ಶ್ರೀಕೃಷ್ಣನಲ್ಲಿ ಮಹಾದೇವನನು ಕಂಡ ಭೀಷ್ಮ ಮಹಾತ್ಮ 🌷🙏🌷

ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಸಭಾ ಪರ್ವ – ಒಂಭತ್ತನೆಯ ಸಂಧಿ
ದೇವ ದೇವನನುಪನಿಷತ್ಕಾಂ
ತಾವಳಿಯ ಕಮನೀಯನನು ರಾ
ಜೀವಪೀಠನ ಪಿತನನಭಿವರ್ಣಿಸಿದನಾ ಭೀಷ್ಮ
ಕೇಳು ಜನಮೇಜಯ ಧರಿತ್ರೀ
ಪಾಲ ವಿರಚಿತ ಪದಯುಗಪ್ರ
ಕ್ಷಾಳನಾಚಮನೀಯ ತತ್ಪರಿಶುದ್ಧ ಭಾವದಲಿ
ಆ ಲಲಿತ ತಲ್ಪದ ಯಶೋದಾ
ಬಾಲಕಂಗಭಿನಮಿಸಿ ನಿಮಿಷ ನಿ
ಮೀಲಿತಾಕ್ಷನು ಕಂದೆರೆದು ಮುನಿಜನಕೆ ಕೈ ಮುಗಿದು ೧
ವರ ಋಷಿಗಳಾಜ್ಞೆಯಲಿ ವಿಶ್ವಂ
ಭರನ ವಿಷಯೀಕರಿಸಿ ರಾಜಾ
ಧ್ವರ ಸಮರ್ಥನ ಭವ ವಿನಾಶನ ಸುಪ್ರಯೋಜಕನ
ಅರಿವ ತೆರದಿಂದೆನ್ನ ಮತಿ ಗೋ
ಚರಿಸಿದುದ ಹೇಳುವೆನು ಕೃಷ್ಣನ
ಪರಮ ಲೀಲಾ ಲಲಿತ ಚರಿತವನೆಂದನಾ ಭೀಷ್ಮ ೨
ಘನರಜೋಗುಣದಲ್ಲಿ ಚತುರಾ
ನನ ತಮೋ ಗುಣದಲ್ಲಿ ಶಂಕರ
ನೆನಿಸಿ ಸತ್ವಗುಣಾನುಗತಿಯಲಿ ವಿಷ್ಣುವೆಂದೆನಿಸಿ
ಘನ ಜಗನ್ಮಯನಾಗಿ ಸರ್ವಾ
ತ್ಮನು ಮಹೇಶ್ವರನೆನಿಪನೀತನ
ನೆನಹನೀತನ ನಿಜವನರಿವ ಮಹಾತ್ಮರಾರೆಂದ ೩
ಈತನವ್ಯಕ್ತನು ವಿಚಾರಿಸ
ಲೀತನಮಲವ್ಯಕ್ತಲಿಂಗನ
ಜಾತನವ್ಯಯನಪ್ರಮೇಯನಗಮ್ಯನದ್ವಿತಯ
ಈತ ಚೈತನ್ಯಾತ್ಮ ನಿರ್ಗುಣ
ನೀತ ಗುಣಸಂಯೋಗಿ ಸರ್ವಗ
ನೀತ ಚಿನ್ಮಯನೀತನಾ ಹರಿಯೆಂದನಾ ಭೀಷ್ಮ ೪
ಜಲನಿಧಿಯ ಬುದ್ಬುದ ತರಂಗಾ
ವಳಿಗಳಾ ಜಲಧಿಯಲಿ ತೋರುವ
ವಳಿವವೀ ವೈಕುಂಠ ವಿಮಲಜ್ಞಾನ ಜಲಧಿಯಲಿ
ಹೊಳೆವುದಳಿವುದು ವಿಶ್ವವೀತನ
ಸುಳಿವು ತೋರುವದಿಲ್ಲ ಮಾಯಾ
ಲಲನೆಯಿಕ್ಕಿದ ಮದ್ದು ಜೀವರಿಗೆಂದನಾ ಭೀಷ್ಮ ೫
ಭೂತ ಜನನಸ್ಥಿತಿಗೆ ಕಾರಣ
ನೀತನೀತಂಗಿಲ್ಲ ಕಾರಣ
ನೀತ ಜಾಗ್ರತ್ ಸ್ವಪ್ನ ಸುಪ್ತಿಗಳೆಂಬವಸ್ಥೆಗಳ
ಆ ತುರಿಯ ನಾತುರಿಯ ತುರಿಯಾ
ತೀತ ಲಕ್ಷಣ ನಿತ್ಯನಿರ್ಮಳ
ನೀತನಮಳವ್ಯಕ್ತಿ ಚಿನ್ಮಯನೆಂದನಾ ಭೀಷ್ಮ ೬
ಭ್ರಾಮಕದೊಳೀ ವಿಷಯ ಸೌಖ್ಯದ
ರಾಮಣೀಯಕದೊಳಗೆ ಮುಳುಗಿ ನಿ
ರಾಮಯನು ಪರತತ್ವಮಯನಚ್ಯುತನು ತಾನಾದ
ಈ ಮುಕುಂದನ ಮರೆದು ಕರ್ಮವಿ
ರಾಮದಲಿ ಕುದಿದವರು ಮಾಯಾ
ಕಾಮಿನಿಯ ಕೈ ಮಸಕದಲಿ ಮರುಳಾಗದಿರರೆಂದ ೭
ಇರದೆ ತಿಲದಲಿ ತೈಲ ಕಾಷ್ಠದೊ
ಳೆರವ ತಹರೇ ಹುತವಹನನೇ
ನರಿಯಬಾರದೆ ವಿಷ್ಣು ಚೈತನ್ಯಾತ್ಮನೆಂಬುದನು
ಹೊರಗೊಳಗೆ ಸಂಸ್ಥೂಲ ಸೂಕ್ಷ್ಮೋ
ತ್ಕರದೊಳಗೆ ಹರಿಯುಳಿಯೆ ವಿಶ್ವವ
ಹೊರೆವ ಹೊಂದಿಪರುಂಟೆ ಹೊರಬಿಗರೆಂದನಾ ಭೀಷ್ಮ ೮
ಹೂಹೆಗಳು ಹೊಯ್ದಾಡವೇ ನಿ
ರ್ವಾಹ ಸೂತ್ರದ ಕುಣಿಕೆಗಾರನ
ಗಾಹಿನಲಿ ತಜ್ಜಗದಜೀವದ ಸುಕೃತ ದುಷ್ಕೃತವ
ಓಹರಿಕೆಯಲಿ ತಂದು ಭವದಲಿ
