ಕೆ. ವಿ. ಸುಬ್ಬಣ್ಣ ನಾಟಕಕಾರ.

 

ನನ್ನ ಜೀವಮಾನದಲ್ಲಿ ಭೇಟಿಮಾಡಿದ ವ್ಯಕ್ತಿಗಳಲ್ಲಿ ನನ್ನನ್ನು ಅತ್ಯಂತ ಆದರದಿಂದ ಕಂಡ ಭಾವವನ್ನು ಹುಟ್ಟಿಸಿದವರು ಸುಬ್ಬಣ್ಣ. ನಮ್ಮ ಕನ್ನಡ ಸಂಪದಕ್ಕಾಗಿ ನೀನಾಸಂ ನಡೆಸಿಕೊಟ್ಟ ‘ನೀನಾಸಂ ಸಾಹಿತ್ಯ ಶಿಬಿರ’ ಮತ್ತು ನಾವು ಹೆಗ್ಗೋಡಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಅವರ ಸಾನ್ನಿಧ್ಯ ದೊರೆತ ಭಾಗ್ಯಶಾಲಿಗಳು ನಾವು. ಅವರನ್ನು ಭೇಟಿ ಮಾಡಿದ ಯಾರಿಗೇ ಆಗಲಿ ಅಂತಹ ಸೌಭಾಗ್ಯ ಖಂಡಿತ ಒದಗಿರುತ್ತದೆ. ಅಂತಹ ಸಾಧಕರಾದ ಸುಬ್ಬಣ್ಣ ಲೋಕದ ಜೊತೆಗೆ ಹೊಂದಿದ್ದ ಅಸಾಮಾನ್ಯ ಬಾಂಧವ್ಯ, ಅಂತಃಕರಣ, ಈ ಲೋಕದಲ್ಲೂ ಮನುಷ್ಯ ಪ್ರಯತ್ನಪಟ್ಟರೆ ಎಂತಹ ಶ್ರೇಷ್ಠ ಬಾಳನ್ನು ಬದುಕಬಹುದೆಂಬುದಕ್ಕೆ ಒಂದು ಅತ್ಯ್ತುತ್ತಮ ನಿದರ್ಶನ.ಹೆಗ್ಗೋಡು ಅಂದರೆ ನಮ್ಮ ಸುಬ್ಬಣ್ಣ. ಸುಬ್ಬಣ್ಣ ಎಂದರೆ ಹೆಗ್ಗೋಡು ಎಂಬಷ್ಟರವರೆಗೆ ನಂಟು. ಸುಬ್ಬಣ್ಣನವರು 1932ರ ಫೆಬ್ರವರಿ 20ರಂದು ಜನಿಸಿದರು. ಸುಮಾರು ಐದು ದಶಕಗಳ ಕಾಲ ಈ ಪುಟ್ಟ ಗ್ರಾಮದಲ್ಲಿ ಸುಬ್ಬಣ್ಣನವರು ನಡೆಸಿದ ನಾಟಕ, ಸಿನಿಮಾ ಮತ್ತು ಸಾಹಿತ್ಯ ಚಟುವಟಿಕೆಗಳ ಕ್ರಾಂತಿಯಿಂದ ಅದು ಜಗತ್ತಿನ ಕಲಾನಕ್ಷೆಯಲ್ಲಿ ಸ್ಪಷ್ಟವಾಗಿ ಗುರುತು ಹಿಡಿಯುವಷ್ಟು ಮಹತ್ವದ ಕಲಾಕೇಂದ್ರವಾಗಿ ಬೆಳೆದಿದೆ. ಸುಮಾರು 600 ಜನಗಳಿದ್ದ ಈ ಚಿಕ್ಕ ಗ್ರಾಮ ಅತ್ಯಂತ ಪ್ರಬುದ್ಧ ಅಭಿರುಚಿ, ರಸಿಕತೆಗೆ ಹೆಸರಾಗಿದೆ. ಇಂತಹ ದೊಡ್ಡ ಬದಲಾವಣೆಯನ್ನು ತಂದವರು ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, ಎಲ್ಲರಿಗೂ ಆತ್ಮೀಯರಾದ ಕೆ.ವಿ. ಸುಬ್ಬಣ್ಣ.