ಕೊಡಗಿನ ಗೌರಮ್ಮನವರು ಕನ್ನಡದ ಮಹತ್ವದ ಕತೆಗಾರ್ತಿ.

ಕೊಡಗಿನ ಗೌರಮ್ಮನವರು 1912ರ ಮಾರ್ಚ್ 5ರಂದು ಜನಿಸಿದರು. ಗೌರಮ್ಮನವರು ಮಡಿಕೇರಿಯ ಕಾನ್ವೆಂಟ್ನಲ್ಲಿ ಎಸ್ಎಸ್ಎಲ್ಸಿ ವರೆಗೆ ಓದಿದ್ದರು. ಆಧುನಿಕ ಮನೋಭಾವದ ಗೌರಮ್ಮನವರು ಈಜುತ್ತಿದ್ದರು ಮತ್ತು ಟೆನ್ನಿಸ್ ಆಡುತ್ತಿದ್ದರು. ಅವರಿಗೆ ಆ ಕಾಲದ ಹಲವಾರು ಹಿರಿಯ ಕಿರಿಯ ಸಾಹಿತಿಗಳೊಂದಿಗೆ ಒಡನಾಟವಿತ್ತು. ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆಯುತ್ತಿದ್ದ ಪದ್ಮಾವತಿ ರಸ್ತೋಗಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿ ಆರ್. ಕಲ್ಯಾಣಮ್ಮ, ಮಾಸ್ತಿ, ಬೇಂದ್ರೆ, ಶಿವರಾಮಕಾರಂತರ ಪರಿಚಯ ಇವರಿಗಿತ್ತು.
ಸ್ವಾತಂತ್ರ್ಯ ಚಳವಳಿಯಿಂದ ಪ್ರಭಾವಿತರಾಗಿದ್ದ ಗೌರಮ್ಮ ಗಾಂಧಿ ಭಕ್ತೆಯಾಗಿದ್ದು ಖಾದಿ ಬಟ್ಟೆ ತೊಡುತ್ತಿದ್ದರು. ತಾವಿದ್ದ ಮಡಿಕೇರಿಗೆ ಗಾಂಧಿ ಬರುವರೆಂದು ತಿಳಿದು ಅವರನ್ನು ತನ್ನ ಮನೆಗೇ ಕರೆಸಿಕೊಳ್ಳಬೇಕೆಂದು ಉಪವಾಸ ಕುಳಿತ ಛಲವಂತೆ ಈಕೆ. ವಿಷಯ ತಿಳಿದು ಆಕೆಯ ಪ್ರೀತಿಗೆ ಓಗೊಟ್ಟ ಗಾಂಧಿ ಗೌರಮ್ಮನವರ ಮನೆಗೆ ಬಂದು ಆಕೆಗೆ ಕಿತ್ತಲೆ ಹಣ್ಣು ಕೊಟ್ಟು ಆಕೆಯನ್ನು ಉಪವಾಸದಿಂದ ಬಿಡುಗಡೆ ಮಾಡಿದರು.
ಗಾಂಧಿಯವರ ಆಗಮನದಿಂದ ಧನ್ಯತೆ ಅನುಭವಿಸಿದ ಗೌರಮ್ಮ ಮಂಗಳಸೂತ್ರವೊಂದನ್ನುಳಿದು ತನ್ನಲ್ಲಿದ್ದ ಒಡವೆಗಳನ್ನೆಲ್ಲಾ ಗಾಂಧಿಗೆ ಧಾರೆಯೆರೆದು ಕೊಟ್ಟರಂತೆ. ಅವರ ಬಳಿಯೇ ನಿಂತಿದ್ದ ಗೌರಮ್ಮನವರ ಪತಿಯನ್ನು ಗಾಂಧಿ, ‘ಈಕೆ ಒಡವೆ ಕೊಡಬೇಕೆನ್ನುವುದು ಸ್ವಬುದ್ಧಿಯೋ ಹ್ಯಾಗೆ?’ ಎಂದು ಕೇಳಿದರಂತೆ. ಆ ತರುಣ ಪತಿ, ‘ಆಕೆಯ ಸ್ವಬುದ್ಧಿಯಿಂದಲೇ. ಅದಕ್ಕೆ ನನ್ನ ಒಪ್ಪಿಗೆಯೂ ಇದೆ’ ಎಂದರಂತೆ. ಈಗ ಕೊಟ್ಟ ಒಡವೆಗಳನ್ನು ಮತ್ತೆ ಮುಂದೆ ಮಾಡಿಸಿಕೊಳ್ಳುವುದಿಲ್ಲವೆಂದು ಆಕೆ ಗಾಂಧೀಜಿಗೆ ಹೇಳಿದರಂತೆ. ಈ ಪ್ರಸಂಗವನ್ನು ಗಾಂಧಿ ತಮ್ಮ ಹರಿಜನ ಪತ್ರಿಕೆಯಲ್ಲಿ ಬರೆದಿದ್ದಾರೆ. ಆಗ ಗೌರಮ್ಮನವರಿಗೆ 21 ವರ್ಷ ವಯಸ್ಸು.
