ಸಚಿವ ಸೋಮಣ್ಣಗೆ ಹೆಚ್’ಡಿಕೆ ತಿರುಗೇಟು!

 

ಬೆಂಗಳೂರು: ನಮ್ಮ ಆರೋಗ್ಯದ ಬಗ್ಗೆ ಸೋಮಣ್ಣ ಅವರಿಗೆ ಕಾಳಜಿ ಬೇಡ. ಆರೋಗ್ಯ ಯಾವ ರೀತಿ ಇಟ್ಟುಕೊಳ್ಳಬೇಕೆಂದು ವೈದ್ಯರು ನಮಗೆ ಹೇಳಿದ್ದಾರೆ. ಯೋಗ್ಯತೆ ಇದ್ದರೆ ಬೆಂಗಳೂರು ನಗರ ಆರೋಗ್ಯ ಸರಿಪಡಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವ ವಿ.ಸೋಮಣ್ಣ ಅವರಿಗೆ ತಿರುಗೇಟು ನೀಡಿದ್ದಾರೆ.

ಬ್ಯಾಟರಾಯನಪುರ ಕ್ಷೇತ್ರದ ನಾಗವಾರ ರಿಂಗ್ ರೋಡ್ ಜಂಕ್ಷನ್, ಥಣಿಸಂದ್ರ ಮತ್ತಿತರ ಕಡೆ ಇಂದು ಮಳೆ ಹಾನಿ ವೀಕ್ಷಣೆ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ನಗರ ಏನು ಅಂತ ಸೋಮಣ್ಣ ಅವರಿಂದ ಕಲಿಯಬೇಕಿಲ್ಲ ಎಂದು ಹೇಳಿದರು.

ಜೆಡಿಎಸ್ ನಲ್ಲಿ ಯಾವ ರೀತಿ ಬೆಳೆದಿರಿ, ದೇವೇಗೌಡರ ಹೆಸರಲ್ಲಿ ಯಾವ ರೀತಿ ಬೆಳವಣಿಗೆ ಕಂಡಿರಿ ಎನ್ನುವುದು ಎಲ್ಲಾ ಗೊತ್ತಿದೆ. ಬಿಡುವಿದ್ದರೆ ಬರುವುದಕ್ಕೆ ಹೇಳಿ ಪಾಠ ಮಾಡುತ್ತೇನೆ ಎಂದು ಸಚಿವ ಸೋಮಣ್ಣ ಹೇಳಿಕೆಗೆ ಕುಮಾರಸ್ವಾಮಿ ಅವರು ಗುಡುಗಿದರು.

ರಾಜಕಾಲುವೆ, ರಸ್ತೆ ಕೆಲಸ ಮಾಡದೆ ಕೋಟ್ಯಂತರ ರೂಪಾಯಿ ಲೂಟಿ ಮಾಡಿದಿರಿ. ನಾನು 1973 ರಿಂದ ಬೆಂಗಳೂರುನಲ್ಲೇ ಬದುಕಿ ಕೆಲಸ ಮಾಡಿದ್ದೇನೆ. ಮತ ಕೊಟ್ಟ ಜನರಿಗೆ ಮೋಸ ಮಾಡಿಲ್ಲ. ಅಧಿಕಾರಿಗಳಿಗೆ ಹಿಂದೆ ನೀರು ನಿಲ್ಲಿಸಲು ಹೇಳಿ ಮುಂದೆ ಬೈಯುವ ಕೆಲಸ ಮಾಡಿಲ್ಲ ಎಂದು ಅವರು ಟಾಂಗ್ ನೀಡಿದರು.

ಸೋಮಣ್ಣ ಅವರಿಗೆ ಹೊಟ್ಟೆ ಹುರಿ ಶುರುವಾಗಿರಬೇಕು. ದುಡ್ಡು, ಅಧಿಕಾರದ ಮತ್ತಲ್ಲಿ ಅವರಿದ್ದಾರೆ. ನರೇಂದ್ರ ಮೋದಿ‌ ಅವರ ಮುಖ ನೋಡಿ ಮತ ಹಾಕ್ತಾರೆ ಅಂದುಕೊಂಡಿದ್ದರೆ ಅದು ಸುಳ್ಳು. ಇಡೀ ಬೆಂಗಳೂರು ನಗರವನ್ನೇ ಅವರಿಸಿಕೊಳ್ಳುತ್ತೇವೆ ಎಂದರೆ ಅದು ಸುಳ್ಳು ಅಷ್ಟೇ. ಬನ್ನಿ ಜನರ ನೋವು ನೋಡಿ. ಅಭಿವೃದ್ಧಿ ಹೆಸರಲ್ಲಿ ತಿಂದಿದ್ದು ಸಾಕು. ರಾಜಕಾಲುವೆಗೆ ಹಣ ಕೊಡುತ್ತೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಅದನ್ನಾದರೂ ಸರಿಯಾಗಿ ಉಪಯೋಸಿಕೊಳ್ಳಿ. ಚಕ್ರ ತಿರುಗುತ್ತದೆ, ಅವರಿಗೆ ಕುಮಾರಸ್ವಾಮಿಯನ್ನು ಅರಗಿಸಿಕೊಳ್ಳಲು ಆಗೋದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಟಾಂಗ್ ಕೊಟ್ಟರು.

