ಕೆ. ಪಿ. ರಾವ್

ಕೆ. ಪಿ. ರಾವ್
ಭಾರತೀಯ ಭಾಷೆಗಳು ಕಂಪ್ಯೂಟರಿನಲ್ಲಿ ಬೆಳಕು ಕಾಣುವುದಕ್ಕೆ ಪ್ರಮುಖ ಕೊಡುಗೆದಾರರಾದವರು ನಮ್ಮ ಕನ್ನಡಿಗರಾದ ಕೆ. ಪಿ. ರಾವ್. ಇಂದಿನ ಕಂಪ್ಯೂಟರ್ ಯುಗದಲ್ಲಿ ನಾವು ನೀವುಗಳೆಲ್ಲಾ ಕನ್ನಡದಂತಹ ಭಾಷೆಗಳನ್ನು ಅತ್ಯಂತ ಸುಲಭವಾಗಿ ಉಪಯೋಗಿಸಲು ಸಾಧ್ಯವಾಗಿರುವುದು ಕೆ. ಪಿ. ರಾಯರು ಮಾಡಿದ ಭಗೀರಥ ಪ್ರಯತ್ನದ ದೆಸೆಯಿಂದಾಗಿದೆ.
ಕಿನ್ನಿಕಂಬಳ ಪದ್ಮನಾಭ ರಾವ್ ಅವರು 1940ರ ಫೆಬ್ರುವರಿ 29ರಂದು ಮಂಗಳೂರು ಬಳಿಯ ಕಿನ್ನಿಕಂಬಳ ಗ್ರಾಮದಲ್ಲಿ ಜನಿಸಿದರು. ಕಿನ್ನಿಕಂಬಳದಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ ರಾವ್ ಅವರು ಮುಂದೆ ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ ನಡೆಸಿ 1959ರ ವರ್ಷದಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದರು.
ಮೊದಲಿಗೆ ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್(ಟಿಐಎಫ್‌ಆರ್)ನ ಅಣುಶಕ್ತಿ ವಿಭಾಗದಲ್ಲಿ ಸಂಶೋಧಕರಾಗಿ ಉದ್ಯೋಗ ಪ್ರಾರಂಭಿಸಿದ ಕೆ. ಪಿ. ರಾವ್ ಅವರು 1970ರ ದಶಕದಲ್ಲಿ ಟಾಟಾ ಪ್ರೆಸ್ನಲ್ಲಿ ತಾಂತ್ರಿಕ ನಿರ್ದೆಶಕರಾಗಿದ್ದರು. ಕಂಪ್ಯೂಟರುಗಳು ಅದಾಗ ತಾನೇ ಮುದ್ರಣ ಕ್ಷೇತ್ರಕ್ಕೆ ಕಾಲಿಡತೊಡಗಿದ್ದ ಕಾಲವದು. ಆ ಸಮಯದಲ್ಲಿ ಇರಾವತಂ ಮಹಾದೇವನ್ ಅವರು ಸಿಂಧೂ ಲಿಪಿಯನ್ನು ಅಧ್ಯಯನ ಮಾಡಿ ತಮ್ಮ ಪುಸ್ತಕವನ್ನು ಮುದ್ರಿಸುವ ಇಚ್ಚೆಯಿಂದ ಅಲ್ಲಿಗೆ ಬಂದರು. ಈ ಪುಸ್ತಕಕ್ಕಾಗಿ ಇಂಗ್ಲೀಷಿನ ಅಕ್ಷರಗಳ ಜೊತೆಗೆ ಸಿಂಧೂ ಲಿಪಿಯನ್ನೂ ಮುದ್ರಿಸಲು ಯಂತ್ರಗಳನ್ನು ಸಿದ್ಧಗೊಳಿಸಬೇಕಾದ ಸವಾಲು ಕೆ. ಪಿ. ರಾವ್ ಅವರಿಗೆ ಎದುರಾಯಿತು. ಕೆ. ಪಿ. ರಾವ್ ಅವರ ಸೃಜನಶೀಲ ಪ್ರಯತ್ನದಿಂದಾಗಿ ಸಿಂಧೂ ಲಿಪಿ ಕಂಪ್ಯೂಟರಿನಲ್ಲಿ ಮುದ್ರಣ ಕಂಡ ಪ್ರಥಮ ಭಾರತೀಯ ಲಿಪಿ ಎನಿಸಿತು.
