ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಅರಸ.

ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಅರಸು ಮನೆತನಗಳಲ್ಲಿ ಮೂರನೆಯದಾದ ತುಳುವ ವಂಶಕ್ಕೆ ಸೇರಿದ ಮತ್ತು ಆ ಸಾಮ್ರಾಜ್ಯದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧನಾದ ಚಕ್ರವರ್ತಿ. ಇವನ ಆಳ್ವಿಕೆಯ ಕಾಲ 1509-1529.
ಧರ್ಮರಕ್ಷಣೆಗಾಗಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ತನ್ನ ಧ್ಯೇಯವನ್ನು ಸಾಧಿಸಿತಲ್ಲದೆ ಉನ್ನತ ಕೀರ್ತಿಯನ್ನೂ ಪಡೆಯಿತು. ಪೇಸ್, ನ್ಯೂನಿಜ್, ಬರ್ಬೊಸ ಮೊದಲಾದ ಪೋರ್ಚುಗೀಸ್ ಪ್ರವಾಸಿಗಳು ಇವನ ಆಸ್ಥಾನದಲ್ಲಿದ್ದು, ರಾಜನ ವ್ಯಕ್ತಿತ್ವ ಮತ್ತು ವೈಭವಗಳನ್ನು ಕಣ್ಣಾರೆ ಕಂಡು ಅವನ್ನು ವಿವರವಾಗಿ ವರ್ಣಿಸಿದ್ದಾರೆ. ದೊರೆ ಸ್ಫುರದ್ರೂಪಿ. ಆತ ಎತ್ತರವಾಗಿಲ್ಲದಿದ್ದರೂ ನಿತ್ಯವೂ ಗರಡಿ ಸಾಧನೆ ಮಾಡುತ್ತಿದ್ದುದರಿಂದ ಬಲವಾದ ಮೈಕಟ್ಟು ಪಡೆದಿದ್ದ. ಮುಖದಲ್ಲಿ ಸಿಡುಬಿನ ಕಲೆಗಳಿದ್ದರೂ ವರ್ಚಸ್ಸು ತುಂಬಿತ್ತು. ವಿದೇಶಿಯರಲ್ಲಿ ಇವನಿಗೆ ತುಂಬ ಗೌರವವಿತ್ತೆಂದೂ ಈತ ನ್ಯಾಯಪರನೆಂದೂ ಹೇಳಲಾಗಿದೆ. ಕತ್ತಿವರಸೆ, ಕುದುರೆ ಸವಾರಿ, ಕುಸ್ತಿ ಇವು ಈ ಈತನ ದಿನಚರಿಗಳಾಗಿದ್ದುವು. ಈತ ಸೂರ್ಯೋದಯಕ್ಕೆ ಮುಂಚೆಯೇ ಅಂಗಸಾಧನೆಗಳಲ್ಲಿ ನಿರತನಾಗುತ್ತಿದ್ದ. ಕೆಲವು ಬಾರಿ ಮುಂಗೋಪಿಯಾದರೂ ಕಾಲವನ್ನು ವ್ಯರ್ಥಮಾಡದೆ ಯಾವಾಗಲೂ ಜನರ ಯೋಗಕ್ಷೇಮವನ್ನೇ ಚಿಂತಿಸುತ್ತಿದ್ದ-ಇದು ಪೇಸನ ಬರಹಗಳಿಂದ ತಿಳಿದುಬಂದಿರುವಂತೆ ಕೃಷ್ಣದೇವರಾಯನ ವ್ಯಕ್ತಿತ್ವ.
ಕೃಷ್ಣದೇವರಾಯ ಜನಿಸಿದ್ದು 1471ರ ಜನವರಿ 17ರಂದು ಎಂದು ಹಲವು ಕಡೆ ಕಂಡುಬಂತು.
ಕೃಷ್ಣದೇವರಾಯನ ರಾಜ್ಯಾರೋಹಣದ ವಿಷಯವಾಗಿ ಜನಜನಿತವಾದ ಕಥೆಯೊಂದಿದೆ. ಇವನಿಗೆ ಹಿಂದೆ ದೊರೆಯಾಗಿದ್ದ ಇಮ್ಮಡಿ ನರಸಿಂಹ ತನ್ನ 8 ವರ್ಷದ ಮಗನಿಗೆ ಪಟ್ಟ ಕಟ್ಟುವ ಸಲವಾಗಿ, ಬಲತಮ್ಮನಾದ ಕೃಷ್ಣದೇವನನ್ನು ಕೊಂದು ಅವನ ಕಣ್ಣುಗುಡ್ಡೆಗಳನ್ನು ತನಗೆ ತೋರಿಸುವಂತೆ ಮಂತ್ರಿ ಸಾಳುವ ತಿಮ್ಮರಸನಿಗೆ ಆಜ್ಞಾಪಿಸಿದುದಾಗಿಯೂ ಮಂತ್ರಿ ಇವನನ್ನು ಗೋಪ್ಯವಾಗಿಟ್ಟು ಮೇಕೆಯ ಕಣ್ಣುಗುಡ್ಡೆಗಳನ್ನು ದೊರೆಗೆ ತೋರಿಸಿದನೆಂದೂ ನರಸಿಂಹ ನೆಮ್ಮದಿಯಿಂದ ಸತ್ತ ಅನಂತರ ಕೃಷ್ಣದೇವನಿಗೆ ಪಟ್ಟಕಟ್ಟಿದುದಾಗಿಯೂ ಈ ಕಥೆ ತಿಳಿಸುತ್ತದೆ. ಇದನ್ನು ನ್ಯೂನಿಜ್ ಬರೆದಿಟ್ಟಿದ್ದಾನೆ. ಆದರೆ ಇದನ್ನು ಸಮರ್ಥಿಸುವ ಐತಿಹಾಸಿಕ ದಾಖಲೆಗಳು ಯಾವುವೂ ದೊರಕಿಲ್ಲ. ಆ ಸೋದರರಲ್ಲಿ ಅನ್ಯೋನ್ಯತೆ ಇದ್ದುದಾಗಿಯೂ ತಿಳಿದು ಬರುತ್ತದೆ.
ಕೃಷ್ಣದೇವರಾಯ ಪಟ್ಟಕ್ಕೆ ಬಂದೊಡನೆ ಸೈನ್ಯವನ್ನು ಸುವ್ಯವಸ್ಥೆಗೊಳಿಸಿ ಯುದ್ಧ ನಿರತನಾಗಬೇಕಾಯಿತು. ದಕ್ಷಿಣದಲ್ಲಿ ಉಮ್ಮತ್ತೂರಿನ ಗಂಗರಾಜನ ಮೇಲೆ ಮಾಡಿದ ಯುದ್ಧದಲ್ಲಿ (1510-1512) ಉಮ್ಮತ್ತೂರು, ಪೆನುಗೊಂಡೆ, ಶಿವಸಮುದ್ರ ಮತ್ತು ಶ್ರೀರಂಗಪಟ್ಟಣಗಳು ಇವನ ವಶವಾದುವು. ಈ ಪ್ರದೇಶಗಳನ್ನು ಶ್ರೀರಂಗಪಟ್ಟಣ ಪ್ರಾಂತ್ಯವನ್ನಾಗಿ ಮಾಡಲಾಯಿತು. ಅನಂತರ ಈತ ಪೂರ್ವ ದೇಶಕ್ಕೆ ನುಗ್ಗಿ ಕೊಂಡವೀಡು, ಉದಯಗಿರಿ ಕೋಟೆಗಳನ್ನು ಹಿಡಿದು, ಪ್ರತಾಪರುದ್ರ ಗಜಪತಿಯನ್ನು ಸೋಲಿಸಿ, ಅವನ ಮಗಳಾದ ಜಗನ್ಮೋಹಿನಿಯನ್ನು ಮದುವೆಯಾದ. ಈ ವಿಜಯದ ಅನಂತರ 1514ರಲ್ಲಿ ತಿರುಮಲೈಗೆ ಹೋಗಿ ಶ್ರೀ ವೆಂಕಟೇಶ್ವರನಿಗೆ ಕಾಣಿಕೆ ಸಲ್ಲಿಸಿದ. ಆ ಸಂದರ್ಭದಲ್ಲಿ ಮಾಡಿಸಲಾದ ಈತನ ಮತ್ತು ರಾಣಿಯರಾದ ತಿರುಮಲಾದೇವಿ ಮತ್ತು ಚಿನ್ನಾದೇವಿಯರ ಪ್ರತಿಮೆಗಳು ಈಗಲೂ ಆ ದೇವಸ್ಥಾನದಲ್ಲಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂಡಿಗೋ ವಿಮಾನದ ತುರ್ತು ನಿರ್ಗಮನ ಓಪನ್ ಮಾಡಿ .

Tue Jan 17 , 2023
ಚೆನ್ನೈ, ಜನವರಿ 17: ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರು ಡಿಸೆಂಬರ್ 10, 2022 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಯಾವುದೇ ಅನುಮತಿಯಿಲ್ಲದೆ ವಿಮಾನದ ತುರ್ತು ನಿರ್ಗಮನವನ್ನು ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ವಿಮಾನಯಾನ ಸಂಸ್ಥೆ ಇಂಡಿಗೋ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಲು ನಿರಾಕರಿಸಿದೆ. ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ಇದನ್ನು ದೃಢಪಡಿಸಿದ್ದಾರೆ. ವಿಮಾನದಲ್ಲಿನ ತುರ್ತು […]

Advertisement

Wordpress Social Share Plugin powered by Ultimatelysocial