ಗೀತಾ ಗೋಪಿನಾಥ್ ಪ್ರಸಕ್ತದಲ್ಲಿನ ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ಡೆಪ್ಯೂಟಿ ಡೈರೆಕ್ಟರ್.

 

ಭಾರತೀಯ ಮೂಲದ ಗೀತಾ ಗೋಪಿನಾಥ್ ಪ್ರಸಕ್ತದಲ್ಲಿನ ಅಂತರರಾಷ್ಟ್ರೀಯ ಹಣಕಾಸು ನಿಧಿ (International Monetary Fund) ಸಂಸ್ಥೆಯ ಡೆಪ್ಯೂಟಿ ಡೈರೆಕ್ಟರ್. 2019-2022 ಅವಧಿಯಲ್ಲಿ ಅವರು ಅಲ್ಲಿನ ಪ್ರಧಾನ ಆರ್ಥಿಕ ತಜ್ಞೆಯಾಗಿದ್ದರು. ಗೀತಾ ಗೋಪಿನಾಥ್ ನಮ್ಮ ಮೈಸೂರಿನ ಹುಡುಗಿ.
ಗೀತಾ ಗೋಪಿನಾಥ್ 1971ರ ಡಿಸೆಂಬರ್ 8ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಟಿ.ವಿ. ಗೋಪೀನಾಥ್. ತಾಯಿ ವಿಜಯಲಕ್ಷ್ಮಿ. ಮೈಸೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿದ ಗೀತಾ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಹಾಗೂ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಸಾಧನೆ ಮಾಡಿದರು. ತಮ್ಮ ಸಂಶೋಧನಾ ಪ್ರಬಂಧವಾಗಿ ಅವರು “Three essays on international capital flows: a search theoretic approach” ಅನ್ನು ಬೆನ್ ಬೆರ್ನಾಂಕೆ ಮತ್ತು ಕೆನ್ನೆಥ್ ರೊಗಾಫ್ ಅವರ ಮೇಲ್ವಿಚಾರಣೆಯಲ್ಲಿ ಮಂಡಿಸಿದ್ದರು. ಅವರಿಗೆ ಸಂಶೋಧನಾ ಅವಧಿಯಲ್ಲಿ ಪ್ರಿನ್ಸ್ಟನ್ನಿನ ‘ವುಡ್ರೋ ವಿಲ್ಸನ್ ಫೆಲೋಷಿಪ್ ಸಂಶೋಧನಾ ಪ್ರಶಸ್ತಿ’ ಸಂದಿತ್ತು.
ಗೀತಾ ಗೋಪಿನಾಥ್ ಈ ಹಿಂದೆ ಭಾರತೀಯ ರಿಜರ್ವ್ ಬ್ಯಾಂಕ್ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ನಂತರ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ನೇಮಕಗೊಂಡ ಎರಡನೇ ಭಾರತೀಯ ಮೂಲದ ವ್ಯಕ್ತಿ. 2018 ರವರೆಗೆ ಮುಖ್ಯ ಅರ್ಥಶಾಸ್ತ್ರಜ್ಞರಾದ ಮೌರಿಸ್ ಅಬ್ಸ್ಟ್ಫೆಲ್ಡ್ ನಿವೃತ್ತಿಯ ನಂತರದಲ್ಲಿ ಆ ಸ್ಥಾನವನ್ನು ಗೀತಾ ಗೋಪಿನಾಥ್ 2019ರ ಪ್ರಾರಂಭದಿಂದ 2022ರ ಆರಂಭದವರೆಗೆ ಈ ಹುದ್ದೆ ಅಲಂಕರಿಸಿದ್ದರು. 2022ರ ಜನವರಿಯಿಂದ ಅವರು ಐಎಂಎಫ್ನ ಡೆಪ್ಯೂಟಿ ಡೈರೆಕ್ಟರ್ ಹುದ್ದೆ ನಿರ್ವಹಿಸುತ್ತಿದ್ದಾರೆ
ಜಿ 20 ರಾಷ್ಟ್ರಗಳ ‘ಗಣ್ಯ ನಾಯಕರ ಸಲಹಾ ತಂಡ’ದ ಸದಸ್ಯರಾಗಿದ್ದ ಗೀತಾ ಗೋಪೀನಾಥ್ ಭಾರತದ ಹಣಕಾಸು ಇಲಾಖೆ ಪರ ಸೇವೆಯನ್ನೂ ಸಲ್ಲಿಸಿದ್ದರು. 2016ರಲ್ಲಿ ಗೀತಾ ಗೋಪಿನಾಥ್ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು. ಆದರೆ ಗೀತಾ ಗೋಪಿನಾಥ್ ಅವರು ಮಾರುಕಟ್ಟೆ ಆರ್ಥಿಕತೆ ಮತ್ತು ಉದಾರ ನೀತಿಗಳನ್ನು ಹೆಚ್ಚು ಉತ್ತೇಜಿಸುತ್ತಿದ್ದರಾದ್ದರಿಂದ ಸಿಪಿಎಂ ನಾಯಕರು ಆಕೆಯ ನೇಮಕಾತಿಯನ್ನು ವಿರೋಧಿಸಿದ್ದರು.
ಗೀತಾ ಗೋಪಿನಾಥ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಜಾನ್ ಜ್ವಾನ್ಸ್ಟ್ರಾ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್, ಎಕನಾಮಿಕ್ಸ್ ವಿಭಾಗದ ಪ್ರೊಫೆಸರ್ ಕೂಡಾ ಆಗಿದ್ದಾರೆ. ಇದಕ್ಕೂ ಮುನ್ನ ಆವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಗೀತಾ ಅವರನ್ನು ಐಎಮ್‌ಎಫ್ ಹಿರಿಯ ಹುದ್ದೆಗೆ ನೇಮಿಸಿದ್ದ ವ್ಯವಸ್ಥಾಪಕ ನಿರ್ದೇಶಕರಾದ ಕ್ರಿಸ್ಟಿನ್ ಲಾಗಾರ್ಡ್ ಅವರು “ಗೀತಾ ಗೋಪೀನಾಥ್ ಅತ್ಯುತ್ತಮ ಅರ್ಥಶಾಸ್ತ್ರಜ್ಞೆಯಾಗಿದ್ದು, ನಿಷ್ಕಳಂಕ ಶೈಕ್ಷಣಿಕ ರುಜುವಾತುಗಳನ್ನು ಹೊಂದಿದ್ದಾರೆ. ಅಂತರರಾಷ್ಟ್ರೀಯ ಆರ್ಥಿಕ ವಿಚಾರಗಳಲ್ಲಿ ವ್ಯಾಪಕ ಅನುಭವ ಹೊಂದಿರುವ ಅವರು ತಮ್ಮ ಅತ್ಯುತ್ತಮ ನಾಯಕತ್ವ ಸಾಮರ್ಥ್ಯವನ್ನೂ ಸಾಬೀತುಪಡಿಸಿದ್ದಾರೆ. ಇಂತಹ ಪ್ರತಿಭಾನ್ವಿತರು ಐಎಂಎಫ್ ಆರ್ಥಿಕ ತಜ್ಞೆಯಾಗಿ ನೇಮಕ ಆಗಿರುವುದಕ್ಕೆ ಹರ್ಷವಾಗುತ್ತಿದೆ” ಎಂದು ನುಡಿದಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಸಾಲುಮರದ ತಿಮ್ಮಕ್ಕ, ಬಾಯಿಮಾತಲ್ಲ ನಿನ್ನ ದಿವ್ಯಕಾಯಕ.

