ಬಾಬ್ರಿ ಕೈತಪ್ಪಿತು, ಮತ್ತೊಂದು ಮಸೀದಿ ಕಳೆದುಕೊಳ್ಳಲ್ಲ:

 

ಲಕ್ನೋ, ಮೇ 13: ವಾರಣಾಸಿಯ ಕಾಶಿ ವಿಶ್ವನಾಥ ಮಂದಿರ ಪಕ್ಕದ ಜ್ಞಾನವಾಪಿ ಮಸೀದಿಯಲ್ಲಿ ಸರ್ವೇಕ್ಷಣೆ ನಡೆಸಲು ನ್ಯಾಯಾಲಯ ನೀಡಿದ ಅದೇಶದ ಬಗ್ಗೆ ಮುಸ್ಲಿಮ್ ಮುಖಂಡ ಅಸಾದುದ್ದೀನ್ ಒವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾರಣಾಸಿಯ ಸ್ಥಳೀಯ ಕೋರ್ಟ್ ನೀಡಿದ ಆದೇಶ 1991ರ ಪೂಜಾ ಮಂದಿರ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಹಾಗೆಯೇ, ಬಾಬ್ರಿ ಮಸೀದಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಶಯಕ್ಕೆ ವಿರುದ್ಧವಾಗಿದೆ ಎಂದು ಎಐಎಂಐಎಂ ಪಕ್ಷದ ಸಂಸದರೂ ಆಗಿರುವ ಒವೈಸಿ ಟೀಕಿಸಿದ್ದಾರೆ.

ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಮಾತನಾಡುತ್ತಿದ್ದ ಒವೈಸಿ, ಪೂಜಾ ಸ್ಥಳಗಳ ಕಾಯ್ದೆ ಉಲ್ಲೇಖಿಸುತ್ತಾ, “ಯಾವುದೇ ಧರ್ಮದ ಅಥವಾ ವರ್ಗದ ಪೂಜಾ ಸ್ಥಳವನ್ನು ಬೇರೆ ಧರ್ಮದ ಅಥವಾ ವರ್ಗದ ಪೂಜಾ ಸ್ಥಳವಾಗಿ ಪರಿವರ್ತಿಸುವಂತಿಲ್ಲ ಎಂದು ಹೇಳಲಾಗಿದೆ” ಎಂದು ಮಾಹಿತಿ ನೀಡಿದರು. ಈ ಕಾನೂನು ಮುರಿಯುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅಖಿಲ ಭಾರತ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ನಾಯಕರಾದ ಅಸಾದುದ್ದೀನ್ ಒವೈಸಿ ಒತ್ತಾಯಿಸಿದ್ದಾರೆ.

ಬಾಬ್ರಿ ಕಳೆದುಕೊಂಡೆವು
ಈಗಾಗೇ ಬಾಬ್ರಿ ಮಸೀದಿ ಕಳೆದುಕೊಂಡಿದ್ದೇವೆ. ಈಗ ಮತ್ತೊಂದು ಮಸೀದಿ ಕಳೆದುಕೊಳ್ಳಲ್ಲ ಎಂದು ಇದೇ ವೇಳೆ ಒವೈಸಿ ಪಣತೊಟ್ಟರು. “ಜ್ಞಾನವಾಪಿ ಮಸೀದಿ ಬೆಳವಣಿಗೆ ಹಿನ್ನೆಲೆಯಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಮಸೀದಿ ಸಮಿತಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತದೆಂದು ಭಾವಿಸಿದ್ದೇನೆ. ನಾನೀಗ ಒಂದು ಬಾಬರಿ ಮಸೀದಿ ಕಳೆದುಕೊಂಡಿದ್ದೇನೆ. ಮತ್ತೊಂದು ಮಸೀದಿ ಕಳೆದುಕೊಳ್ಳಲು ಬಯಸಲ್ಲ” ಎಂದು ಹೈದರಾಬಾದ್ ನಗರದ ಸಂಸದರಾದ ಅವರು ಹೇಳಿದರು.

