ಅಲೋಕೇಶ್ ಲಾಹಿರಿ ಅವರ ವ್ಯಕ್ತಿತ್ವವೂ ವಿಶಿಷ್ಟವಾಗಿತ್ತು.

ಭಾರತೀಯ ಸಿನಿಮಾಲೋಕದ ಪ್ರಸಿದ್ಧ ಸಂಗೀತ ನಿರ್ದೇಶಕ ಬಪ್ಪಿ ಲಹರಿ ನಿಧನರಾಗಿದ್ದಾರೆ. ಅವರು ಸಂಗೀತ ಸಂಯೋಜಿಸಿದ ಗೀತೆಗಳಂತೆಯೇ, ಅಪಾರ ಚಿನ್ನಾಭರಣಗಳನ್ನು ಧರಿಸಿ ತಂಪು ಕನ್ನಡಕ ಏರಿಸಿಕೊಂಡು ವಿಜೃಂಭಿಸುತ್ತಿದ್ದ ನಗೆಮೊಗದ ಅವರ ವ್ಯಕ್ತಿತ್ವವೂ ವಿಶಿಷ್ಟವಾಗಿತ್ತು. ಬಪ್ಪಿ ಲಾಹಿರಿ ಅವರ ಮೂಲ ಹೆಸರು ಅಲೋಕೇಶ್ ಲಾಹಿರಿ.
ಬಪ್ಪಿ ಲಾಹಿರಿ 1952ರ ನವೆಂಬರ್ 27ರಂದು
ಜಲ್ಪೈಗುರಿಯಲ್ಲಿ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ತಂದೆ ಅಪರೇಶ್ ಲಾಹಿರಿ. ತಾಯಿ ಬಾನ್ಸುರಿ ಲಾಹಿರಿ. ತಂದೆ ತಾಯಿ ಇಬ್ಬರೂ ಬಂಗಾಳಿ ಗಾಯಕರಾಗಿದ್ದು ಶಾಸ್ತ್ರೀಯ ಸಂಗೀತ ಮತ್ತು ಶ್ಯಾಮ ಸಂಗೀತದಲ್ಲಿ ಅಪಾರ ಸಾಧನೆ ಮಾಡಿದ್ದವರು. ಕಿಶೋರ್ ಕುಮಾರ್ ಅವರ ತಾಯಿಯ ಸಂಬಂಧಿ.
ಬಪ್ಪಿ ಲಾಹಿರಿ 3ನೇ ವಯಸ್ಸಿನಲ್ಲಿ ತಬಲಾ ನುಡಿಸಲು ಪ್ರಾರಂಭಿಸಿದರು. ಮುಂದೆ ಅನೇಕ ಆಧುನಿಕ ವಾದ್ಯಗಳಲ್ಲಿ ಪರಿಣತಿ ಸಾಧಿಸಿದರು. ಬಪ್ಪಿ ದಾ ಡಿಸ್ಕೋ ಶೈಲಿಯ ಹಾಡುಗಳಿಗೆ ಹೆಸರುವಾಸಿಯಾಗಿದ್ದರೂ, ಅವರು ಭಾರತೀಯ ಸಂಗೀತದ ಸ್ವಾದವನ್ನು ಅಂತರರಾಷ್ಟ್ರೀಯ ಧ್ವನಿಗಳನ್ನು ಲವಲವಿಕೆಯ ಲಯಗಳೊಂದಿಗೆ ಚಲನಚಿತ್ರ ಸಂಗೀತಕ್ಕೆ ತಂದವರು. ಚಲ್ತೇ ಚಲ್ತೆ ಮತ್ತು ಜಖ್ಮೀಯಂತಹ ಚಲನಚಿತ್ರಗಳಲ್ಲಿ ಡಿಸ್ಕೋ ಮಾದರಿಗೆ ಹೊರತಾದ ಅವರ ವಿಶಿಷ್ಟ ಸಂಗೀತದ ಭವ್ಯಗೀತೆಗಳಿವೆ.
