ದೇಶ ಕಂಡ ಉತ್ತಮ ರಾಜಕಾರಣಗಳಲ್ಲಿ ಒಬ್ಬರೆಂದು ನನೆನಪಾಗುವವರು ಕೆಂಗಲ್ ಹನುಮಂತಯ್ಯನವರು.

ವಿಧಾನಸೌಧದ ಅಂದಚಂದದ ಹೊರನೋಟ ಕಂಡೊಡನೆ ನೆನಪಾಗುವ ಧೀಮಂತ ವ್ಯಕ್ತಿತ್ವ ಹನುಮಂತಯ್ಯನವರದು. ಸವಿ ನೆನಪನ್ನು ತರುವ ಹಿಂದಿನ ರಾಜಕಾರಣಿಗಳು ಬೆರಳೆಣಿಕೆಯಷ್ಟು ಮಾತ್ರಾ ಎಂಬ ನಿಟ್ಟಿನಲ್ಲಿ ಕೆಂಗಲ್ ಹನುಮಂತಯ್ಯನವರು ಅಮರರೇ ಸರಿ.
ಕೆಂಗಲ್ ಹನುಮಂತಯ್ಯನವರು 1952 ರಿಂದ 1957 ರವರೆಗೆ ಈಗಿನ ಕರ್ನಾಟಕ ರಾಜ್ಯದ ಹಿಂದಿನ ಸ್ವರೂಪವಾದ ಹಳೇ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು.ಕೆಂಗಲ್ ಹನುಮಂತಯ್ಯನವರು 1908ರ ಫೆಬ್ರವರಿ 14ರಂದು ರಾಮನಗರದ ಬಳಿಯ ಲಕ್ಕಪ್ಪನ ಹಳ್ಳಿಯಲ್ಲಿ ಜನಿಸಿದರು. 1930ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಿಂದ ಕಲಾ ಪದವಿಯನ್ನು ಪಡೆದ ಅವರು, 1932ರಲ್ಲಿ ಪುಣೆಯ ಕಾನೂನು ಕಾಲೇಜಿನಿಂದ ಎಲ್ಎಲ್ಬಿ ಪದವಿ ಪಡೆದು, ಅದೇ ವರ್ಷ ಬಾರ್ ಪ್ರವೇಶಿಸಿದರು. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಸಂಘ ಮತ್ತು ಕರ್ನಾಟಕ ಸಂಘಗಳಲ್ಲಿ ಕಾರ್ಯದರ್ಶಿಯಾಗಿ ಕೆಲಸಮಾಡಿ, ಉತ್ಸಾಹಿಯಾಗಿ ದೇಶದ ನಾಯಕರ ಗಮನ ಸೆಳೆದಿದ್ದರು.ಮಹಾತ್ಮಾ ಗಾಂಧಿಯವರಿಂದ ಪ್ರೇರಣೆ ಮತ್ತು ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಿ. ಟಾಂಡನ್ ಅವರ ಮನವೊಲಿಕೆಯ ಮೇರೆಗೆ ಸ್ವಾತಂತ್ರ್ಯಹೋರಾಟಕ್ಕಿಳಿದ ಕೆಂಗಲ್ ಹನುಮಂತಯ್ಯನವರು ಸ್ವಾತಂತ್ರ್ಯ ಚಳವಳಿಯ ವಿವಿಧ ಹೋರಾಟಗಳಲ್ಲಿ ಮುಂದೆ ನಿಂತು ಒಂಬತ್ತು ಬಾರಿ ಬಂಧನಕ್ಕೊಳಗಾದರು.ದೇಶಕ್ಕೆ ಸ್ವಾತಂತ್ರ್ಯ ಬರುವ ವೇಳೆಗೆರಾಜಕಾರಣದಲ್ಲಿ ಹೆಸರಾಗಿದ್ದ ಕೆಂಗಲ್ ಹನುಮಂತಯ್ಯವರನ್ನು 1948ರಲ್ಲಿ ಒಮ್ಮತದಿಂದ ‘ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ’ರನ್ನಾಗಿ ಆರಿಸಲಾಯಿತು. ಭಾರತ ಸರಕಾರದ ಸಂಸತ್ತಿನ ಸದಸ್ಯರಾಗಿಯೂ ಅವರು ಪರಿಗಣಿತರಾದರು. ರಾಜ್ಯಗಳಿಗೆ ಅನ್ವಯವಾಗುವ ಕರಡು ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಅವರು ಒಕ್ಕೂಟ ವ್ಯವಸ್ಥೆಗೆ ಮಹತ್ವದ ಚಿಂತನೆಗಳನ್ನು ನೀಡಿದವರೆಂದು ತಜ್ಞರಿಂದ ಶ್ಲಾಘಿಸಲ್ಪಟ್ಟರು.
1952 ವರ್ಷದಲ್ಲಿ ಮೊದಲ ಸಾರ್ವಜನಿಕ ಚುನಾವಣೆಗಳಲ್ಲಿ ಜಯಗಳಿಸಿದ ಕಾಂಗ್ರೆಸ್,ಮೈಸೂರು ರಾಜ್ಯಕ್ಕೆ ಕೆಂಗಲ್ ಹನುಮಂತಯ್ಯನವರನ್ನು ಮುಖ್ಯಮಂತ್ರಿಗಳನ್ನಾಗಿ ಆರಿಸಿತು. ಗ್ರಾಮೀಣ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯ ನಿಟ್ಟಿನಲ್ಲಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಗಣನೀಯ ಕಾರ್ಯವನ್ನು ಮಾಡಿದರು.ವಿದೇಶಿ ನಿಯೋಗವೊಂದರ ಜೊತೆ ನಗರ ಪ್ರದಕ್ಷಿಣೆ ಕೈಗೊಂಡ ಸಮಯದಲ್ಲಿ ಭಾರತೀಯ ಕಲಾವಂತಿಕೆಯನ್ನು ತೋರುವ ಯಾವುದೇ ಸ್ಮಾರಕ ಇಲ್ಲಿಲ್ಲವೆ ಎಂಬ ಮಾತು ಕಿವಿಗೆ ಬಿದ್ದ ಕೆಂಗಲ್ ಹನುಮಂತಯ್ಯನವರಿಗೆ ಮನದಲ್ಲಿ ಮೂಡಿದ ಭಾವವೇ ಭವ್ಯವಾಗಿ ಮೈದೆಳೆದ ಬೆಂಗಳೂರು ವಿಧಾನಸೌಧ. ಅಂದಿನ ಭಾರತದಲ್ಲಿ ಇದು ಅತಿ ದೊಡ್ಡದಾದ ಶಾಸಕಾಂಗ ಮತ್ತು ಆಡಳಿತ ಕಚೇರಿಯ ಕಟ್ಟಡವೆನಿಸಿತು. ಕರ್ನಾಟಕ ಏಕೀಕರಣದ ಕನಸಾದ ಕನ್ನಡ ಮಾತನಾಡುವ ಪ್ರದೇಶಗಳು ಒಂದೇ ರಾಜ್ಯವಾಗಿ ಮೂಡುವಲ್ಲಿ ಕೆಂಗಲ್ ಹನುಮಂತಯ್ಯನವರು ಮಹತ್ವದ ಪಾತ್ರವಹಿಸಿದರು.1956ರಲ್ಲಿ ಕರ್ನಾಟಕ ಏಕಿಕರಣಗೊಳ್ಳುವುದಕ್ಕೆ ಸ್ವಲ್ಪ ಮುಂಚಿತವಾಗಿ ಮುಖ್ಯಮಂತ್ರಿ ಪದತ್ಯಾಗ ಮಾಡಿದ ಕೆಂಗಲ್ ಹನುಮಂತಯ್ಯನವರು ರಾಷ್ಟ್ರ ರಾಜಕಾರಣಕ್ಕೆ ಬಂದರು. 1962ರಿಂದ ಮೊದಲುಗೊಂಡು 1977ಕ್ಕೆ ಮುಂಚಿನ ಎಲ್ಲ ಚುನಾವಣೆಗಳಲ್ಲಿ ಬೆಂಗಳೂರು ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದ ಅವರು ಕೈಗಾರಿಕೆ, ರೈಲ್ವೇ ಮುಂತಾದ ಹಲವಾರು ಖಾತೆಗಳ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದರು.1977ರಲ್ಲಿ ದೇಶದಲ್ಲಿ ಜನತಾ ಪಕ್ಷಕ್ಕೆ ಸಂದ ಗೆಲುವಿನ ಗಾಳಿಯಲ್ಲಿ ಅವರು ಜಸ್ಟಿಸ್ ಕೆ.ಎಸ್. ಹೆಗಡೆ ಅವರ ವಿರುದ್ಧ ಚುನಾವಣೆಯಲ್ಲಿ ಸೋಲುಂಡರು.ಕೆಂಗಲ್ ಹನುಮತಯ್ಯನವರು ಈ ಲೋಕಕ್ಕೆ ವಿದಾಯ ಹೇಳಿದ್ದು 1980ರ ಡಿಸೆಂಬರ್ 1 ರಂದು. ಈ ಮಹಾನ್ ಚೇತನಕ್ಕೆ ನಮನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಪ್ಪು ನೋಡದೆ ಬಂದೆಯಾ ನನ್ನ ತಂದೆಯೆ