ಸೋಹಿಸುಳಿಸುವನೀ ಚರಾಚರ
ಜೋಹವಿದು ನಿಜಲೀಲೆಯೀ ಹರಿಗೆಂದನಾ ಭೀಷ್ಮ ೯
ಈತನಚ್ಯುತನಲ್ಲೆನಿಸಿ ವಿಪ
ರೀತ ಮಿಥ್ಯಾಜ್ಞಾನ ತೋರಿದ
ಡೀತನಲಿ ತಪ್ಪೇನು ನಿಜ ಪರಮಾತ್ಮನೆನಿಸಿದರೆ
ಭಿತನೊಬ್ಬನು ಕನಸಿನಲಿ ತ
ನ್ನಾ ತಲೆಯ ತಾನರಿದು ಪಿಡಿದುದ
ನೇತರಿಂದಲಿ ಕಂಡನೈ ಶಿಶುಪಾಲ ಕೇಳೆಂದ ೧೦
ಭ್ರಮೆಯ ಭುಜಗನೆ ರಜ್ಜುವೊ ಜಂ
ಗಮವೊ ಕಲ್ಪಿತ ಪುರುಷನಾತ್ಮನೊ
ವಿಮಲ ಸಂವಿದ್ರೂಪನಾತ್ಮನೊ ಜೀವ ಪರಮನಲಿ
ಕಮಲನಾಭನೆ ನಿಜವೊ ವಿಶ್ವ
ಕ್ರಮವೆ ನಿಜವೋ ಚೈದ್ಯ ಭೂಪತಿ
ಕುಮತಿ ಕಪಿಗೇಕಮಲ ಮಾಣಿಕವೆಂದನಾ ಭೀಷ್ಮ ೧೧
ತೋರುವೀ ಮಹದಾದಿ ಭೂತದೊ
ಳೋರು ಗುಡಿಸದೆ ನಿಂದ ಮುವ್ವ
ತ್ತಾರು ತತ್ವದೊಳೀತನೇ ಮಣಿಗಣದ ಗುಣದಂತೆ
ತೋರುವೀ ತೋರಿಕೆಯ ತುಷವನು
ತೂರಿದರೆ ಮೇಣ್ ವಿಶ್ವಮುಖದಲಿ
ತೋರಿ ತೋರದೆ ಮೆರೆವನೀ ಹರಿಯೆಂದನಾ ಭೀಷ್ಮ ೧೨
ಸ್ವೇದಜಾಂಡೋದ್ಭಿಜ ಜರಾಯುಜ
ಭೇದವಾದ ಚತುರ್ವಿಧದ ಭೂ
ತೋದರನ ತದ್ಭೂತಮಯ ತದ್ಭೂತ ಭಾವನನ
ವಾದಗೊಳ್ಳದ ಬಹಳ ವಸ್ತುವ
ನೀ ದುರಾತ್ಮಕನೆತ್ತ ಬಲ್ಲನು
ಬೀದಿಯಲಿ ಬಿದ್ದವನು ಬೊಮ್ಮವಿದೆಂದನಾ ಭೀಷ್ಮ ೧೩
ನೆಳಲು ಜಲದಲಿ ನಡುಗಲಿನಮಂ
ಡಲಕೆ ಕಂಪದೆ ಧೂಮಶಿಖಿ ಕು
ಪ್ಪಳಿಸಿದರೆ ಕಂದುವದೆ ನಭ ಕೆಂಧೂಳಿಯೊಡೆ ಮುರಿದು
ಸುಳಿದರನಿಲನ ತೊಳೆವರೇ ನರ
ರೊಳಗೆ ನರರೂಪದಲಿ ಜನಿಸಿದ
ರೊಳಗು ಡಿಳ್ಳವೆ ಪರಮ ಸುಖನಿಧಿಗೆಂದನಾ ಭೀಷ್ಮ ೧೪
ಗುಣಮಯದ ಗರುವಾಯಿಯಲಿ ಝೇ
ವಣಿಗೆಗೊಂಬನು ಭೂತದಿಂದ್ರಿಯ
ಗಣದೊಡನೆ ನಿಜ ಪೌರುಷದಲೊದಗಿದ ಪವಾಡಿಗಳ
ಗುಣವ ಝಾಡಿಸಿದರೆ ಸಮಷ್ಟಿಯ
ಹಣಿತದಲಿ ಮುರಿದಿದಿರನಗಲಕೆ
ಕುಣಿವ ಚೌಪಟ ಬೊಮ್ಮ ಗಜವಿದನರಿವರಾರೆಂದ ೧೫
ಕೊಲೆಯ ಕವತೆಯ ಕನಸಿನಲಿ ಕಳ
ವಳಿಸಿದರೆ ದಿಟವೇ ಮನೋರಥ
ಫಲವನನುಭವಿಸಿದರೆಯನುಭವಸಿದ್ಧವೇ ತನಗೆ
ಹೊಳೆವ ಜಗದಲಿ ಹೊಳೆದು ತನ್ನೊಳ
ಗಳಿದು ತಾನಾಗುಳಿದು ಬೊಮ್ಮಕೆ
ಹಳಿವು ಹೊರುವುದೆ ನಿತ್ಯಶುದ್ಧನೊಳೆಂದನಾ ಭೀಷ್ಮ ೧೬
ನೋಟ ಸುತ್ತಲು ಬೇಹುದೇ ಹರಿ
ದಾಟವಗಲಕೆ ಬಳಕೆಯಲಿ ಮಾ
ತಾಟ ಸುಳಿವಿನೊಳಗ್ಗಳದ ಹಿಡಿಬಂಧಿ ಹರಹಿನಲಿ
ಬೇಟದಲಿ ಮೂವಣ್ಣದಾಬೆಯ
ಕೂಟದಲಿ ಕುರುಹಾಗಿ ಮಿಗೆ ನಿ
ರ್ಲೋಟಿಸುವ ನಿಜ ದಿಟ್ಟ ಬೊಮ್ಮವಿದೆಂದನಾ ಭೀಷ್ಮ ೧೭
ಭೂತ ಭವ್ಯ ಭವತ್ಪ್ರಧಾನ
ಖ್ಯಾತ ತತ್ವಪ್ರಕೃತಿ ಪೂರುಷ
ನೀತ ಸಚ್ಚಿನ್ಮಾತ್ರನೀತನು ಪರಶಿವಾತ್ಮಕನು
ಸೋತ ನುಡಿ ಮನದೊಡನೆ ಮರಳಿದ
ಡಾತ ಸತ್ಯಜ್ಞಾನಮಯ ನಿ
ರ್ಧೂತ ಮಾಯಾತೀತನೀ ಹರಿಯೆಂದನಾ ಭೀಷ್ಮ ೧೮
ಯಜ್ಞದಧಿಪತಿಯೀತನೀತನು
ಯಜ್ಞಪುರುಷನು ಸ್ರುಕ್‌ಸ್ರುವಾದೀ
