ಕೈಲಾಶ್ ಸತ್ಯಾರ್ಥಿ ನೊಬೆಲ್ ಶಾಂತಿ ಪುರಸ್ಕೃತರು.

ಕೈಲಾಶ್ ಸತ್ಯಾರ್ಥಿ ಅವರು 1954ರ ಜನವರಿ 11ರಂದು ಮಧ್ಯಪ್ರದೇಶದ ವಿದಿಶಾ ನಗರದಲ್ಲಿ ಜನಿಸಿದರು. ಅವರ ತಂದೆ ಪೋಲೀಸ್ ಪೇದೆಯಾಗಿದ್ದರು.
“ಬಚಪನ್ ಬಚಾವೋ” ಆಂದೋಳನದ ಮೂಲಕ ಸುಮಾರು ಲಕ್ಷ ಮಕ್ಕಳನ್ನು ಜೀತಮುಕ್ತರಾಗಿಸಿರುವ ಕೈಲಾಶ್ ಸತ್ಯಾರ್ಥಿಯವರು ಈ ದೇಶದಲ್ಲಿ ಇದ್ದಾರೆ ಅಂತ ಈ ದೇಶಿಗ ಮಹಾಶಯರಾದ ನಮಗೆ ಗೊತ್ತಾಗಿದ್ದೇ ಅವರಿಗೆ 2014ರಲ್ಲಿ ನೋಬೆಲ್ ಶಾಂತಿ ಪುರಸ್ಕಾರ ಘೋಷಣೆ ಆದಾಗ ಎಂಬುದು ಸುಳ್ಳೇನಲ್ಲ.
ಕೈಲಾಶ್ ಸತ್ಯಾರ್ಥಿ ಅವರು ವಿದಿಶಾದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಹಾಗೂ ಹೈ ವೋಲ್ಟೇಜ್ ಇಂಜಿನಿಯರಿಂಗ್ನಲ್ಲಿ ಪಿಜಿ ಡಿಪ್ಲೋಮಾ ಪೂರೈಸಿದ ಕೆಲ ಸಮಯ ಭೋಪಾಲಿನಲ್ಲಿ ಶಿಕ್ಷಕರಾಗಿ ವೃತ್ತಿ ಮಾಡಿದರು. ನಂತರ ಮಕ್ಕಳ ಕುರಿತಾದ ಹೃದಯಾಂತರಾಳದ ಕರೆಗೆ ಓಗೊಟ್ಟು ತಮ್ಮ 26 ನೇ ವರ್ಷ ವಯಸ್ಸಿನಲ್ಲಿ ಮಕ್ಕಳ ಹಕ್ಕುಗಳ ಹೋರಾಟಕ್ಕೆ ಧುಮುಕಿದರು. ಹೀಗೆ ಧುಮುಕಿದ್ದು ಒಂದು ಕ್ಷಣದಲ್ಲಿ ಘಟಿಸಿದ್ದಲ್ಲ. ಅದರ ಹಿಂದಿನ ಮೊಳಕೆ ಚಿಗುರಿದ್ದು, ಅವರ ಬಾಲ್ಯದಲ್ಲಿ ಸಂಭವಿಸಿದ್ದ ಶುಭ್ರಮನದಲ್ಲಿನ ಫಲವತ್ತತೆಯಲ್ಲಿ.
