ಕೋಲಾರದಲ್ಲಿ ಸಿದ್ಧರಾಮಯ್ಯ ಹರಕೆಯ ಕುರಿ ಕುಮಾರಸ್ವಾಮಿ.

ಕೋಲಾರ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಪರ್ಧಿಸಿದರೆ ಖಂಡಿತ ಅವರು ಹರಕೆಯ ಕುರಿ ಆಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ತಾಲ್ಲೂಕಿನ ಕಣ್ಣಿ ಗ್ರಾಮದಲ್ಲಿ ಶುಕ್ರವಾರ ಪಂಚರತ್ನ ರಥಯಾತ್ರೆ ನಿಮಿತ್ಯ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರಿಗೆ ಕೋಲಾರ್ ಕ್ಷೇತ್ರವು ಸುರಕ್ಷಿತವಲ್ಲ. ಯಾಕೆಂದರೆ ಆ ಕ್ಷೇತ್ರದಲ್ಲಿ ನಾನು ಈಗಾಗಲೇ ಪ್ರಚಾರ ಮಾಡಿ ಬಂದಿದ್ದೇನೆ. ಆ ಕ್ಷೇತ್ರದ ಕುರಿತು ನನಗೆ ಸಂಪೂರ್ಣ ಗೊತ್ತು. ಅಲ್ಲಿಂದ ಅವರು ಸ್ಪರ್ಧೆ ಮಾಡಿದಲ್ಲಿ ಅವರು ಹರಕೆಯ ಕುರಿಯಾಗುವುದರಲ್ಲಿ ಯಾವುದೇ ರೀತಿಯಲ್ಲಿ ಅನುಮಾನ ಇಲ್ಲ ಎಂದರು.
ಕೋಲಾರದಲ್ಲಿ ಸಿದ್ಧರಾಮಯ್ಯ ಅವರಿಗೆ ಸ್ಪರ್ಧಿಸುವಂತೆ ಯಾರು ಒತ್ತಡ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಕೋಲಾರದಲ್ಲಿ ನಿಲ್ಲಿಸುವ ಮೂಲಕ ಅವರ ಪಕ್ಷದವರೇ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಅವರು ತಿಳಿಸಿದರು.
ನಾನು ಸ್ವತ: ಕೋಲಾರ್ ಕ್ಷೇತ್ರದಲ್ಲಿ ಸುತ್ತಾಡಿ, ಅಲ್ಲಿನ ಜನರ ಭಾವನೆಯನ್ನು ಅರಿತುಕೊಂಡಿದ್ದೇನೆ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಲಿ ಅಥವಾ ನಾಯಕರಿಗಾಗಲಿ ಮತ ಪಡೆಯುವ ಶಕ್ತಿ ಇಲ್ಲ. ಸಿದ್ಧರಾಮಯ್ಯ ಅವರನ್ನು ಬಲವಂತವಾಗಿ ನಿಲ್ಲಿಸಲು ಹೊರಟಿದ್ದಾರೆ ಎಂದು ಅವರು ಹೇಳಿದರು.
ಕೋಲಾರದ ಕಾಂಗ್ರೆಸ್ ಶಾಸಕ ಶ್ರೀನಿವಾಸಗೌಡ ಅವರೇ 17 ಕೋಟಿ ರೂ.ಗಳನ್ನು ಕಳೆದ ಚುನಾವಣೆಯಲ್ಲಿ ವೆಚ್ಚ ಮಾಡಿದ್ದೇನೆ. ಈಗ ಸಿದ್ಧರಾಮಯ್ಯ ಅವರೇ ಸ್ಪರ್ಧಿಸುವುದರಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಇತರೆ ಅಭ್ಯರ್ಥಿಗಳು ಸಹ ಆಯ್ಕೆಯಾಗುತ್ತಾರೆಂಬ ಉದ್ದೇಶದಿಂದ ಸಿದ್ಧರಾಮಯ್ಯ ಅವರನ್ನು ಸ್ಪರ್ಧಿಸಲು ಸಿದ್ಧತೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಇನ್ನು ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 3ಬಿ ಮೀಸಲಾತಿಯಿಂದ 2ಡಿ ಮೀಸಲಾತಿಗೆ ಸೇರ್ಪಡೆ ಮಾಡಿದ್ದನ್ನು ರಾಜ್ಯ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದರ ಕುರಿತು ಪ್ರಸ್ತಾಪಿಸಿದ ಕುಮಾರಸ್ವಾಮಿಯವರು, ಮೀಸಲಾತಿ ಘೋಷಿಸುವ ಮೂಲಕ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮಂಗನಂತೆ ಮಾಡಿದ್ದಾರೆ. ಅವರ ಮೂಗಿಗೆ ತುಪ್ಪ ಸವರದೇ ಹಣೆಗೆ ಸವರಿ ವಾಸನೆ ಸಹ ಬಾರದಂತೆ ಮಾಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಸಮುದಾಯಕ್ಕೆ ರಾಜ್ಯ ಬಿಜೆಪಿ ಸರ್ಕಾರವು ಮೋಸ ಮಾಡಿದೆ ಎಂದು ಅವರು ಆರೋಪಿಸಿದರು.
ಪಂಚಮಸಾಲಿ ಸಮುದಾಯದ ಜಗದ್ಗುರುಗಳು ಪಾದಯಾತ್ರೆ ಹಮ್ಮಿಕೊಂಡಿದ್ದರು. ಅನೇಕ ರೀತಿಯ ಹೋರಾಟಗಳನ್ನು ಮಾಡಿದರು. ಆ ಸಂದರ್ಭದಲ್ಲಿ ಅವರೊಂದಿಗೆ ಸಮಗ್ರವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿತ್ತು. ಅಂತಹ ಯಾವುದೇ ಕ್ರಮ ಕೈಗೊಳ್ಳದೇ ಒಮ್ಮೆಲೆ ಅಧಿವೇಶನದ ಕೊನೆಯ ದಿನದಂದು ಇಂತಹ ಅಸಂಬದ್ಧ ನಿರ್ಧಾರ ಕೈಗೊಂಡಿದ್ದರು. ಇದು ಅನುಷ್ಠಾನಕ್ಕೆ ಬರುವುದಿಲ್ಲ ಎಂದು ನಾನು ಆಗಲೇ ಹೇಳಿದ್ದೆ. ಅದು ಈಗ ನಿಜವಾಗಿದೆ ಎಂದು ಅವರು ತಿಳಿಸಿದರು.
ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್‍ಗಳಿಗೆ ಭಯ ಶುರುವಾಗಿದೆ ಎಂಬ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರು ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದರೆ ನಮಗ್ಯಾವ ಭಯವೂ ಇಲ್ಲ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಯಾವ ಯೋಜನೆಗಳನ್ನು ಜನರಿಗೆ ಕೊಟ್ಟಿದ್ದಾರೆ ಎಂಬುದರ ಕುರಿತು ನಿಮಗೆ ಭಯವಾಗಬೇಕು ಎಂದು ಅವರು ತಿರುಗೇಟು ನೀಡಿದರು.
ಹುಬ್ಬಳ್ಳಿಯಲ್ಲಿ ಸ್ವಾಮಿ ವಿವೇಕಾನಂದರ ಕಾರ್ಯಕ್ರಮ ಮಾಡಿ ಅವರ ಭಾವಚಿತ್ರವನ್ನೇ ಬಳಸಿಲ್ಲ ಎಂದು ಮಾಧ್ಯಮಗಳಲ್ಲಿ ನಾನು ನೋಡಿದ್ದೇನೆ. ಬಿಜೆಪಿ ಪಾಲಿಗೆ ಇದು ಕೊನೆಯ ಚುನಾವಣೆಯಾಗಲಿದೆ ಎಂದು ಅವರು ಭವಿಷ್ಯ ನುಡಿದರು.
ಭಾರತ್ ಜೋಡಾ ಸಮಾರೋಪ ಸಮಾರಂಭದ ಪ್ರಯುಕ್ತ ದೆಹಲಿಯಲ್ಲಿ ಕಾರ್ಯಕ್ರಮಕ್ಕೆ ಸರ್ವಪಕ್ಷ ಭಾಗಿಯಾಗಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಪತ್ರ ಬರೆದ ಕುರಿತು ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು, ನಮಗೆ ಯಾವುದೇ ಪತ್ರ ಬಂದಿಲ್ಲ. ನನಗೆ ಜನರ ಕಷ್ಟಸುಖ ನೋಡುವುದಿದೆ. ಅದಕ್ಕಾಗಿ ಪೂರ್ವನಿಯೋಜಿತ ಕಾರ್ಯಕ್ರಮಗಳಿದ್ದು, ಅವರು ಕರೆದರೂ ನಾವು ಹೋಗುವ ಪರಿಸ್ಥಿತಿಯಲ್ಲಿ ಇಲ್ಲ ಎಂದರು.
ಇನ್ನ ಸ್ಯಾಂಟ್ರೋ ರವಿ ಬಂಧನದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಆರೋಪಿಯನ್ನು ಗುಜರಾತ್‍ನಲ್ಲಿ ಬಂಧಿಸಲಾಗಿದೆ. ಗುಜರಾತ್ ಇಲ್ಲವೇ ರಾಜಸ್ತಾನ್‍ದ ಮೂಲಕ ಆತನಿಗೆ ವಿದೇಶಕ್ಕೆ ಕಳಿಸುವ ಸಂಚು ನಡೆದಿರುವ ಕುರಿತು ಅನುಮಾನವಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯೂಟ್ಯೂಬ್ ನೋಡಿ ಪ್ರಯೋಗ ಮಾಡಲು ಹೋದ ಬಾಲಕಿ ಸಾವು.

