ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಸಂಸ್ಥಾಪಕರಾಗಿ ಮತ್ತು ಭಾರತೀಯ ಸಮಾಜ ಸುಧಾರಕರಾಗಿ ಸ್ಮರಣೀಯರಾಗಿದ್ದಾರೆ.

ದಯಾನಂದ ಸರಸ್ವತಿ ಗುಜರಾತಿನ ಟಂಕಾರಾ ಗ್ರಾಮದಲ್ಲಿ 1824ರ ಫೆಬ್ರವರಿ 12ರಂದು ಜನಿಸಿದರು. ಅವರ ಮೊದಲ ಹೆಸರು ಮೂಲಶಂಕರ. ತಂದೆ ಕೃಷ್ಣಜೀ ಲಾಲ್ಜಿ ಕಪಾಡಿ. ತಾಯಿ ಯಶೋದಾಬಾಯಿ. ಅವರದು ದಾನ ಧರ್ಮಗಳಿಗೆ ಹೆಸರಾದ ಶ್ರೀಮಂತ ಮನೆತನ. ಕುಲಪದ್ಧತಿಯಂತೆ ಬಾಲ್ಯದಲ್ಲಿಯೇ ಮೂಲ ಶಂಕರನ ವೇದಾಧ್ಯಯನ ಸಾಂಗವಾಗಿ ನೆರವೇರಿತು. ಶಿವರಾತ್ರಿಯ ದಿನ ಶಿವ ಲಿಂಗದ ಮೇಲೇರಿ ಅಕ್ಷತೆ ಕಾಳನ್ನು ಆರಿಸಿ ತಿನ್ನುತ್ತಿದ್ದ ಇಲಿ, ಪ್ರೀತಿಯ ಚಿಕ್ಕಪ್ಪ ಮತ್ತು ತಂಗಿಯ ಅಕಾಲಮೃತ್ಯು ಈ ಘಟನೆಗಳಿಂದ ಮೂಲಶಂಕರನ ಹೃದಯದಲ್ಲಿ ಬಗೆಬಗೆಯ ಪ್ರಶ್ನೆಗಳು ಎದ್ದುವು. ಜೀವಿತದಲ್ಲಿ ಇವಕ್ಕೆ ಉತ್ತರ ಪಡಯಲೇಬೇಕೆಂದು ಬಾಲಕ ದೃಢಸಂಕಲ್ಪ ಮಾಡಿದ. ಅದಕ್ಕಾಗಿ ತಂದೆ ತಾಯಿ ಸಂಪತ್ತು ಎಲ್ಲವನ್ನೂ ತೊರೆದ. ದುರ್ಗಮ ಅರಣ್ಯಗಳಲ್ಲಿ ಅಲೆದು ಯೋಗಿಗಳಿಂದ ಯೋಗ್ಯವಿದ್ಯೆಯ ಅನೇಕ ರಹಸ್ಯಗಳನ್ನರಿತ. 1848ರಲ್ಲಿ ಪೂರ್ಣಾನಂದ ಸರಸ್ವತಿಗಳು ಈ ಬ್ರಹ್ಮಚಾರಿಗೆ ಸಂನ್ಯಾಸದೀಕ್ಷೆಯನ್ನು ಕೊಟ್ಟು ದಯಾನಂದ ಸರಸ್ವತಿ ಎಂದು ಹೆಸರಿಟ್ಟರು.1858 ರಲ್ಲಿ ದಯಾನಂದರು ಮಥುರೆಗೆ ಬಂದು ವಿರಜಾನಂದ ಸರಸ್ವತಿಗಳಲ್ಲಿ ವೇದವೇದಾಂಗಗಳನ್ನು ಅಧ್ಯಯನ ಮಾಡಿದರು. ಮಧ್ಯಕಾಲದ ಸಂಕುಚಿತ ಮತಪಂಥಗಳು ದೇಶದಲ್ಲಿ ನೂರಾರು ಜಾತಿಪಂಗಡಗಳನ್ನು ಸೃಷ್ಟಿಸಿ, ರಾಗದ್ವೇಷಗಳನ್ನು ಬೆಳೆಸಿ ಭಾರತೀಯ ಸಮಾಜವನ್ನು ನುಚ್ಚುನೂರು ಮಾಡಿದವೆಂದು ವಿರಜಾನಂದರ ಭಾವನೆ. ಕುಲಜಾತಿ ಭೇದಗಳ ಸ್ವರ್ಶವಿಲ್ಲದ ವಿಶ್ವಮಾನತೆಯನ್ನು ಬೋಧಿಸುವ ಅತಿ ಪುರಾತನ ವೈದಿಕ ಧರ್ಮವನ್ನು ಪ್ರಚಾರ ಮಾಡಬೇಕೆಂದು ಶಿಷ್ಯನಿಗೆ ಅವರು ಆದೇಶ ನೀಡಿದರು.ದಯಾನಂದರು ಬದುಕಿರುವವರೆಗೆ ಗುರುಗಳ ಆದೇಶವನ್ನು ಪರಿಪಾಲಿಸಿದರು. ಯಜುರ್ವೇದ ಭಾಷ್ಯ, ಋಗ್ವೇದ ಭಾಷ್ಯ, ಸತ್ಯಾರ್ಥಪ್ರಕಾಶ, ವೇದಾಂಗಪ್ರಕಾಶ, ಮೊದಲಾದ ಗ್ರಂಥಗಳನ್ನು ರಚಿಸಿದರು. ಆ ಕಾಲದಲ್ಲಿ ಸುಪ್ರಸಿದ್ಧರಾಗಿದ್ದ ಶ್ರೀ ರಾಮಕೃಷ್ಣ ಪರಮಹಂಸ, ಕೇಶವಚಂದ್ರಸೇನ, ದೇವೇಂದ್ರನಾಥ ಠಾಕೂರ್ ಆಲ್ಕಾಟ್, ಈಶ್ವರಚಂದ್ರ ವಿದ್ಯಾಸಾಗರ ಮೊದಲಾದ ಮಹಾಪುರುಷರೊಡನೆ ವಿಚಾರವಿನಿಮಯ ನಡೆಸಿದರು. ಕ್ರಿ. ಶ. 1875ರಲ್ಲಿ ಮುಂಬಯಿಯಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು. ದೇಶದ ಬಹುಭಾಗಗಳಲ್ಲಿ ಸಂಚರಿಸಿ ವೈದಿಕ ಧರ್ಮವನ್ನು ಪ್ರಚಾರ ಮಾಡಿದರು. ಈ ಕಾಲದಲ್ಲಿ ಎಲ್ಲೆ ಮೀರಿದ ಕಷ್ಟಗಳನ್ನು ಅಪಮಾನಗಳನ್ನು ಸಹಿಸಿದರು.ದಯಾನಂದರು ಗುಜರಾತ್ ಪ್ರಾಂತದಲ್ಲಿ ಜನ್ಮ ತಾಳಿದವರಾದರೂ ಅವರ ಕಾರ್ಯಕ್ಷೇತ್ರ ವಿಶೇಷವಾಗಿ ಪಂಜಾಬ್ ಪ್ರಾಂತವಾಯಿತು. ಇಲ್ಲಿಯೇ ಅವರು ಆರ್ಯಸಮಾಜವೆಂಬ ದೊಡ್ಡ ಸಂಸ್ಥೆಯನ್ನು ಸ್ಥಾಪಿಸಿದರು. ವೇದಗಳ ಕಾಲದಿಂದೀಚೆಗೆ ಜನ್ಮ ತಾಳಿದ ಧರ್ಮಶಾಸ್ತ್ರಗಳು, ಗೃಹಸೂತ್ರಗಳು ಪುರಾಣಗಳು ವೇದದಷ್ಟು ಪ್ರಮಾಣಗ್ರಂಥಗಳೆಂದು ಗ್ರಹಿಸಬಾರದೆಂದು ಅವರು ವಾದಿಸಿದರು. ಅವು ಆರ್ಯರ ಅವನತಿಯ ಕಾಲದ ರಚನೆಗಳೆಂದು ಅವರು ಬಗೆದರು. ಮತ್ತೊಮ್ಮೆ ಭಾರತೀಯರು ವೇದಗಳ ಕಾಲದ ಉಪಾಸನೆಗಳನ್ನೂ ಆಚಾರಗಳನ್ನೂ ಸ್ವೀಕರಿಸಿ ತಮ್ಮ ಜೀವನ ಪದ್ಧತಿಗಳನ್ನು ಮಾರ್ಪಡಿಸಿಕೊಂಡರೆ ಮಾತ್ರ ಆರ್ಯ ಸಂಸ್ಕೃತಿ ಉಳಿದು ಪ್ರಪಂಚವನ್ನೆಲ್ಲ ಬೆಳಗುವುದೆಂಬ ದೃಢವಿಶ್ವಾಸವುಳ್ಳವರಾದರು. ವೇದಗಳ ಉಪದೇಶದಲ್ಲಿ ಅವರಿಗಿದ್ದ ದೃಢವಾದ ಶ್ರದ್ಧೆ ಸಂಸ್ಕೃತವನ್ನೂ ಹಿಂದೀ ಭಾಷೆಯನ್ನೂ ಬಳಸುವುದರಲ್ಲಿ ಅವರಿಗಿದ್ದ ಅಸಾಧಾರಣ ಶಕ್ತಿ, ಅವರ ನಿರ್ಭಯ ಪ್ರವೃತ್ತಿ, ಅವರ ಕ್ರಾಂತಿಕಾರಕ ಆಂದೋಲನಕ್ಕೆ ಸಹಾಯಕವಾದುವು. ವಿಶೇಷವಾಗಿ ಆಗಿನ ಪಂಜಾಬ್, ಉತ್ತರ ಪ್ರದೇಶ ಪ್ರಾಂತ್ಯಗಳಲ್ಲಿ ಸಂಚಾರ ಮಾಡಿ ಜನರಲ್ಲಿದ್ದ ಧಾರ್ಮಿಕ ಶ್ರದ್ಧೆಗೆ ಹೊಸ ರೂಪವನ್ನು ಕೊಡಲು ಪ್ರಯತ್ನ ಮಾಡಿದರು. ವೇದಗಳ ಕಾಲದ ಸಮಾಜ ಸ್ಥಿತಿಯ ಲಕ್ಷಣಗಳನ್ನು ಅಧಿಕಾರ ವಾಣಿಯಿಂದ ಚಿತ್ರಿಸಿ ಅನೇಕ ಮೂಢ ನಂಬಿಕೆಗಳನ್ನೂ ಸಂಪ್ರದಾಯಗಳನ್ನೂ ಬಿಡುವಂತೆ ಮಾಡಿ ಜನಸಾಮಾನ್ಯರಲ್ಲಿ ಒಂದು ವಿಚಾರ ಕ್ರಾಂತಿಯನ್ನೇ ಉಂಟುಮಾಡಿ ಅನೇಕ ಸಮಾಜ ಸುಧಾರಣಾ ಕಾರ್ಯಗಳಿಗೆ ಪ್ರೇರಣೆಯನ್ನಿತ್ತರು.ವೇದಗಳ ಕಾಲದಲ್ಲಿ ಚಾತುರ್ವಣ್ರ್ಯ ವ್ಯವಸ್ಥೆ ಇರಲಿಲ್ಲ. ಅಂದಮೇಲೆ ಇವುಗಳಲ್ಲಿ ಶ್ರೇಷ್ಠ, ಕನಿಷ್ಠವೆಂಬ ಭಾವನೆಯೂ ವೇದಗಳಲ್ಲಿ ಕಾಣವುದಿಲ್ಲ. ಇವುಗಳೆಲ್ಲವೂ ಅನಂತರ ಬಂದ ಸ್ಮೃತಿಕಾರಕ ಕಲ್ಪನೆ ಮತ್ತು ರಚನೆಯಿಂದಾದವು. ಈ ವರ್ಣ ಪದ್ಧತಿ ಆರ್ಯ ಜನಾಂಗದ ಏಳಿಗೆಗೂ ಒಗ್ಗಟ್ಟಿಗೂ ಪ್ರತಿಬಂಧಕವಾಗಿದೆಯೆಂದು ದಯಾನಂದರ ಅಭಿಪ್ರಾಯವಾಗಿತ್ತು. ನಾಲ್ಕು ವರ್ಣಗಳೇ ಮಾನವ ಕಲ್ಪಿತ, ವೇದ ವಿರುದ್ಧ ಮತ್ತು ಅಪ್ರಾಮಾಣಿಕ ಅಂದಮೇಲೆ, ಐದನೆಯ ಪಂಚಮವರ್ಗಕ್ಕೆ ಆಸ್ಪದವಿಲ್ಲವೆಂದಾಯಿತು. ಅನೇಕ ಶತಮಾನಗಳಿಂದ ಕೆಲವರನ್ನು ಪಂಚಮ, ಹೊಲೆಯ, ಮಾದಿಗ- ಇತ್ಯಾದಿ ವಿವಿಧ ಶಬ್ದಗಳಿಂದ ಕರೆದು ಅವರನ್ನು ಅಸ್ಪೃಶ್ಯರೆಂದು, ಸಮಾಜಕ್ಕೆ ಸೇರಿದವರಲ್ಲವೆಂದು ಪರಿಗಣಿಸುವುದು ದಯಾನಂದರಿಗೆ ತೀರ ಅನ್ಯಾಯವೆಂದೂ ಅಸಹನೀಯವೆಂದೂ ಅನಿಸಿತು. ಈ ಪದ್ಧತಿಯನ್ನೇ ತೊಡೆದುಹಾಕಬೇಕೆಂದು ಅವರು ವಾದಿಸಿದರು.