ಯಜ್ಞಸಾಧನನೀತನೀತನು ಮಂತ್ರಕಾಲಾತ್ಮ
ಯಜ್ಞವೀತನು ಕರ್ಮವೀತನು
ಯಜ್ಞದಲಿ ಯಜಮಾನನೀತನು
ಯಜ್ಞಫಲವೀ ದೇವಕೀ ಸುತನೆಂದನಾ ಭೀಷ್ಮ ೧೯
ದೆಸೆ ಪರಿಚ್ಛೇದಿಸದ ನುಡಿ ಹವ
ಣಿಸದ ಕಲ್ಪ ಸಹಸ್ರಕೋಟಿಯೊ
ಳಸಮಸೆಯ ಮಾಡದ ಮಹತ್ವದೊಳುರು ಮಹತ್ವದಲಿ
ಎಸೆವನಣುವಿಂಗಣುವೆನಿಸಿ ನಿ
ರ್ಮಿಸಿ ವಿಭಾಡಿಸಿ ಬರವಳಿದು ಹೆ
ಚ್ಚಿಸಿ ಮುರಿದನೀ ಜಗವನೀ ಹರಿಯೆಂದನಾ ಭೀಷ್ಮ ೨೦
ಒಂದೆನಿಸಿ ತೋರುವನು ಎರಡರೊ
ಳೊಂದಿ ಮರೆವನು ಮೂರು ನೆಲೆಯಲಿ
ನಿಂದು ನಾಲ್ಕನು ಬಳಸಿ ವಿಭುವಾಗೈದು ಠಾಣದಲಿ
ಹಿಂದೆ ಮುಂದೆಡಬಲದ ಬಹು ವಿಧ
ದಿಂದ ಮಾಯಾಗುಪ್ತನಾಗಿ ಮು
ಕುಂದ ತೋರುವನೀತನಂತೆಯನರಿವರಾರೆಂದ ೨೧
ದ್ವಿಜರು ಮುಖದಲಿ ಭೂಪರೀತನ
ಭುಜದಲಾದರು ನಿಖಿಳ ವೈಶ್ಯ
ವ್ರಜ ಘನೋರುಗಳಿಂದ ಶೂದ್ರರು ಪಾದಪದ್ಮದಲಿ
ದ್ವಿಜಪತಿಸ್ಸ್ವಾಂತದಲಿ ವರವಾ
ರಿಜಸಖನು ಕಣ್ಣಿನಲಿ ವದನಾಂ
ಬುಜದಲಿಂದ್ರಾದಿಗಳು ಜನಿಸಿದರೆಂದನಾ ಭೀಷ್ಮ ೨೨
ಗಗನವೀತನನಾಭಿ ದಶದಿ
ಕ್ಕುಗಳು ಕಿವಿ ಫಣಿಲೋಕ ವಿಮಳಾಂ
ಘ್ರಿಗಳು ಧ್ರುವನಿಂಮೇಲು ಭಾಗ ಮುರಾಂತಕನ ಮುಕುಟ
ಗಗನ ಮಣಿ ಶಂಕರ ವಿರಿಂಚಾ
ದಿಗಳು ದೇವನ ರೋಮ ಕೂಪದೊ
ಳಗಣಿತಾಮರ ನಿಕರವಿಹುದಿದನರಿವರಾರೆಂದ ೨೩
ಪ್ರಳಯದಲಿ ಧರೆ ಕರಗುವುದು ಜಲ
ದೊಳಗೆ ತಜ್ಜಲವಡಗುವುದು ಶಿಖಿ
ಯೊಳಗೆ ತತ್ಪಾವಕನು ಪವನನೊಳಾತನಭ್ರದಲಿ
ಬಳಿಕ ಹಂಸತ್ವದಲಿ ಗಗನವೆ
ನಿಲುಗು ಹಮ್ಮು ಮಹತ್ವದಲಿ ಮಹ
ದಳಿವು ಮಾಯೆಯೊಳಾಕೆಯಡಗುವಳೀತನಂಘ್ರಿಯಲಿ ೨೪
ಧರಣಿ ತಾನೈವತ್ತು ಕೋಟಿಯ
ಹರಹು ಭೂಮಿಗೆ ಹತ್ತು ಮಡಿ ಖ
ರ್ಪರ ಕಟಾಹವದಕ್ಕೆ ದಶಗುಣ ದಶಗುಣೋತ್ತರದ
ಪರಿವಿಡಿಯಲುದಕಾಗ್ನಿ ರವಿ ಪು
ಷ್ಕರದ ಹಮ್ಮು ಮಹತ್ವ ಸಪ್ತಾ
ವರಣವೀ ಬ್ರಹ್ಮಾಂಡವೀತನ ರೋಮ ರೋಮದಲಿ ೨೫
ದೇವರಂಗೋಪಾಂಗದಲಿ ವೇ
ದಾವಳಿಗಳುಚ್ಛ್ವಾಸದಲಿ ತೀ
ರ್ಥಾವಳಿಗಳಂಘ್ರಿದ್ವಯಾಂಬುಜ ಮಾಕರಂದದಲಿ
ಪಾವನಕೆ ಪಾವನನು ಜೀವರ
ಜೀವನನು ಮೃತ್ಯುವಿಗೆ ಮೃತ್ಯುವಿ
ದಾವ ಲೆಕ್ಕ ದೊಳೀತನಹನೆಂದರಿವರಾರೆಂದ ೨೬
ವಿಶ್ವಶಿಲ್ಪದ ಕುಶಲಹಸ್ತನು
ವಿಶ್ವರಕ್ಷೆಯ ಮಂತ್ರವಾದಿಯು
ವಿಶ್ವ ಸಮಿಧೆಗಳಗ್ನಿ ಕಾರ್ಯದ ಬೊಮ್ಮಚಾರಿ ವಟು
ವಿಶ್ವನಾಟಕ ಸೂತ್ರಧಾರನು
ವಿಶ್ವ ವಿಸ್ಮಯದೈಂದ್ರಜಾಲಕ
ವಿಶ್ವದಂತಸ್ಸ್ಯೂತ ಚೇತನನೀತ ನೋಡೆಂದ ೨೭
ಇರಲಿರಲು ಕಲ್ಪಾವಸಾನಕೆ
ಬಿರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲವೀ ಜಲದೊಳೊಂದಾಯ್ತೇಕ ರೂಪಾಗಿ
ಹರಿವಿನೋದದಲೊಬ್ಬನೇ ಸಂ
ಚರಿಸುತಿದ್ದನು ಬಳಿಕ ಕಾಲಾಂ
