ಅರಣ್ಯ ಪ್ರದೇಶದ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಕಾನೂನು ಪರಿಹಾರ

ಶಿವಮೊಗ್ಗ: ಅರಣ್ಯ ಪ್ರದೇಶದ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಕಾನೂನು ಪರಿಹಾರ ಕಂಡುಕೊಳ್ಳಲು ಮೇ ಮೊದಲ ವಾರ ಜಿಲ್ಲೆಯ ಜನಪ್ರತಿನಿಧಿಗಳು, ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳ ವಿಶೇಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಶ್ಚಿಮಘಟ್ಟ ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳು, ಅರೆ ಮಲೆನಾಡು ಪ್ರದೇಶಗಳ ಸಮಸ್ಯೆಗಳಿಗೆ ಕೆಲವು ಸ್ಪಷ್ಟನೆ ನೀಡಬೇಕು. ಕೆಲವು ಕಾನೂನಾತ್ಮಕ ಬದಲಾವಣೆಗಳನ್ನು ತರಬೇಕು. ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕಿದೆ. ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಕಾಮಗಾರಿ ಕೈಗೆತ್ತಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲಾಗುವುದು. ಕೈಗಾರಿಕೋದ್ಯಮಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿವೆ. ಬೆಂಗಳೂರು ನಂತರ ರಾಜ್ಯದ ಇತರೆ ಭಾಗಗಳಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅದರಲ್ಲಿ ಶಿವಮೊಗ್ಗವೂ ಒಂದು. ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳು ಐಟಿಬಿಟಿ ಆಕರ್ಷಿಸಲು ಸಾಧ್ಯವಿದೆ. ಕೌಶಲವೂ ಇದೆ. ಇದರ ಸದುಪಯೋಗ ಪಡೆಯಲು ವಿಶೇಷ ಅಭಿಯಾನ ಕೈಗೊಳ್ಳಲಾಗುವುದು ಎಂದರು.

ಗುರಿ ಮೀರಿ ಆದಾಯ ಸಂಗ್ರಹ: ಆಗಸ್ಟ್ 2021ರವರೆಗೂ ಸಂಪನ್ಮೂಲ ಸಂಗ್ರಹ ₹ 5 ಸಾವಿರ ಕೋಟಿಗೂ ಕಡಿಮೆ ಇತ್ತು. ಈಗ ವಾಣಿಜ್ಯ ತೆರಿಗೆ ಒಂದರಲ್ಲೇ ₹ 11 ಸಾವಿರ ಕೋಟಿ ಗುರಿ ಮೀರಿ ಸಂಗ್ರಹ ಮಾಡಲಾಗಿದೆ. ಒಟ್ಟು ₹ 15 ಸಾವಿರ ಕೋಟಿ ಸಂಗ್ರಹವಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಬೊಕ್ಕಸಕ್ಕೆ ಸಂದಿರುವ ಹಣದಲ್ಲಿ ಖರ್ಚು ಮಾಡಲಾಗುತ್ತಿದೆ. 2023ರಲ್ಲೂ ಇದೆ ಮಾದರಿ ಅನುಸರಿಸಲು ಕ್ರಮ ಜರುಗಿಸಲಾಗುವುದು ಎಂದರು.

ಆರ್ಥಿಕ ಶಿಸ್ತಿಗೆ ಒತ್ತು: ಹಿಂದಿನ ವರ್ಷ ಬಜೆಟ್‌ನಲ್ಲಿ ₹ 67,100 ಕೋಟಿ ಸಾಲ ಪಡೆಯುವುದಾಗಿ ಹೇಳಲಾಗಿತ್ತು. ಆದರೆ ಆರ್ಥಿಕತೆ ಚೇತರಿಕೆ ಕಂಡಿದ್ದರಿಂದ ₹ 63,100 ಕೋಟಿ ಸಾಲ ಮಾತ್ರ ಪಡೆಯಲಾಗಿದೆ. ₹ 4 ಸಾವಿರ ಕೋಟಿ ಸಾಲ ಪಡೆಯಲು ಅವಕಾಶವಿದ್ದರೂ ನಿಯಂತ್ರಣ ಮಾಡಲಾಗಿದೆ. ವಿತ್ತೀಯ ಕೊರತೆ ನೀಗಿಸಲು ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು. ಆರ್ಥಿಕ ಶಿಸ್ತು ತರಲಾಗುತ್ತಿದೆ. ತೆರಿಗೆಯೇತರ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಿವರ ನೀಡಿದರು.

