ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಅರಣ್ಯಪರ್ವ – ಹದಿನೇಳನೆಯ ಸಂಧಿ
ರಾಯ ಕುರುಪತಿ ವಿದುರ ಗುರು ಗಾಂ
ಗೇಯ ಕೃಪರಲ್ಲೆನಲು ಪಾಂಡವ
ರಾಯ ವಿಪಿನಕೆ ಘೋಷಯಾತ್ರೆಯ ನೆವದಲೈತಂದ
ಕೇಳು ಜನಮೇಜಯ ಧರಿತ್ರೀ
ಪಾಲ ನಿಜ ನಗರಕ್ಕೆ ಲಕ್ಷ್ಮೀ
ಲೋಲ ಬಿಜಯಂಗೈದನಿತ್ತಲು ಪಾಂಡು ನಂದನರು
ಮೇಲು ದುಗುಡದ ಮುಖದ ಚಿಂತೆಯ
ಜಾಳಿಗೆಯ ಜಡಮನದಲಿದ್ದರು
ಸೂಳು ಸುಯ್ಲಿನ ಹೊಯ್ಲ ನಾಸಾಪುಟದ ಬೆರಳಿನಲಿ ೧
ಸೂರೆವೋದುದು ರಾಜ್ಯ ಸಿರಿ ಮು
ಮ್ಮಾರುವೋದುದು ಲಜ್ಜೆ ಬೆಟ್ಟವ
ಸೇರಿ ಕಾನನಕಿಳಿದು ವನದಿಂದಡರಿ ಗಿರಿಕುಲವ
ತಾರುತಟ್ಟಿಗೆ ಹಾಯ್ವ ಸುಖಮನ
ದೇರು ಮಸಗಿ ಮುರಾರಿ ಕೃಪೆಯನು
ತೋರಿಯಡಗಿದನಕಟವಿಧಿಯೆಂದಳಲಿದನು ಭೂಪ ೨
ಎಹಗೆ ಸೈರಿಸಿ ನಿಂದರೋ ವ್ರಜ
ಮಹಿಳೆಯರು ಕೃಷ್ಣಾಂಘ್ರಿವಿರಹದ
ದಹನ ತಾಪಸ್ತಂಭಕೌಷಧದಾನಶೌಂಡರಿಗೆ
ಅಹಹ ಕೊಡುವೆನು ನನ್ನನೆನುತು
ಮ್ಮಹದ ಮೊನೆಮುರಿದವನಿಪತಿ ನಿ
ಸ್ಪೃಹೆಯಲಿದ್ದನು ರಾಜಕಾರ್ಯ ವಿಹಾರ ಲೀಲೆಗಳ ೩
ಅರಸ ಕೇಳೈ ಹಸ್ತಿನಾಪುರ
ವರಕೆ ಕಾಮ್ಯಕವನದಿನೊಬ್ಬನು
ಧರಣಿಸುರನೈತಂದು ಕರ್ಣಾದಿಗಳ ಮನೆಗಳಲಿ
ಇರಲಿರಲು ಧೃತರಾಷ್ಟ್ರ ಭೂಪತಿ
ಕರೆಸಿ ಬೆಸಗೊಂಡನು ಯುಧಿಷ್ಠಿರ
ನಿರವನಟವೀತಟ ಪರಿಭ್ರಮಣೈಕ ಭೀಷಣವ ೪
ವಿವಿಧ ವನ ಪರಿಯಟಣದಾಯಾ
ಸವನು ತತ್ಪರಿಸರದ ಕಂಟಕ
ನಿವಹವನು ದಾನವರ ದಕ್ಕಡತನದ ದಟ್ಟಣೆಯ
ಅವಚಿದಾಪತ್ತಿನ ಮನಃ ಖೇ
ದವನು ಖೋಡಿಯ ಖತಿಯ ಲಜ್ಜಾ
ವಿವರಣವನರುಹಿದನು ಧೃತರಾಷ್ಟ್ರಾವನೀಶಂಗೆ ೫