ಕೆಲವರಿಗೆ ಪ್ರಶಸ್ತಿ ದೊರೆತಾಗ ಅದು ನಮಗೇ ದೊರೆತಷ್ಟು ಖುಷಿಯಾಗುತ್ತದೆ. ಸುಬ್ಬಣ್ಣನವರಿಗೆ ಮ್ಯಾಗ್ಸೇಸೆ ಪ್ರಶಸ್ತಿ ಬಂದಾಗ ಅವರ ಭಾರೀ ದೊಡ್ಡದಾದ ಸ್ನೇಹಿತ ಬಳಗಕ್ಕೆ ಹಾಗೆಯೇ ಅನಿಸಿತು. ಇದಕ್ಕೆ ಮುಖ್ಯ ಕಾರಣ ಸುಬ್ಬಣ್ಣನವರು ಮೌನವಾಗಿ, ಶಾಂತಿಯಿಂದ ನಗು ನಗುತ್ತ ಮಾಡಿದ ಕಲಾಕ್ರಾಂತಿ. ಅವರ ಸರಳತೆ ಸಹೃದಯತೆ, ವಿನಯ ಮತ್ತು ಸೌಜನ್ಯ.ನಮ್ಮ ಪ್ರತಿಯೊಂದು ಹಳ್ಳಿಯಲ್ಲೂ ಜಮೀನುದಾರರು ಇದ್ದಾರೆ. ಆದರೆ ಸುಬ್ಬಣ್ಣನವರಂತೆ ನಾಟಕ, ಸಿನಿಮಾ, ಸಾಹಿತ್ಯಗಳ ಬಗ್ಗೆ ಪ್ರಾಮಾಣಿಕವಾಗಿ ಕಳಕಳಿ ಇಟ್ಟುಕೊಂಡು, ಅದನ್ನು ಉಸಿರಾಗಿ ಮಾಡಿಕೊಂಡು, ಚಳವಳಿಯಾಗಿ ಬೆಳೆಸಿದವರು ಅವರೊಬ್ಬರೇ. ಸುಬ್ಬಣ್ಣನವರ ಆ ಚಿಕ್ಕ ಮೂರ್ತಿಯಲ್ಲಿ ಅಷ್ಟೊಂದು ಚೈತನ್ಯ ತುಂಬಿತ್ತು ಎಂಬುದೇ ಒಂದು ಪವಾಡ. ಅವರು ಹೋದ ಹೋದೆಡೆಗಳಲ್ಲಿ ಈ ಚೈತನ್ಯರಾಶಿ ಕೊಂಡೊಯ್ದು ಹಂಚುತ್ತಿದ್ದರು. ಶಾಂತವೇರಿ ಗೋಪಾಲಗೌಡರು ಮತ್ತು ಲೋಹಿಯಾರವರ ವಿಚಾರಗಳಿಂದ ಪ್ರಭಾವಿತರಾದ ಸುಬ್ಬಣ್ಣ ಹೆಗ್ಗೋಡಿನಲ್ಲಿ ಜಯಪ್ರಕಾಶ್ ನಾರಾಯಣರು ಹೇಳಿದಂಥ ‘ಸಮಗ್ರ ಕ್ರಾಂತಿ’ ತರುವುದರಲ್ಲಿ ಬಹಳ ಮಟ್ಟಿಗೆ ಕಾರಣರು.
ಗ್ರಾಮೀಣ ಪ್ರದೇಶಗಳಲ್ಲಿ ಜನರ ಅಭಿರುಚಿಯನ್ನು ಎತ್ತರಿಸಬೇಕು ಎಂಬ ಮಾತುಗಳನ್ನು ಎಲ್ಲರೂ ಹೇಳುತ್ತಾರೆ. ಆದರೆ ಅದಕ್ಕಾಗಿ ರಾತ್ರಿ-ಹಗಲು ದುಡಿದು, ತನ್ನದೆಲ್ಲವನ್ನೂ ಸಮರ್ಪಿಸಿ, ಶ್ರದ್ಧೆಯಿಂದ, ಸ್ವಸಂತೋಷದಿಂದ ಪರಿಶ್ರಮ ಮಾಡಿದ ಸಾಹಸಿ ನಮ್ಮ ಸುಬ್ಬಣ್ಣ. ಎಲೆಅಡಿಕೆ ಮೆಲುಕಾಡುವ ಬಾಯಿಯಲ್ಲಿ ಯಾವಾಗಲೂ ಮುಗುಳುನಗು. ತಲೆ ತುಂಬ ವಿಚಾರಗಳು. ತೆಳ್ಳಗಿನ ಈ ಕುಳ್ಳ ವ್ಯಕ್ತಿ ಯಾವಾಗಲೂ ಚುರುಕು. ಕನ್ನಡ ನಾಡಿನಲ್ಲಿ ಸ್ವಂತಿಕೆಯಿಂದ ನಾಟಕ ಚಳವಳಿ ಮಾಡಿದವರು, ಒಳ್ಳೊಳ್ಳೆಯ ಸಿನಿಮಾ ಆಂದೋಲನ ಮಾಡಿದವರು, ಉತ್ತಮ ಸಾಹಿತ್ಯ ಪ್ರಕಾಶನ (ಸಾಕ್ಷಿ, ಅಕ್ಷರ ಪ್ರಕಾಶನ) ನಡೆಸಿದ ಏಕಾಂಗ ವೀರ, ಬೆಂಗಳೂರಲ್ಲಿ ಕೂತು ಸರ್ಕಾರದಿಂದ ಕೋಟಿಗಟ್ಟಲೆ ರೂಪಾಯಿ ಅನುದಾನ ಪಡೆದ ನಾಟಕ ಅಕಾಡೆಮಿ ಕೂಡಾ ಮಾಡದ ಮಹತ್ವದ ಕೆಲಸವನ್ನು ಸುಬ್ಬಣ್ಣ ಹೆಗ್ಗೋಡಿನಂಥ ಹಳ್ಳಿಯಲ್ಲಿ ನಿಂತು ಮಾಡಿದರು.