ಚಿತ್ರೋದ್ಯಮದ ನೈತಿಕ ಬೆಂಬಲದ ಅಗತ್ಯವಿಲ್ಲ: ವಾಟಾಳ್ ನಾಗರಾಜ್ ಗರಂ

ಚಿತ್ರೋದ್ಯಮದ ನೈತಿಕ ಬೆಂಬಲದ ಅಗತ್ಯವಿಲ್ಲ: ವಾಟಾಳ್ ನಾಗರಾಜ್ ಗರಂ

ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನೀಡಿರುವ ಡಿಸೆಂಬರ್ 31ರ ಬಂದ್ ಕರೆಗೆ ಚಿತ್ರರಂಗದ ಅರೆಮನಸಿನ ಸ್ಪಂದನೆ ಬಗ್ಗೆ ಕನ್ನಡಪರ ಹೊರಾಟಗಾರ ವಾಟಾಳ್ ನಾಗರಾಜ್ ಅಸಮಾಧಾನ ಹೊರಹಾಕಿದ್ದಾರೆ.

”ಚಿತ್ರರಂಗಕ್ಕಾಗಿ ನಾವು ದಿನಾಂಕವನ್ನು ಬದಲಾಯಿಸಿಕೊಳ್ಳಲು ಆಗುವುದಿಲ್ಲ.

ಕೊಡುವುದಾದರೆ ಪೂರ್ಣ ಬೆಂಬಲ ಕೊಡಲಿ ಇಲ್ಲವಾದರೆ ಅವರ ನೈತಿಕ ಬೆಂಬಲದ ಅವಶ್ಯಕತೆ ನಮಗಿಲ್ಲ” ಎಂದು ಖಾರವಾಗಿಯೇ ನುಡಿದಿದ್ದಾರೆ ವಾಟಾಳ್ ನಾಗರಾಜ್.

ಡಿಸೆಂಬರ್ 31ರಂದು ಶುಕ್ರವಾರವಾಗಿದ್ದು ಅಂದು ಕನ್ನಡದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈಗಾಗಲೇ ಕೊರೊನಾದಿಂದ ತತ್ತರಿಸುವ ಚಿತ್ರರಂಗ ಬಂದ್ ಆಚರಿಸಿದರೆ ಇನ್ನಷ್ಟು ಕನ್ನಡ ಸಿನಿಮಾಗಳಿಗೆ ಸಮಸ್ಯೆ ಆಗಲಿದೆ ಎಂಬ ಕಾರಣದಿಂದ ಈಗಾಗಲೇ ಕೆಲವರು ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಬಂದ್ ದಿನಾಂಕವನ್ನು ಬದಲಿಸುವಾದರೆ ಚಿತ್ರರಂಗವು ಸಂಪೂರ್ಣ ಬೆಂಬಲ ನೀಡಲಿದೆ ಎಂದಿದ್ದಾರೆ.

ಆದರೆ ಇದಕ್ಕೆ ತಕರಾರು ಎತ್ತಿದ ವಾಟಾಳ್ ನಾಗರಾಜ್, ”ಬೇರೆ ದಿನಾಂಕ ನೀಡಿ ಎಂಬುದು ಅರ್ಥಹೀನ ಬೇಡಿಕೆ. ಬೇರೆ ದಿನ ಬಂದ್ ಮಾಡಿದರೆ ರಾಜ್ಯದ ಸಮಸ್ಯೆ ಪರಿಹಾರವಾಗಿಬಿಡುತ್ತದೆಯೇ? ಇವರು ಬೇರೆ ದಿನಾಂಕ ಕೇಳುತ್ತಿರುವುದು ಯಾವ ಕಾರಣಕ್ಕೆ, ಇವರ ವೈಯಕ್ತಿಕ ಕಾರಣಕ್ಕಲ್ಲವೆ?” ಎಂದು ವಾಟಾಳ್ ನಾಗರಾಜ್ ಪ್ರಶ್ನೆ ಮಾಡಿದ್ದಾರೆ.

”ಇದೀಗ ನೈತಿಕ ಬೆಂಬಲದ ಮಾತನ್ನಾಡುತ್ತಿರುವ ಕನ್ನಡ ಚಿತ್ರರಂಗ ನಾಳೆಯೇ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಹೋಗಿ ಎಲ್ಲರೂ ಸೇರಿ ಮನವಿ ಮಾಡಿ ಎಂಇಎಸ್‌ ನಿಷೇಧ ಮಾಡುವಂತೆ ಪಟ್ಟು ಹಿಡಿಯಲಿ, ಅವರಿಂದ ಸಕಾರಾತ್ಮಕ ಉತ್ತರ ಪಡೆಯಲಿ, ನಾವು ಕರ್ನಾಟಕ ಬಂದ್ ಕರೆ ಹಿಂಪಡೆಯುತ್ತೇವೆ” ಎಂದಿದ್ದಾರೆ ವಾಟಾಳ್ ನಾಗರಾಜ್.