ಈ ವಿಧಿಯೆ ಪಾಂಡವರಿಗಕಟಾ
ಸಾವು ಸೇರದು ತನಗೆ ತಾಮು
ನ್ನಾವ ನೋಂಪಿಯನಳಿದೆನೋ ಭವಭವಸಹಸ್ರದಲಿ
ಈ ವಿಲಾಸವನೀವಿಭವ ಸಂ
ಭಾವನೆಯನೀಪದವನೀ ಪು
ತ್ರಾವಳಿಯ ಸುಡಲೆನುತ ಮಿಗೆ ಮರುಗಿದನು ಧೃತರಾಷ್ಟ್ರ ೬
ಮರಳಿ ಮರಳಿ ಯುಧಿಷ್ಠಿರನ ಮನ
ದಿರವ ಭೀಮನ ಖತಿಯ ಪಾರ್ಥನ
ಪರಿಯ ನಕುಲನ ನಿಲವನಾ ಸಹದೇವನಾಯತವ
ತರಳೆಯುಬ್ಬೆಯನಾ ಪುರೋಹಿತ
ವರನ ಖೇದವನಾ ಮುನೀಂದ್ರರ
ಪರಗತಿಯನಡಿಗಡಿಗೆ ಕೇಳಿದು ಮರುಗಿದನು ನೃಪತಿ ೭
ಅಳಲುವೀ ಧೃತರಾಷ್ಟ್ರನುರು ಕಳ
ಕಳವ ಕೇಳಿದನು ಕರ್ಣ ಶಕುನಿಗ
ಳುಲಿದು ತಂಬುಲ ಸೊಸೆ ನಕ್ಕರು ಹೊಯ್ದು ಕರತಳವ
ಖಳಶಿರೋಮಣಿಗಳು ಮಹೀಶನ
ನಿಳಯ ಕೈತಂದರು ಸುಲೋಚನ
ಜಲವ ಸೆರಗಿನೊಳೊರಸಿ ನುಡಿದರು ಖೇದವೇಕೆನುತ ೮
ಖೇದವೇಕೆಂದೇನು ಮಕ್ಕಳು
ಬೀದಿಗರುವಾದರು ವನಾಂತದ
ಲಾದ ಚಿತ್ತವ್ಯಥೆಯ ಕೇಳಿದು ಬೆಂದುದೆನ್ನೊಡಲು
ಆ ದಿವಾಕರನಂತೆ ನಿಚ್ಚಲು
ಕಾದುದುದಯಾಸ್ತಂಗಳಲಿದನು
ಜಾದಿ ಖಳರೊಡನಟವಿಗೋಟಲೆಯೆಂದು ಬಿಸುಸುಯ್ದ ೯
ಈ ಕುಮಾರಕರಲ್ಲಲೇ ಕುಂ
ತೀಕುಮಾರರು ನವೆವುತಿದ್ದರೆ
ಸಾಕು ಸಾಕಳಲೇಕೆ ಸತ್ವಾಧಿಕರು ಸಜ್ಜನರು
ಈ ಕುರುಕ್ಷಿತಿಪತಿಯೊಳನ್ಯಾ
ಯೈಕ ಲವವುಂಟೇ ವಿಚಾರಿಸಿ
ಶೋಕವನು ಬಿಡಿ ಬಯಲಡೊಂಬೇಕೆಂದನಾ ಶಕುನಿ ೧೦
ವಿಷಯಲಂಪಟರಕ್ಷಲೀಲಾ
ವ್ಯಸನಕೋಸುಗವೊತ್ತೆಯಿಟ್ಟರು
ವಸುಮತಿಯನನ್ಯಾಯವುಂಟೇ ನಿನ್ನ ಮಕ್ಕಳಲಿ
ಉಸುರಲಮ್ಮದೆ ಸತ್ಯವನು ಪಾ
ಲಿಸಲು ಹೊಕ್ಕರರಣ್ಯವನು ತ
ದ್ವ್ಯಸನ ಫಲಭೋಗಿಗಳಿಗಳಲುವಿರೇಕೆ ನೀವೆಂದ ೧೧
ಅವರು ಕುಹಕೋಪಾಯದಲಿ ಕೌ