ಒಂದು ಸಮಾಜದಲ್ಲಿ ಜನ್ಮತಾಳಿದವರೆಲ್ಲರೂ ಸಮಾನಾವಕಾಶ ಉಳ್ಳವರಾಗಬೇಕೆಂದೂ ಪ್ರತಿಯೊಬ್ಬರಿಗೂ ವೇದದ ಉಪದೇಶ ದೊರೆಯಬೇಕೆಂದೂ ದಯಾನಂದರು ವಾದಿಸಿದರು. ಅಷ್ಟೇ ಅಲ್ಲದೆ, ಭಾರತೀಯರಲ್ಲದ ಪ್ರಪಂಚದ ಎಲ್ಲ ಜನಾಂಗಗಳಿಗೂ ವೇದದ ಉಪದೇಶವನ್ನು ಮುಟ್ಟಿಸುವ ಪ್ರಯತ್ನವನ್ನು ಮಾಡಬೇಕೆಂದೂ ಅವರು ಸಾರಿದರು. ವೇದಗಳ ಸಂದೇಶ ಕೇವಲ ಭಾರತೀಯರನ್ನು ಮಾತ್ರವಲ್ಲದೆ ಪ್ರಪಂಚದಲ್ಲಿರುವ ಮಾನವ ಕೋಟಿಯನ್ನೂ ಉದ್ಧಾರ ಮಾಡುವಂಥಹುದೆಂದು ಅವರ ದೃಢ ವಿಶ್ವಾಸವಾಗಿತ್ತು.ಆತ್ಮಕ್ಕೆ ಯಾವ ಲಿಂಗಭೇದವೂ ಇಲ್ಲ. ಆದಕಾರಣ ಆತ್ಮಸ್ವರೂಪಿಗಳಾದ ಪುರುಷರೂ ಸ್ತ್ರೀಯರೂ ತಮ್ಮ ವಿಕಾಸವನ್ನು ಮಾಡಿಕೊಳ್ಳಲು ಸಮಾನಾವಕಾಶ ಇರಬೇಕೆಂದು ದಯಾನಂದರು ಒತ್ತಿ ಹೇಳಿದರು. ಪುರುಷರಿಗಿರುವಂತೆ ಸ್ತ್ರೀಯರಿಗೂ ಶಿಕ್ಷಣ ಪಡೆಯುವ ಅವಕಾಶ, ಉಪನಯನವಾಗಿ ವೇದಗಳನ್ನೋದುವ ಅವಕಾಶ, ವಿವಾಹ, ವಿಧವೆಯರಿಗೆ ಪುನರ್ವಿವಾಹ-ಇವುಗಳಿರಬೇಕೆಂದು ಅವರ ಉದ್ದೇಶವಾಗಿತ್ತು. ಆರ್ಯ ಸಮಾಜ ಈ ದಿಸೆಯಲ್ಲಿ ಸ್ತ್ರೀಯರ ಏಳಿಗೆಗಾಗಿ ಕೈಗೊಂಡ ಕಾರ್ಯಗಳೆಲ್ಲವೂ ಅವರು ಒದಗಿಸಿದ ಪ್ರೇರಣೆಯಿಂದ ಆದುವೇ. ಸ್ತ್ರೀಯರಿಗೆ ನಿಕೃಷ್ಟ ಸ್ಥಾನವನ್ನು ಕೊಟ್ಟು ಅನೇಕ ಶತಮಾನಗಳಿಂದ ಅವರನ್ನು ಅನೇಕ ಕಷ್ಟಕಾರ್ಪಣ್ಯಗಳಿಗೆ ಗುರಿ ಮಾಡಿದ್ದ ಹಿಂದೂ ಸಮಾಜಕ್ಕೆ ದಯಾನಂದರ ವಿಚಾರಗಳು ತೀರ ಕ್ರಾಂತಿಕಾರಿಯೆಂದು ತೋರಿದುವು. ದಯಾನಂದರು ತಮ್ಮ ಅನುಯಾಯಿಗಳಲ್ಲಿ ಪ್ರಚಂಡವಾದ ದೇಶಭಕ್ತಿಯನ್ನೂ ಹೊಸ ಸುಧಾರಣೆಗಳು ವಿಷಯದಲ್ಲಿ ಧೀರರಂತೆ ವರ್ತಿಸುವ ಮನೋಧರ್ಮವನ್ನೂ ತುಂಬಿಸಿದ್ದರು. ಆದ್ದರಿಂದ ಆರ್ಯ ಸಮಾಜ ಪ್ರಭಾವ ಬೀರಿದ ಸ್ಥಳಗಳಲ್ಲಿ ಈ ಸುಧಾರಣೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳು ಯಶಸ್ವಿಯಾದುವು.