ಗ್ರಾಮೀಣ ವಿದ್ಯುತ್‌ ಸಮಸ್ಯೆ ನಿವಾರಣೆ:

ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ಹೆಚ್ಚಿದೆ. ಕರ್ನಾಟಕದಲ್ಲಿ ವಿದ್ಯುತ್ ಹೇರಳವಾಗಿದೆ. ವಿತರಣೆಯ ಸಮಸ್ಯೆಯಿದೆ. ಬಹಳ ವರ್ಷಗಳಿಂದ ಸರ್ಕಾರಗಳು ವಿತರಣಾ ವ್ಯವಸ್ಥೆ ಬಗ್ಗೆ ಗಮನಹರಿಸಿಲ್ಲ. 100 ವಿದ್ಯುತ್ ಸ್ಟೇಷನ್‌ಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯಂತೆ ಸೌರಶಕ್ತಿಯ ಬಳಕೆಗೆ ಅವಕಾಶ ಕಲ್ಪಿಸಿಸಲಾಗಿದೆ. ಸೋಲಾರ್ ಪಂಪ್‌ಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲು ವಿಶೇಷ ರಿಯಾಯಿತಿ ನೀಡಿದ್ದಾರೆ. ಸಹಾಯಧನದ ಮೂಲಕ ಪ್ರೋತ್ಸಾಹ ನೀಡಲಾಗುವುದು ಎಂದರು.

ವಿಐಎಸ್‌ಎಲ್ ಖಾಸಗೀಕರಣ: ಭದ್ರಾವತಿಯ ವಿಐಎಸ್‌ಎಲ್‌ ಖಾಸಗೀಕರಣ ಪ್ರಕ್ರಿಯೆ ಆರಂಭಿಸಲಾಗುವುದು. ಕಾರ್ಖಾನೆಗೆ ಅಗತ್ಯ ಜಾಗ ಇಟ್ಟುಕೊಂಡು, ಉಳಿದ ಜಾಗವನ್ನು ಇತರೆ ಕಾರ್ಖಾನೆಗಳ ಸ್ಥಾಪನೆಗೆ ಬಳಸಿಕೊಳ್ಳಲು ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಎಸ್. ದತ್ತಾತ್ರಿ, ಬಿ.ಕೆ. ಶ್ರೀನಾಥ್, ಕೆ.ವಿ. ಅಣ್ಣಪ್ಪ, ಋಷಿಕೇಶ್ ಪೈ ಇದ್ದರು.

ಭೂಕುಸಿತ ತಡೆಗೆ ಕ್ರಮ

ಮಲೆನಾಡಿನಲ್ಲಿ ಭೂಕುಸಿತದ ಸಮಸ್ಯೆ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರ ನೇತೃತ್ವದ ತಂಡ ನೀಡಿದ ವರದಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ವರದಿ ಪರಿಶೀಲಿಸಿದ ನಂತರ ಪೂರ್ವಭಾವಿ ಕ್ರಮಗಳನ್ನು ಜಾರಿ ಮಾಡಲಾಗುವುದು. ವಿಶೇಷವಾಗಿ ಬೆಟ್ಟ, ಗುಡ್ಡಗಳ ಕೆಳಗೆ ಇರುವ ಗ್ರಾಮಗಳ ಸ್ಥಳಾಂತರಿಸಲಾಗುವುದು ಎಂದರು.

ಸಂಪುಟ ಪುನರ್‌ರಚನೆ

ಸಂಪುಟ ಪುನರಚನೆ ಮುಖ್ಯಮಂತ್ರಿ ಪರಮಾಧಿಕಾರದ ಪ್ರಶ್ನೆ ಅಲ್ಲ. ರಾಜಕಾರಣದಲ್ಲಿ ಸರಿಯಾದ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂದು ಸಿಎಂ ಹೇಳಿದರು.

ವಿದ್ಯುತ್‌ ಸ್ಥಗಿತ- ಮುಜುಗರ:

ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಎರಡು ಬಾರಿ ವಿದ್ಯುತ್‌ ಕೈಕೊಟ್ಟಿತು. ಇದರಿಂದ ಸಿಎಂ ಮುಜುಗರಕ್ಕೆ ಒಳಗಾದರು.