ಕನ್ನಡದ ಬಗ್ಗೆ ಪ್ರೀತಿ ಹೊಂದಿದವರಾದ ಕೆ. ಪಿ. ರಾವ್ ಅವರು ಸಿಂಧೂ ಲಿಪಿಗೆ ಉಪಯೋಗಿಸಿದ ವಿಧಾನವನ್ನೇ ಕನ್ನಡ ಲಿಪಿಗೂ ಬಳಸಿದರಲ್ಲದೆ, ಸಿಂಧೂ ಭಾಷೆಗೆ ಉಪಯೋಗಿಸಿದ ಯಂತ್ರವನ್ನೇ ಬಳಸಿ ಕನ್ನಡ ಮುದ್ರಣ ಕಾರ್ಯದಲ್ಲೂ ಯಶಸ್ಸು ಸಾಧಿಸಿದರು.
ಕೆ. ಪಿ. ರಾವ್ ಅವರು ಸರಳವಾಗಿರುವ ಇಂಗ್ಲಿಷ್ ಲಿಪಿ ಕೀಲಿಮಣೆಗೆ ಕನ್ನಡದಂತಹ ಕ್ಲಿಷ್ಟಭಾಷಾ ಪದ್ಧತಿಯನ್ನು ಸುಲಭವಾಗಿ ಉಪಯೋಗಿಸುವಂತೆ ಅಳವಡಿಸಿರುವುದು ಯಾರಿಗೇ ಆಗಲೀ ಮೆಚ್ಚುಗೆ ತರುವಂತಹ ಶ್ಲಾಘನೀಯ ಕಾರ್ಯವಾಗಿದೆ. ಇದನ್ನೇ ಕನ್ನಡ ಗಣಕ ಪರಿಷತ್ತು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ತನ್ನ ‘ನುಡಿ’ ತಂತ್ರಾಶದಲ್ಲಿ ಅಳವಡಿಸಿಕೊಂಡಿತಲ್ಲದೆ, ಇದೇ ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸವೆಂದೂ ರೂಢಿಗೆ ಬಂತು. ಈ ವಿಶಿಷ್ಟ ಸಾಧನೆ ಇತರ ಭಾಷೆಗಳ ಉಪಯೋಗಕ್ಕೂ ಅನುವುಗೊಂಡಿತು.
ಕೀಲಿಮಣೆ ವಿನ್ಯಾಸ ರೂಪಿಸುವುದರ ಜೊತೆಗೆ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರಿನಲ್ಲಿ ಭಾರತೀಯ ಭಾಷೆಗಳನ್ನು ಮುದ್ರಿಸಲು ಅಗತ್ಯವಾದ ಡಾಟ್‌ಮ್ಯಾಟ್ರಿಕ್ಸ್ ಫಾಂಟುಗಳನ್ನು ಸೃಷ್ಟಿಸಿದವರೂ ಕೆ. ಪಿ. ರಾವ್ ಅವರೇ. ಜೊತೆಗೆ 1986ರ ವರ್ಷದಲ್ಲಿ ಈ ಫಾಂಟುಗಳನ್ನು ಉಪಯೋಗಿಸಲು ಅಗತ್ಯವಾದ ವರ್ಡ್ ಪ್ರೋಸೆಸರ್ ತಂತ್ರಾಶವನ್ನು ಸೃಜಿಸಿ ಅದಕ್ಕೆ ತಮ್ಮ ಗುರುಗಳಾದ ಸೇಡಿಯಾಪು ಕೃಷ್ಣಭಟ್ಟರ ಗೌರವಾರ್ಥ ‘ಸೇಡಿಯಾಪು ತಂತ್ರಾಂಶ’ ಎಂದು ಹೆಸರಿಸಿದರು. ಕಂಪ್ಯೂಟರ್ ಬಳಕೆ ಅಷ್ಟೊಂದು ವ್ಯಾಪಕವಾಗಿಲ್ಲದ ಅಂದಿನ ದಿನಗಳಲ್ಲಿ ‘ಸೇಡಿಯಾಪು ತಂತ್ರಾಂಶ’ ಅತ್ಯಂತ ಮಹತ್ವಪೂರ್ಣದ್ದಾಗಿತ್ತು. ತಮ್ಮ ಈ ಸೃಜನೆಯನ್ನು ಯಾವುದೇ ರೀತಿಯಲ್ಲೂ ವೈಯಕ್ತಿಕ ಲಾಭಕ್ಕೆ ಬಳಸಲಿಚ್ಚಿಸದ ರಾವ್ ಅವರು ಅದನ್ನು ಉಚಿತವಾಗಿ ಹಂಚಿಬಿಟ್ಟರು. ಇಂತಹ ನಿಷ್ಕಾಮ ಕರ್ಮಿ ನಮ್ಮ ಹೆಮ್ಮೆಯ ಕನ್ನಡಿಗರಾದ ಕೆ. ಪಿ. ರಾವ್ ಅವರು.