ಬೆಂಗಳೂರು ನಗರ ಜನತೆಗೆ ಹೊಸ ಪ್ರಣಾಳಿಕೆ ಅಂತ ಕಾಂಗ್ರೆಸ್ ಹೇಳುತ್ತಿದೆ. ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಅವರು ಯಾವ ಕೆಲಸವನ್ನೂ ಮಾಡಲಿಲ್ಲ. 2006ರಲ್ಲಿಯೇ ಬೆಂಗಳೂರಿನ ಬೆಳವಣಿಗೆ ನಿಲ್ಲಿಸಿ ಐದು ಟೌನ್ ಶಿಪ್ ಮಾಡಲು ನೀಲನಕ್ಷೆ ತಯಾರು ಮಾಡಿದ್ದೆ. ಆದರೆ, ನಮಗೆ ಸಹಕಾರ ಸಿಗಲಿಲ್ಲ. ಕೊರಿಯನ್ ಕಂಪನಿ ಮುಂದೆ ಬಂದಿತ್ತು. ಯಾಜನೆಗೆ ಕ್ಲಿಯರೆನ್ಸ್ ಕೊಡಲು ಮುಂದಾಗಿದ್ದೆ ನಾನು. ಬಿಜೆಪಿಯವರು ಬೆಂಬಲ ಕೊಡಲಿಲ್ಲ. ಕೆರೆ ಕಟ್ಟೆಗಳನ್ನು ನುಂಗಿದ ನೀವು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಆರ್ ಅಶೋಕ್ ಗೆ ತಿರುಗೇಟು: ನಾವು ಟೀ ಮರುವವರಿಗೂ ಟಿಕೆಟ್ ಕೊಡುತ್ತೇವೆ, ಜೆಡಿಎಸ್ ನವರು ಮನೆಯವರಿಗೆ ಮಾತ್ರ ಕೊಡುತ್ತಾರೆ ಎಂದು ಹೇಳಿಕೆ ನೀಡಿರುವ ಸಚಿವ ಆರ್ ಅಶೋಕ್ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ತಿರುಗೇಟು ಕೊಟ್ಟರು.

ಯಾರು ಟೀ ಮಾರುವವರಿಗೆ ಟಿಕೆಟ್ ಕೊಡುತ್ತಾರೆ. ಯಾರು ಮನೆಯವರಿಗೆ ಟಿಕೆಟ್ ಕೊಡುತ್ತಾರೆ ಎನ್ನುವುದು ಗೊತ್ತಿದೆ. ಬಿಜೆಪಿಯಲ್ಲಿ ಇರುವ ಕುಟುಂಬ ರಾಜಕರಣದ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ ಎಂದ ಅವರು, ಅವರಂತೆಯೇ ನಾನು ಲೂಟಿ ಮಾಡಿಲ್ಲ. ಹಲೋ ಕಂದಾಯ ಸಚಿವರು ಎಂದರೆ ಪೋಡಿ, ಪಹಣಿ ಬಂದು ಮನೆ ಮುಂದೆ ಬೀಳುತ್ತಂತೆ. ಜನರನ್ನು ಯಾಮರಿಸುವುದಕ್ಕೂ ಒಂದು ಮಿತಿ ಬೇಡವಾ? ಇಂಥ ವ್ಯಕ್ತಿ ನಮ್ಮ ಕುಟುಂಬದ ಬಗ್ಗೆ ಚರ್ಚೆ ಮಾಡ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಕನ್ನಡಿಗರ ಸ್ವಾಭಿಮಾನ, ಪ್ರಾದೇಶಿಕ ಪಕ್ಷ ಉಳಿಸಬೇಕು ಟೀ ಮಾರುವವರು ನಮ್ಮಲ್ಲಿ ಇಲ್ಲದೇ ಇರಬಹುದು. ಆದರೆ ಜನರ ಕಷ್ಟ ಅರಿಯುವವರನ್ನು ಆಯ್ಕೆ ಮಾಡುತ್ತೇವೆ. ಟೀ ಮಾರುವವರ ಹೆಸರಿನಲ್ಲಿ ಲೂಟಿ ಮಾಡುವವರನ್ನು ಆಯ್ಕೆ ಮಾಡಿಲ್ಲ ಎಂದು ತಿರುಗೇಟು ನೀಡಿದರು.