ರವರ ಕೆಡಿಸದೆ ಮಾಣರರ್ಜುನ
ಪವನಜರ ಭಾಷೆಗಳ ಮರೆದಿರೆ ಜೂಜು ಸಭೆಯೊಳಗೆ
ಅವರು ಸುಜನರು ನಿಮ್ಮವರು ಖಳ
ರವರು ಸದಮಲ ಸಾಧುಗಳು ಕೌ
ರವರಸಾಧುಗಳೆಂದು ತೋರಿತೆ ನಿಮ್ಮ ಚಿತ್ತದಲಿ ೧೨
ಗಳಹನನಿಲಜ ಗಾಢಗರ್ವದ
ಹುಳುಕನರ್ಜುನನವರ ದೇಹದ
ನೆಳಲು ಮಾದ್ರೀಸುತರು ಮಕ್ಕಳು ವಿಪುಳ ಸಾಹಸರು
ಅಳಲಬಹುದರಸಂಗೆ ಘಳಿಗೆಗೆ
ತಿಳಿವನವದಿರ ಸಂಗದಲಿ ಮನ
ಮುಳಿವನೆರಡಿಟ್ಟಿಹನು ಧರ್ಮಜನೆಂದನಾ ಶಕುನಿ ೧೩
ಅವರ ವನವಾಸದ ದಿನಂಗಳು
ನವಗೆ ಸುದಿನ ಸುಖಾನುಭವವವ
ರವಧಿ ತುಂಬಿದ ಬಳಿಕ ನೋಡಾ ಸಾಧುಗಳ ಪರಿಯ
ನಿನಗೆ ದುರ್ಯೋಧನನ ಸಾಮ್ರಾ
ಜ್ಯವ ನಿರೀಕ್ಷಿಸುವರ್ತಿಯಲಿ ಪಾಂ
ಡವರ ಹಂಬಲ ಬಿಡುವುದುಚಿತವಿದೆಂದನಾ ಶಕುನಿ ೧೪
ಬೇವು ತಾ ಪರಿಪಕ್ವವಾದರೆ
ಹಾವು ಮೆಕ್ಕೆಗೆ ಸಾಕ್ಷಿಗಡ ಧ ರ್ಮಾವಮಾನದ ಕವಿಗೆ ಕಾಮಾದಿಗಳ ನೆರವಿ ಗಡ
ಆ ವಿಡಂಬದ ಶಕುನಿ ಕರ್ಣರು
ಜೀವ ಸಖರೈ ತಮ್ಮೊಳಗೆ ದು ರ್ಭಾವ
ಭೀಕರ ಹೃದಯ ನುಡಿದನು ಕರ್ಣನರಸಂಗೆ ೧೫
ಆಹ ಶಕುನಿಯ ಮಾತಿನಲಿ ಸಂ
ದೇಹವೇ ಪಾಂಡವರು ಬಂಧು
ದ್ರೋಹಿಗಳು ತಮ್ಮವಧಿ ತುಂಬಲು ಕೇಡತಹರೆಂಬ
ಈ ಹದನು ತಪ್ಪುವುದೆ ನೀವತಿ
ಮೋಹದಲಿ ಬಿಡೆಬಿಸಿದು ಬಿದ್ದರೆ
ಕಾಹುರರು ಕುರುಪತಿಯ ಕೆಡಿಸುವರೆಂದನಾ ಕರ್ಣ ೧೬
ಈ ಸುಖದ ಸುಗ್ಗಿಯಲಿ ನಿನ್ನವ
ರೇಸು ಹೆಚ್ಚುಗೆಯಾಗಿ ಬದುಕಿದ
ರೈಸುವನು ನೆರೆನೋಡಿ ಹಿಗ್ಗದೆ ಪಾಂಡುನಂದನರು
ಘಾಸಿಯಾದರು ಘಟ್ಟಬೆಟ್ಟದ
ಪೈಸರದಲೆಂದಳಲಿ ಮರುಗುತ
ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ ೧೭
