ಸ್ವತಂತ್ರ ಭಾರತ ಇಂಥಾ ವಚನ ಭ್ರಷ್ಟ ಪ್ರಧಾನಿಯನ್ನು ಹಿಂದೆಂದೂ ಕಂಡಿರಲಿಲ್ಲ: ಸಿದ್ದರಾಮಯ್ಯ!

ದಗ: ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತನ್ನು ಸ್ಥಳದಲ್ಲಿಯೇ ಮರೆಯುವಂಥಾ ವ್ಯಕ್ತಿ. ಸ್ವತಂತ್ರ ಭಾರತ ಇಂಥಾ ವಚನ ಭ್ರಷ್ಟ ಪ್ರಧಾನಿಯನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು. ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಧಾನ ಮಂತ್ರಿ ನರೇಮದ್ರ ಮೋದಿ ಅವರು ಆಡಿದ ಮಾತಿನಂತೆ ನಡೆದುಕೊಂಡ ಒಂದೇ ಒಂದು ಉದಾಹರಣೆ ಇಲ್ಲ. ಯುವಕರಿಗೆ ಪ್ರತೀ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದಿದ್ದರು, ವಿದೇಶದಲ್ಲಿರುವ ಕಪ್ಪು ಹಣ ವಾಪಾಸು ತಂದು ಎಲ್ಲರ ಅಕೌಂಟಿಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು, ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಇವುಗಳಲ್ಲಿ ಯಾವುದಾದರೂ ಒಂದನ್ನು ಅವರು ಪೂರ್ತಿ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

ಬಸವಾದಿ ಶರಣರು ಸಮಾಜದಲ್ಲಿ ಬದಲಾವಣೆಯನ್ನು ತರಬೇಕು, ಜಾತಿ ರಹಿತವಾದ ವರ್ಗ ರಹಿತವಾದ ಎಲ್ಲರೂ ಮನುಷ್ಯರಂತೆ ಬಾಳುವ ಸಮಾಜ ನಿರ್ಮಾಣ ಮಾಡಬೇಕೆಂಬ ಕನಸು ಕಂಡಿದ್ದರು, ಆದರೆ ಇಂದೂ ಕೂಡ ಅವರ ಕನಸು ನನಸಾಗಿಲ್ಲ. ಬಸವಾದಿ ಶರಣರ ಕನಸನ್ನು ನನಸು ಮಾಡಬೇಕು ಎಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ಸಂವಿಧಾನ ರಚನೆ ಮಾಡಿ ಸಮಾಜದಲ್ಲಿ ಬದಲಾವಣೆ ತರಲು ಕಾಂಗ್ರೆಸ್‌ ಪಕ್ಷ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇನ್ನು ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ಇದೆ, ಇದನ್ನು ಹೋಗಲಾಡಿಸಬೇಕಿರುವುದು ನಮ್ಮ ನಿಮ್ಮೆಲ್ಲರ ಹೊಣೆ. ಇದೇ ಕಾರಣಕ್ಕೆ 2013ರಲ್ಲಿ ಮೇ 13ರ ಬಸವ ಜಯಂತಿಯ ದಿನವನ್ನೇ ನಾನು ಪ್ರಮಾಣ ವಚನ ಸ್ವೀಕಾರ ಮಾಡಲು ಆಯ್ಕೆ ಮಾಡಿಕೊಂಡೆ. ಪ್ರಮಾಣ ವಚನ ಸ್ವೀಕಾರ ಮಾಡಿ ನೇರವಾಗಿ ಕ್ಯಾಬಿನೆಟ್‌ ಹಾಲ್‌ ಗೆ ತೆರಳಿ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ ಮತ್ತು ಸಾಲಮನ್ನಾ ಯೋಜನೆಗಳ ಜಾರಿಗೆ ಆದೇಶ ನೀಡಿದ್ದೆ. ನಮ್ಮ ಸರ್ಕಾರ ರಾಜ್ಯದಲ್ಲಿ ಸುಮಾರು 2 ಲಕ್ಷ ಕೃಷಿ ಹೊಂಡಗಳನ್ನು ತೋಡಿಸಿತ್ತು ಎಂದು ತಮ್ಮ ಅಧಿಕಾರವಧಿಯ ಅಭಿವೃದ್ಧಿ ಕೆಲಸಗಳನ್ನು ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಕೃಷಿಭಾಗ್ಯ ಯೋಜನೆಯನ್ನು ಈ ಬಿಜೆಪಿ ಸರ್ಕಾರ ನಿಲ್ಲಿಸಿದೆ. ಇಂದು ರೈತರ ಆದಾಯ ದುಪ್ಪಟ್ಟಾಗಿಲ್ಲ, ಬದಲಾಗಿ ರೈತರ ಸಾಲ ದುಪ್ಪಟ್ಟಾಯಿತು ಎಂದು ಆರೋಪಿಸಿದರು.