Sat Dec 24 , 2022
    ತಾಯಿ ತಿಮ್ಮಕ್ಕ, ಬಾಯಿಮಾತಲ್ಲ ನಿನ್ನ ದಿವ್ಯಕಾಯಕ. ನೂರುಗಟ್ಟಲೆ ಸಸಿಗಳನ್ನು ನೆಟ್ಟಿದ್ದೀಯೇ, ದೂರದಿಂದ ನೀರು ಹೊತ್ತು ತಂದಿದ್ದೀಯೆ, ಕೈಯಾರೆ ಎರೆದು ಬೆಳೆಸಿದ್ದೀಯೆ, ಬೆವರ ಹನಿ ಬೆರೆಸಿದ್ದೀಯೆ, ನೀ ನೆಟ್ಟ ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟಿವೆ ಮಕ್ಕಳು ಜೋಕಾಲಿ ಆಡಿದ್ದಾರೆ, ಬಿಸಿಲ ಕೋಲು ರಂಗೋಲಿ ರಚಿಸಿದೆ, ದಾರಿಹೋಕರು ದಣಿವಾರಿಸಿಕೊಂಡಿದ್ದಾರೆ, ಬುತ್ತಿ ಬಿಚ್ಚಿ ಉಂಡಿದ್ದಾರೆ, ನೀರು ನೆರಳು ಪಡೆದಿದ್ದಾರೆ, ಕಾಲು ಚಾಚಿ ಮಲಗಿದ್ದಾರೆ, ಕಣ್ಣು ಮುಚ್ಚಿ ಕಮ್ಮನೆಯ ಕನಸು ಕಂಡಿದ್ದಾರೆ. ನಿನ್ನ […]

Advertisement

Wordpress Social Share Plugin powered by Ultimatelysocial