ಫೇಸ್ಬುಕ್ಕಿಗೆ 19ನೇ ಹುಟ್ಟಿದ ಹಬ್ಬ.

ನಾವು ಒಂದುಗೂಡಿರುವ ಈ ಕ್ಷೇತ್ರ – ಫೇಸ್ಬುಕ್ಕಿಗೆ 19ನೇ ಹುಟ್ಟಿದ ಹಬ್ಬ. ಇಂದು ಗೂಗಲ್ ಹೊರತು ಪಡಿಸಿದರೆ ಅಂತರಜಾಲದಲ್ಲಿ ಅತ್ಯಂತ ಉಪಯೋಗಿಸಲ್ಪಡುತ್ತಿರುವ ತಾಣವಾದ ಫೇಸ್ಬುಕ್ ಮೂಡಿಸಿರುವ ಆಕರ್ಷಣೆ ಅಪಾರವಾದದ್ದು. ಮತ್ತೊಂದು ರೀತಿಯಲ್ಲಿ ನೋಡಿದರೆ, ಗೂಗಲ್ ಜನರಿಗೆ ಬೇಕಾದ ವಿಷಯ ಅರಸುವ ತಾಣವಾದರೆ, ಈ ಫೇಸ್ಬುಕ್ ಆದರೋ ಜನಸಾಮಾನ್ಯರ ವಿಹಾರ ಸ್ಥಳ. ಹೀಗಾಗಿ ಸಾಮಾಜಿಕ ಸಂಬಂಧಗಳ ಜಾಲದಲ್ಲಿ ಫೇಸ್ಬುಕ್ ಮುಂಚೂಣಿಯಲ್ಲಿದೆ ಎಂದರೆ ತಪ್ಪಿಲ್ಲ.
ಈ ಫೇಸ್ಬುಕ್ಕಿನೊಂದಿಗೆ ಪ್ರಪಂಚದ ನೂರಾರು ಕೋಟಿ ಜನ ‘ಎಂದೆಂದೂ ನಿನ್ನನು ಮರೆತು ಅಗಲಿರಲಾರೆ’ ಎಂದು ಭಾವಪರವಶರಾಗಿ ಮಾರುಹೋಗಿದ್ದಾರೆ. ಕೆಲವೊಂದು ವರ್ಷಗಳ ಹಿಂದೆ ಅದನ್ನು ತೆಗಳುತ್ತಿದ್ದ ಬುದ್ಧಿವಂತ ಜನ ಕೂಡಾ ಇಂದು ಅದನ್ನು ತಮ್ಮ ಬಡಾಯಿಗಾಗಿನ ತುತ್ತೂರಿ ಮಾಡಿಕೊಂಡಿದ್ದಾರೆ. ಫೇಸ್ಬುಕ್ ಗುಣಾವಗುಣಗಳು ಏನೇ ಇರಲಿ ಕಿರಿಯ ಉತ್ಸಾಹಿ ಮಾರ್ಕ್ ಜುಕರ್ ಬರ್ಗ್ ಸ್ಥಾಪಿಸಿದ ಈ ವ್ಯವಸ್ಥೆ ವಿಶ್ವದ ಒಂದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಕೆಲವು ವರ್ಷದ ಹಿಂದೆ ಆತ ತನಗೆ ಪುತ್ರಿ ಹುಟ್ಟಿದ ಸಂದರ್ಭದಲ್ಲಿ ತನ್ನ ಬಹುತೇಕ ಆಸ್ತಿಯನ್ನು ಸಮಾಜೊದ್ಧಾರಕ್ಕಾಗಿ ಕೊಡುಗೆ ನೀಡಲು ನಿರ್ಧರಿಸಿರುವುದು ಮತ್ತೊಂದು ಮಜಲು.