ತರದೊಳಗೆ ಮಧು ಕೈಟಭರು ಜನಿಸಿದರು ಕರ್ಣದಲಿ ೨೮
ಲೀಲೆಯಲಿ ಬಳಿಕವದಿರೊಡನೆ ವಿ
ತಾಳಿಸಿತು ಮನ ಕಾದಿದರು ಬಲು
ಕಾಳಗವನವರಿತ್ತ ವರದಲಿ ಹಿಡಿದು ದಾನವರ
ಸೀಳಿ ಬಿಸುಟನು ಖಳರ ಮೇದ
ಸ್ಸಾಳಿ ಮುಳುಗಿತು ಜಲದೊಳದರಿಂ
ಮೇಲುವೆಸರಾಯ್ತಿಳೆಗೆ ಮೇದಿನಿಯೆಂಬ ನಾಮದಲಿ ೨೯
ಆ ಮಧುವನಾ ಕೈಟಭನ ಮುರಿ
ದೀ ಮಹಾತ್ಮಕನೊಡನೆ ವಾದಿಸು
ವೀ ಮರುಳನೇನೆಂಬೆನೈ ಶಿಶುಪಾಲ ಬಾಲಕನ
ಕಾಮರಿಪು ಕಲ್ಪಾಂತವಹ್ನಿ
ವ್ಯೋಮರೂಪನುದಾರ ಸಗುಣ ಸ
ನಾಮ ಚಿನ್ಮಯನೀತನೀತನನರಿವರಾರೆಂದ ೩೦
ಶ್ರುತಿಪುರಾಣ ಸಮಸ್ತ ಶಾಸ್ತ್ರ
ಸ್ಮೃತಿ ವಿಭಾಗಾರ್ಥಕೆ ವಸಿಷ್ಠನ
ಸುತ ಸುತನಲೀ ವಿಮಲ ವೇದವ್ಯಾಸ ನಾಮದಲಿ
ವ್ರತಿಜನೋತ್ತಮನುದಿಸಿದನು ಯದು
ಪತಿ ಕಣಾ ತಾನೀತನೀ ದು
ರ್ಮತಿಗೆ ಗಮ್ಯವೆ ಗರುವ ದೈವದ ಗಾಢಗತಿಯೆಂದ ೩೧
ಮನುವರಿವನಜ ಬಲ್ಲನೀಶ್ವರ
ನೆನೆವ ನಾರದ ಮುನಿಪ ವರ್ಣಿಪ
ಮನದಿ ಸನಕ ಸನತ್ಸುಜಾತಾದ್ಯರಿಗಿದೇ ವ್ಯಸನ
ಮುನಿಗಳಿಗೆ ಮುಕ್ತರಿಗೆ ಕರ್ಮದ
ಕಣಿಗಳಿಗೆ ಕೋವಿದರಿಗಿದೆ ಜೀ
ವನವಿದೇ ಗತಿ ಪರಮ ವೈಷ್ಣವ ತತ್ವವಿದೆಯೆಂದ ೩೨
ವೇದಕೀಸುಬ್ಬಸ ವಿರಿಂಚ ಸು
ರಾದಿಗಳು ಕಿಗ್ಗಡಲಲಿರೆ ಸನ
ಕಾದಿ ಮುನಿಗಳು ತಡಿಯಲಿದ್ದರು ತೆರೆಯ ಹೊಯ್ಲಿನಲಿ
ವಾದಿಗಳ ದುಸ್ತರ್ಕ ನಸಿದುದು
ನಾದದಲಿ ದುಸ್ತರ ಮುರಾರಿ ಮ
ಹೋದಧಿಯನೀ ಬಣಗು ದಾನವ ಭಂಗಿಸುವನೆಂದ ೩೩ ಅಕಟ ನಿರ್ಗುಣ ತತ್ವವಿದೆ ನಾ
ಟಕದ ಬಹುರೂಪಿನಲಿ ವಿಶ್ವಾ
ತ್ಮಕ ಪರಾನಂದೈಕರಸವಿದೆ ಮನೆಯ ಕೇರಿಯಲಿ
ಪ್ರಕಟ ಮಾಯಾ ಗುಪ್ತ ಪರಮಾ
ತ್ಮಕ ಮಹಾನಿಧಿ ಸಭೆಯೊಳಿರುತಿರೆ
ವಿಕಳ ಮತಿಗಳು ವೀಚುಗೆಡುವರು ಶಿವ ಶಿವಾಯೆಂದ ೩೪
ನಿರವಯವ ತತ್ವೈಕ ರಸವಿದೆ
ನರ ಮನೋಹರ ರೂಪಿನಲಿ ವ್ಯೆವ
ಹರಣ ಸಂಜ್ಜಾರಹಿತವಿದೆ ಕೃಷ್ಣಾಭಿಧಾನದಲಿ
ಭರಿತ ಬಹಳಬ್ರಹ್ಮವಿಲ್ಲಿಯೆ
ಧರಣಿಯಲಿ ಸಂಚರಿಸುತಿದೆ ಮುರ
ಹರನ ತತ್ವರಹಸ್ಯ ಮುದ್ರೆಯನರಿವರಾರೆಂದ ೩೫
ಏಕೆ ಕನ್ನಡಿ ಕುರುಡರಿಗೆ ತಾ
ನೇಕೆ ಸಾಳಗ ಶುದ್ಧ ಬಧಿರರಿ
ಗೇಕೆ ಮೂರ್ಖ ಸಮಾಜದಲಿ ಸಾಹಿತ್ಯ ಸನ್ನಾಹ
ಏಕೆ ಖಳರಿಗೆ ನಯ ವಿಧಾನ
ವ್ಯಾಕರಣ ಪಾಂಡಿತ್ಯ ಫಡ ಲೋ
ಕೈಕ ಪಾತಕನೆಂದು ನುಡಿದನು ಜರೆದು ದಾನವನ ೩೬
ಹೊಗಳಿ ದಣಿಯವು ವೇದತತಿ ಕೈ
ಮುಗಿದು ದಣಿಯರು ಕಮಲಭವ ಭವ
ರೊಗುಮಿಗೆಯ ಮಾನಸ ಸಮಾಧಿಯ ಸಾರ ಸತ್ವದಲಿ
ಬಗೆದು ದಣಿಯರು ಯೋಗಿಗಳು ಕೈ
ಮುಗುಚಿ ದಣಿಯರು ಕರ್ಮಿಗಳು ಮೂ
ಜಗದ ದೈವದ ದೈವ ಕೃಷ್ಣನ ಬೈವನಿವನೆಂದ ೩೭
ಈತ ಕಾಣಿರೆ ಘನ ಚರಾಚರ
ಚೇತನತ್ವದಿ ವಿಹಿತ ಬೀಜ
ವ್ರಾತವನು ತುಂಬಿದನು ಪಡಗಿನೊಳೌಕಿ ಬಾಲ್ಯದಲಿ