ಬಪ್ಪಿ ಲಾಹಿರಿ 19 ವರ್ಷದವರಾಗಿದ್ದಾಗ ಮುಂಬೈಗೆ ಬಂದರು. ಅವರು ತಮ್ಮ ಮೊದಲ ಅವಕಾಶವನ್ನು ಬಂಗಾಳಿ ಚಿತ್ರ ‘ದಾಡು’ (1974) ನಲ್ಲಿ ಪಡೆದರು. ಅಲ್ಲಿ ಅವರು ಲತಾ ಮಂಗೇಶ್ಕರ್ ಅವರನ್ನು ತಮ್ಮ ಸಂಯೋಜನೆಗೆ ಹಾಡುವಂತೆ ಮನವೊಲಿಸಿದರು. ಅವರು ಸಂಗೀತ ಸಂಯೋಜಿಸಿದ ಮೊದಲ ಹಿಂದಿ ಚಲನಚಿತ್ರ ‘ನನ್ಹಾ ಶಿಕಾರಿ’ (1973) ಮತ್ತು ಅವರ ಮೊದಲ ಹಿಂದಿ ಸಂಯೋಜನೆಯ ಗೀತೆ ಮುಖೇಶ್ ಹಾಡಿರುವ ಚಿತ್ರ ‘ತು ಹಿ ಮೇರಾ ಚಂದಾ’. ಅವರ ವೃತ್ತಿಜೀವನದ ಮಹತ್ವದ ತಿರುವು ತಾಹಿರ್ ಹುಸೇನ್ ಅವರ ಹಿಂದಿ ಚಲನಚಿತ್ರ’ ಜಖ್ಮೀ'(1975). ಈ ಚಿತ್ರದ ಮೂಲಕ ಅವರು ಸಂಗೀತ ಸಂಯೋಜಕರಾಗಿದ್ದು ಮಾತ್ರವಲ್ಲದೆ ಹಿನ್ನೆಲೆ ಗಾಯಕರಾಗಿ ಸಹಾ ಹೆಸರಾದರು. ಈ ಚಿತ್ರದಲ್ಲಿ ಕಿಶೋರ್ ಕುಮಾರ್ ಮತ್ತು ಮೊಹಮ್ಮದ್ ರಫಿ ಅವರೊಂದಿಗೆ “ನಥಿಂಗ್ ಈಸ್ ಇಂಪಾಸಿಬಲ್” ಎಂಬ ಯುಗಳ ಗೀತೆ ಸಂಯೋಜಿಸಿದರು. ಅವರ ಸಂಯೋಜನೆಗಳಾದ ಜಲ್ತಾ ಹೈ ಜಿಯಾ ಮೇರಾ, ಅಭಿ ಅಭಿ ಥಿ ದುಷ್ಮನಿ ಮತ್ತು ಆವೊ ತುಮ್ಹೆ ಚಂದ್‌ನಂತಹ ಗೀತೆಗಳು ಆಶಾ, ಕಿಶೋರ್ ಮತ್ತು ಲತಾ ಧ್ವನಿಯಲ್ಲಿ ಬಹು ಜನಪ್ರಿಯಗೊಂಡವು.
ಬಪ್ಪಿ ಲಾಹಿರಿ 1970ರ ದಶಕದ ಕೊನೆಯಿಂದ 1990ರ ದಶಕದ ಆರಂಭದವರೆಗೆ ನಯಾ ಕದಮ್, ಅಂಗನ್ ಕಿ ಕಲಿ, ವಾರ್ದತ್, ಡಿಸ್ಕೋ ಡ್ಯಾನ್ಸರ್, ಹತ್ಕಡಿ, ನಮಕ್ ಹಲಾಲ್, ಮಾಸ್ಟರ್ಜಿ, ಡ್ಯಾನ್ಸ್ ಡ್ಯಾನ್ಸರ್, ಜಸ್ಟೀಸ್, ಹಿಮ್ಮತ್ವಾಲಾ ಮುಂತಾದ ಚಲನಚಿತ್ರಗಳಿಗೆ ಸಂಯೋಜಿಸಿದ ಚಲನಚಿತ್ರ ಗೀತೆಗಳಿಂದ ಅಪಾರ ಜನಪ್ರಿಯರಾಗಿದ್ದರು. ತೋಹ್ಫಾ, ಮಕ್ಸಾದ್, ಕಮಾಂಡೋ, ನೌಕರ್ ಬೀವಿ ಕಾ, ಅಧಿಕಾರ್ ಶರಾಬಿ ಮುಂತಾದವು ಅವರ ಮತ್ತಷ್ಟು ಜನಪ್ರಿಯ ಸಂಗೀತದ ಚಿತ್ರಗಳು. 1982ರಲ್ಲಿ ಅವರು ಸಂಗೀತ ನೀಡಿದ ಡಿಸ್ಕೋಡ್ಯಾನ್ಸರ್ ಚಿತ್ರ ಭಾರತೀಯ ಚಲನಚಿತ್ರರಂಗಕ್ಕೊಂದು ಹೊಸ ಪರಂಪರೆ ಹೊತ್ತು ತಂದಿತು.
