ಅಶೋಕ ಬಾದರದಿನ್ನಿ……

ರಂಗಭೂಮಿಯ ಪ್ರಯೋಗಶೀಲ ನಾಟಕಗಳಿಗೆ ಹೊಸ ಆಯಾಮ ನೀಡಿದವರಲ್ಲಿ ಅಶೋಕ ಬಾದರದಿನ್ನಿ ಪ್ರಮುಖರು.
ಅಶೋಕ ಬಾದರದಿನ್ನಿ ಬಾಗಲಕೋಟೆ ಜಿಲ್ಲೆಯ, ಅಚ್ಚನೂರು ಗ್ರಾಮದ, ಕೃಷಿ ಕುಟುಂಬದಲ್ಲಿ 1951ರ ಫೆಬ್ರವರಿ 6 ರಂದು ಜನಿಸಿದರು. ತಂದೆ ರುದ್ರಗೌಡ ಬಾದರದಿನ್ನಿ. ತಾಯಿ ಗೌರಮ್ಮ. ಪ್ರತಿಭಾವಂತ ಅಶೋಕ ಬಾದರದಿನ್ನಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್‌ ಪಡೆದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಪದವಿ ಪಡೆದರು.
ಅಶೋಕ ಬಾದರದಿನ್ನಿ ಅವರು ಮಿತ್ರಮಂಡಳಿ ರಚಿಸಿಕೊಂಡು ಶಾಲಾ ದಿನಗಳಿಂದಲೆ ನಾಟಕವಾಡುತ್ತಿದ್ದರು. ವಿಜಯಪುರಕ್ಕೆ ಹೊಸ ನಾಟಕಗಳನ್ನು ಪರಿಚಯಿಸುತ್ತಿದ್ದ ರಂಗಪರಿಚಾರಕ ಶ್ರೀನಿವಾಸ ತಾವರಗೇರಿ ಅವರಿಗೆ ಕೆಲಕಾಲ ಹೆಗಲೆಣೆಯಾಗಿಯೂ ನಿಂತರು. ನವದೆಹಲಿ ರಾಷ್ಟ್ರೀಯ ನಾಟಕ ಶಾಲೆಯಿಂದ ಅಡ್ವಾನ್ಸ್ಡ್ ಡ್ರಾಮಾದಲ್ಲಿ ಡಿಪ್ಲೊಮಾ ಪದವಿ ಪಡೆದ ಆಶೋಕ ಬಾದರದಿನ್ನಿ
ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಭಾಷೆಗಳ ಪ್ರಭುತ್ವ ಪಡೆದಿದರು. ದೆಹಲಿಯಲ್ಲಿ ಎನ್.ಎಸ್.ಡಿ.ಗಾಗಿ ಪ್ರಯೋಗಿಸಿದ ನಾಟಕಗಳಲ್ಲಿ ಅಲೋಕ್‌ನಾಥ್, ಅನುಪಮ್ ಖೇರ್, ಓಂಪುರಿ, ನಾಸಿರುದ್ದೀನ್ ಷಾ, ನೀನಾಗುಪ್ತ, ಮುಂತಾದವರೊಡನೆ ಅಭಿನಯಿಸಿದ್ದರು.
ಅಶೋಕ ಬಾದರದಿನ್ನಿ ಅವರು 1980ರ ಸುಮಾರಿನಲ್ಲಿ ರಾಷ್ಟ್ರೀಯ ನಾಟಕ ಶಾಲೆ ಪದವಿ ಪಡೆದು ಬಂದ ನಂತರ ಇಡೀ ರಾಜ್ಯವೇ ತಮ್ಮ ಕಾರ್ಯಕ್ಷೇತ್ರ ಎಂಬಂತೆ ಓಡಾಡಿದರು. ಅವರು ಬಿ.ವಿ. ಕಾರಂತರ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದರು. ಹಲವಾರು ಹವ್ಯಾಸಿ ರಂಗತರಬೇತಿ ಶಿಬಿರಗಳಲ್ಲಿ ಮಹತ್ವದ ಪಾತ್ರನಿರ್ವಹಿಸಿದ ಅಶೋಕ ಬಾದರದಿನ್ನಿ ಬೆನಕ, ರಂಗಸಂಪದ, ನಟರಂಗ, ಕಲಾಮಾಧ್ಯಮ, ಗೆಳೆಯರ ಬಳಗ, ಪ್ರತಿಮಾ ಸಭಾ, ಅಭಿನಯ, ತರಳ ಬಾಳು ಕಲಾ ಸಂಘ, ಬಾಪೂ ಕಲಾ ಲೋಕ, ಮುಂತಾದ ಸಂಸ್ಥೆಗಳಲ್ಲಿ ನಾಟಕಗಳ ನಿರ್ದೇಶನ ಮಾಡಿದರು. ಎ.ಎಸ್. ಮೂರ್ತಿ ಮತ್ತಿತರ ಸಮಾನ ಮನಸ್ಕರೊಡನೆ ಸೇರಿ ಅಭಿನಯ ತರಂಗ ನಾಟಕ ಶಾಲೆ ಸ್ಥಾಪನೆ ಮಾಡಿದರು. ಗ್ರಾಮೀಣ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ‘ಎಸ್.ಜೆ.ಎಂ. ಸ್ಕೂಲ್ ಆಫ್ ಡ್ರಾಮಾ’ ಸ್ಥಾಪಿಸಿದರಲ್ಲದೆ ಕೇಂದ್ರೀಕೃತ ನಗರಗಳ ರಂಗಭೂಮಿ ಚಟುವಟಿಕೆಗಳನ್ನು ಹಳ್ಳಿಗಳಿಗೂ ವಿಸ್ತರಿಸಿ ಪ್ರೋತ್ಸಾಹಿಸಲು ‘ಶಿವಸಂಚಾರ-ಸಾಣೇಹಳ್ಳಿ’ ಸಂಸ್ಥೆಯಡಿ ಏಳು ವರ್ಷಗಳ ದೀರ್ಘಸೇವೆ ಸಲ್ಲಿಸಿದರು.