ಆತ ತಮನೆಂಬಸುರನನು ಕರ
ಘಾತಿಯಿಂದವೆ ಕೆಡಹಿ ವೇದವ
ನೀತ ತಂದನು ಮತ್ಸ್ಯರುಪಿನೊಳೆಂದನಾ ಭೀಷ್ಮ ೩೮
ಖೂಳ ನಾಯ್ಗಳು ಬಲ್ಲರೇ ಶಿಶು
ಪಾಲಕಾದಿ ದೊಠಾರರೀ ಗೋ
ಪಾಲ ಕಾಣಿರೆ ಕೂರ್ಮವೇಷವ ಧರಿಸಿ ಮೇದಿನಿಯ
ಸಾಲ ಹೆಡೆಯಲಿ ಹೊತ್ತ ಪನ್ನಗ
ಪಾಲಕನನಾ ಮಂದರದ ಕಡ
ಗೋಲನಾಂತ ಮಹಾತ್ಮನೀತನನರಿವರಾರೆಂದ ೩೯
ಇವನ ಪಾಡೇ ಮುನ್ನ ಕೃತಯುಗ
ದವರೊಳಧಿಕ ಹಿರಣ್ಯ ಲೋಚನ
ನವನಿಯನು ಕೊಂಡೋಡಿ ಹೊಕ್ಕನು ಘನರಸಾತಳವ
ಅವನ ಬೆಂಬತ್ತಿದನು ಯಜ್ಞ
ಪ್ರವರ ದೇಹನು ವೇದಮಯ ನಿ
ರ್ಭವ ವಿಮೋಹನ ಘನ ವರಾಹನೆ ಕೃಷ್ಣ ತಾನೆಂದ ೪೦
ತೂಳಿದನು ದಂಡೆಯಲಿ ದೈತ್ಯನ
ಸೀಳಿದನು ದಿಕ್ಕರಿ ಫಣೀಂದ್ರರ
ಮೇಲೆ ಧರಣಿಯ ನಿಲಿಸಿದನು ಸಂತವಿಸಿದನು ಜಗವ
ಹೇಳಲಜ ರುದ್ರಾಮರೇಂದ್ರರ
ತಾಳಿಗೆಗಳೊಣಗಿದವು ಭಂಗಿ ಛ
ಡಾಳಿಸಿತಲಾ ಚೈದ್ಯ ಭೂಪತಿಗೆಂದನಾ ಭೀಷ್ಮ ೪೧
ಆ ಹಿರಣ್ಯಾಕ್ಷನ ಸಹೋದರ
ನೀ ಹರಿಯನವಗಡಿಸಿ ದೈವ
ದ್ರೋಹಿ ಬಹುವಿಧ ವ್ಯಥೆಗಳಲಿ ಬೇಸರಿಸಿದನು ಮಗನ
ಆಹವದಲಚ್ಯುತ ಮುಕುಂದ ಮ
ಹಾಹಿತಲ್ಪ ಮಹೇಂದ್ರ ವಂದ್ಯ
ತ್ರಾಹಿಯೆಂದನವರತ ತುತಿಸಿದನಂದು ಪ್ರಹ್ಲಾದ ೪೨
ಕಾದುದೀತನ ನಾಮವಾ ಪ್ರ
ಹ್ಲಾದನಾಸರು ಬೇಸರನು ಬಳಿ
ಕೀ ದಯಾಂಬುಧಿ ದನುಜಪತಿ ದಿಟ್ಟಿಸಿದ ಕಂಬದಲಿ
ಆದುದಾವಿರ್ಭಾವ ಸಿಡಿಲಿನ
ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ ೪೩
ಉಗುರೊಳಸುರನ ಕರುಳ ದಂಡೆಯ
ನುಗಿದು ಕೊರಳಲಿ ಹಾಯ್ಕಿ ದೈತ್ಯನ
ಮಗನ ಪತಿಕರಿಸಿದನು ತತ್ಕ್ರೋಧಾಗ್ನಿ ಪಲ್ಲವಿಸಿ
ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ
ನೆಗೆಯಲುರಿ ಹೊಡೆದಬುಜಜಾಂಡದ
ಬಗರಗೆಯ ಭೇದಿಸಿತು ಈತನ ಕೆಣಕ ಬೇಡೆಂದ ೪೪
ತ್ರೇತೆಯಲಿ ಬಲಿರಾಜ್ಯ ಭುವನ
ಖ್ಯಾತವಾಯ್ತು ತದಶ್ವಮೇಧದೊ
ಳೀತ ವಾಮನನಾಗಿ ಯಾಚಿಸಿದನು ಪದತ್ರಯವ
ಭೂತಳವನಲ್ಲಿಂದ ಬಳಿಕ
ಪ್ರೀತಿಯಲಿ ಕಮಲಜ ಕಟಾಹೋ (೪೫
ದ್ಭೂತ ಚರಣದೊಳಳೆಯಲಾದುದು ಧರಣಿ ಪದಯುಗಕೆ
ನೆರೆಯದೀ ನೆಲ ನೆಗಹಿದಂಘ್ರಿಗೆ
ಮುರಿದುದಬುಜ ಭವಾಂಡ ಖರ್ಪರ
ದೊರತೆ ಬಹಿರಾವರಣ ಜಲಗಂಗಾಭಿಧಾನದಲಿ
ಎರಗಿತೀ ಗೋವಿಂದನಾರೆಂ
ದರಿಯೆಲಾ ಹರಿಯೊಡನೆ ಜಂಬುಕ
ನೊರಲಿದರೆ ನಾನೇನ ಹೇಳುವೆನೆಂದನಾ ಭೀಷ್ಮ ೪೬
ರಾಯ ಕೇಳೈ ವಿಮಲದತ್ತಾ
ತ್ರೇಯವೆಸರಲಿ ಧರ್ಮವನು ಪೂ
ರಾಯದಲಿ ಪಲ್ಲವಿಸಿದನು ಹೈಹಯನ ರಾಜ್ಯದಲಿ
ಬಾಯಿ ಬಡಿಕರು ಬಗುಳಿದರೆ ಹರಿ
ಯಾಯತಿಕೆ ಪಾಸಟಿಯೆ ನಿಗಮದ
ಬಾಯ ಬೀಯಗವೀ ಮುಕುಂದನನರಿವರಾರೆಂದ ೪೭
ಮಿಡುಕಿದರೆ ರಾವಣನ ಸೆರೆಯಲಿ