ಭೂಕಬಳಿಕೆ: ಸಣ್ಣ ರೈತರಿಗೆ ವಿನಾಯಿತಿ

ಭೂ ಕಬಳಿಕೆ ಪ್ರಕರಣದಲ್ಲಿ ರೈತರು ಬೆಂಗಳೂರಿಗೆ ಓಡಾಡುತ್ತಿದ್ದಾರೆ. ವಿಷಯ ಗಮನಕ್ಕೆ ಬಂದಿದೆ. ವಿಧಾನಸಭೆಯಲ್ಲಿಯೂ ಚರ್ಚೆಯಾಗಿದೆ. ಸರ್ಕಾರ ಆದಷ್ಟೂ ಬೇಗನೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ದೊಡ್ಡ ನಗರಗಳಲ್ಲಿ ಭೂಮಿ ಕಬಳಿಕೆ ತಡೆಯಲು ತಂದ ಕಾನೂನು ಇಡೀ ರಾಜ್ಯಕ್ಕೆ ಅನ್ವಯಿಸಿದ ಪರಿಣಾಮ ಈ ಎಡವಟ್ಟು ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯಕ್ಕಾಗಿ ಒಕ್ಕಲುತನ ಅಥವಾ ಸಣ್ಣ ನಿವೇಶನಗಳನ್ನು ಮಾಡಿಕೊಂಡಿರಬಹುದು. ಹೀಗಾಗಿ ಇದನ್ನು ಭೂಕಬಳಿಕೆ ಹೋಲಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಆದೇಶ

ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಬೇಕು. ಗಾಗಲೇ ಬಜೆಟ್ಟಿನ ಶೇ 75ರಷ್ಟು ಯೋಜನೆಗಳಿಗೆ ಸರ್ಕಾರಿ ಆದೇಶಗಳಾಗಿವೆ. 20ರಷ್ಟು ಯೋಜನೆಗಳಿಗೆ ಈ ತಿಂಗಳ ಒಳಗೆ ಆದೇಶ ನೀಡಲಾಗುವುದು. ಪ್ರಥಮ ಬಾರಿಗೆ ರಾಜ್ಯದಲ್ಲಿ ಬಜೆಟ್‌ ಘೋಷಣೆಗಳಿಗೆ ಒಂದು ತಿಂಗಳಲ್ಲಿ ಆದೇಶ ಹೊರಡಿಸಲಾಗಿದೆ. ಇದು ಬಜೆಟ್‌ ಅನುಷ್ಠಾನ ಮಾಡಲು ಸರ್ಕಾಕ್ಕೆ ಇರುವ ಬದ್ಧತೆ ತೋರಿಸುತ್ತದೆ. ಜನರ ಅನುಕೂಲಕ್ಕಾಗಿ ರೂಪಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

* ಜಾತಿಗಣತಿ ವರದಿ ವರದಿ ಪೂರ್ಣ ಪ್ರಮಾಣದಲ್ಲಿ ಮಂಡನೆಯಾಗಿಲ್ಲ. ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ಮಂಡನೆಗೆ ಸೂಚನೆ ನೀಡಲಾಗಿದೆ. ದೀರ್ಘ ಪರಿಣಾಮಗಳಿರುವ ಇಂತಹ ವಿಷಯಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು 'ತೋತಾಪುರಿ' ಟ್ರೇಲರ್‌ ರಿಲೀಸ್‌;

Thu Apr 21 , 2022
ನವರಸ ನಾಯಕ ಜಗ್ಗೇಶ್‌ ನಟಿಸಿರುವ “ತೋತಾಪುರಿ’ ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆಯಾಗುತ್ತಿದ್ದು, ನಟ ಕಿಚ್ಚ ಸುದೀಪ್‌ ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ “ಬಾಗ್ಲು ತೆಗಿ ಮೇರಿ ಜಾನ್‌’ ಹಾಡಿನ ಮೂಲಕ ಸದ್ದು ಮಾಡುತ್ತಿರುವ ಈ ಚಿತ್ರದ ಟ್ರೇಲರ್‌ ಈಗ ಬಿಡುಗಡೆಯಾಗುತ್ತಿದ್ದು, ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಜಗ್ಗೇಶ್‌, ಧನಂಜಯ್‌ ಸೇರಿದಂತೆ ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಎರಡು ಭಾಗಗಳಲ್ಲಿ […]

Advertisement

Wordpress Social Share Plugin powered by Ultimatelysocial