ಯೋಗಿ ಸರಕಾರಕ್ಕೆ ಒತ್ತಾಯ

ಧಾರ್ಮಿಕ ಸ್ಥಳಗಳ ಸ್ವರೂಪ ಬದಲಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಉತ್ತರಪ್ರದೇಶ ಸರಕಾರ ಕೂಡಲೇ ಎಫ್‌ಐಆರ್ ದಾಖಲಿಸಬೇಕು ಎಂದೂ ಒವೈಸಿ ಒತ್ತಾಯಿಸಿದರು.

“1947, ಆಗಸ್ಟ್ 15ರಿಂದಲೂ ಅಸ್ತಿತ್ವದಲ್ಲಿರುವ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಯಾವುದೇ ವ್ಯಕ್ತಿ ಬದಲಿಸಿದರೆ ಅದು ಶಿಕ್ಷಾರ್ಹ ಅಪರಾಧ ಆಗುತ್ತದೆ ಎಂಬುದು 1991ರ ಪೂಜಾ ಸ್ಥಳಗಳ ಕಾಯ್ದೆಯಲ್ಲಿ ಇದೆ. ಈಗ ಈ ಕಾಯ್ದೆಯ ಉಲ್ಲಂಘನೆ ಆಗುತ್ತಿರುವುದರಿಂದ ಯೋಗಿ ಸರಕಾರ ಕೂಡಲೇ ಎಫ್‌ಐಆರ್ ದಾಖಲಿಸಬೇಕು. ಈ ವ್ಯಕ್ತಿಗಳು ತಪ್ಪಿತಸ್ಥರೆಂದು ಕೋರ್ಟ್‌ನಲ್ಲಿ ಋಜುವಾತಾದರೆ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಬಹುದು” ಎಂದು ಅಸಾದುದ್ದೀನ್ ಒವೈಸಿ ಅಭಿಪ್ರಾಯಪಟ್ಟರು.

ನ್ಯಾಯಾಲಯದ ಆದೇಶವೇನು?

ನಿನ್ನೆ ವಾರಣಾಸಿಯ ಸ್ಥಳೀಯ ನ್ಯಾಯಾಲಯ, ಜ್ಞಾನವಾಪಿ ಮಸೀದಿಯೊಳಗೆ ವಿಡಿಯೋ ಶೂಟ್ ಇತ್ಯಾದಿ ಸರ್ವೇಕ್ಷಣೆ ನಡೆಸಬೇಕೆಂದು ಆದೇಶ ಹೊರಡಿಸಿತು. ಅದಕ್ಕಾಗಿ ಅಜಯ್ ಮಿಶ್ರಾ ಅವರನ್ನು ಕೋರ್ಟ್ ಕಮಿಷನರ್ ಆಗಿ ಆಯ್ಕೆ ಮಾಡಿದೆ. ಜೊತೆ ಇನ್ನೂ ಇಬ್ಬರು ವಕೀಲರನ್ನೂ ಕೋರ್ಟ್ ಕಮಿಷನರ್ ಆಗಿ ಮಸೀದಿಯೊಳಗೆ ಸರ್ವೇಕ್ಷಣೆಗೆ ಕಳುಹಿಸಿದೆ. ಮೇ 17ರ ಒಳಗೆ ಸರ್ವೆ ಆಗಿರಬೇಕು ಎಂದೂ ನ್ಯಾಯಾಲಯ ನಿರ್ದೇಶನ ನೀಡಿದೆ.

ವಿವಾದದ ವಿವರ

17ನೇ ಶತಮಾನದಲ್ಲಿ ಮೊಘಲರ ದೊರೆ ಔರಂಗಜೇಬರ ಆಡಳಿತದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಅದರ ಮೇಲೆ ಜ್ಞಾನವಾಪಿ ಮಸೀದಿ ಕಟ್ಟಲಾಗಿದೆ ಎಂಬುದು ಕೆಲ ಹಿಂದೂ ಗುಂಪುಗಳ ವಾದ. ಈ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಹಿಂದೂ ದೇವರುಗಳ ಫೋಟೋಗಳಿರುವ ಕುರುಹು ಸಿಕ್ಕಿದೆ. ಮಸೀದಿಯೊಳಗೂ ಹಿಂದೂ ದೇಗುಲ ಅಸ್ತಿತ್ವವಿದ್ದುದ್ದಕ್ಕೆ ಹಲವು ಪುರಾವೆಗಳು ಇರಬಹುದು. ಅವುಗಳು ನಾಶವಾಗುವ ಮುನ್ನ ಸರ್ವೇಕ್ಷಣೆ ನಡೆಸಿ ಸತ್ಯಾಂಶ ಹೊರಬರಲಿ ಎಂಬುದು ಬೇಡಿಕೆ. ಸರ್ವೇಕ್ಷಣೆ ನಡೆಸುವ ಕೆಲಸಕ್ಕೆ ಕೋರ್ಟ್ ಕೂಡ ಒಪ್ಪಿಕೊಂಡು ನಿನ್ನೆ ಆದೇಶ ಹೊರಡಿಸಿದೆ.