ಕೆಡಹಿದನಲಾ ಕಾರ್ತವೀರ್ಯನ
ಕಡುಹನಾನುವ ದಿಟ್ಟರುಂಟೇ ದೇವ ದೈತ್ಯರಲಿ
ತೊಡಕಿದರೆ ಬಳಿಕಾ ನೃಪನ ತೋ
ಳಡವಿಗಡಿದು ಮಹೀಶ ವಂಶವ
ತಡೆಗಡಿದನೀ ಕೊಡಲಿಕಾರನ ತೋಟಿ ಬೇಡೆಂದ ೪೮
ಖರನ ತ್ರಿಶಿರನ ದೂಷಣಾದ್ಯರ
ಶಿರವ ಚೆಂಡಾಡಿದನು ಘನ ಸಾ
ಗರವ ಕಟ್ಟಿದ ಕಟ್ಟೆಯಿದೆಲಾ ಕಾಣದೇ ಲೋಕ
ಹರಿಬವೋ ಮೇಣ್ ಪೌರುಷವೊ ಮ
ತ್ಸರವೊ ಮೇಣ್ ಮಾರಾಂಕವೋ ಹುಲು ೪೯
ಮೊರಡಿ ಸೆಣಸುವುದೇ ಸುರಾದ್ರಿಯೊಳೆಂದನಾ ಭೀಷ್ಮ
ಆವುದಂತರವಿವಗೆ ಹಿಂದಣ
ರಾವಣನೊಳವಗಡಿಸಿಯಾತನ
ಮಾವನನು ಮುರಿದವನ ತಂಗಿಯ ಮೂಗ ಭಂಗಿಸಿದ
ದೇವ ದಲ್ಲಣನಿಂದ್ರ ವಿಜಯ ಸು
ರಾವಳಿಯ ದೆಸೆಪಟರೆನಿಪ ದೈ
ತ್ಯಾವಳಿಯ ಕಡಿ ಖಂಡದೊಟ್ಟಿಲ ರಾಮ ನೋಡೆಂದ ೫೦
ಹರಗಿರಿಯನೊಡಯೆತ್ತಿದುಬ್ಬಟೆ
ಯರಸಲಾ ದಶವದನನಾತನ
ಶಿರದುಪಾರವನಿಟ್ಟು ದಣಿಸನೆ ದೆಸೆಯ ದೇವಿಯರ
ಬರಡನಿವನೀ ದೈವದೊಡನು
ಬ್ಬರಿಸಿದೊಡೆಯೀ ಇಬ್ಬರಭ್ಯಂ
ತರವನಿವರರಿಯರೆ ಮುನೀಂದ್ರರು ಶಿವ ಶಿವಾಯೆಂದ ೫೧
ಹಿಂದೆ ಕೃತಯುಗ ಸಮಯದಲಿ ಸುರ
ವೃಂದದೊಡನಸುರರಿಗೆ ಕೊಂಡೆಯ
ದಿಂದ ಮಸೆಮಸೆದಂಕವಾಯಿತು ಖಳನ ಕಾಳಗಕೆ
ಬಂದುದಾ ತೆತ್ತೀಸ ಕೋಟಿಗ
ಳೊಂದು ದೆಸೆ ಜಂಭಾದಿ ದಾನವ
ರೊಂದು ದೆಸೆ ಹೊಯ್ದಾಡಿತೇನೆಂಬೆನು ಮಹಾದ್ಭುತವ ೫೨
ಅವರೊಳಗ್ಗದ ಕಾಲನೇಮಿ
ಪ್ರವರನಮರ ವಿಭಾಡ ವರ ದಾ
ನವ ಶಿರೋಮಣಿ ದಿವಿಜನಾಯಕ ಶರಭಭೇರುಂಡ
ಬವರದಲಿ ಶಕ್ರಾಗ್ನಿ ಯಮ ಶಶಿ
ರವಿ ಕುಬೇರ ಸಮೀರಣಾದ್ಯರ
ಸವರಿ ಸಪ್ತಾಂಗವನು ಕೊಂಡನು ಮೇಘ ವಾಹನನ ೫೩
ರಣದೊಳೋಡಿದ ಸುರನಿಕರ ಘ
ಲ್ಲಣೆಯನಿಕ್ಕಿತು ಹರಿಗೆ ಕರೆ ಹ
ಲ್ಲಣಿಸು ಗರುಡನನೆಂದು ಹೊರವಂಟನು ಮುರಧ್ವಂಸಿ
ಕೆಣಕಿದನು ದಾನವನನಾಗಳೆ
ಹಣಿದವನ ಹೊಯ್ದಮಳ ಚಕ್ರದ ೫೪
ಗೊಣೆಯದಲಿ ಮೆರಸಿದನು ತಲೆಯನು ದಿವಿಜ ನಗರಿಯಲಿ
ಆ ಮಹಾಸುರ ಕಾಲನೇಮಿ ಸ
ನಾಮನೀ ಕಾಲದಲಿ ಯಾದವ
ಭೂಮಿಯಲಿ ಜನಿಸಿದನಲೇ ಕಂಸಾಭಿಧಾನದಲಿ
ಈ ಮರುಳು ಹವಣೇ ತದೀಯ
ಸ್ತೋಮ ಧೇನುಕ ಕೇಶಿ ವತ್ಸ ತೃ
ಣಾಮಯರು ಹಲರಿಹರು ದುಷ್ಪರಿವಾರ ಕಂಸನಲಿ ೫೫
ಸೇದಿದನು ಪೂತನಿಯಸುವನವ
ಳಾದರಿಸಿ ಮೊಲೆವಾಲನೂಡಿಸೆ
ಪಾದತಳ ಸೋಂಕಿನಲಿ ತೊಟ್ಟಿಲ ಬಂಡಿ ನುಗ್ಗಾಯ್ತು
ಸೇದಿ ಕಟ್ಟಿದೊರಳನೆಳೆದರೆ
ಬೀದಿಯಲಿ ಮರ ಮುರಿದುದೀ ಕರು
ಗಾದವನ ಕೈಯಿಂದ ಮಡಿದುದು ಕಂಸ ಪರಿವಾರ ೫೬
ಕೇಶಿ ಧೇನುಕ ವತ್ಸ ಲಂಬ ಬ
ಕಾಸುರನು ತೃಣವರ್ತನಘನೆಂ
ಬಾ ಸಮರ್ಥರ ಸೀಳಿ ಬಿಸುಟನು ಬಾಲಕೇಳಿಯಲಿ
ಗಾಸಿಯಾದುದು ದಂತಿ ಮಲ್ಲರ
ದೇಸ ಘನ ಮಾವನನು ಮರ್ದಿಸಿ
ಮೀಸಲಳಿಯದ ದಿವಿಜ ಕನ್ನೆಯರೊಡನೆ ಜೋಡಿಸಿದ ೫೭