Fri Feb 18 , 2022
ಅಪ್ಪ ತಿರುವೆಂಗಳೇಶನೆ ನಿರ್ದೋಷನೆ ಆಪಾದಮೌಳಿ ಎನ್ನೊಳು ಅಘ ಬಹಳ ಶ್ರೀಪತಿ ಕ್ಷಮಿಸಿ ಕಾಯಿದೆಯ ಉದಧಿಶಯ್ಯಾ ಜಗದಘಹರನೆಂಬುದು ನಿನ್ನ ಬಿರುದು ತ್ರಿಗುಣಾತೀತನೆ ರಾಮನೆ ಗುಣಧಾಮನೆ ಇನ್ನೆನ್ನ ಕಲುಷವಾರಿಸೊ ಭವತಾರಿಸೊ ಪ್ರಸನ್ನ ವೆಂಕಟರಮಣ ಭಯಶಮನ ಸಾಹಿತ್ಯ: ಪ್ರಸನ್ನ ವೆಂಕಟದಾಸರು ನಮ್ಮ ಸಂಗೀತದ ಅಗಾಧತೆಯ ಭೀಮಸೇನರ ಈ ಹಾಡು ನಾವು ಸುಖಿಸುವುದಕ್ಕೆ ಆಪ್ತವಾಗಿದೆ. ನಾವೆಷ್ಟು ತಪ್ಪು ಮಾಡಿದ್ದರೂ ನಮ್ಮನ್ನು ಸಲಹುವ ಆ ಕರುಣಾಳುವಿನ ದಿವ್ಯ ಲೋಕದಲ್ಲಿ ನಮ್ಮನ್ನು ವಿಹಾರಕ್ಕೆ ಕೈ ಹಿಡಿದು ಸಂಚರಿಸುವ ಸುಂದರ […]

Advertisement

Wordpress Social Share Plugin powered by Ultimatelysocial