ಸೊಗಸು ತಳಿತುದು ತರಳಮನ ತಳ
ಮಗುಚಿದಂತಾಯ್ತವರೊಲವು ಕಾ
ಡಿಗೆಯ ಕೆಸರೊಳಗದ್ದ ನೀಲದ ಸರಿಗೆ ಸರಿಯಾಯ್ತು
ಮುಗುಳುಗಂಗಳ ಬಾಷ್ಪ ಬಿಂದುವ
ನುಗುರು ಕೊನೆಯಲಿ ಮಿಡಿದು ಕರ್ಣನ
ಹೊಗಳಿದನು ಬಳಿಕೇನು ಸಿಂಗಿಯಲುಂಟೆ ಸವಿಯೆಂದ ೧೮
ಹೋಗಲಾ ಪಾಂಡವರ ಚಿಂತೆಯ
ನೀಗಿದೆನು ನೀವಿನ್ನು ನೆನೆವು
ದ್ಯೋಗವೇನೆನೆ ನಗುತ ನುಡಿದರು ಕರ್ಣ ಶಕುನಿಗಳು
ಈಗಳೀ ವಿಭವದ ವಿಲಾಸದ
ಭೋಗದಗ್ಗಳಿಕೆಗಳ ಭುಜದ
ರ್ಪಾಗಮವನವರಿದ್ದ ವನದಲಿ ತೋರಬೇಕೆಂದ ೧೯
ನಾಡೊಳಗೆ ತುರು ಹಟ್ಟಿಯಲಿ ಹೊಲ
ನಾಡಿ ಹೆಚ್ಚಿನ ಗೋಕದಂಬವ
ನೋಡುವುದು ನೆವೆ ಕುರುಪತಿಯ ಗಾಢದ ಸಗಾಢಿಕೆಯ
ನೋಡಿ ನಸಿಯಲಿ ಪಾಂಡುಸುತರವ
ರಾಡುಗಾಡಿನ ಹೊಲನ ಹೊರೆಯಲಿ
ಕೂಡೆ ತನು ಪರಿಮಳದಲರಮನೆಯಂಗನಾ ನಿವಹ ೨೦
ವನದ ಚಿಮ್ಮಂಡೆಗಳ ಘೋರ
ಧ್ವನಿಗಳಲಿ ಕಿವಿ ಮೃಗಕುಲದ ಸೊಗ
ಡಿನಲಿ ನಾಸಿಕ ರೌದ್ರಭೂತಾಲೋಕನದಿ ನಯನ
ಜನಪರುರೆಬೆದರುವರು ನಿನ್ನರ
ಮನೆಯ ಸತಿಯರ ನೇವುರನದನು
ಣ್ಪನಿಗಳಲಿ ತನುಗಂಧದಲಿ ರೂಪುಗಳ ಸೊಗಸಿನಲಿ ೨೧
ಸಿರಿಗೆ ಸಫಲತೆಯಹುದು ನಾನಿದ
ನರಿಯೆ ನೀವವರಿದ್ದ ವಿಪಿನಾಂ
ತರಕೆ ಗಮಿಸುವುದುಚಿತವೇ ಮನಮುನಿಸುನೆರೆಬಲಿದು
ಕೆರಳಿದರೆ ಕಾಳಹುದು ಭೀಮನ
ದುರುಳತನವೀ ಕೌರವೇಂದ್ರನ
ಹುರುಡು ಹೊರೆಯೇರುವುದು ಮತವಲ್ಲೆಂದನಂಧನೃಪ ೨೨
ಹೂಣೆ ಹೊಗೆವವರೊಡನೆ ಸೆಣಸಿನ
ಸಾಣೆಯಿಕ್ಕೆವು ಮಸೆವ ಕದನವ
ಕಾಣೆವೆಮ್ಮರಿಕೆಯಲಿ ಸಲುಗೆಯ ಸಾಧು ಸಾಮದಲಿ
ರಾಣಿಯರ ರಹಿಯಿಂದ ರಂಜಿಸಿ
ಜಾಣಿನಲಿ ಬಹೆವರಸ ನಿಮ್ಮಡಿ