ಕೈಲಾಶ್ ಸತ್ಯಾರ್ಥಿ ತಮ್ಮ ಬಾಲ್ಯದಲ್ಲಿ ನಿತ್ಯವೂ ಶಾಲೆಗೆ ನಡೆದು ಹೋಗುತ್ತಿದ್ದ ದಿನಗಳವು. ತನ್ನದೇ ಓರಗೆಯ ಹುಡುಗನೋರ್ವ ತನ್ನ ತಂದೆಯೊಡನೆ ಕುಳಿತು ಚಪ್ಪಲಿ ರಿಪೇರಿ ಮಡುತ್ತಿದ್ದುದನ್ನು ಬಾಲಕ ಸತ್ಯಾರ್ಥಿ ದಿನವೂ ಕಾಣುತ್ತಿದ್ದ. ‘ನಾನು ಉತ್ಸಾಹದಿಂದಲೂ ಸಂತೋಷದಿಂದಲೂ ಪ್ರತಿದಿನ ಆಟವಾಡುತ್ತ ಶಾಲೆಗೆ ಹೋಗುತ್ತಿದ್ದರೆ ಈ ಹುಡುಗ ಮಾತ್ರ ತನ್ನ ತಂದೆಯೊಂದಿಗೆ ಕುಳಿತು ಬೂಟು ಹೊಲಿಯುತ್ತಿದ್ದಾನೆ, ಅದೇಕೆ ಹೀಗೆ?’ ಎಂಬ ಚಿಂತನೆ ಬಾಲಕ ಕೈಲಾಶ್ ಸತ್ಯಾರ್ಥಿಯ ಮನದಲ್ಲಿ ಉದ್ಭವಿಸುತ್ತಿತ್ತು. ಅದೇ ಪ್ರಶ್ನೆಯನ್ನು ತನ್ನ ಶಾಲಾ ಉಪಾಧ್ಯಾಯರ ಬಳಿ ಕೇಳಿದಾಗ “ಅವರ ಬಳಿ ಹಣವಿಲ್ಲ, ಅವರು ಬಡವರು. ವಿದ್ಯಾಭ್ಯಾಸ ಪಡೆದುಕೊಳ್ಳಲಿಕ್ಕೆ ಸಾಕಷ್ಟು ಹಣಬಲ ಇಲ್ಲದವರು.” ಎನ್ನುವ ಉತ್ತರ ದೊರಕಿತು.
ಆ ಉತ್ತರದಿಂದ ತೃಪ್ತನಾಗದ ಆ ಬಾಲಕ ಚಪ್ಪಲಿ ಹೊಲಿಯುತ್ತಿದ್ದ ಆ ಹುಡುಗನ ತಂದೆಯನ್ನೇ ನೇರವಾಗಿ ಪ್ರಶ್ನಿಸಿದ “ನೀವೇಕೆ ನಿಮ್ಮ ಮಗನನ್ನು ಶಾಲೆಗೆ ಸೇರಿಸಿಲ್ಲ, ಅವನನ್ನು ಯಾಕೆ ಚಪ್ಪಲಿ ಹೊಲಿಯಲು ಇರಿಸಿಕೊಂಡಿದ್ದೀರಿ?”. ಒಂದು ಕ್ಷಣ ಬಾಲಕ ಸತ್ಯಾರ್ಥಿಯ ಮುಖವನ್ನೇ ದೃಷ್ಟಿಸಿ ನೋಡಿದ ಹುಡುಗನ ಆ ತಂದೆ ನುಡಿದರು. “ಮಗು, ನಾವು ಹುಟ್ಟಿದ್ದೇ ದುಡಿಯಲಿಕ್ಕಾಗಿ, ಶಾಲೆಯಲ್ಲಿ ಕಲಿಯಲಿಕ್ಕಲ್ಲ!”
ಆ ಬಡ ತಂದೆ ಅಂದು ಆಡಿದ ಆ ಮಾತು ಕೈಲಾಶ್ ಸತ್ಯಾರ್ಥಿಯ ಎದೆಯಲ್ಲಿ ನಾಟಿ ಕುಳಿತಿತು. ಮುಂದೆ ತಾನು ಪಡೆದ ಉನ್ನತ ತಾಂತ್ರಿಕ ಶಿಕ್ಷಣವನ್ನೂ, ಅದರಿಂದ ಲಭಿಸಬಹುದಾಗಿದ್ದ ದೊಡ್ಡ ಸಂಬಳದ ವೃತ್ತಿಯನ್ನೂ ತೊರೆದು ದೇಶದಲ್ಲಿನ ಬಾಲ ಕಾರ್ಮಿಕರ ಸಮಸ್ಯೆ ಹಾಗೂ ಬಡ ಮಕ್ಕಳ ಶಿಕ್ಷಣ ಹಕ್ಕಿಗಾಗಿ ಹೋರಾಟ ನಡೆಸುವುದಕ್ಕೆ ಅದು ಕೈಲಾಶ್ ಸತ್ಯಾರ್ಥಿ ಅವರನ್ನು ಪ್ರೇರಿಸಿತು.
