ಜಯಲಕ್ಷ್ಮೀ ಶ್ರೀನಿವಾಸನ್

ಜಯಲಕ್ಷ್ಮೀ ಶ್ರೀನಿವಾಸನ್ ತಮಿಳು ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯದ ಮಧ್ಯೆ ಸೇತುವೆಯಾಗಿ ಎರಡೂ ಭಾಷಿಗರಿಗೆ ಅಪಾರ ಸಾಹಿತ್ಯ ಮತ್ತು ಸಾಹಿತ್ಯ ವಿನಿಮಯವನ್ನು ತಂದವರು.
ಜಯಲಕ್ಷ್ಮಿಯವರು ಕರೂರು ಜಿಲ್ಲೆಯ ವಾರಂಗಲ್ಲಲ್ಲಿ 1911ರ ಡಿಸೆಂಬರ್ 12ರಂದು ಜನಿಸಿದರು. ತಂದೆ ರಾಜಮಂತ್ರ ಪ್ರವೀಣ ಎ.ವಿ. ರಾಮನಾಥನ್ ಮೈಸೂರು ಸಂಸ್ಥಾನದ ಮೆಂಬರ್ ಆಫ್ ಕೌನ್ಸಿಲ್ ಆಗಿದ್ದವರು. ತಾಯಿ ಸೀತಾಲಕ್ಷ್ಮೀ. ಇವರ ಮನೆಮಾತು ತಮಿಳಾದ್ದರಿಂದ ಮನೆಯಲ್ಲಿ ತರಿಸುತ್ತಿದ್ದ ತಮಿಳು ಪತ್ರಿಕೆಗಳಿಂದ ತಮಿಳು ಹಾಗೂ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ ಕಲಿತು ಪ್ರಾವೀಣ್ಯತೆ ಪಡೆದರು.
ಜಯಲಕ್ಷ್ಮಿಯವರು ಚಿಕ್ಕ ವಯಸ್ಸಿನಲ್ಲಿಯೇ ಚಿಕ್ಕ ಚಿಕ್ಕ ಪದ್ಯಗಳನ್ನು, ಕಥೆಗಳನ್ನು ರಚಿಸತೊಡಗಿದ್ದು ತಮ್ಮ ಸಾಹಿತ್ಯಾಭಿಲಾಷೆಯನ್ನು ಪ್ರಕಟಿಸಿದ್ದರಿಂದ ತಂದೆ ತಾಯಿಯರು ಮಗಳಿಗೆ ಉತ್ತೇಜನ ನೀಡತೊಡಗಿದರು. ಒಂಬತ್ತನೆಯ ತರಗತಿಯಲ್ಲಿದ್ದಾಗಲೇ ಮದುವೆಯಾದದ್ದು ಐ.ಎ.ಎಸ್. ಅಧಿಕಾರಿಯಾಗಿ ಮೈಸೂರು ಸಂಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆ. ಶ್ರೀನಿವಾಸನ್ ಅವರನ್ನು. ಪತಿಯ ಮನೆಯಲ್ಲಿಯೂ ಸಾಹಿತ್ಯ ಕೃಷಿಗೆ ದೊರೆತ ಪ್ರೋತ್ಸಾಹದಿಂದ ಬರವಣಿಗೆಯನ್ನು ಮುಂದುವರೆಸಿದರು.
ಜಯಲಕ್ಷ್ಮಿ ಶ್ರೀನಿವಾಸನ್ ಅವರು ರಚಿಸಿದ ‘ಗ್ರಾಮೋದ್ಧಾರಕ ರಾಮಚಂದ್ರ’ ಎಂಬ ಕಾದಂಬರಿಯು ಹನುಮಂತೇಗೌಡ ಎಂಬುವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿದ್ದ ‘ಅರ್ಥಸಾಧಕ ಪತ್ರಿಕೆ’ಯಲ್ಲಿ 1929ರಲ್ಲಿ ಪ್ರಕಟಗೊಂಡಿತು. ಇದಲ್ಲದೆ ಬೋಳಾರ ವಿಠಲರಾವ್ ಮತ್ತು ಹುರುಳಿ ಭೀಮರಾವ್‌ರವರು ಪ್ರಕಟಿಸುತ್ತಿದ್ದ ‘ಕಂಠೀರವ’ ಪತ್ರಿಕೆಯಲ್ಲಿ ಎರಡು ಕಾದಂಬರಿಗಳು ಹಾಗೂ ಹಲವಾರು ಸಣ್ಣ ಕಥೆಗಳು ಪ್ರಕಟಗೊಂಡವು. ಜೊತೆಗೆ ಪ್ರಜಾಮತ, ಜನವಾಣಿ, ಸುಬೋಧ, ಜೀವನ, ಸರಸ್ವತಿ, ಕೊರವಂಜಿ, ನಗುವನಂದ ಮುಂತಾದ ಪತ್ರಿಕೆಗಳಲ್ಲೂ ಇವರ ಬರಹಗಳು ಪ್ರಕಟವಾಗತೊಡಗಿದವು.
ಜಯಲಕ್ಷ್ಮಿ ಶ್ರೀನಿವಾಸನ್ ಅವರಿಗೆ ತಮಿಳು ಭಾಷೆಯಲ್ಲೂ ಒಳ್ಳೆಯ ಪಾಂಡಿತ್ಯವಿದ್ದುದರಿಂದ ಕೆ.ಎಸ್. ವೆಂಕಟರಮಣಿಯವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಭಾರತರಮಣ’ ಹಾಗೂ ಕಲ್ಕಿ, ಆನಂದ ವಿಗಡನ್, ವಸಂತಂ, ಭಾರತ, ದೇವಿ, ಚಿಂತಾಮಣಿ, ಜಗನ್ಮೋಹಿನಿ, ಮಂಗೈ, ಕಲೈಮಗಳ್, ಉದಯ, ಕಾವೇರಿ, ಸ್ವದೇಶಿ ಮಿತ್ರನ್ ಮೊದಲಾದ ತಮಿಳು ಪತ್ರಿಕೆಗಳಿಗೂ ಬರೆಯತೊಡಗಿದರು.
ತಮಿಳು ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯದ
ಕೊಂಡಿಯಾಗಿ ಸಾಹಿತ್ಯ ರಚನೆ ಮಾಡಿದ ಜಯಲಕ್ಷ್ಮಿಯವರು ಸಿ.ಕೆ. ವೆಂಕಟರಾಮಯ್ಯ, ಅ.ನ.ಕೃ., ಮಾಸ್ತಿ, ದೇವುಡು, ಜಿ.ಪಿ.ರಾಜರತ್ನಂ ಮುಂತಾದವರ ಕಥೆ, ಲೇಖನ, ಕಾದಂಬರಿಗಳನ್ನು ತಮಿಳಿಗೆ ಅನುವಾದಿಸಿ ಪ್ರಕಟಿಸಿದಂತೆ ತಮಿಳಿನಿಂದ ‘ಕಲಾವಿದನ ತ್ಯಾಗ’, ‘ಬೇವಿನ ಮರದ ಬಂಗಲೆ’ ಮತ್ತು ರಾಜಾಜಿಯವರ ಸಣ್ಣಕಥೆಗಳನ್ನು ಕನ್ನಡಕ್ಕೆ ತಂದರು. ಜೊತೆಗೆ ಇವರದೇ ಕೃತಿ ಗ್ರಾಮೋದ್ಧಾರಕ ರಾಮಚಂದ್ರ, ತಮಿಳಿನ ‘ರಾಮಚಂದ್ರನ್ ರುಕ್ಮಿಣಿ’ಯಾಗಿ ಮತ್ತು ‘ಪುಷ್ಪಹಾರ’ ಕಾದಂಬರಿಯು ತಮಿಳು ಹಾಗೂ ಕನ್ನಡದಲ್ಲೂ ಪ್ರಕಟಗೊಂಡಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಹೆಳವನಕಟ್ಟೆ ಗಿರಿಯಮ್ಮ