ಮಾಗಡಿ ಶಾಸಕರ ಸ್ಥಾನ ಖಾಲಿ ಇಲ್ಲ: ಮಾಗಡಿ ಕ್ಷೇತ್ರದ ಗುದ್ದಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ವೈಯಕ್ತಿಕವಾಗಿ ಕ್ಷೇತ್ರಗಳಲ್ಲಿ ಯಾರನ್ನು ಯಾರು ಹೊಗಳಿರುತ್ತಾರೋ ಗೊತ್ತಿಲ್ಲ. ಮಾಗಡಿ ಕ್ಷೇತ್ರ ವಿಚಾರದಲ್ಲಿ ನನ್ನ ಬಳಿ ಚರ್ಚೆ ಆಗಿಲ್ಲ‌. ಯಾವ ದೃಷ್ಟಿಯಿಂದ ಬಾಲಕೃಷ್ಣ ಅವರು ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಆಗ ನನ್ನ ಆತ್ಮೀಯ ಸ್ನೇಹಿತರು. ಆದರೆ ಅವರ ನಿರ್ಧಾರದಿಂದ ಹೋಗಿದ್ದಾರೆ. ಯಾರು ಅವರ ಆತ್ಮೀಯರು ನನ್ನ ಬಳಿ ಮಾತಾಡಲ್ಲ. ಶಾಸಕರ ಸ್ಥಾನ ಖಾಲಿ‌ ಇಲ್ಲ ಏನಂತ ಚರ್ಚೆ ಮಾಡಲಿ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಟಿ.ಎ.ಶರವಣ, ರಮೇಶ್ ಗೌಡ, ಜೆಡಿಎಸ್ ನಗರ ಅಧ್ಯಕ್ಷ ಆರ್. ಪ್ರಕಾಶ್, ಸ್ಥಳೀಯ ಜೆಡಿಎಸ್ ಮುಖಂಡರು ಹಾಜರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನಾಲಿಯಲ್ಲಿ ಎಲ್ಲಿ ನೋಡಿದ್ರೂ ಸ್ಟ್ರಾಬೆರಿ!

Sun May 22 , 2022
  ಈಗ ದೇಶದ ರೈತರು ಸಾಂಪ್ರದಾಯಿಕ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಗೋಧಿ, ಭತ್ತದ ಬದಲು ಈಗ ವಿವಿಧ ಬಗೆಯ ತರಕಾರಿ, ಹಣ್ಣುಗಳತ್ತ ಕೈ ಹಾಕುತ್ತಿದ್ದಾರೆ. ಸ್ಟ್ರಾಬೆರಿ ಕೃಷಿಯು ರೈತರಿಗೆ ಹೆಚ್ಚಿನ ಲಾಭವನ್ನು ತರುತ್ತಿದೆ. ಹಿಮಾಚಲ ಪ್ರದೇಶದ ಹವಾಮಾನವು ಸ್ಟ್ರಾಬೆರಿ ಕೃಷಿಗೆ ಅತ್ಯಂತ ಸೂಕ್ತವಾದದ್ದು ಎಂದು ಪರಿಗಣಿಸಲಾಗಿದೆ. ಮನಾಲಿಯಲ್ಲಿಯೂ ತೋಟಗಾರರು ತಮ್ಮ ಹೊಲಗಳಲ್ಲಿ ಸ್ಟ್ರಾಬೆರಿಗಳನ್ನು ಬೆಳೆದಿದ್ದರು, ಅವರ ಬೆಳೆ ಈಗ ಸಂಪೂರ್ಣವಾಗಿ ಸಿದ್ಧವಾಗಿದೆ. ಅಷ್ಟೇ ಅಲ್ಲ ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಸಿಗುತ್ತಿದ್ದು, […]

Advertisement

Wordpress Social Share Plugin powered by Ultimatelysocial