1983ರಲ್ಲಿ ತಮ್ಮ ಮಹತ್ವಪೂರ್ಣ ಯೋಜನೆಯಾದ “ಬಚ್ ಪನ್ ಬಚಾವೋ” ಆಂದೋಲನವನ್ನು ಹುಟ್ಟು ಹಾಕಿದ ಸತ್ಯಾರ್ಥಿಯವರು ಮುಂದೆ ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಜೀತ ವಿಮುಕ್ತಗೊಳಿಸಿದ್ದಾರೆ. ತಾವು ತಮ್ಮ ಸಹಚರರ ನೆರವಿನೊಂದಿಗೆ ದೇಶದಲ್ಲಿನ ನೂರಾರು ಕಾರ್ಖಾನೆಗಳು ಮತ್ತು ಗೋದಾಮುಗಳಲ್ಲಿ ನಿಸ್ಸಹಾಯಕರಾಗಿ ಬಂಧಿಗಳಂತೆ ತಮ್ಮ ಬಾಲ್ಯದ ಅರಿವಿಲ್ಲದೆ ಶೋಷಿತರಾಗಿದ್ದ ಮಕ್ಕಳನ್ನು ಸಂರಕ್ಷಿಸಿದ್ದಾರೆ. ಈ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕುವಂತೆ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಂಭ ರಾಶಿ ಭವಿಷ್ಯ (Wednesday, January 11, 2023)

Wed Jan 11 , 2023
ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಹರ್ಷಚಿತ್ತದ ಮನಸ್ಸು ರಾಜ್ಯದ ನೀವು ಬಯಸಿದ ಟಾನಿಕ್ ನೀಡುತ್ತದೆ ಮತ್ತು ನಿಮಗೆ ಆತ್ಮವಿಶ್ವಾಸ ತರುತ್ತದೆ. ನೀವು ಹಣಕಾಸಿನ ಲಾಭ ತರುವ ಅದ್ಭುತವಾದ ಹೊಸ ಕಲ್ಪನೆಗಳನ್ನು ಪ್ರಸ್ತುತಪಡಿಸುತ್ತೀರಿ. ನಿಮಗೆ ತಕ್ಷಣ ಅವಶ್ಯಕತೆಯಿಲ್ಲದ ವಸ್ತುಗಳ ಮೇಲೆ ಹಣ ವೆಚ್ಚ ಮಾಡಿದಲ್ಲಿ ನೀವು ನಿಮ್ಮ ಸಂಗಾತಿಯನ್ನು ಅಸಮಾಧಾನಪಡಿಸುತ್ತೀರಿ. ನೀವು ಇಂದು ನೈಸರ್ಗಿಕ ಸೌಂದರ್ಯದಿಂದ ವಿಸ್ಮಯಗೊಳ್ಳುವ ಸಾಧ್ಯತೆಯಿದೆ. ನಿಮ್ಮ ಸೃಜನಶೀಲತೆ ನಷ್ಟವಾಗಿದೆ ಎಂದು ನಿಮಗನಿಸುತ್ತದೆ ಮತ್ತು ನಿಮಗೆ ನಿರ್ಧಾರಗಳನ್ನು […]

Advertisement

Wordpress Social Share Plugin powered by Ultimatelysocial