ಬಹುನಿರೀಕ್ಷಿತ ಜಿಎಸ್‍ಟಿ ಸಭೆ ಆರಂಭ, ಸ್ಲ್ಯಾಬ್‍ಗಳ ಬದಲಾವಣೆ ಚರ್ಚೆ

ಚಂಡೀಗಡ,ಜೂ.28- ಹಾಲಿ ಚಾಲ್ತಿಯಲ್ಲಿರುವ ಜಿಎಸ್‍ಟಿ ಸ್ಲ್ಯಾಬ್‍ಗಳಲ್ಲಿ ಅಗತ್ಯ ಬದಲಾವಣೆ ಹಾಗೂ ಹೊಸ ಸರಕು ಸೇವೆಗಳನ್ನು ಇದರ ವ್ಯಾಪ್ತಿಗೆ ತರುವುದು ಸೇರಿದಂತೆ ಹಲವು ಅಂಶಗಳ ಕುರಿತಾಗಿ ಬಹುನಿರೀಕ್ಷಿತ ಜಿಎಸ್‍ಟಿಯ ಸಭೆ ಇಂದು ಆರಂಭವಾಯಿತು.

ಪಂಜಾಬ್ ರಾಜಧಾನಿ ಚಂಡೀಗಡದಲ್ಲಿ ಇಂದಿನಿಂದ 2 ದಿನಗಳ ಕಾಲ ನಡೆಯಲಿರುವ ಈ ಜಿಎಸ್‍ಟಿ ಸಭೆಗೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕದ ಮುಖ್ಯಮಂತ್ರಿ ಹಾಗೂ ಜಿಎಸ್‍ಟಿ ಕೌನ್ಸಿಲ್ ಸಭೆಯ ಅಧ್ಯಕ್ಷರೂ ಆಗಿರುವ ಬಸವರಾಜ ಬೊಮ್ಮಾಯಿ, ವಿವಿಧ ರಾಜ್ಯಗಳ ಹಣಕಾಸು ಸಚಿವರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಎರಡು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಹಲವು ರಾಜ್ಯಗಳು ಕೇಂದ್ರ ಸರ್ಕಾರ 5 ವರ್ಷಗಳ ನಂತರವೂ ಜಿಎಸ್‍ಟಿ ಪರಿಹಾರ ನೀಡಿಕೆಯನ್ನು ಮುಂದುವರೆಸಬೇಕೆಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟಿವೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ದೇಶದೆಲ್ಲೆಡೆ ಕಾಣಿಸಿಕೊಂಡ ಪರಿಣಾಮ ಲಾಕ್‍ಡೌನ್ ಜಾರಿಗೊಳಿಸಲಾಗಿತ್ತು. ಇದರ ಪರಿಣಾಮ ಸಂಪೂರ್ಣ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು ರಾಜ್ಯದ ಬೊಕ್ಕಸಕ್ಕೆ ಆದಾಯದ ಕೊರತೆಯಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಐದು ವರ್ಷದ ನಂತರವು ಜಿಎಸ್‍ಟಿ ಪರಿಹಾರ ನೀಡಿಕೆಯನ್ನು ಮುಂದುವರೆಸಬೇಕೆಂಬ ಪ್ರಮುಖ ಬೇಡಿಕೆಯನ್ನು ಎಲ್ಲ ರಾಜ್ಯಗಳೂ ಮುಂದಿಟ್ಟಿವೆ.

ಜಿಎಸ್‍ಟಿ ಜಾರಿಯಾದಾಗ ಕೇಂದ್ರ ಸರ್ಕಾರ ಐದು ವರ್ಷ ಮಾತ್ರ ರಾಜ್ಯಗಳಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಎರಡು ವರ್ಷ ಕೋವಿಡ್ ನಂತರ ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೂ ಆರ್ಥಿಕ ಚಟುವಟಿಕೆಗಳು ಅಷ್ಟೊಂದು ಸುಧಾರಣೆ ಕಂಡುಬಂದಿಲ್ಲ.

ಹಾಗಾಗಿ ಕೇಂದ್ರ ಸರ್ಕಾರ ನಮಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಒದಗಿಸಬೇಕೆಂದು ನಿರ್ಮಲಾ ಸೀತಾರಾಮನ್‍ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಪೆಟ್ರೋಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ಸೇರಿವ ಕುರಿತು ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

ಕೆಲವು ರಾಜ್ಯಗಳು ಇದಕ್ಕೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿವೆ. ಆದರೆ ಒಂದೆರಡು ರಾಜ್ಯಗಳು ಮಾತ್ರ ಕೇಂದ್ರದ ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅತಿಹೆಚ್ಚು ಆದಾಯ ನೀಡುವ ಪೆಟ್ರೋಲ್, ಡೀಸೆಲ್ ಮತ್ತು ಇತರೆ ಉತ್ಪನ್ನಗಳ ಮೇಲೆ ನಾವು ವಿಧಿಸುವ ಸೆಸ್ ಕೂಡ ಜಿಎಸ್‍ಟಿ ವ್ಯಾಪ್ತಿಗೆ ತಂದರೆ ನೇರವಾಗಿ ರಾಜ್ಯಗಳ ಆದಾಯಕ್ಕೆ ಹೊಡೆತ ಬೀಳಲಿದೆ. ಹೀಗಾಗಿ ಇದನ್ನು ಸೇರಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಕೆಲವರು ಹೇಳಿದ್ದಾರೆ.