ಬಪ್ಪಿ ದಾ ಕೆಲವು ಗಜಲ್‌ಗಳಿಗೆ ಸಹಾ ಸಂಗೀತ ಸಂಯೋಜಿಸಿದ್ದರು. “ಕಿಸಿ ನಜರ್ ಕೋ ತೇರಾ ಇಂತೇಜಾರ್ ಆಜ್ ಭಿ ಹೈ” ಮತ್ತು 1985ರ ಚಲನಚಿತ್ರ ಐತ್‌ಜಾರ್‌ಗಾಗಿ “ಆವಾಜ್ ದಿ ಹೈ” ಇವುಗಳಲ್ಲಿ ಎದ್ದು ಕಾಣುತ್ತವೆ. ಅವರು 80ರ ದಶಕದಲ್ಲಿ ರಾಜೇಶ್ ಖನ್ನಾ ನಟಿಸಿದ ನಯಾ ಕದಮ್, ಮಾಸ್ಟರ್ಜಿ, ಆಜ್ ಕಾ ಎಂಎಲ್ಎ ರಾಮ್ ಅವತಾರ್, ಬೇವಫಾಯಿ, ಮಕ್ಸಾದ್, ಸುರಾಗ್, ಇನ್ಸಾಫ್ ಮೈನ್ ಕರೂಂಗ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಸುಮಧುರ ಹಾಡುಗಳನ್ನು ಸಂಯೋಜಿಸಿದರು. ಹಿಮ್ಮತ್‌ವಾಲಾ ಚಿತ್ರದ ಯಶಸ್ಸಿನ ನಂತರ, ಬಪ್ಪಿ ದಾ ಜಸ್ಟೀಸ್ ಚೌಧರಿ, ಜಾನಿ ದೋಸ್ತ್, ಮವಾಲಿ, ಹೈಸಿಯತ್, ತೋಫಾ, ಬಲಿದಾನ್, ಖೈದಿ, ಹೋಶಿಯಾರ್, ಸಿಂಹಾಸನ್, ಸುಹಾಗನ್, ಮಜಾಲ್, ತಮಾಶಾ, ಸೋನೆ ಪೇ ಸುಹಾಗ್, ಧರ್ಮ್ ಅಧಿಕಾರಿ ಮುಂತಾದ ಚಿತ್ರಗಳಿಗೆ ಜನಪ್ರಿಯ ಗೀತೆಗಳನ್ನು ಸಂಯೋಜಿಸಿದರು. ಬಪ್ಪಿ ಲಾಹಿರಿ 1983-1985ರ ಅವಧಿಯಲ್ಲಿ ಜೇತೇಂದ್ರ ನಾಯಕನಾಗಿ ನಟಿಸಿದ 12 ಸೂಪರ್ ಹಿಟ್ ಬೆಳ್ಳಿ ಮಹೋತ್ಸವ ಆಚರಿಸಿದ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿ ದಾಖಲೆ ನಿರ್ಮಿಸಿದರು. ಅವರು 1986ರಲ್ಲಿ 33 ಚಲನಚಿತ್ರಗಳಿಗೆ 180ಕ್ಕೂ ಹೆಚ್ಚು ಹಾಡುಗಳನ್ನು ಧ್ವನಿಮುದ್ರಿಸಿ ಗಿನ್ನೆಸ್ ಬುಕ್ ವಿಶ್ವದಾಖಲೆ ಬರೆದರು.