ಯಾವುದೇ ಚಟವೂ ಆರೋಗ್ಯಕರವಾದದ್ದಲ್ಲ. ಹಾಗಾಗಿ ಯಾರೇ ಯಾವುದೇ ಚಟವನ್ನಾಗಿಸಿಕೊಳ್ಳುವುದರ ಕುರಿತು ಎಚ್ಚರದಿಂದಿರಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಿದ್ದರೂ ಶಿಶುನಾಳ ಶರೀಫರು ತಮ್ಮ ಪದವೊಂದರಲ್ಲಿ ‘ಗುಡ್ಡ ಗವಿಯನ್ನು ನುಂಗಿ, ಗವಿಯು ಇರವಿ(ಅರಿವೆ)ಯ ನುಂಗಿ’ ಎಂದು ಗಮನಿಸುವಂತೆ ಚಟವೆಂಬುದು ಮನುಷ್ಯನ ಅರಿವನ್ನು ಪದೇ ಪದೇ ನುಂಗಿಹಾಕುತ್ತಿರುತ್ತದೆ. ಹೀಗೆ ತುಂಬಾ ಜನ ಫೇಸ್ಬುಕ್ಕನ್ನು ಒಂದು ಚಟವಾಗಿಸಿಕೊಂಡು ಅನಿಷ್ಟದ ಜೀವನ ಸಾಗಿಸುತ್ತಿದ್ದಾರೆ ಎಂದು ನಾವು ಪ್ರತಿನಿತ್ಯ ಓದುತ್ತಲೂ ಇರುತ್ತೇವೆ. ಚಟಗಳೆಂಬುದು ಮನುಷ್ಯನಿಗೆ ಫೇಸ್ಬುಕ್ ಬರುವ ಮುಂಚೆಯೂ ಇತ್ತು. ಮುಂದೆ ಅದಿಲ್ಲದಿದ್ದರೆ ಮತ್ತೊಂದರ ಜೊತೆ ಇದ್ದೇ ಇರುತ್ತದೆ. ಯಾವುದೇ ಚಟುವಟಿಕೆ ಅಥವಾ ಚಿಂತನೆಯನ್ನೂ ಚಟವನ್ನಾಗಿಸಿಕೊಳ್ಳಬಾರದು ಎಂಬ ಪ್ರಜ್ಞೆ ಆಯಾ ವ್ಯಕ್ತಿ ಹಾಗೂ ಆತನ ಜವಾಬ್ದಾರಿಯುತ ವಲಯವಾದ ಪೋಷಕರು, ಶಿಕ್ಷಕರು ಮುಂತಾದವರಲ್ಲಿ ಇರಬೇಕು. ನನಗೆ ಫೇಸ್ಬುಕ್ ತಲೆಕಂಡರೆ ಆಗುವುದಿಲ್ಲ ಎಂದುಕೊಳ್ಳುತ್ತಾ ಯಾವಾಗಲೂ ಟಿ. ವಿ, ಮೊಬೈಲು, ಹರಟೆ, ವಾಟ್ಸಾಪ್ ಮುಂತಾದ ಇನ್ನಿತರ ಸಮುದ್ರಗಳಲ್ಲಿ ಈಜುವವರನ್ನು ಏನೆನ್ನಬೇಕು ಎಂಬುದು ಅವರವರ ಕಲ್ಪನಾ ಶಕ್ತಿಗೆ ಸೇರಿದ ವಿಚಾರ.
ಇಂದಿನ ಪ್ರಪಂಚದಲ್ಲಿ ನಾವು ಯಾವುದೇ ವ್ಯಕ್ತಿಯನ್ನಾಗಲಿ, ಉಪಕರಣವನ್ನಾಗಲಿ ಅವುಗಳ ನಕಾರಾತ್ಮಕ ಗುಣಗಳಿಂದ ಅಳೆಯುವುದೇ ಹೆಚ್ಚು. ಹಾಗಾಗಿ ನಮ್ಮ ಜೊತೆಯಲ್ಲಿ ಬದುಕುವ ವ್ಯಕ್ತಿಗಳ ಬಗೆಗೂ ನಮ್ಮಲ್ಲಿ ಸಹ್ಯ ಭಾವನೆ ಇರುವುದಿಲ್ಲ. ನಾವು ಉಪಯೋಗಿಸುವ ವಸ್ತುಗಳೊಂದಿಗೂ ರೋಷ, ಅಸಡ್ಡೆ, ಅಸಹನೆಗಳಿಂದ ವರ್ತಿಸುತ್ತೇವೆ. ಫೇಸ್ಬುಕ್ಕಿನಲ್ಲಿ ವರ್ತಿಸುವ ಹಲವು ಮಂದಿಯ ಪಾಡೂ ಇದರಂತೆಯೇ ಇದೆ ಎಂಬುದು ಸುಳ್ಳೇನಲ್ಲ. ನಾವು ವ್ಯಕ್ತಿಗಳ ಹಾಗೂ ಉಪಕರಣಗಳ ಜೊತೆಗೆ ಅವರ / ಅವುಗಳಲ್ಲಿರುವ ಸಕಾರಾತ್ಮಕ ಗುಣಗಳೊಂದಿಗೆ ಸ್ಪಂದನೆ ಇರಿಸಿಕೊಂಡಾಗ ಹೀಗಾಗುವುದಿಲ್ಲ.