ಪೆಟ್ರೋಲ್ ಮತ್ತು ಇತರೆ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ಪೆಟ್ರೊಲ್ ದರ ಪ್ರತಿ ಲೀಟರ್‍ಗೆ 33 ರೂ. ಕಡಿಮೆಯಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುವುದು ಕಡಿಮೆಯಾಗಿ ಅನುಕೂಲವಾಗುತ್ತದೆ ಎಂಬುದನ್ನು ನಿರ್ಮಲಾ ಸೀತಾರಾಮನ್ ಸಭೆಯಲ್ಲಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.

ಆದರೆ ಪೆಟ್ರೋಲ್ ಮತ್ತು ಇದರ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ರಾಜ್ಯ ಸರ್ಕಾರಗಳು ಸೆಸ್ ವಿಧಿಸುವ ಅವಕಾಶ ಇರುವುದಿಲ್ಲ. ನಮಗೆ ಸಾವಿರಾರು ಕೋಟಿ ನಷ್ಟವಾಗಲಿದ್ದು, ಕೇಂದ್ರದ ಈ ಪ್ರಸ್ತಾವನೆಯನ್ನು ನಾವು ಒಪ್ಪಿಕೊಳ್ಳವುದಿಲ್ಲ ಎಂದು ಕೆಲವರು ತಮ್ಮ ವಿರೋಧವನ್ನು ಹೊರ ಹಾಕಿದ್ದಾರೆ.

ಜಿಎಸ್‍ಟಿ ಜಾರಿಯಾದ ನಂತರ ರಾಜ್ಯ ಸರ್ಕಾರಗಳು ಈ ಹಿಂದೆ ಅಸ್ತಿತ್ವದಲ್ಲಿದ್ದ ಹಲವು ರೀತಿಯ ತೆರಿಗೆಗಳ ಆದಾಯ ಮೂಲಗಳನ್ನು ಕಳೆದುಕೊಂಡಿವೆ. ಕೇಂದ್ರ ಸರ್ಕಾರ ನಮಗೆ ನಿಗದಿತ ಸಮಯಕ್ಕೆ ಸರಿಯಾಗಿ ಪರಿಹಾರವನ್ನು ಕೊಡುವುದಿಲ್ಲ. ಕೊಟ್ಟರೂ ಅದು ಕೂಡ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ಹೀಗಾಗಿ ನಮ್ಮ ಆದಾಯ ಮೂಲವನ್ನು ಬಿಟ್ಟುಕೊಡುವುದಿಲ್ಲ. ಕೇಂದ್ರದಿಂದ ಬರಬೇಕಾದ ಪರಿಹಾರವೇ ಬಿಡುಗಡೆಯಾಗಿಲ್ಲ. ಆಯಾ ರಾಜ್ಯಗಳ ಆದಾಯ ಮೂಲ ಕಸಿದುಕೊಳ್ಳುವುದಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಅನೇಕ ರಾಜ್ಯಗಳು ಹೇಳಿವೆ.
ಬುಧವಾರವೂ ಕೂಡ ಸಭೆ ಜರುಗಲಿದ್ದು, ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಿಲಯನ್ಸ್‌ ಜಿಯೋ ನಿರ್ದೇಶಕ ಸ್ಥಾನಕ್ಕೆ ಮುಕೇಶ್‌ ಅಂಬಾನಿ ರಾಜೀನಾಮೆ

Tue Jun 28 , 2022
ರಿಲಯನ್ಸ್‌ ಜಿಯೋ ಇನ್ಫೋಕಾಂ ನಿರ್ದೇಶಕ ಸ್ಥಾನಕ್ಕೆ ರಿಲಯನ್ಸ್‌ ಇಂಡಸ್ಟ್ರೀಸ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಕೇಶ್‌ ಅಂಬಾನಿ ರಾಜೀನಾಮೆ ನೀಡಿದ್ದಾರೆ. ಅವರ ಪುತ್ರ ಆಕಾಶ್‌ ಅಂಬಾನಿ ರಿಲಯನ್ಸ್‌ ಜಿಯೋ ಚೇರ್ಮನ್‌ ಆಗಿ ಕಾರ್ಯ ನಿರ್ವಹಿಸಲಿದ್ದು, ಇದು ಜೂನ್‌ 27 ರಿಂದಲೇ ಜಾರಿಗೆ ಬಂದಿದೆ. ಈ ಕುರಿತ ಪ್ರಕಟಣೆ ಇಂದು ಹೊರ ಬಿದ್ದಿದ್ದು, ಅಕಾಶ್‌ ಅಂಬಾನಿಯವರು ರಿಲಯನ್ಸ್‌ ಜಿಯೋ ಇನ್ಫೋಕಾಂ ನ ಕಾರ್ಯಕಾರಿ ನಿರ್ದೇಶಕ ಮಂಡಳಿಯ ಚೇರ್ಮನ್‌ ಆಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಲಾಗಿದೆ. […]

Advertisement

Wordpress Social Share Plugin powered by Ultimatelysocial