Mon Jan 16 , 2023
ಉಡುಪಿ: ವಿದ್ಯಾರ್ಥಿನಿಯೊಬ್ಬಳು ಯೂಟ್ಯೂಬ್ ನೋಡಿ ಪ್ರಯೋಗ ಮಾಡುವ ವೇಳೆ ಮೃತಪಟ್ಟ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಉಡುಪಿಯ ಬ್ರಹ್ಮಗಿರಿಯ ಸಾಯಿರಾಧಾ ಫ್ರೈಡ್ ಅಪಾರ್ಟ್ ಮೆಂಡ್ ನಿವಾಸಿ ಪ್ರವೀಣ್ ಶೆಟ್ಟಿ ಅವರ ಪುತ್ರಿ ಮಂಗಳಾದೇವಿ(11) ಮೃತಪಟ್ಟ ಬಾಲಕಿ ಎಂದು ಹೇಳಲಾಗಿದೆ. 6ನೇ ತರಗತಿ ಓದುತ್ತಿದ್ದ ಮಂಗಳಾದೇವಿ ಯೂಟ್ಯೂಬ್ ನಲ್ಲಿ ಬರುವ ವಿಡಿಯೋಗಳನ್ನು ನೋಡಿ ಅದನ್ನು ಪ್ರಯೋಗ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಳು. ಶನಿವಾರ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆಯ ನಡುವೆ ಬಾತ್ರೂಮ್ ಬಟ್ಟೆ […]

Advertisement

Wordpress Social Share Plugin powered by Ultimatelysocial