ಯಾಣೆಯೆಂದೊಡಬಡಿಸಿದರು ನೃಪ ಕರ್ಣ ಶಕುನಿಗಳು ೨೩
ಪರಿಮಿತದಲೀ ವಾರ್ತೆ ನೆಗಳಿದು
ದರಮನೆಯಲಿದನೈದೆ ಕೇಳಿದು
ಗುರುವಿದುರ ಗಾಂಗೇಯ ಕೃಪರಳಲಿದರು ತಮ್ಮೊಳಗೆ
ಕರೆಸಿ ನುಡಿದರು ಕರ್ಣ ಸೌಬಲ
ಕುರುಪತಿಗಳಿಗೆ ಘೋಷಯಾತ್ರಾ
ಭರವನರಿದೆವು ಹೋಹುದನುಚಿತವೆಂದರನಿಬರಿಗೆ ೨೪
ಅವಗಡೆಯನಾ ಭೀಮ ನೀವೆಂ
ಬವರು ನಿಸ್ಸೀಮರು ಚತುರ್ಬಲ
ನಿವಹ ನಿಲ್ಲದು ತುಡುಕುವುದು ತುಳಿವುದು ತಪೋವನವ
ವಿವಿಧ ಋಷಿಗಳನೇಡಿಸುವರೀ
ಯುವತಿಯರು ಕೈಕಾಲು ಮೆಟ್ಟಿನ
ಬವರ ಗಂಟಕ್ಕುವುದು ಲೇಸಲ್ಲೆಂದನಾ ಭೀಷ್ಮ ೨೫
ಸಾರಿದೆವು ನಿಮ್ಮೊಡನೆ ಬಾರೆವು
ದೂರಲಾಗದು ನಮ್ಮನಿನಿಬರ
ಮೀರಿದೊಡೆ ರಣಭಂಗ ತಪ್ಪನು ಹೋಗಬೇಡೆನಲು
ದೂರತಾರೆವು ನಿಮಗೆ ನಾವ್ ಕೈ
ಮೀರಿ ನಡೆಯೆವು ಕಾರ್ಯಗತಿಯಲಿ
ಜಾರಿ ಜಡಿತೆಯ ಮಾಡೆವೆಂದನು ಕೌರವರ ರಾಯ ೨೬
ಅದರಲ್ಲಿ ಶುಭಾಶುಭದ ಫಲ
ಬೀದಿವರಿಸುವುದೈಸಲೇ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಆದುದಾಗಲಿ ಹೋಗಿಯೆನೆ ದು
ರ್ಭೇದ ಗರ್ವ ಗ್ರಂಥಿಕಲುಷ ವಿ
ನೋದಶೀಲರು ಭುಜವ ಹೊಯ್ದರು ನೋಡಬಹುದೆನುತೆ ೨೭
ಕೇರಿಯಲಿ ಸಾರಿದರು ಕೊಟ್ಟರು
ವಾರಕವನಬಲಾಜನಕೆ ಭಂ
ಡಾರ ಸವೆದುದು ಗಣಿಕೆಯರಿಗಾಭರಣದಾನದಲಿ
ಸಾರಪರಿಮಳ ವಸ್ತುಗಲ ಬಲು
ಭಾರಣೆಯ ಪೆಟ್ಟಿಗೆಗಳೊಟ್ಟಿತು
ತೇರುಗಳ ಮೇಲೊದಗಿತಕ್ಷೋಹಿಣಿಯ ರಾಣಿಯರು ೨೮
ಬಿಗಿದ ಬೀಯಗ ಬದ್ದರದ ಬಂ
ಡಿಗಳು ರಾಣಿವಾಸದಂದಣ
ತೆಗೆದುವೊರಲುವ ಕಂಚುಕಿಗಳುಗ್ಗಡದ ರಭಸದಲಿ
ಗಗನವಡಗಿತು ಪಲ್ಲವದ ಸ
ತ್ತಿಗೆಯ ಸಾಲಿನ ಝಲ್ಲರಿಯ ಜಾ
