ತಾಜ್‍ವೆಸ್ಟ್ ಎಂಡ್ ಹೊಟೆಲ್ ಅನ್ನೇ ಸಿಎಂ ಕಚೇರಿ ಮಾಡಿಕೊಂಡಿದ್ದ!

ಬೆಂಗಳೂರು,ಏ.5- ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ಆರ್‌ಎಸ್‌ಎಸ್‌ ನಿಯಂತ್ರಣ ಮಾಡುತ್ತಿದೆ ಎಂದು ಹೇಳುವ ನೀವು ಪದ್ಮನಾಭನಗರದ ಅಣತಿ ಇಲ್ಲದೆ ಯಾವ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಸಿ ಎಂ.ಪಿ.ರೇಣುಕಾಚಾರ್ಯ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಶ್ರೀಮಂತರ ಪಕ್ಷ ಎನ್ನುವುದಾದದರೆ ನೀವು ರಾಮನಗರದಲ್ಲಿ ರೇಷ್ಮೆ, ಹಾಸನದಲ್ಲಿ ಅಲೂಗಡ್ಡೆ ಬೆಳೆದು ಪಕ್ಷ ಸಂಘಟನೆ ಮಾಡುತ್ತೀರಾ?

ತಾಜ್‍ವೆಸ್ಟ್ ಎಂಡ್ ಹೊಟೆಲ್ ಅನ್ನೇ ಸಿಎಂ ಕಚೇರಿ ಮಾಡಿಕೊಂಡಿದ್ದ ನೀವು ಅಧಿಕಾರ ಇದ್ದಾಗ ಜನರ ಕೈಗೆ ಸಿಗದೆ , ಈಗ ಬಡವರ ಬಗ್ಗೆ ಅಣಿಮುತ್ತು ಉದುರಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ ಎಂದು ವ್ಯಂಗ್ಯ ಮಾಡಿದರು.

ಅಷ್ಟಕ್ಕೂ ಕುಮಾರಸ್ವಾಮಿ ಅವರೇ ನೀವು ಕಾಂಗ್ರೆಸ್ ಮತ್ತು ಬಿಜೆಪಿಗೆ ಒಂದೊಂದು ಬಾರಿ ಮಕ್ಮಲ್ ಟೋಪಿ ಹಾಕಿದ ಮಹಾನುಭಾವರು. 20-25 ಕ್ಷೇತ್ರಗಳನ್ನು ಗೆದ್ದು ನಮ್ಮ ಮನೆ ಬಾಗಿಲಿಗೆ ಬರಲಿ ಎಂದು ಕಾದು ಕುಳಿತಿದ್ದೀರಿ. ಈ ಬಾರಿ ಅದು ಕೂಡ ಕೈಗೆಟುಕುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಕುಹುಕವಾಡಿದ್ದಾರೆ.

ಬಿಜೆಪಿ ಎಂದಿಗೂ ಅಧಿಕಾರಕ್ಕಾಗಿ ಹಾತೊರೆಯುವುದಿಲ್ಲ. ದೇಶ ಸೇವೆ, ರಾಷ್ಟ್ರ ರಕ್ಷಣೆ, ಭಾರತೀಯರ ಒಗ್ಗೂಡಿಸುವಿಕೆ, ಧರ್ಮ ರಕ್ಷಣೆಗೆ ಕಂಕಣಬದ್ದವಾಗಿದೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್‍ನಂತೆ ನಿಮಗೂ ಕೂಡ ಭೀತಿ ಉಂಟು ಮಾಡಿದ್ದರೆ ಅಚ್ಚರಿ ಏನಿಲ್ಲ. ಯಾರಿಗೆ ಯಾವ ಸಂದರ್ಭದಲ್ಲಿ ಪಾಠ ಕಲಿಸಬೇಕು ಎಂಬುದನ್ನು ಜನತೆ ಕೂಡ ಕಾದು ನೋಡುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಹಿಂದೂ ಸಂಘಟನೆಗಳ ವಿರುದ್ಧ ಏಕಾಏಕಿ ಮುಗಿಬಿದ್ದಿರುವುದರ ಹಿಂದೆ ನಿಜವಾದ ಜನಹಿತ ಇದ್ದರೆ, ಗಂಗೊಳ್ಳಿಯಲ್ಲಿ ಮೀನು ಖರೀದಿಸಬಾರದೆಂದು ಹುಕುಂ ಹೊರಡಿಸಿದವರ ವಿರುದ್ಧ ಏಕೆ ಸೊಲ್ಲೆತ್ತುತ್ತಿಲ್ಲ? ಕೇವಲ ಹಿಂದೂಗಳು, ಹಿಂದೂ ಸಂಘಟನೆಗಳು ನಿಮ್ಮ ಕಣ್ಣಿಗೆ ಸಮಾಜಘಾತುಕರಂತೆ ಕಂಡರೆ ಶಿವಮೊಗ್ಗದಲ್ಲಿ ಅಮಾಯಕ ಹರ್ಷ ಎಂಬ ಯುವಕನನ್ನು ಕೊಲೆ ಮಾಡಿದವರು ಶಾಂತಿಪ್ರಿಯರೇ? ಎಂದು ಪ್ರಶ್ನಿಸಿದ್ದಾರೆ.

