ಸುಪ್ರಭಾತ,ಅಲ್ಲಾಹ್ ಕೂಗುವುದನ್ನು ನಾನು ಬಾಲ್ಯದಿಂದಲೂ ಕೇಳಿಕೊಂಡೇ ಬೆಳೆದಿದ್ದೇನೆ!

 

ಬೆಂಗಳೂರು: ದೇವಾಲಯಗಳಲ್ಲಿ ಸೂರ್ಯೋದಯಕ್ಕೆ ಮುನ್ನವೇ ಸುಪ್ರಭಾತ ಕೇಳಿಸುವುದು, ಮಸೀದಿಗಳಲ್ಲಿ ಅಲ್ಲಾಹ್ ಕೂಗುವುದನ್ನು ನಾನು ಬಾಲ್ಯದಿಂದಲೂ ಕೇಳಿಕೊಂಡೇ ಬೆಳೆದಿದ್ದೇನೆ. ನಮ್ಮ ಊರಿನಲ್ಲಿ ನಿತ್ಯವೂ ನಾನು ಕೇಳುತ್ತಿದ್ದ ಸದ್ದುಗಳಾಗಿದ್ದವು ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಅದೇ ರೀತಿ ಊರಿನ ಸಿನಿಮಾ ಟೆಂಟಿನಲ್ಲಿ ರಾತ್ರಿಯ ಸೆಕೆಂಡ್ ಶೋ ಆರಂಭಕ್ಕೆ ಮುನ್ನ ಘಂಟಸಾಲ ಅವರು ಭಕ್ತಿಪರವಶರಾಗಿ ಹಾಡಿರುವ ʼನಮೋ ವೆಂಕಟೇಶ..ʼ ಎನ್ನುವ ಶ್ರೀ ವೆಂಕಟೇಶ್ವರ ಸ್ವಾಮಿಯವರ ಕೀರ್ತನೆಯನ್ನು ಧ್ವನಿವರ್ಧಕದಲ್ಲಿ ಕೇಳಿಸುತ್ತಿದ್ದನ್ನು ನನ್ನಂತೆಯೇ ಅನೇಕರು ಕೇಳಿರುತ್ತಾರೆ ಎಂದಿದ್ದಾರೆ.

ಅಷ್ಟೇ ಅಲ್ಲ, ಸಂಜೆಯಾದರೆ ಇಡೀ ಊರಿನ ಜನರೆಲ್ಲ ಗುಡಿಯಲ್ಲಿ ಸೇರಿ ಭಜನೆ ಮಾಡುತ್ತಿದ್ದದ್ದು, ಕರತಾಳ ಹಿಡಿದು ರಾತ್ರಿ ಹತ್ತು ಗಂಟೆವರೆಗೂ ಭಗವಂತನ ಭಜನೆಯಲ್ಲಿ ಲೀನವಾಗುತ್ತಿದ್ದ ದಿನಗಳು ಇನ್ನೂ ನನ್ನ ಸ್ಮೃತಿಪಟಲದಲ್ಲಿ ಹಚ್ಚಹಸಿರಾಗಿವೆ. ನಾನೂ ಬಹಳ ಶ್ರದ್ಧೆಯಿಂದ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

ನಸುಕಿನಲ್ಲಿ ಸುಪ್ರಭಾತ & ಅಲ್ಲಾಹ್ ಕೂಗುವ ಪರಿಪಾಠ ನಿನ್ನೆ-ಇಂದಿನದಲ್ಲ. ಅನಾದಿ ಕಾಲದಿಂದಲೂ, ಧರ್ಮಗಳು ಹುಟ್ಟಿದಾಗಿನಿಂದಲೂ ನಡೆದುಕೊಂಡೇ ಬಂದಿವೆ. ನಮ್ಮ ಮನೆಗಳಲ್ಲೂ ಬೆಳಗ್ಗೆಯೇ ಪೂಜೆ ನೆರೆವೇರಿಸಿ ಮಂಗಳಕರವಾದ ಘಂಟೆ ಭಾರಿಸುವುದನ್ನು ನಿತ್ಯವೂ ಕೇಳುತ್ತೇವೆ. ದೈವಕ್ಕೆ ಪ್ರಿಯವಾದ ಆ ಘಂಟೆಯ ಸದ್ದು ಯಾರಿಗೂ ಕಿರಿಕಿರಿ ಉಂಟು ಮಾಡಿಲ್ಲ. ಅದೂ ಅನಾದಿ ಕಾಲದಿಂದಲೂ ನಡೆದುಕೊಂಡೇ ಬಂದಿದೆ ಎಂದು ಟ್ವೀಟಿಸಿದ್ದಾರೆ.