ಡಿಗಳಲಾಡುವ ಚಮರ ಸೀಗುರಿಗಳ ಪತಾಕೆಯಲಿ ೨೯
ಸವಡಿಯಾನೆಯ ಮೇಲೆ ಗಣಿಕಾ
ನಿವಹ ದಂಡಿಗೆಗಳಲಿ ಕೆಲಬರು
ಯುವತಿಯರು ಕೆಲರಶ್ವಚಯದಲಿ ರಥನಿಕಾಯದಲಿ
ಯುವತಿಮಯವೋ ಸೃಷ್ಟಿ ಗಣಿಕಾ
ಯುವತಿಯರ ನೆಲನೀದುದೋ ದಿಗು
ವಿವರ ಕರೆದುದೊ ಕಾಂತೆಯರನೆನೆ ಕವಿದುದಗಲದಲಿ ೩೦
ಅರಸ ಕೇಳೈ ಹತ್ತು ಸಾವಿರ
ಕರಿಘಟಾವಳಿಯೆಂಟು ಸಾವಿರ
ವರ ವರೂಥವು ರಾವುತರ ವಾಘೆಯಲಿ ಹಯ ಕೋಟಿ
ಬಿರುದಿನಗ್ಗದ ಭಟರ ಸಂಖ್ಯೆಯ
ನರಿಯೆ ನಿಂತಿದು ಘೋಷಯಾತ್ರೆಯ
ಪರುಠವಣೆಗೊದಗಿದ ಚತುರ್ಬಲವವನಿಪಾಲಕನ ೩೧
ನೆರೆದುದಗಣಿತ ವಂದಿಗಳು ಕವಿ
ವರರು ವಿದ್ವಾಂಸರು ವಿಧಾವಂ
ತರು ಸುನರ್ತಕ ಕಥಕ ಪರಿಹಾಸಕರು ಪಾಠಕರು
ಚರರು ಮಲ್ಲರು ಬೇಂಟೆಗಾರರು
ಪರಿಜನಾವಳಿ ಸಹಿತ ನಗರಾಂ
ತರದ ಪಯಣದ ಮೇಲೆ ಪಯಣದಲರಸನೈತಂದ ೩೨
ಅರಸ ಕೇಳಿವರತ್ತ ಪಯಣದ
ಭರದಿನೈತರೆ ಮುಂದೆ ವಾಯಸ
ವೆರಡು ತಮ್ಮೊಳು ಕದನ ಮುಖದಲಿ ವಾಮದೆಸೆಗಾಗಿ
ಪರಿದುವಲ್ಲಿಂ ಬಳಿಕ ಹಸುಬನ
ಸರವು ವಾಮದೆ ಗರ್ಧಭನ ಬಲ
ಕರಿಯ ಹಕ್ಕಿಯ ತಡೆಯ ಮನ್ನಿಸದೈದಿದನು ಭೂಪ ೩೩
ಅರಸ ಕೇಳೈ ದ್ವೈತವನ ಬಂ
ಧುರ ನದೀತೀರದಲಿ ವನದಲಿ
ಸರಸಿಯಲಿ ದೀರ್ಘಿಕೆಗಳಲಿ ನದದಲಿ ತಟಾಕದಲಿ
ಬೆರೆಸಿ ಬಿಟ್ಟುದು ಕೂಡೆ ವಾಳೆಯ
ವರಮನೆಯ ಗುಡಿ ನೆಗಹಿದವು ವಿ
ಸ್ತರಿಸಿದವು ಮಂಡವಿಗೆ ಲಾಯದ ಭದ್ರಭವನಗಳು ೩೪
ಕರೆಸಿದನು ಕೀಲಾರಿಗಳನಾ
ದರಿಸಿ ಹಟ್ಟಿಯ ತುರುಗಳೆಲ್ಲವ
ತರಿಸಿ ನೋಡಿದನಲ್ಲಿ ಹಿಂಡಿನ ಕೋಟಿ ಸಂಖ್ಯೆಗಳ
ಹರಿವ ಹಾರುವ ಪಂಟಿಸುವ ಸೈ
ವರಿವ ಮರಳುವ ಮುರಿವ ನಿಲುವೆಳೆ
ಗರುಗಳನು ನೋಡಿದನು ನಗುತ ನರೇಂದ್ರನೊಲವಿನಲಿ ೩೫
ಬೆಳೆವಿಣಿಲ ಮಿಡಿಗಲವ ಬಾಲದ
ನೆಲಕೆ ನಿಗುರುವ ಗಂಗೆದೊಗಲಿನ
ಹಲಗೆ ಬೆನ್ನಿನ ಸಿಡಿಲಮರಿಯೆನೆ ಮೆರೆವ ಹುಂಕೃತಿಯ
ಕೆಲವಿದಿರುಬರಲದ್ರಿಯದ್ರಿಯ
ಹಳಚುವಂತಿರೆ ಹರಿವ ಹಾರುವ
ಸಲಗನಳ್ಳಿರಿದಾಡುತಿದ್ದವು ಹಿಂಡು ಹಿಂಡಿನಲಿ ೩೬
ತರಿಸಿ ಹೋರಿಯ ಗವಿಯ ಗೂಳಿಯ
ಬರಿಸಿದನು ಕೆಲಕೆಲವ ಕೃಷಿಕರಿ
ಗಿರಿಸಿದನು ಗೋಲಕ್ಷವಿತ್ತನು ವಿಪ್ರಸಂಕುಲಕೆ
ಕರೆಸಿಕೊಟ್ಟನು ಭಟ್ಟರಿಗೆ ಮ
ಲ್ಲರಿಗೆ ವಿಟರಿಗೆ ನಟ ವಿಧಾವಂ
ತರಿಗೆ ಬಹುವಿಧ ಬಹಳ ವಮ್ದಿಗೆ ಮಾಗಧವ್ರಜಕೆ ೩೭
ಅಂಗ ಚಿತ್ತವನಿತ್ತು ಮೊದಲಿನ
ಪುಂಗವನ ಪತಿಕರಿಸಿ ಹಿಂಡಿನ
ವಂಗಡದ ಗೋಪಾಲನಿಕರಕೆ ಕೊಟ್ಟನುಡುಗೊರೆಯ
ಹಿಂಗಿದವು ತುರು ಬೇಟೆಯಾಡಿ ಮೃ
ಗಂಗಳಿಗೆ ಮದ್ದರೆದು ಕಡಿಭಾ
ಗಂಗಲನು ಕೊಡಿಸಿದನು ಪರಿವಾರಕೆ ವಿನೋದದಲಿ ೩೮
ಸಂಕ್ಷಿಪ್ತ ಭಾವ
Lrphks Kolar
ದುರ್ಯೋಧನನ ಘೋಷಯಾತ್ರೆಯ ವೈಭವ.
ಕೃಷ್ಣನನ್ನು ಕಳಿಸಿದ ಪಾಂಡವರು ಅವನ ಕರುಣೆಯನ್ನು ನೆನೆಯುತ್ತ ದಿನಗಳನ್ನು ಕಳೆಯುತ್ತಿದ್ದರು.
ಇವರ ಬಳಿಯಲ್ಲಿದ್ದ ವಿಪ್ರನೊಬ್ಬನು ಹಸ್ತಿನಾಪುರಕ್ಕೆ ಬಂದ ಸುದ್ದಿ ತಿಳಿದು ಧೃತರಾಷ್ಟ್ರನು ಅವನನ್ನು ತನ್ನಲ್ಲಿಗೆ ಕರೆಸಿಕೊಂಡು ಪಾಂಡವರ ವಿವರಗಳನ್ನು ಕೇಳಿ ತಿಳಿದನು. ಅಲ್ಲಿ ಅವರು ಪಟ್ಟ ಬವಣೆಗಳನ್ನು ಕೇಳಿ ಮನನೊಂದು ಮರುಗಿದನು. ಮುಂದೆ ಅವರಿಂದ ತನ್ನ ಮಕ್ಕಳಿಗೆ ಉಂಟಾಗುವ ಕಷ್ಟದ ಬಗ್ಗೆಯೂ ಚಿಂತಿಸಿದನು. ಆದರೆ ಏನೂ ಪ್ರಯೋಜನವಿಲ್ಲದಂತಾಯಿತು.