ಎಷ್ಟೇ ಆದರೂ ನೀವು ಸಾಂದರ್ಭಿಕ ಶಿಶು ತಾನೇ? ಸಮ್ಮಿಶ್ರ ಸರ್ಕಾರದಲ್ಲಿ ನಾನು ಕೇವಲ ಗುಲಾಮನಾಗಿದ್ದೆ ಎಂದು ಹೇಳುವಾಗ ನಿಮಗೆ ಸ್ವಾಭಿಮಾನ ಅಡ್ಡಿಬರಲಿಲ್ಲ? ಅಧಿಕಾರಕ್ಕಾಗಿ ಯಾವ ಪಕ್ಷದ ಜೊತೆಯಲ್ಲಾದರ ಹೊಂದಾಣಿಕೆ ಮಾಡಿಕೊಳ್ಳುವ ಜಾಯಮಾನದವರು ಎಂದು ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ಅಧಿಕಾರ ಹಸ್ತಾಂತರ ಮಾಡುವಾಗ ಒಪ್ಪಂದದ ನಾಟಕವಾಡಿ ವಚನಭ್ರಷ್ಟ ಕಳಂಕ ಅಂಟಿಸಿಕೊಂಡಿದ್ದು ಯಾರು? ನನ್ನಿಂದಲೇ ಕರ್ನಾಟಕದಲ್ಲಿ ಬಿಜೆಪಿ ಮರು ಜನ್ಮ ಪಡೆಯಿತು ಎಂದು ಹೇಳುವ ನಿಮಗೆ ಕೃತಜ್ಞತೆ ಇದೆಯೆ? 2006ರಲ್ಲಿ ನಾವು ಜೆಡಿಎಸ್‍ಗೆ ಬೆಂಬಲ ನೀಡಿ ಸರ್ಕಾರ ರಚಿಸದಿದ್ದರೆ ಅಂದೇ ನಿಮ್ಮ ಪಕ್ಷ ಹೇಳ ಹೆಸರಿಲ್ಲದಂತೆ ಮುಗಿಸಲು ಈಗಿನ ಇಬ್ಬರು ಮಹಾನ್ ನಾಯಕರು ಮುಂದಾಗಿದ್ದು ನಿಮಗೆ ಗೊತ್ತಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಮ್ಮ ಜೊತೆ ಓಡಿ ಬಂದು ಸಿದ್ದಾಂತಕ್ಕೆ ತಿಲಾಂಜಲಿ ಹಾಡಿದವರು ಯಾರು ಕುಮಾರಸ್ವಾಮಿಯವರೇ?

20 ತಿಂಗಳು ಮುಖ್ಯಮಂತ್ರಿಯಾಗಲು ನಿಮಗೆ ಬಿಜೆಪಿ ಸಹಕಾರ ಕೊಡದಿದ್ದರೆ ಕರ್ನಾಟಕದಲ್ಲಿ ಯಾರು ನಿಮ್ಮನ್ನು ಮೂಸುತ್ತಿದ್ದರು? ದೇವೇಗೌಡರ ಮಗ ಎಂಬುದನ್ನು ಬಿಟ್ಟರೆ ನಿಮಗೆ ಯಾವ ಐಡೆಂಟಿಟಿ ಇತ್ತು? ಎಂದು ಛಾಟಿ ಬೀಸಿದ್ದಾರೆ.

ಅಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ನಮ್ಮ ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ್ ಸೇರಿ ಸಂಚು ರೂಪಿಸಿದ್ದರೆಂದು ಮಾಧ್ಯಮಗಳ ಮುಂದೆ ಹೇಳಿದ್ದು ಸುಳ್ಳೋ, ನಿಜವೋ? ಎಂಬುದನ್ನು ಹೇಳಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.
ನೀವು ನಿಜವಾಗಿಯೂ ಸಿದ್ದಾಂತಕ್ಕೆ ಬದ್ದರಾಗಿದ್ದರೆ ಯಾವುದೇ ಕಾರಣಕ್ಕೂ ನಾನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಬಹುದಿತ್ತಲ್ಲವೇ?

ಸ್ವಯಂಘೋಷಿತ ಕರ್ನಾಟಕದ ಆರೂವರೆ ಕೋಟಿ ಹೃದಯ ಸಾಮ್ರಾಜ್ಯ ಗೆದ್ದ ಎಚ್.ಡಿ.ಕುಮಾರಸ್ವಾಮಿ ಅವರೇ 2006ರಲ್ಲಿ ಬಿಜೆಪಿ ನಿಮ್ಮನ್ನು ಮುಖ್ಯಮಂತ್ರಿ ಮಾಡದಿದ್ದರೆ ಜನ್ಮದಲ್ಲಿ ನೀವು ಸಿ.ಎಂ ಆಗಲು ಸಾಧ್ಯವಿತ್ತೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಂಡನ್, ಏ.5- ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ!

Tue Apr 5 , 2022
  ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಎರಡು ಬಾರಿ ಜಾನ್ಸನ್ ಭಾರತ ಭೇಟಿಯನ್ನು ರದ್ದುಗೊಳಿಸಿದ್ದರು. ಸೋಂಕಿನ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇದೇ ತಿಂಗಳು 22 ರ ಸುಮಾರಿಗೆ ಅವರು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಕಳೆದ ತಿಂಗಳು ಜಾನ್ಸನ್ ಮತ್ತು […]

Advertisement

Wordpress Social Share Plugin powered by Ultimatelysocial