ಬೆಂಗಳೂರು: ಕಾಂಗ್ರೆಸ್ ಪಕ್ಷವು ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ( Rajya Sabha Election ) ಸ್ಪರ್ಧಿಸಲು ಈಗಾಗಲೇ ಜಯರಾಮ್ ರಮೇಶ್ ( Jairam Ramesh ) ಮೊದಲನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಇಂದು ಅವರು ನಾಮಪತ್ರ ಸಲ್ಲಿಕೆ ಮಾಡಿದರು.
ಇದೀಗ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಲು ಪಕ್ಷವು ನಿರ್ಧರಿಸಿದೆ ಎಂದು ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ( B Z Zameer Ahamad Khan ) ಅವರು ತಿಳಿಸಿದರು.
ಇಂದು ಸಿ ಎಲ್ ಪಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲನೇ ಅಭ್ಯರ್ಥಿಗೆ ಮತ ಹಾಕಿ, ಇನ್ನೂ 25 ಮತಗಳು ಉಳಿಯುತ್ತವೆ. ಇನ್ನು ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಗೆ ಅಷ್ಟಾಗಿ ಸಂಖ್ಯಾಬಲ ಇಲ್ಲ ಹಾಗೂ ಇತರ ಪಕ್ಷಗಳ ಶಾಸಕರೂ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಹಾಗಾಗಿ, ಈ ಬಾರಿ ಕಾಂಗ್ರೆಸ್ ನ ಅಭ್ಯರ್ಥಿಗಳು ಗೆಲ್ಲುವ ಭರವಸೆ ನಮಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಚಾಮರಾಜಪೇಟೆ ಶಾಸಕರು ಮತ್ತು ಮಾಜಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada