ಗುಬ್ಬಚ್ಚಿಗಳ ದಿನ

ನಮ್ಮ ಗುಬ್ಬಚ್ಚಿಗಳ ದಿನ ಬಂತು. ಆ ಗುಬ್ಬಚ್ಚಿಗಳು ಇಂದು ಎಲ್ಲೋ ಅಪರೂಪವಾಗಿ ಅಡಗಿ ಹೋಗಿದ್ದರೂ ಹೃದಯದಲ್ಲಿನ ಗುಬ್ಬಚ್ಚಿ ತಾನೇ ಕುಣಿ ಕುಣಿದು ನೂರಾರು ಗುಬ್ಬಚ್ಚಿಗಳೆಂಬ ಎಂಬ ವಿವಿಧಾಕಾರಗಳನ್ನು ತಳೆದ ಅನುಭಾವ ಉಂಟಾಗುತ್ತಿದೆ.
ನಾವು ಪುಟ್ಟವರಿದ್ದಾಗ ನಾವು ಇದ್ದ ಹೆಂಚಿನ ಮನೆಗಳ ತೊಲೆಗಳ ಮೇಲೆ ಅದೆಷ್ಟು ಚೆನ್ನಾಗಿ ಬಂದು ಆಟ ಆಡಿ ಹೋಗೋದು. ಅಕ್ಕ ಪಕ್ಕದಲ್ಲಿದ್ದ ಸೀಬೆ ಕಾಯಿ ಮರ ಹಾಗೂ ಬಾವಿ ಕಟ್ಟೆ ಬಳಿಗಳಲ್ಲಿ ಎಷ್ಟು ಚೆನ್ನಾಗಿ ಕಿಚಿ ಕಿಚಿಗುಟ್ಟುತ್ತಾ ಇತ್ತು. ಅಲ್ಲಲ್ಲಿ ನಿಂತ ರಸ್ತೆ ಬದಿಯ ಪುಟ್ಟ ಪುಟ್ಟ ಹಳ್ಳಗಳಲ್ಲಿ ಎಷ್ಟು ಚಂದದಿಂದ ಸ್ನಾನ ಮಾಡಿ ಹೋಗ್ತಾ ಇತ್ತು. ಮನೆಯಲ್ಲಿ ಮೆತ್ತಗೆ ಕದ್ದು ತೆಗೆದು ಒಂದಿಷ್ಟು ಕಾಳುಗಳನ್ನು ಉದುರಿಸಿದಾಗ ಗುಬ್ಬಚ್ಚಿಗಳು ಕುಣಿ ಕುಣಿದು ಬಂದು ಒಂದೆರಡು ಕಾಳು ಹೆಕ್ಕಿ ಹೋದರೆ ಏನು ಸಂತೋಷ ಆಗ್ತಾ ಇತ್ತು.
ಈಗ ಗುಬ್ಬಚ್ಚಿ ನೋಡ್ಬೇಕು ಅಂದ್ರೆ ಯಾವುದಾದರೂ ಪಾರ್ಕಿಗೆ ಬಿಸಿಲು ಇಲ್ಲದ ಸಮಯದಲ್ಲಿ ಮಾತ್ರವೇ ಹೋಗ್ಬೇಕು. ಈ ಫ್ಲಾಟ್ ಮನೆಗಳ ಒಳಗೆ ನಾವು ಬರೋದೇ ಕಷ್ಟ. ಇನ್ನು ಗುಬ್ಬಚ್ಚಿ ಬರುತ್ತಾ. ಗುಬ್ಬಚ್ಚಿ, ಕಾಗೆ ಪಾರಿವಾಳ ಬಂದು ಗಲೀಜು ಮಾಡಿಬಿಟ್ಟೀತು ಅಂತ ಕಬ್ಬಿಣದ ಬೇಲಿ ಕೂಡಾ ನಮ್ಮ ಜನ ಹಾಕಬೇಕಾದ್ರೆ ನಮ್ಮ ಬಳಿ ಬರಬೇಕು ಅಂತಾ ಆದ್ರೂ ಈ ಗುಬ್ಬಚ್ಚಿಗಳಿಗೆ ಹೇಗೆ ಅನ್ನಿಸೀತು. ಇನ್ನು ಮೊಬೈಲ್ ಹಾವಳಿ ಬೇರೇ ಅಂತಾನೂ ಅಭಿಪ್ರಾಯ ಇದೆ. ಪಾಪ ನಮ್ಮ ಪುಟ್ಟು ಗುಬ್ಬಚ್ಚಿಗಳು ಏನು