”ಡಬ್ಬಿಂಗ್ ಸಿನಿಮಾಗಳ ವಿರುದ್ಧ ಮೊದಲು ದನಿ ಎತ್ತಿದ್ದು ನಾನು, ನನ್ನೊಂದಿಗೆ ಇಡೀಯ ಚಿತ್ರರಂಗ ಬಂದಿತು. ಆದರೆ ಈಗ ನನ್ನ ವಿರುದ್ಧ ನಿಂತಿದೆ ಪರ್ವಾಗಿಲ್ಲ. ಡಬ್ಬಿಂಗ್ ವಿರುದ್ಧ ಹೊರಾಟ ಮಾಡಿದ್ದಕ್ಕೆ ನನ್ನ ವಿರುದ್ಧ ದೆಹಲಿಯಲ್ಲಿ ಕೇಸ್ ಹಾಕಲಾಯಿತು. ನನ್ನನ್ನು ಬಂಧಿಸಿ ಕರೆದೊಯ್ಯುತ್ತೇವೆ ಎಂದು ಕೆಲವು ದಿನಗಳ ಹಿಂದಷ್ಟೆ ನೊಟೀಸ್ ಸಹ ಬಂದಿದೆ. ನಾನು ರಾಜ್ಯದಲ್ಲಿ ಹಲವು ದಶಕಗಳಿಂದ ಕನ್ನಡಪರ ಹೋರಾಟ ಮಾಡುತ್ತಾ ಬಂದಿದ್ದೇನೆ” ಎಂದು ಸಿಟ್ಟಿನಿಂದಲೇ ಹೇಳಿದರು ವಾಟಾಳ್ ನಾಗರಾಜ್.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಎಂಇಎಸ್ ಪುಂಡರು ಕರ್ನಾಟಕ ಧ್ವಜ ಸುಟ್ಟ ಘಟನೆ ರಾಜ್ಯದೆಲ್ಲೆಡೆ ಕಿಚ್ಚು ಎಬ್ಬಿಸಿದೆ. ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಬಂದ್ ಕರೆ ನೀಡಿದ್ದವು. ಇದಕ್ಕೆ ಚಿತ್ರರಂಗದ ಮುಖಂಡರಲ್ಲೊಬ್ಬರಾದ ಸಾ.ರಾ.ಗೋವಿಂದು ಚಿತ್ರರಂಗವು ಪೂರ್ಣ ಬೆಂಬಲ ನೀಡಿ ಶುಕ್ರವಾರ ಬಂದ್ ಆಚರಿಸುತ್ತದೆ ಎಂದಿದ್ದರು. ಆದರೆ ಈ ಏಕಪಕ್ಷೀಯ ನಿರ್ಣಯಕ್ಕೆ ಚಿತ್ರರಂಗದ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾಎರೆ.

ಅದೇ ದಿನ ತಮ್ಮ ‘ಲವ್ ಯು ರಚ್ಚು’ ಸಿನಿಮಾ ಬಿಡುಗಡೆ ಮಾಡುತ್ತಿರುವ ನಿರ್ಮಾಪಕ ಗುರು ದೇಶಪಾಂಡೆ ಬಂದ್ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಂದ್ ನಡೆದರೆ ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಶಿವರಾಜ್ ಕುಮಾರ್, ಯಶ್, ಅಜಯ್ ರಾವ್ ಇನ್ನಿತರರು ಸಹ ನಮ್ಮವರಿಗೆ ಸಮಸ್ಯೆ ಕೊಟ್ಟು ಬೇರೆಯವರ ಮೇಲೆ ಹೋರಾಟ ಮಾಡುವುದು ಸರಿಯಲ್ಲವೆಂಬ ಸಮತೋಲಿತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಸಂಘಟನೆಗಳು ಸರ್ಕಾರಕ್ಕೆ ಡಿಸೆಂಬರ್ 29ರ ವರೆಗೆ ಕಾಲಾವಕಾಶ ನೀಡಿದ್ದು, ಆ ಬಳಿಕ ನಿರ್ಣಯವನ್ನು ಅಧಿಕೃತಗೊಳಿಸುವುದಾಗಿ ಹೇಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ನಾಗರಬಾವಿಯಲ್ಲಿ ಕಾರು ಡಿಕ್ಕಿ: ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು, ಕಾರು ನಿಲ್ಲಿಸದೇ ಎಸ್ಕೇಪ್ ಆದ ಚಾಲಕ

Mon Dec 27 , 2021
ನಾಯಂಡನಹಳ್ಳಿಯ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ವ್ಯಕ್ತಿ, ಕಾಮಾಕ್ಷಿಪಾಳ್ಯದ ಸಂಬಂಧಿಕರ ಮನೆಯಿಂದ ಹಿಂತಿರುಗುವ ವೇಳೆ ದುರ್ಘಟನೆ ಸಂಭವಿಸಿದೆ.ಬೆಂಗಳೂರು: ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಮೃತಪಟ್ಟ ಘಟನೆ ಬೆಂಗಳೂರಿನ ನಾಗರಬಾವಿಯ ರಿಂಗ್ ರಸ್ತೆಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಬೇನಂ ಬರ್ಮನ್(42) ಮೃತ ದುರ್ದೈವಿ. ಘಟನೆ ಬಳಿಕ ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದು ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೇನಂ ಬರ್ಮನ್ ರಸ್ತೆ ದಾಟುವಾಗ ಕಾರು […]

Advertisement

Wordpress Social Share Plugin powered by Ultimatelysocial