ಹೆಗ್ಗೋಡು ಇಂದು ಕಲಾವಿದರಿಗೆಲ್ಲಾ ಕಾಶಿ. ಸುಬ್ಬಣ್ಣನವರ ತಂದೆ 1949ರಲ್ಲಿ ಆರಂಭಿಸಿದ ‘ನೀನಾಸಂ’ ಗೆ ಹೊಸ ಆಯಾಮ, ಹೊಸ ಗರಿ, ಮೊದಲು ತೆಂಗಿನಗರಿಗಳ ರಂಗಮಂದಿರ, 1971ರಲ್ಲಿ 750 ಆಸನಗಳ ಅಂತರರಾಷ್ಟ್ರೀಯ ಖ್ಯಾತಿಯ ರಂಗಮಂಟಪವಾಗಿ (ಶಿವರಾಮ ಕಾರಂತ ರಂಗಮಂದಿರ) ರೂಪುಗೊಂಡಿತು. ಕರ್ನಾಟಕ ನಾಟಕ ಚಳವಳಿಗೆ ಹೆಗ್ಗೋಡಿನ ನೀನಾಸಂ ಚುಕ್ಕಾಣಿಯಾಯಿತು. ರಂಗಭೂಮಿಯ ಬೆಳವಣಿಗೆಗಾಗಿ, ಸೃಜನಶೀಲತೆಗಾಗಿ ಏನೆಲ್ಲಾ ಮಾಡಬೇಕೋ ಅದಕ್ಕೆ ಈ ಗ್ರಾಮ ಮಾದರಿ. ಸುಬ್ಬಣ್ಣ ಅದರ ಸೂತ್ರಧಾರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಬಾನಿ, ಅದಾನಿಗಿಂತಲೂ ನನ್ನ ಸಮಯದ ಮೌಲ್ಯ ಹೆಚ್ಚು ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.

Mon Feb 20 , 2023
  ಪಣಜಿ, ಗೋವಾ: ನನ್ನ ಸಮಯದ ಮೌಲ್ಯವು, ಶ್ರೀಮಂತ ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ, ಆದಿತ್ಯ ಬಿರ್ಲಾ ಅವರಿಗಿಂತಲೂ ಹೆಚ್ಚು ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ. ಅಲ್ಲದೇ, ಸಾಧು ಸಂತರ ಸಮಯದ ಮೌಲ್ಯವು ಎಲ್ಲರಿಗೆ ಒಳ್ಳೆಯದನ್ನು ಉಂಟು ಮಾಡುತ್ತದೆ ಎಂದೂ ಹೇಳಿದ್ದಾರೆ. ಗೋವಾದಲ್ಲಿರುವ (Baba Ramdev in Goa) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿರುವ ಅನೇಕ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಹರಿದ್ವಾರದಿಂದ ನಾನು ಇಲ್ಲಿಗೆ(ಗೋವಾ) ಮೂರು ದಿನಗಳಿಗಾಗಿ […]

Advertisement

Wordpress Social Share Plugin powered by Ultimatelysocial