ಭಾರತಿಸುತ, ಮುಳಿಯ ತಿಮ್ಮಪ್ಪಯ್ಯ ಹಾಗೂ ದ.ಬಾ. ಕುಲಕರ್ಣಿಯವರು ಗೌರಮ್ಮನವರ ಕೆಲವು ಕತೆಗಳನ್ನು ಮೆಚ್ಚಿದ್ದರು. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಲಯದ ಚರ್ಚೆಗಳೊಂದಿಗೆ ಈಕೆ ಹೊಂದಿದ್ದ ಸಂಪರ್ಕ ಅವರ ಬರವಣಿಗೆಗೆ ಹೆಚ್ಚು ಕಸುವನ್ನು ತುಂಬಿತು. ದೂರದ ಜಮಖಂಡಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಮಡಿಕೇರಿಯಲ್ಲಿ ನಡೆದ ಐತಿಹಾಸಿಕ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮಹಿಳೆ ಈಕೆ.
ಗೌರಮ್ಮನವರು ತಮ್ಮ ಸಾಹಿತ್ಯಾಭಿವ್ಯಕ್ತಿಗೆ ಸಣ್ಣ ಕಥೆಗಳ ರೂಪವನ್ನು ಆರಿಸಿಕೊಂಡರು.
ಅವರ ಎಲ್ಲ ಕಥೆಗಳಲ್ಲೂ ಒಂದು ರೀತಿಯ ಸ್ತ್ರೀ ಪರವಾದ ವೈಚಾರಿಕ ನೆಲೆಗಟ್ಟಿದೆ.
ಪ್ರೇಮವಿಲ್ಲದ ಮದುವೆ ಮದುವೆಯೇ ಅಲ್ಲವೆಂದು ಹಲುಬುವ ‘ಒಂದು ಚಿತ್ರ’ದ ಕಥೆಯ ರೋಹಿಣಿ; ‘ಮರದ ಬೊಂಬೆ’ ಕಥೆಯಲ್ಲಿನ ಬೋರ್ಡಿಂಗ್ ಸ್ಕೂಲಿನ ಹುಡುಗಿ ಶೈಲಾ ತನ್ನ ಮೇಷ್ಟರನ್ನು ಮದುವೆಯಾಗುವುದು; ತಮ್ಮ ವಿವಾಹ ಅಸಾಧ್ಯವೆನಿಸಿದಾಗ ಪ್ರೇಮಿಯ ಕತ್ತಿಗೆ ಜೀವ ಕೊಡುವ ‘ಅಪರಾಧಿ ಯಾರು?’ ಕತೆಯ ಲತೀಫಾ; ತಂದೆಯ ಮನಸ್ಸಿಗೆ ವಿರುದ್ಧವಾಗಿ ತಾನು ಪ್ರೇಮಿಸಿದವಳನ್ನು ಮದುವೆಯಾಗುವ ‘ಪ್ರಾಯಶ್ಚಿತ್ತ’ ಕಥೆಯ ಮೂರ್ತಿ; ‘ಸಂನ್ಯಾಸಿ ರತ್ನ’ ಕತೆಯಲ್ಲಿ ಪ್ರೀತಿಸಿ ಮದುವೆಯಾಗುವ ರತ್ನ ಮತ್ತು ವಾಣಿ; ಸೀತೆ ಮತ್ತು ರಾಜ – ಇವರೆಲ್ಲಾ ವಿವಾಹ ವ್ಯವಸ್ಥೆಗೆ ಪ್ರೀತಿಯನ್ನು ತುಂಬಿ ಗಂಡು ಹೆಣ್ಣಿನ ಸಂಬಂಧದ ಅರ್ಥವನ್ನು ಹೆಚ್ಚು ವ್ಯಾಪಕಗೊಳಿಸುತ್ತಾರೆ.