ಸಾಂಪ್ರದಾಯಿಕ ಹಿಂದೂ ಮತದಲ್ಲಿ, ಪರ ಮತದವರನ್ನು ಹಿಂದೂ ಮತಕ್ಕೆ ಸೇರಿಸಿಕೊಳ್ಳುವ ಹಂಬಲವೂ ಇಲ್ಲ ಅವಕಾಶವೂ ಇಲ್ಲ. ಈ ಪರಿಸ್ಥಿತಿಯನ್ನು ಗಮನಿಸಿದ ದಯಾನಂದರು, ಇತರ ಮತಗಳಿಂದ ಹೊಸತಾಗಿ ಹಿಂದೂ ಮತಕ್ಕೆ ಸೇರಿಸುವ ಪ್ರಯತ್ನ ಮಾಡದಿದ್ದರೂ ಮತಾಂತರ ಹೊಂದಿದ್ದ ಹಿಂದೂಗಳು ಮತ್ತೆ ಹಿಂದೂ ಮತಕ್ಕೆ ಹಿಂದಿರುಗಬೇಕೆಂಬ ಇಚ್ಚೆ ಪಟ್ಟಲ್ಲಿ ಅದಕ್ಕೆ ಅವಕಾಶವೂ ವ್ಯವಸ್ಥೆಯೂ ಇರಬೇಕೆಂಬ ಅಭಿಪ್ರಾಯಪಟ್ಟರು. ಅದೇ ಮೇರೆಗೆ ಅಂಥವರನ್ನು ಶುದ್ದಿ ಮಾಡಿ ಅಂದರೆ ಹೋಮ, ಹವನ, ನಾಮಕರಣಾಧಿಗಳನ್ನು ಮಾಡಿ, ಅವರನ್ನು ಆರ್ಯ ಸಮಾಜಕ್ಕೆ ಸೇರಿಸಿಕೊಳ್ಳುವ ಪ್ರಯತ್ನಗಳನ್ನು ರೂಢಿಗೆ ತಂದರು. ಈ ಕಾರ್ಯಕ್ರಮಗಳಿಂದ ಆರ್ಯ ಸಮಾಜ ಇತರ ಮತೀಯರ ತೀವ್ರ ಆಗ್ರಹಕ್ಕೆ ಗುರಿಯಾಯಿತು. ಈ ಆಗ್ರಹಕ್ಕೆ ಲೇಖಾರಾಂ ಮತ್ತು ಶ್ರದ್ಧಾನಂದರು ಬಲಿಯೂ ಆದರು. ಆರ್ಯ ಸಮಾಜದ ಈ ಪ್ರಯತ್ನದಿಂದ ಹಿಂದು ಸಮಾಜದ ಬಲ ವೃದ್ಧಿಗೊಂಡಿತು.ದಯಾನಂದ ಸರಸ್ವತಿ ಅವರು ತಮ್ಮ ಸ್ವತಂತ್ರ ವಿಚಾರದಿಂದಲೂ ನಿರ್ಭಯ ಪ್ರವೃತ್ತಿಯಿಂದಲೂ ಹಿಂದೂ ಸಮಾಜದಲ್ಲಿ ಗುರುತರವಾದ ಸುಧಾರಣೆಗಳನ್ನು ಸೂಚಿಸಿ, ಅವನ್ನು ಕಾರ್ಯಗತ ಮಾಡುವಲ್ಲಿ ಸಮರ್ಥರಾದರು.