ಬಪ್ಪಿ ಲಾಹಿರಿ ದಕ್ಷಿಣ ಭಾರತೀಯ ಭಾಷೆಗಳ ಚಿತ್ರಗಳಿಗೂ ಸಂಗೀತ ನೀಡಿದ್ದರು. ಕನ್ನಡದಲ್ಲಿ ವಿಷ್ಣುವರ್ಧನ್ ನಟಿಸಿದ ‘ಕೃಷ್ಣ ನೀ ಬೇಗನೇ ಬಾರೋ’, ‘ಪೊಲೀಸ್ ಮತ್ತು ದಾದಾ’, ‘ನೀ ತಂದ ಕಾಣಿಕೆ’; ಅಂಬರೀಷ್ ನಟಿಸಿದ್ದ ‘ಗುರು’, ದ್ವಾರಕೀಶ್ ನಿರ್ರ್ಮಾಣದ ‘ಆಫ್ರಿಕಾದಲ್ಲಿ ಶೀಲಾ’ ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಸತೀಶ್‌ ನೀನಾಸಂ ಹೀರೋ ಆಗಿದ್ದ ‘ಲವ್ ಇನ್ ಮಂಡ್ಯ’ ಚಿತ್ರದ ‘ಕರೆಂಟ್ ಹೋದ ಟೈಮಲಿ..’ ಹಾಡನ್ನು ಹಾಡಿದ್ದರು.
ಎಷ್ಟು ಸಾಧನೆ ಮಾಡಿದರೇನು, ಎಷ್ಟು ಸ್ವರ್ಣ ವಜ್ರ ವೈಢೂರ್ಯ ಧರಿಸಿದರೇನು. ಕಾಲನ ದೂತರು ಕೈಪಿಡಿದೆಳೆವಾಗ ತಾಳು ತಾಳೆಂದರೆ ತಾಳುವರೆ! ಬದುಕನ್ನು ಸವಿದು ಬಾಳಿದವರೇ ಧನ್ಯರು. ಹಸನ್ಮಖಿಯಾಗಿ, ವೈಭವಯುತರಾಗು ಸದಾ ನಗೆ ಮೊಗದಿಂದ ಮೃದುಭಾಷಿಯಾಗಿ ಸವೆಸಿದ ಬಪ್ಪಿ ದಾ ನೆನಪುಳಿಸಿ ಹೋದವರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಂದರರಾಜ್ ರಂಗಭೂಮಿ ಮತ್ತು ಚಲನಚಿತ್ರ ಲೋಕದ ಅತ್ಯುತ್ತಮ ಕಲಾವಿದರಲ್ಲೊಬ್ಬರು.

Fri Feb 18 , 2022
ಸುಂದರರಾಜ್ 1951ರ ಫೆಬ್ರವರಿ 2ರಂದು ಜನಿಸಿದರು. ಇವರು 3 ವರ್ಷದವರಿದ್ದಾಗ ಇವರ ಕುಟುಂಬ ತಮಿಳುನಾಡಿನ ಶ್ರೀರಂಗಂ ಇಂದ ಬೆಂಗಳೂರಿಗೆ ವಲಸೆ ಬಂತು. ತಂದೆ ಎಂ. ಎನ್. ಕೃಷ್ಣಸ್ವಾಮಿ ಅವರು ನಿವೃತ್ತ ಸೇನಾನಿ. ತಾಯಿ ವಿಜಯಲಕ್ಷ್ಮಿ. ಮನೆಯಲ್ಲಿ ಸಂಗೀತ, ನೃತ್ಯ ಮತ್ತು ವಿವಿಧ ಕಲಾಭಿರುಚಿಯ ವಾತಾವರಣವಿತ್ತು. ಬಸವನಗುಡಿಯ ನಿವಾಸಿಯಾಗಿ ನ್ಯಾಷನಲ್ ಸ್ಕೂಲು ಮತ್ತು ಕಾಲೇಜಿನ ಓದುವ ದಿನಗಳಲ್ಲಿ ಅನೇಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದ ಸುಂದರರಾಜ್ ಅವರಿಗೆ ನಾಟಕಗಳಲ್ಲಿ ಅಭಿನಯಿಸುವುದು […]

Advertisement

Wordpress Social Share Plugin powered by Ultimatelysocial