ಗೌರಮ್ಮನವರು ರಚಿಸಿರುವ ಬಹುಪಾಲು ಕಥೆಗಳು ಪತ್ರಗಳ ರೂಪದಲ್ಲಿವೆ. ಇಲ್ಲವೆ, ಕೆಲವು ಪತ್ರಗಳು ಕಥೆಯ ಒಡಲಲ್ಲಿ ತೂರಿಕೊಂಡು ಬಂದಿವೆ. ಅದು ಪ್ರೇಮಪತ್ರ ಅಥವಾ ಆತ್ಮ ನಿವೇದನೆಯೇ ಇರಲಿ ಅಥವಾ ಆತ್ಮಹತ್ಯೆಯ ಟಿಪ್ಪಣಿಯೇ ಆಗಿರಲಿ ಎಲ್ಲವೂ ಪತ್ರಗಳ ಒಕ್ಕಣೆಯಲ್ಲಿ ಚಿತ್ರಿತವಾಗಿವೆ. ವಿದ್ಯಾವಂತ ಯುವಕ ಯುವತಿಯರಿಂದ ಹಿಡಿದು ವೇಶ್ಯೆ ರಾಜಮ್ಮನವರೆಗೂ ಎಲ್ಲರೂ ಪತ್ರರಚನೆಯನ್ನೇ ತಮ್ಮ ಭಾವನೆಗಳ ಮಾಧ್ಯಮವನ್ನಾಗಿ, ನಿವೇದನೆಗೆ ವಾಹಕವನ್ನಾಗಿ ಮಾಡಿಕೊಂಡಿದ್ದಾರೆ.
ಪತ್ರಗಳಂತೆ ಗೌರಮ್ಮ ಬಳಸಿರುವ ಮತ್ತೊಂದು ತಂತ್ರವೆಂದರೆ ಪತ್ರಿಕೆಗಳ ಸುದ್ದಿಗಳು. ಗಂಡು ಹೆಣ್ಣಿನ ಸಂಬಂಧದಿಂದ ಉದ್ಭವಿಸಿರುವ ಸಮಸ್ಯೆಗಳು ಕೌಟುಂಬಿಕ ನೆಲೆಯಲ್ಲಿ ಸಿದ್ಧವಾದದ್ದಾದರೂ, ಅದು ಕೇವಲ ಖಾಸಗಿ ಸಮಸ್ಯೆಯಾಗಿ ಉಳಿಯದೆ, ಗೌರಮ್ಮನವರ ಕಥೆಗಳಲ್ಲಿ ಸಾಮಾಜಿಕ ಆಯಾಮವನ್ನು ಪಡೆಯುತ್ತವೆ.
ಬಾಲ ವಿಧವೆ ಶಾಂತೆ ಹುಸಿ ಆಶ್ವಾಸನೆ ತೋರಿಸಿದ ಅತ್ತಿಗೆಯ ಅಣ್ಣನ ಚಲ್ಲಾಟದಿಂದ ಗರ್ಭಧರಿಸಿ, ಅವನು ಕೈಬಿಟ್ಟಾಗ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ (ಒಂದು ಪುಟ್ಟ ಚಿತ್ರ). ಪಂಡಿತನ ಮಗಳು ಪಾರ್ವತಿ, ತಾನು ಮನೆಗೆಲಸ ಮಾಡುತ್ತಿದ್ದ ಮನೆಯ ಒಡೆಯನಿಂದಲೇ ಅತ್ಯಾಚಾರಕ್ಕೊಳಗಾಗಿ, ಅವನಿಂದಲೇ ಮನೆಯಿಂದ ಹೊರಗೆ ದಬ್ಬಲ್ಪಟ್ಟಾಗ, ಬೇಸರದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ.
ಈ ದುರಂತದಿಂದ ಅವಳನ್ನು ಪಾರು ಮಾಡಿ ನೆರಳು ಕೊಟ್ಟವರ ಇಚ್ಛೆಯಂತೆ, ಶಾಶ್ವತ ರಕ್ಷಣೆಗಾಗಿ ಮುಸಲ್ಮಾನ ಧರ್ಮ ಸ್ವೀಕರಿಸುತ್ತಾಳೆ. (ಅಪರಾಧಿ ಯಾರು?) ಕಾನ್ವೆಂಟಿನಲ್ಲಿ ಓದುತ್ತಿದ್ದ ಬಾಲಕಿ ಪ್ರಭಾ ಕುಮಾರಿ ತನ್ನ ಪ್ರಣಯಿಯ ಸಾವಿನಿಂದ ಹತಾಶಳಾಗಿ, ಶಾಲೆ ಬಿಟ್ಟು ಯಾರಿಗೂ ಹೇಳದೆ ಹೊರಟು ಹೋಗುತ್ತಾಳೆ. (ಕೆಲವು ಕಾಗದಗಳು) ಬಡತಂದೆಯ ಮಗಳಾಗಿ ವರದಕ್ಷಿಣೆ ಕೊಡಲಾಗದ್ದರಿಂದ ತನ್ನ ತಂದೆಯ ವಯಸ್ಸಿನ ಮುದುಕನ ಮೂರನೆಯ ಹೆಂಡತಿಯಾಗಲು ಒಪ್ಪದೆ ಶಾಂತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. (ಆಹುತಿ) ಇವೆಲ್ಲಾ ವಾರ್ತಾಪತ್ರಿಕೆಗಳಲ್ಲಿ ಸುದ್ದಿಯ ತುಣುಕುಗಳಾಗಿ ಕಾಣಿಸಿಕೊಳ್ಳುತ್ತವೆ. ಹೆಣ್ಣು ಅನುಭವಿಸುವ ವರದಕ್ಷಿಣೆಯ ಸಮಸ್ಯೆಯಿರಲಿ, ಪ್ರಣಯ ಭಂಗವಿರಲಿ, ಅತ್ಯಾಚಾರವಿರಲಿ, ವಿವಾಹೇತರ ಸಂಬಂಧದ ಪರಿಣಾಮವಿರಲಿ, ಎಲ್ಲ ಸಮಸ್ಯೆಗಳಿಗೂ ಸಾಮಾಜಿಕ ಆಯಾಮಗಳಿವೆಯೆಂಬುದನ್ನು ಕತೆಗಾರ್ತಿ ಈ ತಂತ್ರದ ಮೂಲಕ ಸೂಚಿಸುತ್ತಾರೆ.
ಲಿಂಗ ಅಸಮಾನತೆಯನ್ನು ಹೆಚ್ಚು ನಿಖರವಾಗಿ ಮತ್ತು ಕಲಾತ್ಮಕವಾಗಿ ಅಭಿವ್ಯಕ್ತಿಸಿದ ಲೇಖಕಿಯರಲ್ಲಿ ಗೌರಮ್ಮ ವಿಶಿಷ್ಟ ಸ್ಥಾನ ಪಡೆಯುತ್ತಾರೆ. ಗೌರಮ್ಮನವರ ಮೊಟ್ಟ ಮೊದಲ ಕಥೆ ‘ಪುನರ್ವಿವಾಹ’ದಲ್ಲಿ ವಿಧುರನೊಬ್ಬ ಮಡದಿ ಸತ್ತು ಆರು ತಿಂಗಳಾಗಿರದಿದ್ದರೂ ತಾನು ಮೋಹಿಸಿದ ಹುಡುಗಿಯನ್ನು ಮದುವೆಯಾಗಲು ಇಚ್ಛಿಸುತ್ತಾನೆ. ಆದರೆ ಆ ಹುಡುಗಿ ವಿಧವೆಯೆಂಬ ನಿಜ ಸ್ಥಿತಿ ಅರಿವಾದೊಡನೆ ಅವಳನ್ನು ಮದುವೆಯಾಗಲು ತಿರಸ್ಕರಿಸುತ್ತಾನೆ. ಗೌರಮ್ಮನ ಮೊದಲ ಪ್ರಯತ್ನವೇ ಇದಾದರೂ ಈ ಕತೆಯಲ್ಲಿ ಚಿತ್ರಿಸಲ್ಪಟ್ಟ ಬಾಲೆ ‘ರಾಜಿ’ ತುಂಬಾ ಗಟ್ಟಿಪಾತ್ರವಾಗಿ ಮೂಡಿಬಂದಿದೆ.