ಮಾಡಿದ್ವು ಈ ಮೊಬೈಲ್ ಸಂಶೋಧಕರಿಗೆ. ಜೀವನದಲ್ಲಿ ಗುಬ್ಬಚ್ಚಿ ತರಹ ಸಾಧಾರಣವಾಗಿ, ಇರುವುದರಲ್ಲಿ ಸಂತೋಷವಾಗಿ ಕುಣಿ ಕುಣಿದು ಕುಪ್ಪಳಿಸೋದನ್ನ ಹಾಳು ಮಾಡೋದೇ ಈ ‘some’ಶೋಧಕರ ಕೆಲಸ. ನಾವೂ ಸರೀ ಇದ್ದೇವೆ. ಈ ಮೊಬೈಲ್ ಹಿಡ್ಕೊಂಡು ದಿನವೆಲ್ಲಾ ಬಾಯಿ ಬಡ್ಕೋತಾ ಇದ್ರೆ ಯಾವ ಪಕ್ಷಿಗೆ ತಾನೇ ಹಾಡೋಕೆ, ಕುಣಿಯೋಕೆ ಮನಸ್ಸು ಬರುತ್ತೆ.
ಈಗ್ಲೂ ಒಮ್ಮೊಮ್ಮೆ ನಮ್ಮ ಪಕ್ಕದ ಕಾಂಪೌಡಿನಲ್ಲಿ ದಟ್ಟವಾಗಿ ಹರಡಿರುವ ಪೊದೆಗಳಲ್ಲಿ ಒಂದೆರಡು ಗುಬ್ಬಚ್ಚಿಗಳು ಆಗಾಗ ಕಿಚ್ ಕಿಚ್ ಅಂದು ಹೋಗುತ್ತ್ವೆ. ಆದರೆ ಅವೂ ಅಷ್ಟೇ, ನಮ್ಮ ಅಕ್ಕಪಕ್ಕದ ಬಾಗಿಲು ತೆರೆಯದೇ ಇರೋ ಫ್ಲಾಟಿನ ಮೇಲ್ವರ್ಗದ ಜನದ ತರ ನನ್ನ ಕಡೆ ನೋಡಿಯೇ ಇಲ್ವೇನೋ ಅನ್ನೋ ತರ ಹೊರಟುಹೋಗುತ್ತೆ.
ಪುಟ್ಟ ವಯಸ್ಸಲ್ಲಿ ಅನಿಸುತ್ತಾ ಇತ್ತು. ಎಷ್ಟು ಚೆನ್ನಾಗಿ ಒಂದು ಚೂರು ಪಾರು ಗುಳುಂ ಮಾಡಿಕೊಂಡು ಆಟ ಆಡಿಕೊಂಡು ಬದುಕು ನಡೆಸುತ್ವೆ ಈ ಗುಬ್ಬಚ್ಚಿಗಳು, ನಮ್ಮ ಹಾಗೆ ಹೊಡಿಸ್ಕೊಂಡು, ಓದಲಿಲ್ಲ ಅಂತ ಬಯ್ಯಿಸಿಕೊಂಡು, ಸ್ಕೂಲು ಗೀಲು ಅಂತ ತಾಪತ್ರಯ ಇಲ್ಲದೆ ಎಷ್ಟು ಚೆನ್ನಾಗಿರುತ್ತೆ ಅಲ್ವ ಹಾಗಿದ್ರೆ ಅನ್ನಿಸ್ತಿತ್ತು. ಛಾನ್ಸ್ ಸಿಕ್ಕಿದರೆ ಇಂದೂ ಹಾಗಿರಬೇಕು ಅನ್ಸುತ್ತೆ. ಅದೆಲ್ಲಾ ಆಗುತ್ಯೆ? ಅದೆಲ್ಲಾ ಏನೇ ಇರಲಿ, ಇದ್ದರೆ ಹೀಗಿರಬೇಕು, ನಲಿ ನಲಿಯುತ್ತಾ, ಸಾಧಾರಣವಾಗಿ, ಸಾಮಾನ್ಯವಾಗಿ, ಸಂತೋಷವಾಗಿ, ಎಲ್ಲರೊಳಗೊಂದಾಗಿ ಎಂದು ಜೀವನದಲ್ಲಿ ಅನಿಸುವಂತೆ ಮಾಡಿದ ಈ ಗುಬ್ಬಚ್ಚಿಗಳನ್ನು ಹೇಗೆ ತಾನೇ ಮರೆಯಲಿಕ್ಕೆ ಸಾಧ್ಯ.
ಗುಬ್ಬಚ್ಚಿಗಳೇ ನಿಮ್ಮನ್ನು ತುಂಬಾ ಮಿಸ್ ಮಾಡ್ಕೋತೀನಿ. ನಿಮ್ಮ ಜೊತೆ ಮುಂಬರುವ ದಿನಗಳಲ್ಲಿ ಸಹಾ ಖುಷಿಯಿಂದ ಅಡ್ಡಾಡುವ ಸಂತಸವನ್ನು ಎದುರು ನೋಡುತ್ತೇನೆ. ನಿಮ್ಮ ಸರಳ, ಸುಕೋಮಲ, ಸಂತಸತನವೇ ನನ್ನ ಬದುಕಿನ ರೀತಿ ನೀತಿಯೂ ಆಗಲಿ ಎಂದು ಆಶಿಸುತ್ತೇನೆ. ಗುಬ್ಬಚ್ಚಿಗಳೇ ನಿಮ್ಮ ಸಂಖ್ಯೆ ಕೋಟಿ ಕೋಟಿಯಾಗಲಿ.
ಈಗ ನಾನಿರುವ ದುಬೈ ನಗರದಲ್ಲಿ ಅಲ್ಲಲ್ಲಿ ಕಾಣುವ ಹಸಿರಲ್ಲಿ ಗುಬ್ಬಚ್ಚಿಗಳು ಸಾಕಷ್ಟು ಗುಬ್ಬಚ್ಚಿಗಳನ್ನು ಕಾಣುತ್ತಿರುವ ಸಂತಸ ನನ್ನದಾಗಿದೆ. ಈ ಸಂತಸ ಎಲ್ಲೆಡೆಯಲ್ಲೂ ಮೊಳಗಲಿ ಎಂಬುದು ನನ್ನ ಆಶಯ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾನ್ ಹ್ಯೂಬರ್ಟ್ ಮಾರ್ಷಲ್

Fri Mar 25 , 2022
  ಸರ್ ಜಾನ್ ಹ್ಯೂಬರ್ಟ್ ಮಾರ್ಷಲ್ ಮಹಾನ್ ಪುರಾತನ ಶಾಸ್ತ್ರಜ್ಞರು. ಇವರು ಹರಪ್ಪ, ಮೊಹೆಂಜೊದಾರೊ ಮತ್ತು ತಕ್ಷಶಿಲಾ ಕುರಿತಾದ ಮಹತ್ವಪೂರ್ಣ ಉತ್ಖನನ ಕೈಗೊಂಡವರು. ಜೊತೆಗೆ ಅನೇಕ ಭಾರತೀಯರನ್ನು ಪುರಾತನ ಶಾಸ್ತ್ರದ ಕೆಲಸಕ್ಕೆ ನೇಮಿಸಿ ಮುನ್ನಡೆಸಿದವರು. ಜಾನ್ ಹ್ಯೂಬರ್ಟ್ ಮಾರ್ಷಲ್ ಅವರು 1876 ಮಾರ್ಚ್ 19ರಂದು ಯುನೈಟೆಡ್ ಕಿಂಗ್ಡಂನ ಚೆಸ್ಟರ್ ಎಂಬಲ್ಲಿ ಜನಿಸಿದರು. ಭಾರತದ ವೈಸ್‍ರಾಯ್ ಲಾರ್ಡ್ ಕರ್ಜನ್ ಇವರನ್ನು ಭಾರತದ ಪುರಾತತ್ವ ಸರ್ವೇಕ್ಷಣದ ಪ್ರಧಾನ ನಿರ್ದೇಶಕರಾಗಿ 1902ರಲ್ಲಿ ನೇಮಿಸಿದರು. ಆ […]

Advertisement

Wordpress Social Share Plugin powered by Ultimatelysocial