ಮನಮೋಹನ್‌ ಸಿಂಗ್‌ ಅವರ ಸರ್ಕಾರ ದೇಶದ ರೈತರ 72,000 ಕೋಟಿ ರೂ. ಸಾಲ ಮನ್ನಾ ಮಾಡಿತ್ತು. ನಾನು ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡದೆ ಇದ್ದರೂ ರಾಜ್ಯದ 22 ಲಕ್ಷದ 27 ಸಾವಿರ ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ 50,000 ರೂ. ವರೆಗಿನ ಒಟ್ಟು 8,165 ಕೋಟಿ ಸಾಲ ಮನ್ನಾ ಮಾಡಿದೆ. ರಾಜ್ಯ ಶೋಷಿತ ಜನರು ದೇವರಾಜ ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಮಾಡಿದ್ದ ಸಾಲ ಮನ್ನಾ ಮಾಡಿ ಅವರನ್ನು ಋಣಮುಕ್ತರಾಗಿಸಿದ್ದು ನಮ್ಮ ಸರ್ಕಾರ ಎಂದು ಮಾಹಿತಿ ನೀಡಿದರು.

ನರೇಂದ್ರ ಮೋದಿ ಅವರು ಈಗ ವಾರಕ್ಕೊಮ್ಮೆ ರಾಜ್ಯಕ್ಕೆ ಬರಲು ಆರಂಭ ಮಾಡಿದ್ದಾರೆ. ಹಿಂದೆ ಕೊರೊನಾ ಬಂದಾಗ, ಪ್ರವಾಹ ಬಂದಾಗ ರಾಜ್ಯದ ಕಡೆ ತಲೆಯೂ ಹಾಕಿರಲಿಲ್ಲ, ಚುನಾವಣೆ ಇದೆ ಅಂತ ಬರುತ್ತಿದ್ದಾರೆ. ಕೊರೊನಾ ಇದ್ದಾಗ ನಮ್ಮ ರಾಜ್ಯದ ಆಕ್ಸಿಜನ್‌ ಅನ್ನು ಕಿತ್ತುಕೊಂಡು ಬೇರೆ ರಾಜ್ಯದವರಿಗೆ ನೀಡಲು ಹೊರಟಿದ್ರು, ಅದೃಷ್ಟವಶಾತ್‌ ಸುಪ್ರೀಂ ಕೋರ್ಟ್‌ ನ ಆದೇಶದಿಂದ ನಮ್ಮ ಪಾಲಿನ ಆಕ್ಸಿಜನ್‌ ನಮಗೆ ಸಿಕ್ಕಿತ್ತು. ಇಲ್ಲದಿದ್ದರೆ ಹಾದಿ ಬೀದಿಯಲ್ಲಿ ಜನ ಸಾಯುವಂತಾಗುತ್ತಿತ್ತು ಎಂದು ಹೇಳಿದರು.