‘ಅಪರಾಧಿ ಯಾರು?’ ಕಥೆಯಲ್ಲಿ ತನ್ನದಲ್ಲದ ತಪ್ಪಿಗೆ ಬಹಿಷ್ಕೃತಳಾಗಿ, ಶಿಕ್ಷೆ ಅನುಭವಿಸಿ, ರಕ್ಷಣೆ ಕೋರಿ ಮುಸ್ಲಿಂ ಮತಕ್ಕೆ ಸೇರಿಕೊಂಡರೂ ಸಮಾಜ ನಿಂದಿಸುವುದು ಮುಸ್ಲಿಮಳಾದ ಪಾರ್ವತಿಯನ್ನೇ ಹೊರತು ಅಂತಹದೊಂದು ಸ್ಥಿತಿಗೆ ಅವಳನ್ನು ದೂಡಿದ ನಾಗೇಶರಾಯರನ್ನಲ್ಲ. ಈ ರೀತಿ ಸಮಾಜದ ದ್ವಿಸ್ತರ ನೀತಿಯನ್ನು ಪ್ರಶ್ನಿಸುವ ಕತೆಗಾರ್ತಿ, ಅದಕ್ಕೆ ಉತ್ತರವನ್ನು ಓದುಗರೇ ನಿರ್ಧರಿಸಲು ಶೀರ್ಷಿಕೆಯಲ್ಲಿ ‘ಅಪರಾಧಿ ಯಾರು?’ ಎಂದು ಪ್ರಶ್ನೆ ಹಾಕುತ್ತಾರೆ.
ಈ ಲಿಂಗ ಅಸಮಾನತೆಗಿರುವ ವರ್ಗನೆಲೆಯನ್ನೂ ಗೌರಮ್ಮ ಗ್ರಹಿಸದೇ ಬಿಟ್ಟಿಲ್ಲ. ‘ಅವಳ ಭಾಗ್ಯ’ ಕಥೆಯಲ್ಲಿ ಗುಮಾಸ್ತರ ಕುರೂಪಿ ಮಗಳು ಪಾರೂಗೆ ಹೆಚ್ಚು ಖರ್ಚಿಲ್ಲದೆ ಕ್ಷಯರೋಗಿ ವರನೊಂದಿಗೆ ಮದುವೆಯಾಗುತ್ತದೆ. ಇದನ್ನು ದೊಡ್ಡ ವರವೆಂದೇ ಭಾವಿಸುವ ಜಮೀನ್ದಾರರ ಪುತ್ರಿಗೆ ‘ನಿಜವಾಗಿಯೂ ಪಾರು ಭಾಗ್ಯಶಾಲಿನಿ’ ಎಂದೆನಿಸುತ್ತದೆ. ಆದರೆ ಕತೆಗಾರ್ತಿ ಇಲ್ಲಿ ಚುಚ್ಚುವ ವ್ಯಂಗ್ಯದಿಂದ ಕತೆಯನ್ನು ಅಂತ್ಯಗೊಳಿಸುತ್ತಾರೆ: ‘ಜಮೀನ್ದಾರರ ಏಕಮಾತ್ರ ಪುತ್ರಿ, ಡಾಕ್ಟರರ ಹೆಂಡತಿಯು ಉಂಡುಡಲು ಬೇಕಾದಷ್ಟಿರುವಾತ ಮದುವೆಯಾದುದನ್ನು ನೋಡಿ ಅವಳ ಭಾಗ್ಯ ಎಂದು ತಿಳಿದುಕೊಂಡರೆ ತಪ್ಪೇನು ಹೇಳಿ?’ ಎಂದು ಓದುಗರನ್ನೇ ಪ್ರಶ್ನಿಸುತ್ತಾರೆ.
ಗೌರಮ್ಮನವರ ಹೆಣ್ಣಿನ ಸೌಂದರ್ಯದ ಪರಿಕಲ್ಪನೆ ಕುತೂಹಲಕಾರಿಯಾದುದು, ಹಾಗೆಯೇ ವಿಶಿಷ್ಟವಾದುದು ಕೂಡ. ಇವರ ಕತೆಗಳಲ್ಲಿ ಬರುವ ಬಹುಪಾಲು ಸ್ತ್ರೀ ಪಾತ್ರಗಳು ಸುಂದರಿಯರಲ್ಲ. ಅಂದರೆ ಸಾಂಪ್ರದಾಯಿಕವಾದ ಸ್ತ್ರೀ ಸೌಂದರ್ಯ ವರ್ಣನೆಗಳಿಂದ ಕಂಗೊಳಿಸುವುದಿಲ್ಲ. ದೈಹಿಕ ಸೌಂದರ್ಯಕ್ಕಿಂತ ಹೆಚ್ಚಾಗಿ ಆ ಪಾತ್ರಗಳ ಹೃದಯ ಸಂಪನ್ನತೆ, ಅನುಪಮವಾದ ನಡವಳಿಕೆ, ಕಲಾ ಸಂಪನ್ನತೆಗಳೇ ಮೆಚ್ಚಿನ ಅಂಶಗಳಾಗಿ ಮೂಡಿಬರುತ್ತದೆ. ಮನುಷ್ಯನ ಅಂತರಾಳದಲ್ಲಿ ಹುದುಗಿರುವ ಇಂತಹ ಮಾನವೀಯ ಅಂಶಗಳ ಕಡೆಗೆ ಹೆಚ್ಚು ಗಮನ ಕೊಡುವುದು ಕಥೆಯ ವೈಚಾರಿಕತೆಯ ನಿಲುವೂ ಆಗುತ್ತದೆ. ‘ವಾಣಿಯ ಸಮಸ್ಯೆ’, ‘ಅವಳ ಭಾಗ್ಯ’, ‘ಪ್ರಾಯಶ್ಚಿತ್ತ’, ‘ಹೋಗಿಯೇ ಬಿಟ್ಟಿದ್ದ’, ‘ಯಾರು?’, ‘ಅದೃಷ್ಟದ ಆಟ’ – ಈ ಕತೆಗಳ ಮುಖ್ಯ ಸ್ತ್ರೀ ಪಾತ್ರಗಳೆಲ್ಲಾ ಸಾಮಾನ್ಯ ಹೆಂಗಸರು; ಇಲ್ಲವೆ ಇದ್ದಿಲಿನ ಮೈಬಣ್ಣದ, ಚಪ್ಪಟೆ ಮೂಗಿನ ‘ರಮಣೀಯರು’. ‘ಅವಳ ಭಾಗ್ಯ’ ಕತೆಯಲ್ಲಿ ಪಾತ್ರವೊಂದು ಹೇಳುವ ಮಾತುಗಳು ಒಟ್ಟು ಕತೆಗಾರ್ತಿಯ ಜೀವನ ದೃಷ್ಟಿಯನ್ನೇ ಬಿಚ್ಚಿಡುತ್ತದೆ:
ಗೌರಮ್ಮನವರ ಮೊದಲ ಕತೆ ಪ್ರಕಟವಾದದ್ದು 1931ರಲ್ಲಿ. ಕತೆಯ ಹೆಸರು ‘ಯಾರು ….?’ಅದು ಪತಿಯಿಂದ ಪರಿತ್ಯಕ್ತೆಯಾದ ಹುಡುಗಿಯೊಬ್ಬಳು ಅಳುತ್ತಾ ಕೂರದೆ, ಕಲಾವಿದೆಯಾಗಿ ಸಿನಿಮಾ ನಟಿಯಾಗಿ ಜೀವನವನ್ನು ಆಯ್ಕೆ ಮಾಡಿಕೊಳ್ಳುವಂತದ್ದು. ಅಲ್ಲಿಂದ ಸುಮಾರು ಎಂಟು ವರ್ಷಗಳವರೆಗೆ ಅವರ ಕಥಾ ಸೃಷ್ಟಿ ನಿರಂತರವಾಗಿ ಸಾಗಿತ್ತು. ಈ ಅವಧಿಯಲ್ಲಿ ಸುಮಾರು ಇಪ್ಪತ್ತೊಂದು ಕಥೆಗಳನ್ನು ಬರೆದಿದ್ದಾರೆ. 1939ರ ಏಪ್ರಿಲ್ 13ರಂದು ಅವರ ಮನೆಗೆ ಮೂರು ಮೈಲಿಗಳ ಅಂತರದಲ್ಲಿ ಹರಿಯುತ್ತಿದ್ದ ಹಟ್ಟಿ ಹಳ್ಳಿಯಲ್ಲಿ ಈಜಲು ಹೋಗಿ ಅಲ್ಲಿ ಸುಳಿಗೆ ಸಿಕ್ಕಿ ಹೊರಬರಲಾಗದೆ ಪ್ರಾಣಬಿಟ್ಟರು.
ಹೊಸ ಬದುಕಿನ ಕಾಳಜಿ ಮತ್ತು ಸದಭಿರುಚಿಯ ದ್ಯೋತಕವಾಗಿದ್ದ ಗೌರಮ್ಮ ಆರೋಗ್ಯಕರ ನಿಲುವಿನ, ಜಾತ್ಯಾತೀತ ಮನೋಧರ್ಮದ, ಮಾನವೀಯ ವಿವರಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಅಪಾರ ಜೀವನ ಪ್ರೀತಿಯ ಕತೆಗಾರ್ತಿಯಾಗಿದ್ದಾರೆ.
ಅವರ ಮರಣದ ಹಿಂದಿನ ದಿನ ಬರೆದ ಕಥೆಗಳು ‘ಮುನ್ನಾ ದಿನ’ ಮತ್ತು ‘ಹೋಗಿಯೇ ಬಿಟ್ಟಿದ್ದ’. ವರಕವಿ ದರಾ ಬೇಂದ್ರೆಯವರು ಇವರ ಮರಣದ ನಂತರ ಪ್ರಕಟವಾದ ಇವರ ‘ಕಂಬನಿ’ ಮತ್ತು ‘ಚಿಗುರು’ ಕಥಾಸಂಕಲನಗಳಿಗೆ ಮುನ್ನುಡಿ ಬರೆದಿದ್ದಾರೆ, ಎನ್ನುವುದೇ ಗೌರಮ್ಮನವರನ್ನು ಅವರ ಸಮಕಾಲೀನರು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು, ಎಂಬುದಕ್ಕೆ ಸಾಕ್ಷಿ.
ಈ ಮಹಾನ್ ಚೇತನಕ್ಕೆ ನಮ್ಮ ಅನಂತ ನಮನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮೋಘ ಆಟಗಾರ ಶೇನ್ ವಾರ್ನ್ ನಿಧನ

Sat Mar 5 , 2022
ಅಮೋಘ ಆಟಗಾರ ಶೇನ್ ವಾರ್ನ್ ನಿಧನ ವಿಶ್ವ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲೊಬ್ಬರಾದ ಶೇನ್ ವಾರ್ನ್ ನಿಧನರಾಗಿರುವ ವಿಚಾರ ಊಹಿಸದೆ ಇದ್ದಂತದ್ದು. ಇನ್ನೂ 53ರ ಅಂಚಿನಲ್ಲಿದ್ದ ಶೇನ್ ವಾರ್ನ್ ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಮತ್ತು 3154 ರನ್ ಗಳಿಸಿ, 194 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 293 ವಿಕೆಟ್ ಮತ್ತು 1018 ರನ್ ಗಳಿಸಿ ಸುದೀರ್ಘ ಕಾಲ ಕ್ರಿಕೆಟ್ ಲೋಕದಲ್ಲಿ ಅಸಾಮಾನ್ಯ ಪ್ರತಿಭೆ ಮೆರೆದವರು. ಭಾರತೀಯ […]

Advertisement

Wordpress Social Share Plugin powered by Ultimatelysocial