ಕೆ. ಪಿ. ರಾವ್ ಅವರು ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್‌ಪ್ರೆಸ್ – ಅಡೋಬಿ ಸಿಸ್ಟಂಸ್ ಮುಂತಾದ ಸಂಸ್ಥೆಗಳ ಸಲಹೆಗಾರರಾಗಿ, ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸಹಾ ಕಾರ್ಯ ನಿರ್ವಹಿಸಿದ್ದಾರೆ.
ಕೆ. ಪಿ. ರಾವ್ ಅವರ ಕನ್ನಡ ಕೀಲಿಮಣೆ ವಿನ್ಯಾಸಕ್ಕೆ ‘ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ’ವೆಂಬ ಮಾನ್ಯತೆಯ ಗೌರವ ಸಂದಿದೆ. ತುಳು ಅಕಾಡೆಮಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಿಂದ ಕೆ. ಪಿ. ರಾವ್ ಅವರಿಗೆ ಗೌರವ ಸಮರ್ಪಣೆ ಸಂದಿದೆ. ಆಳ್ವಾಸ್ ನುಡಿಸಿರಿ 2009ರ ಸಾಲಿನ ಸನ್ಮಾನ, 2013ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಕೆ. ಪಿ. ರಾವ್ ಅವರಿಗೆ ಸಂದಿವೆ. ಈ ಮಹನೀಯರು ಇನ್ನೂ ಹೆಚ್ಚಿನ ಗೌರವಗಳಿಗೆ ಖಂಡಿತವಾಗಿ ಅರ್ಹರಿದ್ದು ಅಂತಹ ಗೌರವಗಳೂ ಅವರಿಗೆ ಸಲ್ಲಲ್ಲಿ ಎಂಬುದು ಎಲ್ಲ ಕನ್ನಡಿಗರ ನಿರೀಕ್ಷೆಯಾಗಿದೆ.
ಭಾರತೀಯ ಭಾಷಾ ಕಂಪ್ಯೂಟರ್ ಯುಗದ ಭಗೀರಥರೆನಿಸಿರುವ ಕೆ. ಪಿ. ರಾವ್ ಅವರು ನೀಡಿರುವ ಅನನ್ಯ ಕೊಡುಗೆಗಳಿಗಾಗಿ ಅವರಿಗೆ ನಮಿಸುತ್ತಾ ಜನ್ಮದಿನದ ಶುಭಹಾರೈಕೆಗಳನ್ನು ಸಲ್ಲಿಸೋಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪೂರ್ವ ಚೊಚ್ಚಲ ನಿರ್ದೆಶನದ ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ.

Fri Mar 4 , 2022
ಅಪೂರ್ವ, ವಿಕ್ಟರಿ, ಕೃಷ್ಣ ಟಾಕೀಸ್ ಖ್ಯಾತಿಯ ಅಪೂರ್ವ ಈಗ ನಿರ್ದೇಶಕಿ. ಕನ್ನಡ ಚಿತ್ರರಂಗದ ನಿರ್ದೇಶಕಿಯರ ಸಾಲಿಗೆ ಮತ್ತೊಂದು ಯುವ ನಿರ್ದೇಶಕಿ ಸೇರ್ಪಡೆ. “ಓ ನನ್ನ ಚೇತನ ” ಸ್ಮಾರ್ಟ್ ಪೋನ್ ಜೀವನ ಅನ್ನೊ ಅಡಿ ಬರಹವಿರೋ ಈ ಚಿತ್ರವನ್ನ ಅಪೂರ್ವ, ಇಂದಿನ ಮಕ್ಕಳು ಹಾಗೂ ಸ್ಮಾರ್ಟ್ ಪೋನ್ ವಿಚಾರವನ್ನಿಟ್ಟುಕೊಂಡು ಚಿತ್ರವನ್ನ ನಿರ್ದೇಶಿಸಿದ್ದಾರೆ. ಓ ನನ್ನ ಚೇತನ ಚಿತ್ರಕ್ಕೆ ನಿರ್ದೇಶಕ ಹರಿಸಂತು ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಗುರುಪ್ರಶಾಂತ್ ರೈ ಛಾಯಾಗ್ರಹಣವಿದೆ. […]

Advertisement

Wordpress Social Share Plugin powered by Ultimatelysocial