ. ಪರಮಭವ್ಯ ಸಂಗೀತವೊಂದು ಅದನ್ನು ಆಲಿಸಿ ಆನಂದಿಸಲಾಗದವನ ಕೊಡುಗೆ ಎಂದರೆ ತುಸು ವಿಚಿತ್ರವೆನಿಸುತ್ತದೆ. ಬೇತೋವನ್ನನ ಭೌತ ಶ್ರವಣೇಂದ್ರಿಯ ನಿಷ್ಕ್ರಿಯವಾದರೂ ಆತನ ಅಂತರಿಕ ಸಂವೇದನೆಗಳು ಸದಾ ಜಾಗೃತವಾಗಿದ್ದು, ಕೋಮಲ ಮತ್ತು […]

Advertisement

Wordpress Social Share Plugin powered by Ultimatelysocial