ಅಶೋಕ ಬಾದರದಿನ್ನಿ ಅವರು ಮ್ಯಾಕ್‌ಬೆತ್, ಟಿಂಗರ ಬುಡ್ಡಣ್ಣ, ಕುಂಟ ಕುಂಟ ಕುರುವತ್ತಿ, ಮರಣವೇ ಮಹಾನವಮಿ, ಉದ್ಭವ, ದುರ್ಗಾಸ್ತಮಾನ, ಈಡಿಪಸ್, ಸಿರಿಸಂಪಿಗೆ, ಮಹಾಬೆಳಗು ಮುಂತಾದ ನಾಟಕಗಳನ್ನು ನಿರ್ದೇಶಿಸಿದರಲ್ಲದೆ ಅನೇಕ ರೂಪಕಗಳನ್ನು ಸಾಲು ಸಾಲಾಗಿ ರಚಿಸಿ ನಿರ್ದೇಶಿಸಿದರು. ಮುರುಘಾಮಠ, ವಿಜಯಮಹಾಂತ ಕಲಾಲೋಕದಿಂದ ಆರಂಭಗೊಂಡ ರೂಪಕಗಳ ಅಭಿಯಾನ ರಾಜ್ಯದ ಹಲವಡೆ ಜೈತ್ರಯಾತ್ರೆ ನಡೆಸಿತು. ಹೀಗೆ ಅವರು ರೂಪಕಗಳ ಜನಕ ಎಂದೇ ಹೆಸರಾದರು.
ಬಾದರದಿನ್ನಿ ನಾಟಕಗಳೆಂದರೆ ಮಿತವೆಚ್ಚ. ಅದ್ಧೂರಿ, ಆಢಂಬರಗಳಿಗೆ ಅವಕಾಶವೇ ಇರಲಿಲ್ಲ. ಪಾರಿಜಾತ, ಬಯಲಾಟ, ವೃತ್ತಿ ಕಂಪನಿ ನಾಟಕಗಳನ್ನು ನೋಡುತ್ತ ಅರಗಿಸಿಕೊಳ್ಳುತ್ತ ಬೆಳೆದ ಅಶೋಕ ಬಾದರದಿನ್ನಿ ಆಧುನಿಕತೆಯ ಅವಿಷ್ಕಾರದೊಂದಿಗೆ ನಿರ್ದೇಶಿಸಿದ ಲಂಕೇಶರ ‘ಸಂಕ್ರಾಂತಿ’ ರಾಜ್ಯದ ಹಲವೆಡೆ ಜಯಭೇರಿ ಬಾರಿಸಿತು. ‘ಹ್ಯಾಮ್ಲೆಟ್’ ಅಂತೂ ತನ್ನ ಹೊಸತನಕ್ಕೆ ಹಾಗೂ ಶ್ರೀನಿವಾಸಪ್ರಭು ಅವರ ನಟನೆಗೆ ದೊಡ್ಡ ಹೆಸರು ಮಾಡಿತು. ಸಿ.ಆರ್.ಸಿಂಹ ‘ತುಘಲಕ್’ ಮಾಡಿದ ನಂತರ ಬೇರಾರಿಗೂ ಅದು ಸಾಧ್ಯವಿಲ್ಲ ಎಂಬ ಮೂಢನಂಬಿಕೆ ಅಳಿಸಿಹಾಕುವಂತೆ ಇಳಕಲ್ ಸ್ನೇಹರಂಗಕ್ಕೆ ಅಶೋಕ ಆ ನಾಟಕ ಮಾಡಿಸಿದರು. ಬೆಂಗಳೂರಿನಲ್ಲಿ ಈ ನಾಟಕ ಪ್ರಯೋಗವಾದಾಗ ಸ್ವತಃ ಸಿಂಹ ಅವರೇ ತುಘಲಕ್ ಪಾತ್ರ ಮಾಡಿದ್ದ ಇಳಕಲ್‌ನ ಮಹಮ್ಮದ ಹನೀಫ್ ಖಾಜಿ ಅವರನ್ನು ಅಪ್ಪಿಕೊಂಡು ಈ ಮಾತು ಆಡಿದ್ದರು.