ದಯಾನಂದ ಸರಸ್ವತಿ ಅವರು ಧರ್ಮಪ್ರಚಾರ ಕಾರ್ಯದಲ್ಲಿ ಅನೇಕ ನೋವು ಅಪಮಾನಗಳನ್ನು ಎದುರಿಸಿದರು. ಊರಿಂದೂರಿಗೆ ಅಲೆದರು. ಕಡೆಗೆ ಜೋಧಪುರಕ್ಕೆ ಹೋದರು. ತಮ್ಮ ಉಪದೇಶದಿಂದ ಅಲ್ಲಿಯ ರಾಜನನ್ನು ಸೂಳೆಯೊಬ್ಬಳ ಸಹವಾಸದಿಂದ ಬಿಡಿಸಿದರು. ಇದರಿಂದ ಕೆರಳಿದ ಆ ಹೆಂಗಸು (ನನ್ಹೀ ಜಾನ್) ಅಡಿಗೆಯವನ ಮೂಲಕ ದಯನಂದರಿಗೆ ವಿಷ ಹಾಕಿಸಿದಳೆನ್ನಲಾಗಿದೆ. ಬಹಳ ಕ್ರೂರವಾಗಿದ್ದರೂ ಬ್ರಹ್ಮಚಾರಿ ದಯಾನಂದರ ವಜ್ರದೇಹವನ್ನು ಆಹುತಿ ತೆಗೆದುಕೊಳ್ಳಲು ವಿಷಕ್ಕೆ ಒಂದು ತಿಂಗಳಿಗಿಂತ ಹೆಚ್ಚು ಕಾಲ ಬೇಕಾಯಿತು. ಕಡೆಗೆ 1883ರ ಅಕ್ಟೋಬರ್ 30ರಂದು ದೀಪಾವಳಿ ಸಾಯಂಕಾಲ ನಿಧನರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್: ತಸ್ಲೀಮಾ ನಸ್ರೀನ್ ದ್ವೇಷದ ಸಂಕೇತ ಎಂದ ಅಸಾದುದ್ದೀನ್ ಓವೈಸಿ;

Fri Feb 18 , 2022
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಅವರನ್ನು “ದ್ವೇಷದ ಸಂಕೇತ” ಎಂದು ಕರೆದರು, ಆದರೆ ಅವರ ಇತ್ತೀಚಿನ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದರು. ಗುರುವಾರ ಇಂಡಿಯಾ ಟುಡೇ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಸಾದುದ್ದೀನ್ ಓವೈಸಿ, “… ದ್ವೇಷದ ಸಂಕೇತವಾಗಿರುವ ವ್ಯಕ್ತಿಗೆ ನಾನು ಇಲ್ಲಿ ಕುಳಿತು ಉತ್ತರಿಸುವುದಿಲ್ಲ. ನಾನು ಇಲ್ಲಿ ಕುಳಿತು ಉತ್ತರಿಸುವುದಿಲ್ಲ. ಆಶ್ರಯ ನೀಡಲಾಗಿದೆ ಮತ್ತು ಭಾರತದ ತುಂಡುಗಳ ಮೇಲೆ ಯಾರು ಮಲಗಿದ್ದಾರೆ ಏಕೆಂದರೆ ಅವಳು […]

Advertisement

Wordpress Social Share Plugin powered by Ultimatelysocial