ಇವನ ಹವಣೇ ತ್ರಿಪುರಹತ ದಾ
ನವರು ಕುಂಭ ನಿಕುಂಭವೆಸರಿಂ
ದವನಿಯಲಿ ಜನಿಸಿದರು ನಭದಲಿ ರಚಿಸಿದರು ಪುರವ
ಅವದಿರರೆಯಾಳಿದರು ನಿರ್ಜರ
ನಿವಹವನು ಬಳಿಕವರನೊಂದೇ
ಬವರದಲಿ ಕೆಡಹಿದನು ಕೃಷ್ಣನನರಿವರಾರೆಂದ ೫೮
ಮುರನ ನರಕನ ಹಂಸ ಡಿಬಿಕರ
ವರ ಸೃಗಾಲನ ದಂತವಕ್ರನ
ದುರುಳ ಪೌಂಡ್ರಕ ಪಂಚಜನ ಶುಂಭನ ನಿಶುಂಭಕನ
ಅರಿ ಹಯಗ್ರೀವಕನ ಸಾಲ್ವನ
ನೊರಸಿದನಲಾ ನಿನ್ನ ಪಾಡಿನ
ದುರುಳರೇ ದೈತ್ಯೇಂದ್ರರೀತನ ಕೆಣಕಿದವರೆಂದ ೫೯
ತೋಳು ಸಾವಿರವಮರಪತಿ ತೆರು
ವಾಳಿನೊಕ್ಕಲು ಕಂತುಕದ ವೈ
ಹಾಳಿ ಪಾತಾಳದಲಿ ಸಪ್ತದ್ವೀಪ ಮನೆ ತನಗೆ
ಶೂಲಿ ಬಾಗಿಲ ಕಾಯ್ವನೀಸು ಚ
ಡಾಳಿಸಿದ ಸಿರಿಯಾರಿಗಾತನ
ತೋಳಡವಿಯನು ನಿನ್ನೆ ತರಿದನು ಕೃಷ್ಣ ನೋಡೆಂದ ೬೦
ಆ ಯುಗದಲಾ ಯುಗದಲನಿಬರು
ಬೀಯವಾದರು ದೈತ್ಯ ದಾನವ
ರೀ ಯುಗದಲೆನಿತಸುರರನಿಬರು ದುಷ್ಟದಾನವರು
ರಾಯರನಿಬರು ದಿವಿಜ ರಾಯನ
ಲಾಯದಲಿ ಲಂಬಿಸಿದರಾ ತರು
ವಾಯ ನಿನಗೀಗಳೆ ವಿಘಾತದೊಳೆಂದನಾ ಭೀಷ್ಮ ೬೧
ಇಂಗಿತದಲರಿವುದು ಮಹಾತ್ಮರಿ
ಗಂಗವಿದು ಮಧ್ಯಮರು ಕರ್ಣ ಪ
ಥಂಗಳಲಿ ಗೋಚರಿಸಲರಿವುದು ಲೋಕ ವೃತ್ತಿಯಿದು
ಕಂಗಳಲಿ ಕಂಡರಿವರಧಮರು
ಕಂಗಳಲಿ ಕಿವಿಗಳಲಿ ಮೇಣ್ ಹರಿ
ಯಿಂಗಿತವನರಿಯದ ಜಡಾತ್ಮನು ಚೈದ್ಯ ನೃಪನೆಂದ ೬೨
ಎಲೆ ಪಿತಾಮಹ ನೀವು ನಿಗಮ
ಸ್ಥಳ ರಹಸ್ಯವನುಪನಿಷತ್ಸಂ
ಕುಳ ವಚೋಭಿಪ್ರಾಯ ಪೀಯೂಷವನು ಬೀರಿದರೆ
ಖಳರಿಗತಿ ದರ್ಪಜ್ವರ ಪ್ರ
ಜ್ವಲಿತರಿಗೆ ಸೊಗಸುವುದೆ ಬೆಳದಿಂ
ಗಳು ವಿಯೋಗಿಗೆ ವಿಷಮವೆಂದನು ನಗುತ ಸಹದೇವ ೬೩
ಕೇಳಿರೈ ನೆರೆದಖಿಳ ಧರಣೀ
ಪಾಲರಿಗೆ ಕೈಮುಗಿದೆವೀ ಗೋ
ಪಾಲನೆಮ್ಮಾಚಾರ್ಯನೆಮ್ಮಯ ತಂದೆ ಗುರುವೆಮಗೆ
ಲಾಲಿಸಿದೆವರ್ಚಿಸಿದೆವೀತನ
ಮೇಲೆ ಮುಳಿಸುಂಟಾದೊಡೆನ್ನೊಡ
ನೇಳಲಾತನ ಗಂಡನೆಂದೊದೆದನು ಮಹೀತಳವ ೬೪
ಚೆಲ್ಲಿದವು ಸಹದೇವ ಶಿರದಲಿ
ಮಲ್ಲಿಗೆಯ ಮೊಗ್ಗೆಗಳ ಮಳೆ ನಭ
ದಲ್ಲಿ ದನಿಯಾಯ್ತಹುದಲೇ ಸಹದೇವ ಲೇಸೆನುತ
ಭುಲ್ಲವಿಸಿದರು ಋಷಿಗಳಪ್ರತಿ
ಮಲ್ಲದೈವದ ನೆಲೆಯನರಿಯದ
ಖುಲ್ಲ ಭೂಪರು ಮಸಗಿದರು ಗುಜುಗುಜಿನ ಗಾಢದಲಿ ೬೫
ಸಂಕ್ಷಿಪ್ತ ಭಾವ
ಈ ಶ್ರೀಕ್ರಷ್ಣ ದೇವ ದೇವ ಮಹಾದೇವನೇ ಹೊರತು ಮತ್ಯಾರೂ ಅಲ್ಲ ಎಂಬುದನ್ನು ಭೀಷ್ಮ ಹೇಳುವುದನ್ನು ಶ್ರೀಕೃಷ್ಣಪ್ರಿಯ ಕುಮಾರ ವ್ಯಾಸ ಇಲ್ಲಿ ಅದ್ಬುತವಾಗಿ ಕಟ್ಟಿಕೊಟ್ಟಿದ್ದಾನೆ. ಇದನ್ನು ಓದುವುದೇ ಒಂದು ಆನಂದ ತಂದೀತು.
ಶ್ರೀ ಕೃಷ್ಣನ ದಿವ್ಯಚರಿತ್ರೆಯನ್ನು ಸಂಕ್ಷಿಪ್ತವಾಗಿ ಭೀಷ್ಮರು ಸಭೆಗೆ ಇಲ್ಲಿ ವಿವರಿಸುತ್ತಿದ್ದಾರೆ.