ಮನಮೋಹನ್‌ ಸಿಂಗ್‌ ಅವರ ಸರ್ಕಾರದ ನರೇಗಾ ಕಾರ್ಯಕ್ರಮ ಮತ್ತು ನಮ್ಮ ಸರ್ಕಾರದ ಅನ್ನಭಾಗ್ಯ ಯೋಜನೆ ಇಲ್ಲದೆ ಹೋಗಿದ್ದರೆ ಕೊರೊನಾ ಕಾಲದಲ್ಲಿ ಬಡವರು, ಕಾರ್ಮಿಕರು, ದಲಿತರು, ರೈತರು ಹಸಿವಿನಿಂದ ಸಾಯಬೇಕಾಗುತ್ತಿತ್ತು. ನರೇಂದ್ರ ಮೋದಿಜಿ ನೀವು ಜನರನ್ನು ಬದುಕಿಸುವ ಒಂದೇ ಒಂದು ಕಾರ್ಯಕ್ರಮ ಜಾರಿ ಮಾಡಿದ್ದೀರಾ ? ಎಂದು ಪ್ರಶ್ನಿಸಿದರು.

ಜಿ.ಎಸ್‌ ಪಾಟೀಲರಿಗೆ ಮತ ನೀಡಿ

ಇಲ್ಲಿ ನಮ್ಮ ಮತಗಳನ್ನು ಒಡೆಯಲು ಆನೆಕಲ್‌ ದೊಡ್ಡಯ್ಯ ಎಂಬುವವರು ಚುನಾವಣೆಗೆ ನಿಂತಿದ್ದಾರೆ. ಇವರು ನನ್ನ ಹೆಸರು ಹೇಳಿಕೊಂಡು ಮತ ಕೇಳಿದರೆ ಛೀಮಾರಿ ಹಾಕಿ ಕಳಿಸಿ, ನಮ್ಮ ಪಕ್ಷದ ಜಿ.ಎಸ್‌ ಪಾಟೀಲರಿಗೆ ಮತ ನೀಡಿದರೆ ನನಗೆ ಮತ ನೀಡಿದಂತೆ. ಪಾಟೀಲರು ಒಬ್ಬ ಸಜ್ಜನ, ಪ್ರಾಮಾಣಿಕ ವ್ಯಕ್ತಿ, ಇಂಥವರು ವಿಧಾನಸೌಧಕ್ಕೆ ಬರಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಗದಗದ 4ಕ್ಕೆ 4 ಕ್ಷೇತ್ರಗಳಲ್ಲಿ ಗೆಲ್ಲುವ ಎಲ್ಲಾ ಅವಕಾಶ ಇದೆ, ಕ್ಷೇತ್ರದ ಜನರು ಈ ಕೆಲಸವನ್ನು ಮಾಡಿಕೊಟ್ಟರೆ ನಿಮಗೆ ನಾನು ಸದಾ ಋಣಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸ್. ಜಿ. ರಘುರಾಮ್ ಸುಗಮ ಸಂಗೀತ ಕಲಾವಿದ.

Wed Mar 1 , 2023
    ಎಸ್. ಜಿ. ರಘುರಾಮ್ ಸುಗಮ ಸಂಗೀತ ಕಲಾವಿದರಾಗಿ, ಸುಗಮ ಸಂಗೀತ ಅಕಾಡೆಮಿ ಸ್ಥಾಪಕರಾಗಿ, ರಂಗ ಕಲಾವಿದರಾಗಿ, ಬರಹಗಾರರಾಗಿ ಹೀಗೆ ಮಹತ್ವದ ಸಾಧಕರಾಗಿ ಹೆಸರಾಗಿದ್ದವರು.ರಘುರಾಮ್ 1939ರ ಫೆಬ್ರವರಿ 28ರಂದು ಜನಿಸಿದರು. ಬಿ.ಎ, ಬಿಎಡ್ ಮತ್ತು ಬಿ.ಎಲ್. ಅವರ ಶೈಕ್ಷಣಿಕ ಸಾಧನೆಗಳು.ರಘುರಾಮ್ ಗಾಯಕರಾಗಿ, ವಕೀಲರಾಗಿ ಮತ್ತು ಆಕಾಶವಾಣಿ – ದೂರದರ್ಶನ ಜಾಹೀರಾತು ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. 5 ವರ್ಷಗಳ ಕಾಲ ಆಕಾಶವಾಣಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು.ರಘುರಾಮ್ ಸುಗಮ ಸಂಗೀತ ಕಲಾವಿದರಾಗಿ ರಾಜಸ್ಥಾನದ […]

Advertisement

Wordpress Social Share Plugin powered by Ultimatelysocial