ಹಿಂದಿನ ಸಮೀಕ್ಷೆಗೆ ಅಡ್ಡಿ

ಹಿಂದಿನ ವಿಚಾರಣೆಯಲ್ಲೂ ಸರ್ವೇಕ್ಷಣೆಗೆ ಕೋರ್ಟ್ ಆದೇಶ ಕೊಟ್ಟಿತ್ತು. ಆದರೆ, ಮಸೀದಿಯ ಒಳಗೆ ಸರ್ವೆ ನಡೆಸಲು ಅಲ್ಲಿನವರು ಬಿಡಲಿಲ್ಲ. ಮಸೀದಿಯ ಹೊರಗಿನ ಆವರಣದಲ್ಲಿ ಸರ್ವೇಕ್ಷಣೆ ನಡೆಸಲು ಮಾತ್ರವೇ ಕೋರ್ಟ್ ಆದೇಶ ಇರುವುದು. ಮಸೀದಿಯ ಒಳಗೆ ಬಿಡುವುದಿಲ್ಲ ಎಂದು ಮಸೀದಿ ಸಮಿತಿಯವರು ಸರ್ವೇಕ್ಷಣೆಗೆ ಬಂದಿದ್ದ ಕೋರ್ಟ್ ಕಮಿಷನರ್ ಅವರನ್ನು ತಡೆದಿದ್ದರು. ಆ ಘಟನೆ ಬೆನ್ನಲ್ಲೇ ನಿನ್ನೆ ಕೋರ್ಟ್ ಮಸೀದಿಯೊಳಗೆ ಸರ್ವೇಕ್ಷಣೆ ನಡೆಸಬೇಕೆಂದು ಸ್ಪಷ್ಟವಾಗಿ ತನ್ನ ಆದೇಶದಲ್ಲಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕಾ ಅಧ್ಯಕ್ಷರು ತಪ್ಪು ತಿಳುವಳಿಕೆಯಲ್ಲಿದ್ದಾರೆ: ಎಲೋನ್ ಮಸ್ಕ್!

Fri May 13 , 2022
ನವದೆಹಲಿ, ಮೇ 13- ಶ್ರೀಮಂತ ಉದ್ಯಮಿ ಹಾಗೂ ಟ್ವಿಟರ್ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ತನ್ನ ಒಡೆತನಕ್ಕೆ ಧಕ್ಕಿಸಿಕೊಂಡ ಎಲೋನ್ ಮಾಸ್ಕ್ ಅವರ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕಾವನ್ನು ಪರಿವರ್ತನೆ ಮಾಡಲು ಜನ ತಮ್ಮನ್ನು ಚುನಾಯಿಸಿದ್ದಾರೆ ಎಂದು ಭಾವಿಸಿ ಅಧ್ಯಕ್ಷ ಜೋ ಬಿಡೇನ್ ತಪ್ಪು ತಿಳಿದುಕೊಂಡಿದ್ದಾರೆ. ಆದರೆ ಅಸಲಿಗೆ ಪ್ರತಿಯೊಬ್ಬರು ಕಡಿಮೆ ನಾಟಕವನ್ನು ಬಯಸಿದ್ದರು ಎಂದು ಮಸ್ಕ್ ಟ್ವೀಟ್ ಮಾಡಿ ರಾಜಕಾರಣವನ್ನು ಲೇವಡಿ ಮಾಡಿದ್ದಾರೆ. ಈ ಹಿಂದೆ ಅಮೆರಿಕಾ […]

Advertisement

Wordpress Social Share Plugin powered by Ultimatelysocial