Wed Dec 21 , 2022
ಹೆಳವನಕಟ್ಟೆ ಗಿರಿಯಮ್ಮನವರು ಹರಿದಾಸ ಸಾಹಿತ್ಯಲೋಕದಲ್ಲಿ ಕಾಣಬರುವ ವಿಶಿಷ್ಟ ಸಾಹಿತಿ. ಹೆಳವನಕಟ್ಟೆ ಗಿರಿಯಮ್ಮನವರು ಕ್ರಿಶ. 1750ರ ಸುಮಾರಿಗೆ ಜೀವಿಸಿದ್ದರು. ಇವರ ತವರೂರು ಹಾವೇರಿ ಜಿಲ್ಲೆಯ ರಾಣಿಬೆನ್ನೂರು. ತಾಯಿ ತುಂಗಮ್ಮ. ತಂದೆ ಬಿಷ್ಟಪ್ಪ ಜೋಯಿಸರು. ಈ ದಂಪತಿಗಳಿಗೆ ದೀರ್ಘ ಕಾಲದ ನಂತರ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ, ಹೆಣ್ಣು ಮಗುವಿನ ಜನನವಾಯಿತು. ತಿಮ್ಮಪ್ಪನ ಅನುಗ್ರಹದ ಸಂಕೇತವಾಗಿ ಮಗುವಿಗೆ ಗಿರಿಯಮ್ಮ ಎಂದು ಹೆಸರನ್ನಿಟ್ಟರು. ಚಿಕ್ಕಂದಿನಿಂದಲೂ ಗಿರಿಯಮ್ಮ ಸ್ತೋತ್ರಪಾಠಗಳಲ್ಲಿ, ಪೂಜಾಕಾರ್ಯದಲ್ಲಿ ಆಸಕ್ತಳಾಗಿದ್ದಳು. ಈಕೆಗೆ 4 […]

Advertisement

Wordpress Social Share Plugin powered by Ultimatelysocial