ಸತ್ತ್ವಗುಣನಿಧಿ, ಸರ್ವ ಋಷಿಗಳಿಂದ ಪೂಜಿತ, ಅವ್ಯಕ್ತ, ಅಚ್ಯುತ, ನಿರಾಮಯ, ಇಡೀ ಜಗತ್ತಿನ ಪಾಲಕನಾದ ಕೃಷ್ಣನ ಮಹಿಮೆಯನ್ನು ಬಲ್ಲವರೇ ಬಲ್ಲರು. ಸಕಲ ಚರಾಚರ ಸೃಷ್ಟಿಯು ಇವನ ಕೈಯಲ್ಲಿ ನಿಯಂತ್ರಣದಲ್ಲಿರುವುದು. ಪರಬ್ರಹ್ಮವಸ್ತುವೇ ಈತನೆಂದು ತಿಳಿಯಿರಿ ಎಂದನು.
ಇವನೇ ವಿಷ್ಣು. ಸಕಲ ಸೃಷ್ಟಿಗೂ ಈತನೇ ಕಾರಣನು. ಇವನೇ ನಿಯಾಮಕನು.
ಇವನ ಕಿವಿಯಿಂದ ಜನಿಸಿದ ಮಧು ಕೈಟಭರೆಂಬ ರಕ್ಕಸರ ಸಂಹಾರ, ವೇದಗಳ ರಕ್ಷಣೆಯಲ್ಲಿ ಮತ್ಸ್ಯನಾಗಿ, ಸಮುದ್ರಮಥನದಲ್ಲಿ ಕೂರ್ಮನಾಗಿ, ಭೂಮಿಯನ್ನು ಎತ್ತಿತಂದ ವರಾಹನಾಗಿ, ಪ್ರಹ್ಲಾದನನ್ನು ಕರುಣಿಸಲು ನರಸಿಂಹನಾಗಿ, ಬಲಿಯನ್ನು ಮೆಟ್ಟಿದ ವಾಮನನಾಗಿ, ದತ್ತಾತ್ರೇಯ, ಪರಶುರಾಮರಾಗಿ, ತ್ರೇತೆಯಲ್ಲಿ ಶ್ರೀ ರಾಮನಾಗಿ ಸಕಲ ದುಷ್ಟಶಕ್ತಿಗಳನ್ನು ಬಡಿದು ಧರ್ಮ ಸ್ಥಾಪನೆಯನ್ನು ಮಾಡಿದ ವಿಮಲ ದಿವ್ಯ ಮಂಗಳ ಮೂರ್ತಿಯು ಇವನೇ ಎಂದು ಭಕ್ತಿಯಿಂದ ಭೀಷ್ಮರು ನುಡಿಯಿತ್ತಾರೆ.
ಮಂಗವೇನು ಬಲ್ಲದು ಮಾಣಿಕ್ಯದ ಬೆಲೆಯನ್ನು, ಈ ಶಿಶುಪಾಲನೇನು ಅರಿವನು ಇವನ ಮಹಿಮೆಯನ್ನು ಎಂದು ಎಲ್ಲರೂ ಗಜಬಜಿಸಿದರು. ದೇವಕೀನಂದನನಾಗಿ ಹುಟ್ಟಿ ವಸುದೇವನ ಕಂದನಾಗಿ ಬೆಳೆದು ಪೂತನಿ, ಶಕಟಾಸುರ ಮುಂತಾದವರನ್ನು ಕೊಂದು ದುಷ್ಟ ಕಂಸನನ್ನು ಮಣಿಸಿದ ಮಹಾಪುರುಷನಿವನು.
ಸಹದೇವನು ಆಗ ಎದ್ದುನಿಂತು ಸಭೆಗೆ ಹೇಳಿದನು. “ಇದುವರೆಗೂ ಕೇಳಿದ ಕೃಷ್ಣನ ಚರಿತ್ರೆಯನ್ನು ಇನ್ನೂ ಅರಿಯದಿದ್ದವರು ಮೂಢರು. ನಮಗೆ ಇವನೇ ಮಾನ್ಯನು. ಇವನೇ ಪೂಜ್ಯನು”.
ಆಕಾಶದಿಂದ ಹೂಮಳೆಯಾಯಿತು. ಮುನಿಜನಗಣ ಅನೇಕ ಸತ್ಪುರುಷ ಗಣ ಸಂಭ್ರಮಿಸಿತು. ಅವನ ಮಹಿಮೆಯನ್ನರಿಯದ ಖುಲ್ಲ ಭೂಪಗಣ ಗುಜಗುಜಿನ ಗಾಢಾಂಧಕಾರದ ಅವಪ್ರಜ್ಞೆಯಲ್ಲಿ ಬೇಯುತ್ತಿತ್ತು. ಆ ಖುಲ್ಲ ಭೂಪಗುಣದಲ್ಲಿದ್ದವ ಶಿಶುಪಾಲ ಒಬ್ಬನೇ ಅಲ್ಲ. ಅವನೂ ಇವರಲ್ಲೊಬ್ಬ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಯಾನಂದ ಸರಸ್ವತಿ

Fri Mar 4 , 2022
ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಸಂಸ್ಥಾಪಕರಾಗಿ ಮತ್ತು ಭಾರತೀಯ ಸಮಾಜ ಸುಧಾರಕರಾಗಿ ಸ್ಮರಣೀಯರಾಗಿದ್ದಾರೆ. ದಯಾನಂದ ಸರಸ್ವತಿ ಗುಜರಾತಿನ ಟಂಕಾರಾ ಗ್ರಾಮದಲ್ಲಿ 1824ರ ಫೆಬ್ರವರಿ 12ರಂದು ಜನಿಸಿದರು. ಅವರ ಮೊದಲ ಹೆಸರು ಮೂಲಶಂಕರ. ತಂದೆ ಕೃಷ್ಣಜೀ ಲಾಲ್ಜಿ ಕಪಾಡಿ. ತಾಯಿ ಯಶೋದಾಬಾಯಿ. ಅವರದು ದಾನ ಧರ್ಮಗಳಿಗೆ ಹೆಸರಾದ ಶ್ರೀಮಂತ ಮನೆತನ. ಕುಲಪದ್ಧತಿಯಂತೆ ಬಾಲ್ಯದಲ್ಲಿಯೇ ಮೂಲ ಶಂಕರನ ವೇದಾಧ್ಯಯನ ಸಾಂಗವಾಗಿ ನೆರವೇರಿತು. ಶಿವರಾತ್ರಿಯ ದಿನ ಶಿವ ಲಿಂಗದ ಮೇಲೇರಿ ಅಕ್ಷತೆ ಕಾಳನ್ನು […]

Advertisement

Wordpress Social Share Plugin powered by Ultimatelysocial