2016ರ ನವೆಂಬರ್ 24 ರಂದು ನಿಧನರಾದ ಅಶೋಕ ಬಾದರದಿನ್ನಿ ಅವರಿಗೆ ತೀವ್ರ ಅನಾರೋಗ್ಯದ ಮಧ್ಯೆಯೂ ಲೋಕ ಸಂಚಾರ ನಿಂತಿರಲಿಲ್ಲ. ಲೋಕಾಪುರದಲ್ಲಿ ‘ಪಾರಿಜಾತ’ ಮಾಡಿಸಿದರು. ವಿಜಯಪುರದಲ್ಲಿ ‘ವೀತರಾಗ ವೈಭವ’ ಮಾಡಿಸಿದರು. ದಾವಣಗೆರೆ ಪ್ರತಿಮಾಕ್ಕೆ ಮಾಡಿಸಿದ್ದ ‘ಸಂಕ್ರಾಂತಿ’ಯನ್ನು ವಿಜಯಪುರದಲ್ಲಿ ಮತ್ತೆ ಭಿನ್ನವಾಗಿ ಕಟ್ಟಿಕೊಟ್ಟರು. ಅಷ್ಟರಮಟ್ಟಿಗೆ ಅವರಿಗೆ ಕೊನೆಯ ಉಸಿರಿನವರೆಗೆ ನಾಟಕವೇ ಸರ್ವಸ್ವವಾಗಿತ್ತು.
ಹಾಸ್ಯ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಆಶೋಕ ಬಾದರದಿನ್ನಿ ಸುಮಾರು 80 ಚಲನಚಿತ್ರಗಳಲ್ಲಿ ನಟಿಸಿದ್ದರಲ್ಲದೆ ಎರಡು ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿ ನೂರಾರು ದೂರದರ್ಶನ ಕಾರ್ಯಕ್ರಮಗಳಲ್ಲಿ ಅಭಿನಯಿಸಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ಸರ್ಕಾರದಿಂದ ಗೌರವ, ಶಿವಮೊಗ್ಗೆಯಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ಮಂಡ್ಯದ ದೆ.ವಿ.ಶಂಕರಗೌಡರ ಹೆಸರಿನಲ್ಲಿ ನೀಡುವ ರಾಜ್ಯಮಟ್ಟದ ರಂಗಭೂಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಆಶೋಕ ಬಾದರದಿನ್ನಿ ಅವರಿಗೆ ಸಂದಿದ್ದವು. ಈ ಮಹಾನ್ ರಂಗಚೇತನಕ್ಕೆ ನಮ್ರ ನಮನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ಅಧ್ಯಯನವು ಅರಿವಳಿಕೆ ಅಡಿಯಲ್ಲಿ ಸಸ್ಯಗಳನ್ನು ಪರಿಶೋಧಿಸುತ್ತದೆ!

Mon Feb 21 , 2022
ಅರಿವಳಿಕೆ ಎನ್ನುವುದು ನಿಯಂತ್ರಿತ, ತಾತ್ಕಾಲಿಕ ಸಂವೇದನೆಯ ನಷ್ಟ ಅಥವಾ ಮಾನವರಲ್ಲಿ ವೈದ್ಯಕೀಯ ಉದ್ದೇಶಗಳಿಗಾಗಿ ಪ್ರಚೋದಿಸುವ ಅರಿವಿನ ಸ್ಥಿತಿಯಾಗಿದೆ. ಆದರೆ ಸಸ್ಯಗಳಿಗೂ ಅರಿವಳಿಕೆ ನೀಡಬಹುದೇ? ಇತ್ತೀಚಿನ ಅಧ್ಯಯನವು ಈ ಸಾಧ್ಯತೆಯನ್ನು ಪರಿಶೋಧಿಸಿದೆ. ಈ ಅಧ್ಯಯನವು ‘ಸೈಂಟಿಫಿಕ್ ರಿಪೋರ್ಟ್ಸ್’ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಔಷಧವು ಅದರ ಔಷಧಿಗಳಲ್ಲಿ ಅರಿವಳಿಕೆಗಳ ವ್ಯಾಪಕ ಸಂಗ್ರಹವನ್ನು ಹೊಂದಿದೆ, ರೋಗಿಗಳಿಗೆ ನೋವಿನ ಚಿಕಿತ್ಸೆಗಳನ್ನು ಉತ್ತಮವಾಗಿ ಸಹಿಸಿಕೊಳ್ಳಲು ಅಥವಾ ಅವುಗಳ ಮೂಲಕ ನಿದ್ರೆ ಮಾಡಲು ಸಹ ಅನುಮತಿಸುತ್ತದೆ. 1842 ರಲ್ಲಿ, ನ್ಯೂಯಾರ್ಕ್ನಲ್ಲಿ […]

Advertisement

Wordpress Social Share Plugin powered by Ultimatelysocial