ನಾನು ನನ್ನ ‘ಕನ್ನಡ ಸಂಪದ’ದಲ್ಲಿ ಮೂಡಿಸುತ್ತಿರುವ ಹಲವಾರು ವಿಷಗಳ ಬಗ್ಗೆ ಹಲವಾರು ಜನ “ನೀನು ಬ್ಲಾಗ್ ಬಳಸುವ ಬದಲು ಇವಕ್ಕೆಲ್ಲಾ ಫೇಸ್ಬುಕ್ ಯಾಕೆ ಬಳಸುತ್ತೀಯ?” ಎಂದು ಕೇಳುವುದಿದೆ. ನನ್ನ ಪ್ರಕಾರ ಫೇಸ್ಬುಕ್ ಎಂಬುದು ಒಂದು ಜನಸಂದಣಿ ಇರುವ ರಸ್ತೆ ಇದ್ದಂತೆ. ಇಲ್ಲಿ ಮಾರ್ಕೆಟ್ಟಿಗೆ ಹೋಗುವವರು, ವಿಹಾರಕ್ಕೆ ಹೋಗುವವರು, ದೇಗುಲಕ್ಕೆ ಹೋಗುವವರು, ಆಟವಾಡುವವರು, ಒಂದಷ್ಟು ಪುಂಡಾಟದವರು ಹೀಗೆ ಎಲ್ಲರೂ ಇದ್ದಾರೆ. ನಾವು ನಮಗೆ ತೋಚಿದ ಯಾರಿಗೂ ತೊಂದರೆ, ಇರಿಸು ಮುರಿಸು ಉಂಟು ಮಾಡದ ವಿಚಾರಗಳನ್ನು ಇಲ್ಲಿರಿಸುವುದರಿಂದ ಯಾರು ಬೇಕೋ ಅವರು ತಮಗೆಷ್ಟು ಬೇಕೋ ಅಷ್ಟನ್ನು ಆಯ್ದುಕೊಳ್ಳುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರ್ಗವಿ ನಾರಾಯಣ್ ಪ್ರಖ್ಯಾತ ರಂಗಭೂಮಿ ಕಲಾವಿದೆ.

Sat Feb 4 , 2023
ಭಾರ್ಗವಿ ನಾರಾಯಣ್ ಪ್ರಖ್ಯಾತ ರಂಗಭೂಮಿ ಕಲಾವಿದೆ ಮತ್ತು ದೂರದರ್ಶನ ಧಾರವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿ ಪಾತ್ರಧಾರಿ ಎಂದು ಪ್ರಸಿದ್ಧರಾಗಿದ್ದವರು ಮಾತ್ರವಲ್ಲ, ನಮ್ಮ ಮಧ್ಯಮ ವರ್ಗದ ಬದುಕನ್ನು ತೆರೆಯ ಮೇಲೆ, ರಂಗದ ಮೇಲೆ ನಮ್ಮ ಬದುಕನ್ನೇ ಪ್ರತಿನಿಧಿಸುತ್ತಿದ್ದಾರೆ ಎಂಬಷ್ಟು ಅಕ್ಕರೆ ಹುಟ್ಟಿಸಿಬಿಟ್ಟಿದ್ದರು. ಭಾರ್ಗವಿ ನಾರಾಯಣ್ 1938ರ ಫೆಬ್ರುವರಿ 4ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಡಾ. ಎಂ. ರಾಮಸ್ವಾಮಿ. ತಾಯಿ ನಾಮಗಿರಿಯಮ್ಮ. ಮಹಾರಾಣಿ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದ ನಂತರದಲ್ಲಿ ಇಂಗ್ಲಿಷ್‌ನಲ್ಲಿ […]

Advertisement

Wordpress Social Share Plugin powered by Ultimatelysocial