ಕರ್ಣ, ಶಕುನಿ ಮತ್ತು ದುರ್ಯೋಧನ ಇವನ ಬಳಿಗೆ ಬಂದು ಅವನ ಅಳಲನ್ನು ಕುರಿತು ಅಪಹಾಸ್ಯ ಮಾಡಿದರು. ತಮ್ಮ ಬಗ್ಗೆ ಯೋಚಿಸಲು ಹೇಳಿದರು. ತಾವು ರಾಜ್ಯದ ಗೋ ಸಂಪತ್ತನ್ನು ನೋಡಲು ಘೋಷಯಾತ್ರೆಗೆ ಹೋಗುವುದಾಗಿ ಹೇಳಿದರು. ಪಾಂಡವರೆದುರಿಗೆ ತಮ್ಮ ವೈಭವವನ್ನು ಮೆರೆಸುವ ಆಸೆ ಅವರದು. ಧೃತರಾಷ್ಟ್ರನು ಅದನ್ನು ಬೇಡವೆಂದು ತಿಳಿಹೇಳಿದರೂ ಕೇಳಲಿಲ್ಲ. ತಾವು ಅವರಿಗೆ ಏನೂ ತೊಂದರೆ ಮಾಡುವುದಿಲ್ಲ. ತಮ್ಮ ಪಾಡಿಗೆ ತಾವು ಹೋಗಿ ಬರುತ್ತೇವೆಂದರು. ಪುತ್ರಮೋಹಿ ಒಪ್ಪಬೇಕಾಯಿತು. ಭೀಷ್ಮ, ದ್ರೋಣ, ಕೃಪ ಮುಂತಾದವರಿಗೆ ಬೇಸರವಾಯಿತು.

ಎಲ್ಲ ಸಿದ್ಧತೆಗಳನ್ನು ಬಹಳ ವೈಭವದಿಂದ ನಡೆಸಲಾಯಿತು. ಆಭರಣಗಳನ್ನು ರಾಣಿಯರಿಗೆ, ಗಣಿಕೆಯರಿಗೆ ಹಂಚಿದರು. ಪಲ್ಲಕ್ಕಿಗಳು ರಥಗಳು ಸಿದ್ಧವಾದವು. ಬಂಡಿಗಟ್ಟಲೆ ಸಾಮಾನುಗಳನ್ನು ಹೇರಿಕೊಂಡು ಅತ್ಯಂತ ವೈಭವದಿಂದ ಹೊರಟರು. ಅಲ್ಲಲ್ಲಿ ಬೀಡು ಬಿಡುತ್ತಾ, ಗೋವುಗಳ ಲೆಕ್ಕ ತೆಗೆದುಕೊಳ್ಳುತ್ತಾ ಪಾಂಡವರು ಇದ್ದ ವನದ ಸಮೀಪದಲ್ಲಿ ಅತ್ಯಂತ ಭವ್ಯವಾದ ಬಿಡಾರಗಳನ್ನು ಹೂಡಿಸಿ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸುತ್ತ ಮೆರೆದರು. ಬಗೆಬಗೆಯ ಗೋವುಗಳನ್ನು ನೋಡಿ ಕೆಲವನ್ನು ದಾನ ರೂಪದಲ್ಲಿ, ಉಡುಗೊರೆಯ ರೂಪದಲ್ಲಿ ಕೊಟ್ಟು ಗೋಪಾಲಕರನ್ನು ಸನ್ಮಾನಿಸಿ ಬೇಟೆಯನ್ನು ಆಡುತ್ತಾ ವಿನೋದವಾಗಿ ಕಾಲಕಳೆಯುತ್ತಿದ್ದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್

Wed Mar 9 , 2022
ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಮಹಾನ್ ಸಂಗೀತಕಾರರಾದ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಎಂಬುದು ತಂದೆ ಮಗ ಇಬ್ಬರದೂ ಒಂದೇ ಹೆಸರು. ಹಿರಿಯ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರ ಕಾಲ 1888-1936. ಇಂದು ಕಿರಿಯ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರ ಜನ್ಮ ದಿನ ಸ್ಮರಣೆ. ಗಾನ ಕಲಾ ಭೂಷಣರೆನಿಸಿದ್ದ ಶ್ರೀನಿವಾಸ ಅಯ್ಯಂಗಾರ್ಯರು ಮಂಡ್ಯ ಜಿಲ್ಲೆಗೆ ಸೇರಿದ ಬೆಳಕವಾಡಿಯಲ್ಲಿ 1910ರ ಮಾರ್ಚ್ 9ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ಯರು. ತಾಯಿ ಲಕ್ಷ್ಮಮ್ಮ. ಮೂರು ವರ್ಷದವರಾಗಿದ್ದಾಗಲೇ […]

Advertisement

Wordpress Social Share Plugin powered by Ultimatelysocial