ಅಲ್ಲದೆ, ದೇವಾಲಯಗಳಲ್ಲಿ ಮಹಾ ಮಂಗಳಾರತಿ ಸಂದರ್ಭಗಳಲ್ಲಿ ಢಮರುಗ, ಜಾಗಟೆ, ಘಂಟೆ ಇತ್ಯಾದಿಗಳನ್ನು ಭಾರಿಸುವ ಸಂಪ್ರದಾಯ ಇದ್ದೇ ಇದೆ. ಶಿವನಿಗೆ ಪ್ರಿಯವಾದ ಢಮರುಗ ಯಾರಿಗಾದರೂ ಕಿರಿಕಿರಿ ಮಾಡಿದೆಯೇ? ಇಲ್ಲವಲ್ಲ. ಹಿಂದುಗಳಾದ ನಾವು ನಮ್ಮ ದೇವರಿಗೆ ಭಕ್ತಿಯಿಂದ ಸಲ್ಲಿಸುವ ಸೇವೆಗಳಿಗೆ ಮುಸ್ಲೀಮರು ಸೇರಿ ಅನ್ಯ ಧರ್ಮದ ಯಾರಿಂದಲೂ ಆಕ್ಷೇಪ ಇಲ್ಲದಿರುವಾಗ ಮಸೀದಿಗಳ ಧ್ವನಿವರ್ಧಕಗಳ ಬಗ್ಗೆ ತಕರಾರು ತೆಗೆಯುವುದು ಏಕೆ? ಅಗತ್ಯಬಿದ್ದರೆ, ಶಬ್ದದ ಪ್ರಮಾಣವನ್ನು ವೈಜ್ಞಾನಿಕವಾಗಿ ಚಿಂತಿಸಿ ಕಡಿಮೆ ಮಾಡಲಿ. ಆ ಬಗ್ಗೆ ಮುಸ್ಲಿಂ ಧರ್ಮಗುರುಗಳೂ ಆಲೋಚನೆ ಮಾಡಲಿ ಎಂದಿದ್ದಾರೆ.

ಭಾರತೀಯ ಸಂವಿಧಾನವು ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ. ಅದರಲ್ಲಿ ಅಡಕವಾಗಿರುವ ಸಹಿಷ್ಣುತೆಯ ಆಶಯಕ್ಕೆ ಧಕ್ಕೆ ತರುವುದು ಬೇಡ. ಸಂಸತ್ತಿನಲ್ಲಿರುವ ಸಂವಿಧಾನ ಪ್ರತಿಗೆ ಶಿರಬಾಗಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ಹಿಂದೂ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ನಾಯಕರು ಮೋದಿ ಅವರ ಮೇಲ್ಪಂಕ್ತಿಯನ್ನು ಗೌರವಿಸಬೇಕು. ದೇವಾಲಯಗಳಲ್ಲಿ ನಡೆಯುತ್ತಿದ್ದ ನಿತ್ಯ ಭಜನೆ, ಸುಪ್ರಭಾತ ವೇಳೆ ಕೇಳಿಬರುತ್ತಿದ್ದ ಶ್ಲೋಕ, ಕೀರ್ತನೆ, ಭಜನೆಗಳು ಕ್ರಮೇಣ ಕಣ್ಮರೆಯಾಗಿವೆ. ನಾವೆಲ್ಲರೂ ಸೇರಿ ಅವುಗಳ ಪುನರುದ್ಧಾರ ಮಾಡೋಣ. ಮಕ್ಕಳಲ್ಲಿ ಸಾತ್ವಿಕ ಸಂಸ್ಕಾರವನ್ನು ಬೆಳೆಸೋಣ ಎಂದು ಹೇಳಿದ್ದಾರೆ.

ಮಕ್ಕಳಲ್ಲಿ ಸಾತ್ವಿಕ ಸಂಸ್ಕಾರವನ್ನು ಬೆಳೆಸೋಣ. ಅದರ ಹೊರತಾಗಿ ಇನ್ನೊಂದು ಧರ್ಮದ ನಂಬಿಕೆಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸೋಣ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಂಜಾರ ಸಮುದಾಯದ ಬೇಡಿಕೆ ಈಡೇರಿಸುವಂತೆ ರಾಷ್ಟ್ರಪತಿಗೆ ಮನವಿ!

Tue Apr 5 , 2022
  ಬೆಂಗಳೂರು,ಏ.5- ಬಂಜಾರ ಸಮುದಾಯದ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಕುರಿತು ಮತ್ತು ಸೂಕ್ತ ಪ್ರಾತಿನಿಧ್ಯ ನೀಡುವ ಸಂಬಂಧ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕಾರ್ಯಾಧ್ಯಕ್ಷರಾದ ಡಿ. ರಾಮನಾಯಕ ಮತ್ತು ಪದಾಧಿಕಾರಿಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಬಂಜಾರ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವುದು, ರಾಷ್ಟ್ರೀಯ ತಾಂಡ ಅಭಿವೃದ್ಧಿ ನಿಗಮದ ರಚನೆ, ಹಿಂದುಳಿದ ಜಾತಿ-ಪಂಗಡಗಳಲ್ಲಿರುವ ಇತರ ರಾಜ್ಯಗಳಲ್ಲಿನ ಬಂಜಾರರನ್ನು ಪರಿಶಿಷ್ಟ […]

Advertisement

Wordpress Social Share Plugin powered by Ultimatelysocial